ಕಾಂಗ್ರೆಸ್-ಬಿಜೆಪಿ ಪಾಳಯಕ್ಕೆ ಪ್ರತಿಷ್ಠೆಯ ಕಣವಾಗಿದೆ ಯಾಲಕ್ಕಿ ನಾಡು ಹಾವೇರಿ

news18
Updated:August 28, 2018, 4:34 PM IST
ಕಾಂಗ್ರೆಸ್-ಬಿಜೆಪಿ ಪಾಳಯಕ್ಕೆ ಪ್ರತಿಷ್ಠೆಯ ಕಣವಾಗಿದೆ ಯಾಲಕ್ಕಿ ನಾಡು ಹಾವೇರಿ
ಹಾವೇರಿ ಜಿಲ್ಲಾ ನಕ್ಷೆ
news18
Updated: August 28, 2018, 4:34 PM IST
ಸಂಕನಗೌಡ ಎಮ್ ದೇವಿಕೊಪ್ಪ, ನ್ಯೂಸ್ 18 ಕನ್ನಡ

ಹಾವೇರಿ (ಆ.28): ಯಾಲಕ್ಕಿ ನಾಡು ಹಾವೇರಿ ಜಿಲ್ಲೆಯಲ್ಲೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ -ಬಿಜಿಪಿ ಪಾಳಯದಲ್ಲಿ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಇನ್ನು ಈ ಚುನಾವಣೆ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಹೇಗಾದರೂ ಮಾಡಿ ಜಿಲ್ಲೆಯಲ್ಲಿ ಖಾತೆ ತೆರೆಯಲು ಮುಂದಾಗಿದೆ.

ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಸ್ಥಾನ ಗೆದ್ದಿರುವ ಬಿಜೆಪಿ ಈ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ರಣತಂತ್ರ ರೂಪಿಸಿದೆ

ಜಿಲ್ಲೆಯಲ್ಲಿ ಒಟ್ಟು 2 ನಗರಸಭೆ, 2 ಪುರಸಭೆ ಹಾಗೂ 1 ಪಟ್ಟಣ ಪಂಚಾಯತ್​​ಗಳು ಸೇರಿ ಒಟ್ಟು 5 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. 5 ಸ್ಥಳೀಯ ಸಂಸ್ಥೆಗಳ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್​​, ಬಿಜೆಪಿ ನಡುವೆ ನೇರ ಹಣಾಹಣಿ, ಜೊತೆಗೆ ಕೆಲವೆಡೆ ಜೆಡಿಎಸ್ ಪೈಪೋಟಿ ನಡೆಸಿದೆ. ಇನ್ನೂ ಹಾವೇರಿ ನಗರಸಭೆಯ 31 ವಾರ್ಡುಗಳಿಗೆ ಅಂತಿಮ ಅಖಾಡ ಸಿದ್ದವಾಗಿದೆ. ಅಂತಿಮವಾಗಿ ಅಖಾಡದಲ್ಲಿ ಒಟ್ಟು 145 ಅಭ್ಯರ್ಥಿಗಳು ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಸಜ್ಜನ ಹಾಗೂ ಶಾಸಕ ನೆಹರು ಓಲೇಕಾರ ನಡುವೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮನಸ್ತಾಪ ಉಂಟಾಗಿದ್ದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಶಿವರಾಜ್ ಸಜ್ಜನ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಇದರ ಲಾಭ ಪಡೆಯಲು ಮುಂದಾಗಿದೆ.

ಕೆಲವು ವಾರ್ಡುಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆದು ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವುದು ಆಯಾಪಕ್ಷದ ಅಭ್ಯರ್ಥಿಗಳ ಎದೆಬಡಿತ ಹೆಚ್ಚಳಕ್ಕೆ ಕಾರಣವಾಗಿದೆ. ಇದರಲ್ಲಿ 31 ಕಾಂಗ್ರೆಸ್, 31 ಬಿಜೆಪಿ, 16 ಜೆಡಿಎಸ್, 3 ಬಿಎಸ್‌ಪಿ ಹಾಗೂ 64 ಪಕ್ಷೇತರರು ಕಣದಲ್ಲಿದ್ದಾರೆ. ಇನ್ನು ಅರಣ್ಯ ಖಾತೆ ಸಚಿವ ಆರ್ ಶಂಕರ್ ಪ್ರತಿನಿಧಿಸಿರುವ ವಿಧಾನ ಸಭಾ ಕ್ಷೇತ್ರ ರಾಣೇಬೆನ್ನೂರು ನಗರಸಭೆ ಪ್ರತಿಷ್ಠೆಯ ಕಣವಾಗಿದೆ. 35 ವಾರ್ಡುಗಳನ್ನು ಹೊಂದಿರುವ ನಗರಸಭೆಗೆ 35 ಕಾಂಗ್ರೆಸ್ 34 ಬಿಜೆಪಿ 7 ಜೆಡಿಎಸ್ 68 ಪಕ್ಷೇತರರು ಸೇರಿದಂತೆ 144 ಅಭ್ಯರ್ಥಿಗಳು ಅಂತಿಮವಾಗಿ ಅದೃಷ್ಟ ಪರೀಕ್ಷಿಸಿಕೊಳ್ಳಲಿದ್ದಾರೆ. ಇನ್ನೂ ಹಿರೆಕೇರೂರ ಪಟ್ಟಣ ಪಂಚಾಯತಿಗೆ 20 ಸದಸ್ಯರ ಬಲವನ್ನು ಹೊಂದಿದ್ದು 20 ಕಾಂಗ್ರೆಸ್, 15 ಬಿಜೆಪಿ, 8 ಜೆಡಿಎಸ್, 12 ಪಕ್ಷೇತರರು ಸೇರಿದಂತೆ 55 ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ದರಾಗಿದ್ದಾರೆ. ಹಾನಗಲ್ ಪುರಸಭೆ 23 ಸಂಖ್ಯಾ ಬಲವನ್ನು ಹೊಂದಿದೆ. ಅದರಲ್ಲಿ 23 ಕಾಂಗ್ರೆಸ್, 23 ಬಿಜೆಪಿ, 06 ಜೆಡಿಎಸ್, 5 ಪಕ್ಷೇತರರು ಸೇರಿದಂತೆ 57 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಇನ್ನು ಸವಣೂರು ಪುರಸಭೆ 27 ಸದಸ್ಯರನ್ನು ಹೊಂದಿದೆ. ಇದರಲ್ಲಿ 27 ಕಾಂಗ್ರೆಸ್, 27 ಬಿಜೆಪಿ, 15 ಜೆಡಿಎಸ್, 10 ಪಕ್ಷೇತರರು ಅಖಾಡದಲ್ಲಿದ್ದಾರೆ.
ಒಟ್ಟಾರೆ ಹಾವೇರಿ ಜಿಲ್ಲೆಯ 5 ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ 136 ಸದಸ್ಯ ಸ್ಥಾನಕ್ಕೆ 480 ಅಭ್ಯರ್ಥಿಗಳು ತೀವ್ರ ಪೈಪೋಟಿ ನೀಡುತ್ತಿದ್ದು, ಮತದಾರರನ್ನು ಸೆಳೆಯಲು ತಮ್ಮ ನಾಯಕರ ಜೊತೆಗೆ ಮನೆ ಮನೆ ಕದ ತಟ್ಟುತ್ತಿದ್ದಾರೆ. ಆದರೆ ಮತದಾರ ಪ್ರಭು ಮಾತ್ರ ಯಾರಿಗೆ ಒಲೆಯುತ್ತಾನೆ ಎಂಬುದನ್ನು ಫಲಿತಾಂಶದ ದಿನ ಕಾದು ನೋಡಬೇಕಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ