HD Deve Gowda: ಎಚ್​.ಡಿ. ದೇವೇಗೌಡ ಪ್ರಧಾನಿಯಾಗಿ ಇಂದಿಗೆ 25 ವರ್ಷ; ನನಗೆ ನಿವೃತ್ತಿಯೇ ಇಲ್ಲ ಎಂದ ಮಣ್ಣಿನ ಮಗ!

HD Deve Gowda Political Career: ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 25 ವರ್ಷ ಕಳೆದರೂ ದೇವೇಗೌಡರಲ್ಲಿ ಹುಮ್ಮಸ್ಸು ಕಡಿಮೆಯಾಗಿಲ್ಲ. ನಾನು ಸಾಯುವವರೆಗೂ ರಾಜಕಾರಣದಿಂದ ನಿವೃತ್ತಿ ಪಡೆಯುವುದಿಲ್ಲ ಎಂಬ ಅವರ ಮಾತೇ ಇದಕ್ಕೆ ಸಾಕ್ಷಿ!

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

 • Share this:
  (ವಿಶೇಷ ವರದಿ: ಡಿ.ಪಿ. ಸತೀಶ್)

  ಬೆಂಗಳೂರು (ಜೂ. 1): ಅದು 1996ರ ಜೂನ್ 1ರ ಸಮಯ. ಅದು ಕರ್ನಾಟಕದ ಆಧುನಿಕ ಇತಿಹಾಸದ ಪಾಲಿಗೆ ಮರೆಯಲಾಗದ ದಿನ. ಏಕೆಂದರೆ, ನಮ್ಮ ಕನ್ನಡ ನಾಡಿನ ರೈತ ಕುಟುಂಬದಲ್ಲಿ ಹುಟ್ಟಿದ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ (ಹೆಚ್​ಡಿ ದೇವೇಗೌಡ) ಈ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ದಿನ! ತಾನೊಂದು ದಿನ ಭಾರತದ ಪ್ರಧಾನಿ ಹುದ್ದೆಗೇರಬಹುದು ಎಂದು ಖುದ್ದು ದೇವೇಗೌಡರೂ ಊಹಿಸಿರಲಿಲ್ಲ. ಆದರೆ, ಹಾಸನದ ರೈತ ಕುಟುಂಬದ ಅವರು ರಾತ್ರೋರಾತ್ರಿ ಪ್ರಧಾನಿ ಹುದ್ದೆಗೇರಿಯೇ ಬಿಟ್ಟರು. ದೇವೇಗೌಡರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿ ಇಂದಿಗೆ 25 ವರ್ಷ.

  ದೆಹಲಿ ರಾಜಕಾರಣದ ಬಗ್ಗೆ ಕಿಂಚಿತ್ತೂ ಅನುಭವವಿಲ್ಲದ ದೇವೇಗೌಡರು ಈ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು ಆಕಸ್ಮಿಕವೂ ಹೌದು, ಅಚ್ಚರಿಯೂ ಹೌದು. ತೃತೀಯ ರಂಗದ ನಾಯಕರು ಸೇರಿ ದೇವೇಗೌಡರನ್ನು ಭಾರತದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ಕೇಂದ್ರದಲ್ಲಿ 11 ತಿಂಗಳ ಕಾಲ ತೃತೀಯ ರಂಗದ ಸರ್ಕಾರವನ್ನು ದೇವೇಗೌಡರು ಮುನ್ನಡೆಸಿ ಎರಡೂವರೆ ದಶಕಗಳೇ ಕಳೆದುಹೋಗಿವೆ.

  ಮಣ್ಣಿನ ಮಗ ದೇವೇಗೌಡರು ಹಾಸನದಿಂದ ನವದೆಹಲಿಗೆ ಹೋಗಿ ಪ್ರಧಾನಮಂತ್ರಿಯಾಗಿ ಇಡೀ ದೇಶವನ್ನೇ ಆಳಿದ್ದು ಸಣ್ಣ ಮಾತಲ್ಲ. ರಾಜಕಾರಣದ ವಿಷಯದಲ್ಲಿ ದೇವೇಗೌಡರು ನಿಜಕ್ಕೂ ಅದೃಷ್ಟವಂತರೇ ಸರಿ. ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ದಿನದ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಭಾರತದ ಏಕೈಕ ಮಾಜಿ ಪ್ರಧಾನಿಯೆಂದರೆ ಅದು ದೇವೇಗೌಡರು. 2 ದಶಕಗಳ ಹಿಂದೆ ಪ್ರಧಾನಿ ಹುದ್ದೆಗೇರಿದ ಬೇರಾವ ಮಾಜಿ ಪ್ರಧಾನಿಗಳೂ ಈಗ ಜೀವಂತವಾಗಿಲ್ಲ. ಹಾಗೇ, ತಮ್ಮ 88 ವರ್ಷ ವಯಸ್ಸಿನಲ್ಲೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ, ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದೆ ಆರೋಗ್ಯವಂತರಾಗಿರುವ ಮಾಜಿ ಪ್ರಧಾನಿ ಕೂಡ ದೇವೇಗೌಡರು ಮಾತ್ರ.

  ದೇವೇಗೌಡರು ಪ್ರಧಾನಿಯಾಗಿದ್ದುದು ಕೇವಲ 11 ತಿಂಗಳು ಮಾತ್ರ. ಆ ಅಧಿಕಾರಾವಧಿಯಲ್ಲಿ ದೇವೇಗೌಡರು ಹೆಚ್ಚೇನೂ ಸಾಧನೆ ಮಾಡಲಿಲ್ಲ ಎಂದು ಹಲವು ಟೀಕಿಸುತ್ತಾರೆ. ಆದರೆ, ಈ ಆರೋಪವನ್ನು ದೇವೇಗೌಡರು ಒಪ್ಪುವುದಿಲ್ಲ. ನಾನು ನನ್ನ ಅಧಿಕಾರಾವಧಿಯಲ್ಲಿ ನನ್ನ ಕೈಯಲ್ಲಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನೂ ಮಾಡಿದೆ. ಭಾರತದಲ್ಲಿ ಆಗ ಜ್ವಲಂತವಾಗಿದ್ದ ಅನೇಕ ಸಮಸ್ಯೆಗಳನ್ನು ಬಗೆಹರಿಸಿದೆ. ನನಗೆ ಸಿಕ್ಕ ಅಲ್ಪ ಸಮಯವನ್ನು ಭಾರತದ ಅಭಿವೃದ್ಧಿಯ ನಿಟ್ಟಿನಲ್ಲಿ ನಾನು ಚೆನ್ನಾಗಿಯೇ ಬಳಸಿಕೊಂಡೆ ಎನ್ನುವುದು ದೇವೇಗೌಡರ ಸಮರ್ಥನೆ.

  ಇದನ್ನೂ ಓದಿ: Karnataka Lockdown Extension: ಕರ್ನಾಟಕದಲ್ಲಿ ಲಾಕ್​ಡೌನ್ ವಿಸ್ತರಣೆ?; ಸಚಿವರ ಜೊತೆ ಇಂದು ಸಿಎಂ ಯಡಿಯೂರಪ್ಪ ಮಹತ್ವದ ಸಭೆ

  ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ನನ್ನ ಮೊದಲ ಆದ್ಯತೆ ಜಮ್ಮು ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವುದಾಗಿತ್ತು. ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದ ಶ್ಯಾಮಲ್ ದತ್ತ ಅವರ ಎಚ್ಚರಿಕೆಯನ್ನು ಮೀರಿ ನಾನು ಆಗ ಕಾಶ್ಮೀರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಪವರ್ ಪ್ರಾಜೆಕ್ಟ್​ ಅನ್ನು ಅನ್ನು ಕ್ಲಿಯರ್ ಮಾಡಿದೆ. ಇದರಿಂದ ಸಾಕಷ್ಟು ಉಪಯೋಗವೂ ಆಯಿತು. ನನ್ನ 11 ತಿಂಗಳ ಅಧಿಕಾರಾವಧಿಯಲ್ಲಿ 5 ಬಾರಿ ನಾನು ಕಾಶ್ಮೀರಕ್ಕೆ ಭೇಟಿ ನೀಡಿದ್ದೆ ಎಂದು ದೇವೇಗೌಡರು ತಾವು ಪ್ರಧಾನಿಯಾಗಿ ಬೆಳ್ಳಿ ಹಬ್ಬ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.  ದೆಹಲಿ ಮೆಟ್ರೋಗೆ ಅನುಮೋದನೆ ನೀಡಿದ್ದೂ ದೇವೇಗೌಡರೇ:

  ಇನ್ನೊಂದು ಕುತೂಹಲದ ವಿಷಯವೆಂದರೆ, ದೆಹಲಿ ಮೆಟ್ರೋ ಪ್ರಾಜೆಕ್ಟ್​ ಕೂಡ ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ಅನುಮೋದನೆಗೊಂಡಿತ್ತು. ದೆಹಲಿಗೆ ಮೆಟ್ರೋ ಅಗತ್ಯವಿಲ್ಲ, ಅದರಿಂದ ಏನೂ ಉಪಯೋಗವಿಲ್ಲ ಎಂದು ಆಗ ಅನೇಕರು ವಾದಿಸಿದ್ದರು. ಪಿ.ವಿ. ನರಸಿಂಹ ರಾವ್ ಕೂಡ ಇದೇ ಟೀಕೆಯನ್ನು ಎದುರಿಸಿದ್ದರು. ಆದರೂ ಅವರೆಲ್ಲರನ್ನೂ ಎದುರಿಸಿ ದೇವೇಗೌಡರು ಮೆಟ್ರೋ ಪ್ರಾಜೆಕ್ಟ್​ಗೆ ಅನುಮೋದನೆ ನೀಡಿದರು. ಈಗ ದೆಹಲಿ ಮೆಟ್ರೋ ಇಡೀ ವಿಶ್ವದ ಅತ್ಯುತ್ತಮ ಮತ್ತು ಅತ್ಯಂತ ದೊಡ್ಡ ಮೆಟ್ರೋ ಎಂಬ ಪ್ರಸಿದ್ಧಿ ಪಡೆದಿದೆ. ದುರಾದೃಷ್ಟವೆಂದರೆ, 2002ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದೇವೇಗೌಡರು ದೆಹಲಿಯಲ್ಲೇ ಇದ್ದರೂ ದೆಹಲಿ ಮೆಟ್ರೋ ಉದ್ಘಾಟನೆಗೆ ಅವರನ್ನು ಆಹ್ವಾನಿಸಲೇ ಇಲ್ಲ. ತಾವೇ ಅನುಮೋದನೆ ನೀಡಿದ್ದ ಮೆಟ್ರೋ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ದೇವೇಗೌಡರಿಗೆ ಆಮಂತ್ರಣ ಸಿಗಲಿಲ್ಲ.

  ಭಾರತದ ಪ್ರಧಾನಿಯಾಗಿ ಹೆಚ್​.ಡಿ. ದೇವೇಗೌಡ ಪ್ರಮಾಣವಚನ ಸ್ವೀಕಾರ ಮಾಡಿದ ತಕ್ಷಣ ಆಗ ಜನತಾದಳದ ಅಧ್ಯಕ್ಷರಾಗಿದ್ದ ಲಾಲೂ ಪ್ರಸಾದ್ ಯಾದವ್ ಇಬ್ಬರೂ ಸೇರಿ ಪಕ್ಷನಿಷ್ಠರಾಗಿದ್ದ ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು. ಆ ಒಂದು ನಿರ್ಧಾರದಿಂದ ದೇವೇಗೌಡರ ಕುಟುಂಬ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಯಿತು.

  ವಾಜಪೇಯಿಯ ಆಫರ್ ತಿರಸ್ಕರಿಸಿದ್ದೆ:

  ನಾನು ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿತು. ಆಗ ಅಟಲ್ ಬಿಹಾರಿ ವಾಜಪೇಯಿ ನಮ್ಮ ಸರ್ಕಾರಕ್ಕೆ ಬೆಂಬಲ ನೀಡಲು ಮುಂದೆ ಬಂದಿದ್ದರು. ಆದರೆ, ಆ ಆಫರ್ ಅನ್ನು ನಾನು ಒಪ್ಪಿಕೊಳ್ಳದೆ ತಿರಸ್ಕರಿಸಿದೆ ಎಂದು ದೇವೇಗೌಡರು 25 ವರ್ಷ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

  ಇದನ್ನೂ ಓದಿ: BS Yediyurappa: ದಿಢೀರನೆ ದೆಹಲಿಗೆ ದೌಡಾಯಿಸಿದ ವಿಜಯೇಂದ್ರ; ಯೋಗೇಶ್ವರ್ ಬಣಕ್ಕೆ ಬಿಸಿ ಮುಟ್ಟಿಸಲು ಮುಂದಾದ ಸಿಎಂ ಯಡಿಯೂರಪ್ಪ

  ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಭಾಷೆ, ಅವರ ವೇಷಭೂಷಣ, ಆಹಾರ ಕ್ರಮಗಳನ್ನು ಅನೇಕರು ಹಾಸ್ಯ ಮಾಡುತ್ತಿದ್ದರು. ಆದರೆ, ಪ್ರಧಾನಿಯಾದರೂ ದೇವೇಗೌಡರು ತಮ್ಮ ಹಳ್ಳಿ ಸೊಗಡನ್ನು, ಸರಳತೆಯನ್ನು ಬಿಟ್ಟುಕೊಡಲಿಲ್ಲ. ನಾನು ದೆಹಲಿಗೆ ಪ್ರಧಾನಿಯಾಗಲು ಹೋದವನಲ್ಲ. ರೈತನ ಮಗನಾಗಿದ್ದ ನಾನು ಓರ್ವ ಕೃಷಿಕನಾಗಿಯೇ ದೆಹಲಿಗೆ ಹೋದೆ. ಪ್ರಧಾನಿಯಾದ ಮೇಲೂ ಕೃಷಿಕನಾಗಿಯೇ ವಾಪಾಸ್ ಬಂದೆ. ಅಧಿಕಾರದಿಂದ ನನ್ನಲ್ಲಿ ಹೆಚ್ಚೇನೂ ಬದಲಾವಣೆಯಾಗಲಿಲ್ಲ. ನಾನು ಪ್ರಧಾನಿ ಹುದ್ದೆಗೆ ಸೂಕ್ತ ವ್ಯಕ್ತಿ ಆಗಿರಲಿಲ್ಲ ಎನಿಸುತ್ತದೆ. ಆದರೂ ನನ್ನನ್ನು ಅಲ್ಲಿ ಎಲ್ಲರೂ ಗೌರವದಿಂದಲೇ ಕಂಡರು. ಭಾರತದ ಪ್ರಧಾನಿ ಹುದ್ದೆಯೆಲ್ಲ ಸಣ್ಣ ಹಳ್ಳಿಯೊಂದರ ರೈತನಾದ ನನ್ನಂಥವರಿಗೆ ಸರಿಹೊಂದುವುದಿಲ್ಲ ಎಂದು ಆಗಾಗ ಅನಿಸುತ್ತಲೇ ಇರುತ್ತದೆ ಎಂದು ದೇವೇಗೌಡರು ಹೇಳಿದ್ದಾರೆ.

  ಈಗಲೂ ತಾನು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ದೇವೇಗೌಡರ ಮನಸಿನಲ್ಲಿದೆ ಎಂದು ದೇವೇಗೌಡರ ವಿರೋಧಿಗಳು ಮತ್ತು ಆಪ್ತ ವಲಯದವರೆಲ್ಲರೂ ಮಾತನಾಡಿಕೊಳ್ಳುತ್ತಿರುತ್ತಾರೆ. 88 ವರ್ಷದ ದೇವೇಗೌಡರು ತಮಗೆ ಆ ರೀತಿಯ ಯಾವ ಆಸೆಯೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈಗಿನ ರಾಜಕಾರಣಕ್ಕೆ ಯುವ ಮತ್ತು ಡೈನಾಮಿಕ್ ನಾಯಕರ ಅಗತ್ಯವಿದೆ. ನನ್ನಂಥವರಿಂದ ರಾಜಕಾರಣದಲ್ಲಿ ಇನ್ನು ಏನೂ ಆಗಬೇಕಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  ಹಾಗಂತ, ನಾನು ರಾಜಕಾರಣದಿಂದ ನಿವೃತ್ತಿ ಪಡೆದಿದ್ದೇನೆ ಎಂದು ಅರ್ಥವಲ್ಲ. ನಾನು ಸಾಯುವವರೆಗೂ ನನ್ನ ದೇಶದ ಜನರ ಸೇವೆ ಮಾಡುತ್ತಲೇ ಇರುತ್ತೇನೆ ಎಂದು ದೇವೇಗೌಡರು ಘೋಷಿಸಿದ್ದಾರೆ.
  Published by:Sushma Chakre
  First published: