ಹಾವೇರಿ(ಆ.18): ಕೊರೋನಾ ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನವನ್ನು ಸಕಾಲದಲ್ಲಿ ಬಳಸಬೇಕು. ಅನುದಾನ ವಾಪಸ್ಸಾದರೆ ಇಲಾಖಾ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಹಾವೇರಿ ಜಿಪಂ ಅಧ್ಯಕ್ಷ ಬಸವನಗೌಡ ದೇಸಾಯಿ ಎಚ್ಚರಿಸಿದ್ದಾರೆ.
ಜಿ.ಪಂ. ಸಭಾಭವನದಲ್ಲಿ ಆಯೋಜಿಸಿದ್ದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನುದಾನ ಬಳಕೆಗೆ ಮಾರ್ಚ್ವರೆಗೆ ಗಡುವಿದೆ ಎಂಬ ಧೋರಣೆ ಕೈಬಿಡಬೇಕು. ನವೆಂಬರ್, ಡಿಸೆಂಬರ್ ತಿಂಗಳೊಳಗೆ ನಿಗದಿತ ಗುರಿ ಸಾಧಿಸಬೇಕು. ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಕೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ನೀಡಬೇಕು ಎಂದು ಸೂಚಿಸಿದರು.
ಕಳೆದ ವರ್ಷ ನೆರೆ ಹಾವಳಿ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಶಾಲೆಗಳು ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿ, ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವರ್ಕ್ ಆರ್ಡರ್ ನೀಡಿದರೂ ಕಾಮಗಾರಿ ಆರಂಭಿಸಿಲ್ಲ. ಇಂಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಕಟ್ಟಡ ನಿರ್ವಣದ ಜವಾಬ್ದಾರಿ ವಹಿಸಿಕೊಂಡಿರುವ ಏಜೆನ್ಸಿಗಳು ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಸಚಿವ ಸಿ.ಟಿ.ರವಿ
ವರದಾಸಿರಿ ಯೋಜನೆಯಡಿ ವರದಾ ನದಿ ದಂಡೆಯಲ್ಲಿ ಸಸಿ ನೆಡಲು ಅನುಕೂಲವಾಗುವಂತೆ ಈ ನದಿಪಾತ್ರದ ಮೂರು ತಾಲೂಕಿಗೆ ತಲಾ 10 ಸಾವಿರದಂತೆ ಬಿದಿರು ಸಸಿಗಳನ್ನು ಪೂರೈಸಬೇಕು. ರೈತರಿಗೆ ಪೂರೈಸಲು ಈ ವರ್ಷದಿಂದ ಶ್ರೀಗಂಧ, ರಕ್ತಚಂದನ ಸಸಿಗಳನ್ನು ಬೆಳೆಸಿ ಪೂರೈಸಲು ಕ್ರಮ ವಹಿಸಬೇಕು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ