ಬೆಂಗಳುರು(ಮಾ.07): ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ಕಚ್ಚಾವಸ್ತು ಖರೀದಿ ಟೆಂಡರ್ ಪ್ರಕ್ರಿಯೆ ಲಂಚ ಪ್ರಕರಣದ ಎ-1 ಆರೋಪಿಯಾಗಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ( Madal Virupakshappa) ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು (Interim Anticipatory Bail)ಜಾರಿಗೊಳಿಸಿದೆ. 5 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಇದನ್ನು ನೀಡಲಾಗಿದ್ದು, ಆದೇಶ ತಲುಪಿದ 48 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಹೀಗಾಗಿ ಲೋಕಾಯುಕ್ತ (Lokayukta) ದಾಖಲೆ ಸಲ್ಲಿಸುವವರೆಗೆ ಮಾಡಾಳ್ಗೆ ರಿಲೀಫ್ ಸಿಕ್ಕಿದೆ.
ಆರು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ತೆರೆಮರೆಯಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸುತ್ತಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇನ್ನು ಗುರುವಾರವೇ ಈ ಪ್ರಕರಣ ಸಂಬಂಧ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಅವರನ್ನು ಬಂಧಿಸಿದ್ದ ಲೋಕಾ ಪೊಲೀಸರು ಶಾಸಕರಿಗಾಗಿ ಭಾರೀ ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಇದನ್ನೂ ಓದಿ: Madal Virupakshappa: ಈ ಹಣ ಕೊಂಡೊಯ್ಯಲು ಅಮಿತ್ ಶಾ ಬಂದ್ರಾ? ಕಾಂಗ್ರೆಸ್ ಪ್ರಶ್ನೆ
ಭಾರೀ ಹುಡುಕಾಟ ನಡೆಸಿದ್ದ ಲೋಕಾಯುಕ್ತದ ವಿಶೇಷ ತಂಡ
ಶಾಸಕರ ಪತ್ತೆಗೆ ಲೋಕಾಯುಕ್ತ ಡಿವೈಎಸ್ಪಿಗಳ ನೇತೃತ್ವದಲ್ಲಿ7 ತಂಡ ರಚಿಸಲಾಗಿತ್ತು. ವಿರೂಪಾಕ್ಷಪ್ಪ ಮತ್ತು ಅವರ ಕುಟುಂಬ ಸದಸ್ಯರ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಅಧಿಕಾರಿಗಳ ತಂಡವು ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಶೋಧ ನಡೆಸಿದ್ದವು. ಇದೀಗ ಕಣ್ಣಾಮುಚ್ಚಾಲೆ ಆಟದಲ್ಲಿ ಶಾಸಕ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಾಡಾಳ್ ಪರ ವಾದಿಸಿದ ಹಿರಿಯ ವಕೀಲ ಸುಮನ್ ಶಾಸಕರು ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಹಾಗೂ ಸ್ವೀಕರಿಸಿಲ್ಲ. ಈ ಪ್ರಕರಣದಲ್ಲಿ ಮಾಡಾಳ್ ಪಾತ್ರವಿಲ್ಲ ಎಂದಿದ್ದಾರೆ.
48 ಗಂಟೆಯಲ್ಲಿ ವಿಚಾರಣೆಗೆ ಹಾಜರಾಗಬೇಕು
ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್ ಮಾಡಾಳ್ಗೆ 48 ಗಂಟೆಯೊಳಗೆ ಲೋಕಾಯುಕ್ತ ಮುಂದೆ ಸರೆಂಡರ್ ಆಗುವಂತೆ ಸೂಚಿಸಿದೆ. ಅಲ್ಲದೇ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದೂ ಆದೇಶಿಸಿದೆ. ಅಲ್ಲದೇ ಈ ಕುರಿತಾದ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.
ಇದನ್ನೂ ಓದಿ: Madalu Prashant: ಬಗೆದಷ್ಟು ಹೊರ ಬರುತ್ತಿದೆ ಮಾಡಾಳು ಮಗನ ಭ್ರಷ್ಟಾಚಾರ! ಡೀಲ್ ನಡೆಸ್ತಿದ್ದನಾ ಪ್ರಶಾಂತ್?
ಏನಿದು ಪ್ರಕರಣ?
ಶಾಸಕ ಕೆ ಮಾಡಾಳು ವಿರೂಪಾಕ್ಷಪ್ಪ ಪುತ್ರ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ 40 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಇನ್ನು ವಿರೂಪಾಕ್ಷಪ್ಪ ಕೆಎಸ್ಡಿಎಲ್ನ ಅಧ್ಯಕ್ಷರೆಂಬುವುದು ಉಲ್ಲೇಖನೀಯ.
ಎಂಟು ಕೋಟಿಗೂ ಅಧಿಕ ನಗದು ಪತ್ತೆ
ಇದಾದ ಬಳಿಕ ನಡೆದಿದ್ದ ದಾಳಿಯಲ್ಲಿ ಕೆಎಸ್‌ಡಿಎಲ್ ಕಚೇರಿಯಲ್ಲಿ ಸುಮಾರು 2 ಕೋಟಿ ರೂ. ಹಾಗೂ ಪ್ರಶಾಂತ್ ಮನೆಯಿಂದ 6 ಕೋಟಿ ರೂ. ಹೀಗೆ ಒಟ್ಟು 8.23 ಕೋಟಿ ರೂಪಾಯಿ ನಗದು, ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಜಮೀನುಗಳಲ್ಲಿ ಹಣ ಹೂಡಿಕೆ ಮಾಡಿದ್ದ ದಾಖಲೆಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿದ್ದವು.
ಹಾಗಾಗಿ ಅವರ ವಿರುದ್ಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಮಾರ್ಚ್ 2ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯಿದೆ-1988ರ ಕಲಂ 7 (ಎ) ಮತ್ತು (ಬಿ), 7 ಎ, 8, 9 ಮತ್ತು 10ರ ಅಡಿಯಲ್ಲಿ ದಾಖಲಿಸಿರುವ ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮೊದಲ ಆರೋಪಿಯಾದರೆ, ಪ್ರಶಾಂತ್ ಮಾಡಾಳು ಎರಡನೇ ಆರೋಪಿ. ಪ್ರಶಾಂತ್ ಮಾಡಾಳ್ ಬಂಧನವಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ