ಹೈಕೋರ್ಟ್ ಆದೇಶದ (Highcourt Order) ಹಿನ್ನೆಲೆಯಲ್ಲಿ ಭೈರಿದೇವರಕೊಪ್ಪ ದರ್ಗಾ (Byridevarakoppa Dargah) ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ದರ್ಗಾ ಸುತ್ತಲೂ ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ದರ್ಗಾ ತೆರವಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಶಾಸಕ ಪ್ರಸಾದ್ ಅಬ್ಬಯ್ಯ (MLA Prasad Abbaiah) ಖಂಡಿಸಿದ್ದಾರೆ. ಇತ್ತ ಮುನ್ನೆಚ್ಚರಿಕೆ ಕ್ರಮವಾಗಿ ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಪೊಲೀಸ್ ಆಯುಕ್ತ ಲಾಭೂ ರಾಮ್ ನಿಷೇಧಾಜ್ಞೆ (Curfew) ಜಾರಿಗೊಳಿಸಿದ್ದಾರೆ. ಬಿಆರ್ಟಿಎಸ್ ಕಾರಿಡಾರ್ ಯೋಜನೆ (BRTS Corridor Project) ಹಿನ್ನೆಲೆಯಲ್ಲಿ ಹುಬ್ಬಳ್ಳಿ - ಧಾರವಾಡ ಮುಖ್ಯ ರಸ್ತೆಯಲ್ಲಿರುವ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾ (Hazrath Sayed Mahmood Shah Quadri Dargah) ತೆರವು ಕಾರ್ಯಾಚರಣೆ ನಡೆಯುತ್ತಿದೆ. ಭೈರಿದೇವರಕೊಪ್ಪ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ದರ್ಗಾ ತೆರವು ವಿಚಾರದ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅಸಮಾಧಾನ ಹೊರ ಹಾಕಿದರು. ಉದ್ದೇಶ ಪೂರ್ವಕವಾಗಿ ದರ್ಗಾ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಟೆಕ್ನಾಲಜಿ ಬಳಸಿ ದರ್ಗಾ ಉಳಿಸಲು ಮನವಿ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದರು.
ಅಲ್ತಾಫ್ ಹಳ್ಳೂರ ಆಕ್ರೋಶ
ಮಸೀದಿ ತೆರವುಗೊಳಿಸಬಹುದು, ಆದರೆ ದರ್ಗಾದಲ್ಲಿ ಘೋರಿ ಇರುತ್ತದೆ. ಅದನ್ನ ಸ್ಥಳಾಂತರ, ತೆರವು ಮಾಡುವುದು ಕಷ್ಟ. ಮುಸ್ಲಿಂ ಸಂಸ್ಥೆಯಿಂದ ಘೋರಿ ಸ್ಥಳಾಂತರ ಮಾಡುತ್ತೇವೆ ಅಂತ ಹೇಳಲಾಗಿತ್ತು. ಘೋರಿ ಸ್ಥಳಾಂತರ ಮಾಡೋಕೆ ಸಾಧ್ಯ ಇದೆ. ಆದ್ರೆ ಅಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಈ ದರ್ಗಾ ಭಾವೈಕ್ಯತೆಯ ಸಂಕೇತ
ಬಿಜೆಪಿ ಹಿಂದೂ ಮತ್ತು ಮುಸ್ಲಿಂ ಜನರನ್ನ ಒಡೆಯುತ್ತಿದ್ದಾರೆ. ಆದರೆ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾ ಭಾವೈಕ್ಯತೆಯ ಸಂಕೇತವಾಗಿದ್ದು, ಇಲ್ಲಿಗೆ ಎಲ್ಲಾ ಧರ್ಮದವರು ಆಗಮಿಸುತ್ತಾರೆ.
ಈ ಭಾಗದ ಎಲ್ಲಾ ಧರ್ಮದ ಜನ ದರ್ಗಾ ಪೂಜಿಸುತ್ತಾರೆ. ಎಲ್ಲವನ್ನೂ ದೇವರು ನೋಡುತ್ತಿದ್ದಾನೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಜತೆ ಮಾತನಾಡಿದ್ದೇವೆ. ಆದರೆ ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಅಲ್ತಾಫ್ ಹಳ್ಳೂರ ಕಿಡಿಕಾರಿದರು.
ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನೆ
ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ, ಇಷ್ಟು ದಿನ ನಡೆಯದ ಕಾರ್ಯಾಚರಣೆ ಈಗ ಏಕೆ ನಡೆಯುತ್ತಿದೆ ಎಂದು ಪ್ರಶ್ನೆ ಮಾಡಿದರು.
ಒಂದು ಕಡೆ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಮತ್ತೊಂದು ಕಡೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಒಂದು ಧರ್ಮದ ಮತದಾರರ ಒಲೈಕೆಗಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಆರೋಪಿಸಿದರು.
ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ತೆರವು
ದರ್ಗಾ ಹೊರತುಪಡಿಸಿ ರಸ್ತೆ ಮಾಡುವ ಅವಕಾಶಗಳಿದ್ದವು. ಸರ್ಕಾರ ಅದನ್ನು ಮಾಡದೇ ಉದ್ದೇಶಪೂರ್ವಕವಾಗಿ ತೆರವು ಮಾಡುತ್ತಿದೆ. ಆ ಮೂಲಕ ಒಂದು ಧರ್ಮದವರನ್ನು ಟಾರ್ಗೆಟ್ ಮಾಡುತ್ತಿದೆ. ಜನರ ಧಾರ್ಮಿಕ ಭಾವನೆ ಘಾಸಿಗೊಳಿಸುವುದು ಸರಿಯಲ್ಲ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಆಕ್ರೋಶ ಹೊರ ಹಾಕಿದರು. ದರ್ಗಾದಿಂದ ನೇರವಾಗಿ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಶಾಸಕರು ತೆರಳಿದರು.
ಇದನ್ನೂ ಓದಿ: Halal Ban Bill: ಅಧಿವೇಶನದಲ್ಲಿ ಹಲಾಲ್ ನಿಷೇಧ ಮಸೂದೆ ಮಂಡನೆಗೆ ಬಿಜೆಪಿ ಸಿದ್ಧತೆ
ದೃಶ್ಯ ಸೆರೆ ಹಿಡಿಯದಂತೆ ತಡೆ
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನಿಂದ ಬಿಗಿಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪೊಲೀಸ್ ಸರ್ಪಗಾವಲಿನಲ್ಲಿ ದರ್ಗಾ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಸಾರ್ವಜನಿಕ ಪ್ರವೇಶ ನಿರ್ಬಂಧಿಸಿರುವ ಪೊಲೀಸರು, ದರ್ಗಾ ತೆರವಿನ ದೃಶ್ಯ ಸೆರೆ ಹಿಡಿಯದಂತೆ ಮಾಧ್ಯಮಗಳನ್ನೂ ದೂರವಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ