news18-kannada Updated:February 26, 2020, 4:19 PM IST
ಶ್ವೇತಾ ದೇವರಾಜ್
ಹಾಸನ (ಫೆ.26): ನಾನು ದಲಿತ ವರ್ಗಕ್ಕೆ ಸೇರಿದವಳಾಗಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಇದೇ ಕಾರಣಕ್ಕಾಗಿ ಜಿಲ್ಲಾ ಪಂಚಾಯತ್ನಿಂದ ಕರೆಯಲಾಗಿರುವ ಮೂರು ಸಭೆಗೂ ಕೂಡ ಸದಸ್ಯರು ಉದ್ದೇಶಪೂರ್ವಕವಾಗಿ ಗೈರಾಗುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಕಾಂಗ್ರೆಸ್ ಪಕ್ಷದ ಸದಸ್ಯೆಯೂ ಆದ ಅವರು, ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಗಿರುವುದು ಜೆಡಿಎಸ್ಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಜೆಡಿಎಸ್ ಸದಸ್ಯರು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಸಾಮೂಹಿಕವಾಗಿ ಗೈರಾಗುವ ಮೂಲಕ ಅಭಿವೃದ್ಧಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ಮೂರು ಬಾರಿ ಸಭೆ ಕರೆಯಲಾಗಿದೆ. ನಿನ್ನೆ ಸಾಮಾನ್ಯ ಸಭೆಗೂ ಕೂಡ ಭವಾನಿ ರೇವಣ್ಣ ಸೇರಿದಂತೆ 23 ಸದಸ್ಯರು ಗೈರಾದರು. ಹೀಗಾಗಿ ಸಭೆಗೆ ನಡೆಸಲು ಬೇಕಾದ ಕೋರಂ ಇಲ್ಲದೆ ಸಭೆ ಮುಂದೂಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿ: ನಾನೆಲ್ಲೂ ಎಸ್ಎಸ್ಎಲ್ಸಿ ಪಾಸ್ ಎಂದು ನಮೂದಿಸಿಲ್ಲ: ಸ್ಪಷ್ಟನೆ ನೀಡಿದ ಸಚಿವ ಶಿವರಾಮ್ ಹೆಬ್ಬಾರ್
ಮತ ಹಾಕಿ ಗೆಲ್ಲಿಸಿದ ಜನ ಅಭಿವೃದ್ಧಿ ಕುರಿತು ನಮಗೆ ಪ್ರಶ್ನಿಸುತ್ತಾರೆ. ಈ ಬಗ್ಗೆ ನಾವು ಉತ್ತರ ನೀಡಬೇಕು. ಅಧ್ಯಕ್ಷರು ದಲಿತರೇ ಆಗಲಿ, ಮಹಿಳೆಯರೇ ಆಗಲಿ ಸಭೆಗೆ ಬರಬೇಕು. ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ಗೆ ಬೆಂಬಲಿಸಿ ಕೆಲಸ ಮಾಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪರ ಪ್ರಚಾರ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಹಾಸನದಲ್ಲಿ ಮಾತ್ರವೇ ಜೆಡಿಎಸ್ ಅಭ್ಯರ್ಥಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವುದು. ಇದಕ್ಕೆ ಒಂದು ಕೃತಜ್ಞತೆಯನ್ನು ಹೇಳಲಿಲ್ಲ. ಇದಕ್ಕೆ ಕಾರಣ ಎಚ್ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ. ಈಗ ಜಿಲ್ಲಾ ಪಂಚಾಯತಿ ಸಭೆಯಲ್ಲಿಯೂ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.
40 ಸದಸ್ಯ ಬಲದ ಹಾಸನ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ 23 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಅಧ್ಯಕ್ಷ ಸ್ಥಾನವು ಎಸ್ಸಿ ಮಹಿಳೆಯರಿಗೆ ಮೀಸಲಾಗಿದ್ದರಿಂದ ಕಾಂಗ್ರೆಸ್ನ ಶ್ವೇತಾ ದೇವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದರು.
First published:
February 26, 2020, 4:19 PM IST