ಬೆಂಗಳೂರು (ಸೆ. 30): ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಎರಡು ವಾರಗಳ ಹಿಂದೆ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿತ್ತು. ಆಕೆ ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಕಾಂಗ್ರೆಸ್ ಆಕ್ರೋಶ ಹೊರಹಾಕಿತ್ತು. ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಯೋಗಿ ಆದಿತ್ಯನಾಥ್ ಅವರದ್ದು ರಾವಣ ಸರ್ಕಾರ ಎಂದು ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೊಣೆಯನ್ನು ಕೇವಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರವಲ್ಲ, ಅವರನ್ನು ಬೆಂಬಲಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಮಸ್ತ ಸಂಘ ಪರಿವಾರದವರು ಹೊರಬೇಕಾಗುತ್ತದೆ. ತಕ್ಷಣ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತುಹಾಕಿ ಉತ್ತರ ಪ್ರದೇಶವನ್ನು ರಕ್ಷಿಸಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರ ಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕವಾಗಿ ಅಂತ್ಯಕ್ರಿಯೆಗೂ ಅವಕಾಶ ನೀಡದೆ ಹೆತ್ತವರನ್ನು ಗೋಳಾಡಿಸಿದ ಸಿಎಂ ಯೋಗಿ ಆದಿತ್ಯನಾಥ್ ಕಾವಿಧಾರಿಗಳ ಪಾಲಿನ ಕಳಂಕ. ಒಂದುವೇಳೆ ರಾಮ ಬದುಕಿದ್ದರೆ ಆತ ಕೂಡ ಬಿಜೆಪಿಯ ರಾವಣರನ್ನು ಉಳಿಸುತ್ತಿರಲಿಲ್ಲ. ಇವರ ಆಡಳಿತದಲ್ಲಿ ಉತ್ತರ ಪ್ರದೇಶದ ಯಾವ ಹೆಣ್ಣುಮಕ್ಕಳೂ ಸುರಕ್ಷಿತರಲ್ಲ. ಮೊದಲು ಯೋಗಿ ಆದಿತ್ಯನಾಥ್ ಅವರನ್ನು ವಜಾ ಮಾಡಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಅತ್ಯಾಚಾರದಿಂದ ಗಾಯಗೊಂಡಿದ್ದ ಉತ್ತರ ಪ್ರದೇಶದ ಯುವತಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ಆಕೆಯ ಮೃತದೇಹವನ್ನು ಪೋಷಕರಿಗೆ ಕೊಡದೆ ನಿನ್ನೆ ಮಧ್ಯರಾತ್ರಿ ತಾವೇ ಅಂತ್ಯಕ್ರಿಯೆ ಮಾಡಿದ್ದ ಪೊಲೀಸರ ವರ್ತನೆಗೆ ಕರ್ನಾಟಕ ಕಾಂಗ್ರೆಸ್ ಕೂಡ ಟ್ವಿಟ್ಟರ್ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ರಾವಣ ರಾಜ್ಯ ಎಂದು ಉತ್ತರ ಪ್ರದೇಶ ಸರ್ಕಾರವನ್ನು ದೂಷಿಸಿದೆ.
ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ನಿಯೋಜನೆ ಮಾಡಿದೆ. ಮೂವರು ಅಧಿಕಾರಿಗಳಿರುವ ಎಸ್ಐಟಿ ಈ ಪ್ರಕರಣದ ತನಿಖೆ ನಡೆಸಿ, ಇನ್ನೊಂದು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಉತ್ತರ ಪ್ರದೇಶದ ಗೃಹ ಇಲಾಖೆ ಕಾರ್ಯದರ್ಶಿ ಭಗವಾನ್ ಸ್ವರೂಪ್, ಡಿಐಜಿ ಚಂದ್ರ ಪ್ರಕಾಶ್, ಐಪಿಎಸ್ ಅಧಿಕಾರಿ ಪೂನಂ ಅವರನ್ನೊಳಗೊಂಡ ಎಸ್ಐಟಿ ತಂಡ ಮುಂದಿನ 7 ದಿನಗಳಲ್ಲಿ ಹತ್ರಾಸ್ ಅತ್ಯಾಚಾರ ಪ್ರಕರಣದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದೆ.
ಇದನ್ನೂ ಓದಿ: ಉತ್ತರ ಪ್ರದೇಶದ ಸಾಮೂಹಿಕ ಅತ್ಯಾಚಾರ ಕೇಸ್; ಎಸ್ಐಟಿ ತನಿಖೆಗೆ ಆದೇಶಿಸಿದ ಯೋಗಿ ಸರ್ಕಾರ
ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಹತ್ರಾಸ್ನ 19 ವರ್ಷದ ಯುವತಿ ಮಂಗಳವಾರ ಬೆಳಿಗ್ಗೆ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಸಾಮೂಹಿಕ ಅತ್ಯಾಚಾರದ ನಂತರ ಆಕೆಯ ಸ್ಥಿತಿ ಗಂಭೀರವಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಯುವತಿಯ ಮೇಲೆ ಮೇಲ್ಜಾತಿಯ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಆಕೆಯ ಮೃತದೇಹವನ್ನು ಕುಟುಂಬಸ್ಥರಿಗೆ ನೀಡದೆ ಉತ್ತರ ಪ್ರದೇಶದ ಪೊಲೀಸರು ನಿನ್ನೆ ಮಧ್ಯರಾತ್ರಿ 2.30ರ ವೇಳೆಗೆ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದರು.
ಘಟನೆಯ ಹಿನ್ನೆಲೆಯೇನು?:
ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 19 ವರ್ಷದ ಯುವತಿಯನ್ನು ಆಕೆಯ ದುಪಟ್ಟಾದಿಂದ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಕುತ್ತಿಗೆ ಹಿಸುಕಿದ್ದರಿಂದ ಆಕೆಯ ನಾಲಿಗೆ ಕಚ್ಚಿ, ಮಾತನಾಡಲು ಆಗದಂತಾಗಿತ್ತು. ಅರ್ಧ ಕತ್ತರಿಸಿದಂತಾಗಿದ್ದ ನಾಲಿಗೆಯ ನೋವು ಮತ್ತು ದೇಹದಲ್ಲಾದ ನೋವಿನಿಂದ ಯುವತಿಯ ಸ್ಥಿತಿ ಗಂಭೀರವಾಗಿತ್ತು. ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿರಿಸಲಾಗಿತ್ತು. ಆದರೂ ಆಕೆ ಚೇತರಿಸಿಕೊಳ್ಳದ ಕಾರಣ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ನಿನ್ನೆ ಸಾವನ್ನಪ್ಪಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ