ಹಾವೇರಿ: ಹಾವೇರಿ ತಾಲೂಕಿನ ಬಮ್ಮನಕಟ್ಟಿ ಗ್ರಾಮದ ಬಳಿ ಇರುವ ರೈತ ಬಸವರಾಜ ಮೈಲಾರ ಎಂಬುವವರು ಜಮೀನಿನಲ್ಲಿ ಕೃಷಿ ಜೊತೆಗೆ ಕುರಿ ಸಾಕಾಣಿಕೆ ಮಾಡಿಕೊಂಡಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ಯಾವುದೋ ಪ್ರಾಣಿ ರಾತ್ರಿ ಆಗುತ್ತಿದ್ದಂತೆ ಕುರಿಗಳ ಮೇಲೆ ದಾಳಿ ಮಾಡುತ್ತಿತ್ತು. ಸತತ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿರೋ ಪ್ರಾಣಿ ಕಳೆದ ಕೆಲ ದಿನಗಳ ಹಿಂದಷ್ಟೇ ಏಳು ಕುರಿಗಳನ್ನ ಎಳೆದಾಡಿ ಅರ್ಧಂಬರ್ಧ ತಿಂದು ಪರಾರಿ ಆಗಿತ್ತು. ಇದಕ್ಕೂ ಮೊದಲು ಬಮ್ಮನಕಟ್ಟಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಯಲಗಚ್ಚ, ಬಸಾಪುರ, ಕನವಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಓಡಾಡ್ತಿದೆ ಅನ್ನೋ ಸುದ್ದಿ ಹಬ್ಬಿತ್ತು. ಚಿರತೆ ಬಂತು ಚಿರತೆ ಅನ್ನೋ ಸುದ್ದಿ ಹಬ್ಬಿದಮೇಲೆ ಕನವಳ್ಳಿ, ಬಸಾಪುರ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಜನರು ಹೊರಗೆ ಓಡಾಡುವಾಗ ಹುಷಾರಿನಿಂದ ಓಡಾಡಿ, ಚಿರತೆ ಪ್ರತ್ಯಕ್ಷವಾಗಿದೆ ಅಂತ ಡಂಗುರ ಸಾರಲಾಗಿದೆ.
ಅದರ ನಂತರ ಕುರಿಗಳನ್ನ ಯಾವುದೋ ಪ್ರಾಣಿ ರಾತ್ರೋರಾತ್ರಿ ಅರ್ಧಂಬರ್ಧ ತಿಂದು ಹೋಗ್ತಿರೋದು ಚಿರತೆ ಬಂತು ಚಿರತೆ ಅನ್ನೋ ಜನರ ಮಾತಿಗೆ ಪುಷ್ಠಿ ನೀಡಿದಂತಾಗಿದೆ. ಬಮ್ಮನಕಟ್ಟಿ ಗ್ರಾಮದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರಲ್ಲಿ ಯಾವಾಗ ಚಿರತೆ ಭೀತಿ ಕಾಡೋಕೆ ಶುರುವಾಯ್ತೋ ಆಗಲೇ ಕುರಿಗಳ ಮೇಲಿನ ದಾಳಿ ಚಿರತೆ ಬಂದಿದೆ ಅನ್ನೋದಕ್ಕೆ ಪುಷ್ಠಿ ನೀಡಿದಂತಾಗಿದೆ. ಕುರಿಗಳನ್ನ ಯಾವುದೋ ಪ್ರಾಣಿ ಅರ್ಧಂಬರ್ಧ ತಿಂದು ಹೋಗಿರೋದನ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಚಿರತೆ ಬಂದಿರೋ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಸಂಶಯದ ಆಧಾರದ ಮೇಲೆ ಕಳೆದ ಕೆಲ ದಿನಗಳಿಂದ ರೈತ ಬಸವರಾಜ ಮೈಲಾರನ ಜಮೀನಿನಲ್ಲಿ ಬೋನು ಇಟ್ಟು ಚಿರತೆ ಇದ್ದರೆ ಸೆರೆಯಾಗುತ್ತದೆ ಎಂದು ಕಾದರೂ ಈ ಭಾಗದಲ್ಲಿ ಯಾವುದೇ ಚಿರತೆ ಕಂಡುಬಂದಿಲ್ಲ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ - ಇಂದಿನಿಂದ ಸಾರಿಗೆ ನೌಕರರ ಮುಷ್ಕರ; ಸರ್ಕಾರದಿಂದ ಖಾಸಗಿ ಬಸ್ಸುಗಳ ಪರ್ಯಾಯ ವ್ಯವಸ್ಥೆ!
ಹತ್ತಾರು ಗ್ರಾಮಗಳಲ್ಲಿ ಚಿರತೆ ಬಂತು ಚಿರತೆ ಅನ್ನೋ ಸುದ್ದಿ ಹರಡಿದರೂ ಇದುವರೆಗೂ ಯಾವ ಗ್ರಾಮದ ಜನರೂ ಚಿರತೆಯನ್ನು ನೋಡಿಲ್ಲ. ಹೀಗಾಗಿ, ಚಿರತೆ ಬಂತು ಚಿರತೆ ಅನ್ನೋದು ಹುಲಿ ಬಂತು ಹುಲಿ ಅನ್ನೋ ಕತೆಯಂತಾಗಿದೆ. ಆದರೆ ಜನರು ಮಾತ್ರ ಚಿರತೆ ಬಂದಿದೆ ಅನ್ನೋದನ್ನು ಕೇಳಿ ಅಕ್ಷರಶಃ ಕಂಗಾಲಾಗಿದ್ದಾರೆ. ರೈತರಂತೂ ಹಗಲು ಹೊತ್ತಿನಲ್ಲಿ ಒಬ್ಬೊಬ್ಬರಾಗಿ ಜಮೀನಿಗೆ ಹೋಗೋಕೆ ಭಯಪಡುತ್ತಿದ್ದಾರೆ. ಗ್ರಾಮಗಳ ಸುತ್ತಮುತ್ತ ನೂರಾರು ರೈತರು ನೀರಾವರಿ ಕೃಷಿ ಮಾಡಿಕೊಂಡಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ನೀರಾವರಿ ಕೃಷಿ ಮಾಡ್ತಿರೋ ಬಹುತೇಕ ರೈತರು ರಾತ್ರಿ ವೇಳೆ ಜಮೀನಿಗೆ ಹೋಗೋದನ್ನೇ ನಿಲ್ಲಿಸಿದ್ದಾರೆ. ಇದು ಅರಣ್ಯ ಇಲಾಖೆಗೂ ದೊಡ್ಡ ತಲೆ ನೋವಾಗಿದೆ.
(ವರದಿ: ಮಂಜುನಾಥ್ ತಳವಾರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ