ಹಾಸನಾಂಬೆಯ ದರ್ಶನಕ್ಕೆ 8 ದಿನ ಮುಕ್ತಾಯ; ಶುಕ್ರವಾರ ಮಧ್ಯಾಹ್ನ 12:30ಕ್ಕೆ ಬಾಗಿಲು ಬಂದ್

ಸಾರ್ವಜನಿಕ ದರ್ಶನಕ್ಕೆ ಕೊನೆಯ ದಿನವಾದ ಇಂದೂ ಕೂಡ ಲಕ್ಷಾಂತರ ಮಂದಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪರಾಕಾಷ್ಠೆ ಮೆರೆದ್ರು. ನಾಳೆ 12.30ಕ್ಕೆ ಶಾಸ್ತ್ರೋಕ್ತವಾಗಿ ಜಿಲ್ಲಾಡಳಿತದ ಮುಂಭಾಗ ಗರ್ಭಗುಡಿಯ ಬಾಗಿಲು ಮುಚ್ಚಲಿದೆ | Hassanambe darshan ends on 8th day as 3 lakh devotees paid visit to the temple


Updated:November 8, 2018, 11:02 PM IST
ಹಾಸನಾಂಬೆಯ ದರ್ಶನಕ್ಕೆ 8 ದಿನ ಮುಕ್ತಾಯ; ಶುಕ್ರವಾರ ಮಧ್ಯಾಹ್ನ 12:30ಕ್ಕೆ ಬಾಗಿಲು ಬಂದ್
ಹಾಸನಾಂಬೆ ದೇವಸ್ಥಾನ

Updated: November 8, 2018, 11:02 PM IST
- ಡಿಎಂಜಿ ಹಳ್ಳಿ ಅಶೋಕ್, ನ್ಯೂಸ್18 ಕನ್ನಡ

ಹಾಸನ(ನ. 08): ಜಿಲ್ಲೆಯ ಅಧಿದೇವತೆ ಎನ್ನಲಾದ ಹಾಸನಾಂಬ ದೇವಿಯ ದೇವಾಲಯದ ಬಾಗಿಲು ತೆರೆದು ಇಂದಿಗೆ 8 ದಿನಗಳು ಕಳೆದಿದೆ. ನವೆಂಬರ್ 1 ಕ್ಕೆ ಆರಂಭವಾದ ದೇವಿಯ ದರ್ಶನ ಇವತ್ತೇ ಕೊನೆಯ ದಿನವಾಗಿದೆ. ಮೊದಲ ಎರಡು ದಿನಗಳ ಕಾಲ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು‌. ಬಳಿಕ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಾ ಹೋಯಿತು. ಇಂದೂ ಕೂಡ ತಡರಾತ್ರಿಯಿಂದಲೇ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಭಕ್ತಿಯ ಪರಾಕಾಷ್ಠೆ ಮೆರೆದ್ರು. ದೀಪಾವಳಿ ಹಬ್ಬವಾದ್ರಿಂದ ಇಂದು ಭಾರೀ ಜನಸ್ತೋಮ ನೆರೆದಿತ್ತು. ಸಚಿವ ಹೆಚ್.ಡಿ. ರೇವಣ್ಣ ಸತತ 8ನೇ ದಿನವೂ ಬರಿಗಾಲಿನಲ್ಲಿ ಆಗಮಿಸಿ ಬೆಳಿಗ್ಗೆಯೇ ದೇವಿಯ ದರ್ಶನ ಪಡೆದ್ರು. ಪ್ರತೀ ದಿನವೂ ದೇವಿಯ ದರ್ಶನ ಪಡೆಯುತ್ತಿರುವ ಸಚಿವ ರೇವಣ್ಣ ಮಾತನಾಡಿ ರಾಜ್ಯದ ಜನ್ರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ರು.

ದೇವಾಲಯದಲ್ಲಿ ಹಾಕಲಾಗಿದ್ದ ಹೂವುಗಳೆಲ್ಲಾ ಬಾಡಿದ್ದು ಕೆಲವು ಒಣಗಿ ಹೋಗಿವೆ. ಪ್ರತೀ ದಿನ ಹೂವಿನ ಅಲಂಕಾರ ಮಾಡಬೇಕಿತ್ತು. ಆದ್ರೆ ಈ ಬಾರಿ ಒಂದು ದಿನವೂ ಹೂ ಬದಲಿಸಿಲ್ಲಾ. ದೇವಾಲಯದ ಹೂವಿನ ಅಲಂಕಾರಕ್ಕೆ ಒಂದು ದಿನಕ್ಕೆ 5 ಲಕ್ಷದಂತೆ ಒಂಬತ್ತು ದಿನಕ್ಕೆ ಒಟ್ಟು 45 ಲಕ್ಷ ಹಣಕ್ಕೆ ಟೆಂಡರ್ ಕರೆಯಲಾಗಿದೆ. ಆದ್ರೆ ಜಿಲ್ಲಾಡಳಿತದ ವೈಫಲ್ಯದಿಂದಾಗಿ ಹೂವಿನ ಅಲಂಕಾರವನ್ನು ಮಾಡದಿರುವುದಕ್ಕೆ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ದಿನವೂ ಟಿಕೇಟ್ ಪಡೆದ ಭಕ್ತರಿಗೆ ಲಾಡು ಪ್ರಸಾದ ವಿತರಿಸಲಾಗುತ್ತಿತ್ತು. ಆದ್ರೆ ಇಂದು ಲಾಡು ಟಿಕೇಟ್ ಪಡೆದವರಿಗೆ ಲಾಡು ಪ್ರಸಾದ ನೀಡದ ದೇವಾಲಯದ ಆಡಳಿತ ಮಂಡಳಿ ವಿರುದ್ದ ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು.

ನೇರದರ್ಶನಕ್ಕೆ ಒಂದು ಸಾವಿರ ಮತ್ತು 300 ರೂ ಟಿಕೇಟ್ ನಿಗದಿಪಡಿಸಲಾಗಿದ್ದು, ಒಂದು ಸಾವಿರದ ಟಿಕೇಟ್ ಪಡೆದವರಿಗೆ ನಾಲ್ಕು ಲಾಡು, 300 ರೂ ಟಿಕೇಟ್ ಪಡೆದವರಿಗೆ ಎರಡು ಲಾಡು ನೀಡಬೇಕಿತ್ತು. ಆದ್ರೆ ಸಾವಿರಾರು ಭಕ್ತರಿಗೆ ಲಾಡು ಪ್ರಸಾದ ಸಿಗದೇ ನಿರಾಸೆಯಾಯಿತು. ಲಾಡು ಪ್ರಸಾದದ ಕೌಂಟರ್ ಮುಚ್ಚಿ ವಿತರಕ ಪರಾರಿಯಾಗಿದ್ದನು. ಭಕ್ತರು ದೇವಾಲಯದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲಾ.

ಇಂದು ದೀಪಾವಳಿ ಹಬ್ಬವಾದ್ರಿಂದ ಹಿಂದಿನ ದಿನಗಳಿಗೆ ಹೋಲಿಸಿದರೆ ಭಾರೀ ಜನರು ಆಗಮಿಸಿದ್ರು. ಆದರೆ ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಎಂಟು ದಿನಗಳಲ್ಲಿ ಈವರೆಗೆ 3 ಲಕ್ಷಕ್ಕೂ ಅಧಿಕ ಮಂದಿ ದೇವಿಯ ದರ್ಶನ ಪಡೆದಿದ್ದಾರೆ. ಯಾವುದೇ ಗಲಭೆ ಇಲ್ಲದೇ ಸುಸೂತ್ರವಾಗಿ ದೇವಿಯ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ನಾಳೆ ಮಧ್ಯಾಹ್ನ 12.30 ಕ್ಕೆ ಸರಿಯಾಗಿ ಶಾಸ್ತ್ರೋಕ್ತವಾಗಿ ಜಿಲ್ಲಾಡಳಿತದ ಮುಂಭಾಗ ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚಲಿದೆ. ಮುಂದಿನ ವರ್ಷ ಇದೇ ಸಮಯಕ್ಕೆ ದೇವಾಲಯದ ಬಾಗಿಲು ತೆರೆಯಲಿದೆ.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ