Soldier: ಕರ್ತವ್ಯ ವೇಳೆಯಲ್ಲೇ ಹಿಮಪಾತಕ್ಕೆ ಸಿಲುಕಿ ಕರ್ನಾಟಕದ ಯೋಧ ಅಲ್ತಾಫ್ ಅಹ್ಮದ್ ಹುತಾತ್ಮ

ಸಕಲ ಸರ್ಕಾರಿ ಗೌರವದೊಂದಿಗೆ ವಿರಾಜಪೇಟೆಯಲ್ಲಿ ಅಂತ್ಯಕ್ರಿಯೆ 

ಹವಾಲ್ದಾರ್ ಅಲ್ತಾಫ್ ಅಹ್ಮದ್

ಹವಾಲ್ದಾರ್ ಅಲ್ತಾಫ್ ಅಹ್ಮದ್

  • Share this:
ಕೊಡಗು(ಫೆ.27) : ಶ್ರೀನಗರದಲ್ಲಿ(Srinagar) ಭಾರತ ಮಾತೆಯ ರಕ್ಷಣೆಗೆ ನಿಂತಿರುವಾಗಲೇ ಹಿಮಪಾತದಲ್ಲಿ(Snow Fall) ಹುದುಗಿ ಹೋಗಿ ಹುತಾತ್ಮರಾಗಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆಯ ಹವಾಲ್ದಾರ್ ಅಲ್ತಾಫ್ ಅಹ್ಮದ್ (Althaf Ahmmad) ಶನಿವಾರ ವೀರರ ನಾಡು ಕೊಡಗಿನ ಮಣ್ಣಲ್ಲಿ ಮಣ್ಣಾಗಿದ್ದಾರೆ. ಫೆಬ್ರವರಿ 19 ರಂದೇ ಹುತಾತ್ಮರಾಗಿದ್ದ ಹವಾಲ್ದಾರ್ ಅಲ್ತಾಫ್ ಅವರ ಪಾರ್ಥೀವ ಶರೀರಕ್ಕೆ ನಿನ್ನೆ ಸಂಜೆ ಶ್ರೀನಗರದಲ್ಲಿ ನೇನಾಧಿಕಾರಿಗಳು ಗೌರವ ನಮನ ಸಲ್ಲಿಸಿ ಕರ್ನಾಟಕಕ್ಕೆ (Karnataka) ರವಾನೆ ಮಾಡಿದ್ದರು. ಮಧ್ಯರಾತ್ರಿ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಪಾರ್ಥೀವ ಶರೀರವನ್ನು ತರಲಾಗಿತ್ತು. ಬಳಿಕ ಅಲ್ಲಿಂದ ವಿಶೇಷ ಅಂಬ್ಯುಲೆನ್ಸ್ ನಲ್ಲಿ ಕೊಡಗಿಗೆ ಸಾಗಿಸಲಾಗಿತ್ತು. ಪಾರ್ಥೀವ ಶರೀರ ಹೊತ್ತ ಸೇನಾ ಅಂಬ್ಯುಲೆನ್ಸ್ (Military Ambulance) ಶನಿವಾರ ಮುಂಜಾನೆ ಐದುವರೆ ಗಂಟೆಗೆ ವಿರಾಜಪೇಟೆ ಕಡೆಗೆ ಬರುತ್ತಿದ್ದಂತೆ ಕೊಡಗಿನ ಗಡಿ ತಿತಿಮತಿಯಲ್ಲಿ ಮುಂಜಾನೆಯೇ ನೂರಾರು ಜನರು ಸೇರಿ ಪುಷ್ಪಾರ್ಚನೆ ಮಾಡಿ ಹವಾಲ್ದಾರ್ ಅಲ್ತಾಫ್ ಅಮರ್ ರಹೇ, ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗಿ ಗೌರವ ಸಲ್ಲಿಸಿದರು.

ವಿರಾಜಪೇಟೆಯ ತಾಲ್ಲೂಕು ಮೈದಾನದಲ್ಲಿ  ಬೆಳಿಗ್ಗೆ 11 ಗಂಟೆವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪಾರ್ಥೀವ ಶರೀರ ಬಂದಿರುವುದು ಗೊತ್ತಾಗುತ್ತಿದ್ದಂತೆ ಅಗಲಿದ ಯೋಧನಿಗೆ ಗೌರವ ಸಲ್ಲಿಸಿ ಕೊನೆಯದಾಗಿ ಕಣ್ತುಂಬಿಕೊಳ್ಳಲು ಸಾವಿರಾರು ಜನರು ಮೈದಾನದತ್ತ ದೌಡಾಯಿಸಿದ್ದರು. ಸಾರ್ವಜನಿಕರ ವೀಕ್ಷಣೆಗೆ ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿತ್ತು.

ಸಾವಿರಾರು ಜನರಿಂದ ಅಂತಿಮ ನಮನ

ಸರದಿಯಲ್ಲಿ ಬಂದ ಸಾವಿರಾರು ಜನರು ವೀರಯೋಧನಿಗೆ ಅಂತಿಮ ನಮನ ಸಲ್ಲಿದ್ರು. ವೀರ ಮರಣವನ್ನಪ್ಪಿದ ಅಲ್ತಾಫ್ ಅವರಿಗೆ ಮೂರು ಸುತ್ತಿನ ಕುಶಾಲ ತೋಪು ಸಿಡಿಸಿ ಕೊಡಗು ಜಿಲ್ಲಾಡಳಿತ ಗೌರವ ನಮನ ಸಲ್ಲಿಸಿತು. ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ, ಎಂಎಲ್ಸಿ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಡಾ ಬಿ ಸಿ ಸತೀಶ, ತಹಶೀಲ್ದಾರ್ ಯೋಗಾನಂದ ಸೇರಿದಂತೆ ಕೊಡಗಿನ ಅನೇಕ ನಿವೃತ ಸೇನಾಧಿಕಾರಿಗಳು ಹವಾಲ್ದಾರ್ ಅಲ್ತಾಫ್ ಅವರಿಗೆ ಹೂಗುಚ್ಚವನಿಟ್ಟು ಅಲ್ತಾಫ್ ಅಮರ್ ರಹೇ ಎಂದು ಕೂಗಿ ಅಂತಿಮ ನಮನ ಸಲ್ಲಿಸಿದರು.

ಸ್ಥಳದಲ್ಲೇ ಕುಸಿದು ಬಿದ್ದ ಪತ್ನಿ

ಅಲ್ಲದೆ ರಾಷ್ಟ್ರಗೀತೆ ಹಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಅಲ್ತಾಫ್ ಅವರ ಪಾರ್ಥೀವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಸೇನಾಧಿಕಾರಿಗಳು ಹವಾಲ್ದಾರ್ ಅಲ್ತಾಫ್ ಅವರ ಪತ್ನಿ ಜುಬೇರಿಯಾ ಅವರಿಗೆ ಹಸ್ತಾಂತರಿಸುತ್ತಿದ್ದಂತೆ ಜುಬೇರಿಯಾ ಅವರು ಸ್ಥಳದಲ್ಲಿಯೇ ಕುಸಿದು ಬಿದ್ದರು. ಇನ್ನು ಅಲ್ತಾಫ್ ಅವರ ಮಗ ಮತ್ತು ಮಗಳು ಇಬ್ಬರು ಸೇನಾ ಸಮವಸ್ತ್ರದ ರೀತಿಯ ಪ್ಯಾಂಟು ಷರಟು ಧರಿಸಿ ನಾವೂ ಕೂಡ ದೇಶದ ಸೇವೆಗೆ ಸಿದ್ಧ ಇದ್ದೇವೆ ಎನ್ನುವಂತೆ ಕಾಣಿಸುತ್ತಿದ್ದು ಎಲ್ಲರು ಆ ಮಕ್ಕಳು ಮತ್ತು ಹವಾಲ್ದಾರ್ ಅಲ್ತಾಫ್ ಅವರ ಬಗ್ಗೆ ಹೆಮ್ಮೆ ಪಡುವಂತೆ ಮಾಡಿತ್ತು.

ಮುಸ್ಲಿಂ ವಿಧವಿಧಾನಗಳಂತೆ ಅಂತ್ಯಕ್ರಿಯೆ

ಇಬ್ಬರು ಮಕ್ಕಳು ತಮ್ಮ ಬಿಟ್ಟು ಹೊರಟ ಅಪ್ಪನಿಗೆ ಸೆಲ್ಯುಟ್ ಹೊಡೆದು ಬೀಳ್ಕೊಡುತ್ತಿದ್ದರೆ ಎಲ್ಲರ ಕಣ್ಣಲ್ಲಿ ಗೊತ್ತಿಲ್ಲದಂತೆ ನೀರು ಹರಿಯುತ್ತಿತ್ತು. ತಮ್ಮ ಮಗನನ್ನು ಕಳೆದುಕೊಂಡ ಅಲ್ತಾಫ್ ಅವರ ತಾಯಿ ಮತ್ತು ಅವರ ಕುಟುಂಬದವರ ದುಃಖದ ಕಟ್ಟೆ ಹೊಡೆದಿತ್ತು. ಒಟ್ಟಿನಲ್ಲಿ ಸರ್ಕಾರಿ ಗೌರವದ ಬಳಿಕ ಮುಸ್ಲಿಂ ಧರ್ಮದ ವಿಧಿವಿಧಾನಗಳಂತೆ ದೇಶಕ್ಕಾಗಿ ಹುತಾತ್ಮರಾಗಿದ್ದ ಹವಾಲ್ದಾರ್ ಅಲ್ತಾಫ್ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು.
Published by:Divya D
First published: