ಅಪರಾಧ ಪ್ರಕರಣಗಳ ತಡೆಗೆ ಮುಂದಾದ ಹಾಸನ ಎಸ್​​​ಪಿ - ಪೊಲೀಸ್​ ಸಿಬ್ಬಂದಿಗೆ ಖಡಕ್​​ ಸೂಚನೆ

ಮನೆಗಳ್ಳತನ ಮತ್ತು ಅಪರಾಧ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸದಾ ನೀವು ಸಿದ್ಧರಿರಬೇಕು. ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ನಿಯಂತ್ರಣಕ್ಕೆ ತರಲು ಇಂದಿನಿಂದ ನಾನು ಸೇರಿದಂತೆ ನೀವೆಲ್ಲರೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು ಎಸ್​​ಪಿ.

news18-kannada
Updated:September 27, 2020, 7:07 PM IST
ಅಪರಾಧ ಪ್ರಕರಣಗಳ ತಡೆಗೆ ಮುಂದಾದ ಹಾಸನ ಎಸ್​​​ಪಿ - ಪೊಲೀಸ್​ ಸಿಬ್ಬಂದಿಗೆ ಖಡಕ್​​ ಸೂಚನೆ
ಹಾಸನ ಎಸ್​ಪಿ ಶ್ರೀನಿವಾಸ ಗೌಡ
  • Share this:
ಹಾಸನ(ಸೆ.27): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊಲೆ, ಸುಲಿಗೆಯಂತಹ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಸಜ್ಜಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಕಠಿಣ ನಿರ್ದೇಶನಗಳನ್ನು ಪೊಲೀಸ್ ಸಿಬ್ಬಂದಿಗಳಿಗೆ ನೀಡುವ ಮೂಲಕ ಇಲಾಖೆಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದಾರೆ. ಪೊಲೀಸ್ ಕಚೇರಿ ಸಂಕೀರ್ಣ ಭವನದಲ್ಲಿ ನಿನ್ನೆ ಹಾಸನ ನಗರ, ಗ್ರಾಮಾಂತರ ಮತ್ತು ಸಂಚಾರಿ ಪೊಲೀಸರಿಗೆ ವಿಶೇಷ ಸೂಚನೆಗಳನ್ನು ಎಸ್​ಪಿ ನೀಡಿದರು. ರಾತ್ರಿ ಹೊತ್ತು ಕೆಲ ಪುಂಡ ಪೋಕರಿಗಳು ಬೇಕಾಬಿಟ್ಟಿ ಓಡಾಡುತ್ತಾರೆ. ಅಲ್ಲದೆ, ಮನೆಗಳ್ಳತನ, ಕೊಲೆ ಪ್ರಕರಣ, ಅತ್ಯಾಚಾರ ಪ್ರಕರಣಗಳಂತಹ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ತಮ್ಮ ಬೀಟ್ ವ್ಯಾಪ್ತಿಯಲ್ಲಿ ಸಂಚರಿಸುವ ಕೆಲ ಅನುಮಾನಾಸ್ಪದ ವಾಹನಗಳನ್ನು ಮತ್ತು ವ್ಯಕ್ತಿಗಳನ್ನು ತಪಾಸಣೆ ಮಾಡಿ. ಇದರಿಂದ ಜಿಲ್ಲೆಯಲ್ಲಿ ನಡೆಯುವಂತಹ ಕೃತ್ಯಗಳ ಬಗ್ಗೆ ನಿಮಗೆ ಕೆಲವು ಮಾಹಿತಿಗಳು ಸಿಗಬಹುದು. ಕೆಲವೊಮ್ಮೆ ಮೊಬೈಲ್ ನೆಟ್ವರ್ಕ್ ಸಿಗದೆ ಇರಬಹುದು. ಆದರೆ ನಿಮಗೆ ನಮ್ಮ ಇಲಾಖೆಯಿಂದ ವಾಕಿ-ಟಾಕಿ ನೀಡಲಾಗಿದೆ. ಅದನ್ನು ಪ್ರತಿಯೊಬ್ಬರು ಕೂಡ ತಮ್ಮ ಕರ್ತವ್ಯದ ವೇಳೆ ಕಡ್ಡಾಯವಾಗಿ ತೆಗೆದುಕೊಂಡು ಹೋಗಲೇಬೇಕು. ಇದರಿಂದ ಸ್ಥಳದಲ್ಲಿ ನಡೆದ ಕೃತ್ಯ ಅಥವಾ ಇತರೆ ಪ್ರಕರಣಗಳ ಬಗ್ಗೆ ತಕ್ಷಣ ಮಾಹಿತಿ ನೀಡಲು ಸಹಕಾರಿಯಾಗುತ್ತದೆ. ನಿಮ್ಮ ಭದ್ರತೆ ದೃಷ್ಟಿಯಿಂದಲೂ ಇದು ಉತ್ತಮ ಎಂದು ಸಲಹೆ ನೀಡಿದರು.

ಕೃತ್ಯಗಳು ನಡೆಯಬಹುದಾದ ಸ್ಥಳಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ. ನಾಲ್ಕಕ್ಕಿಂತ ಅಧಿಕ ವ್ಯಕ್ತಿಗಳು ಒಂದೇ ಕಡೆ ಕೂತು ಹರಟೆ ಹೊಡೆಯುವುದು. ಯಾವುದಾದರೂ ಕೃತ್ಯಕ್ಕೆ ಸಂಚು ರೂಪಿಸುತ್ತಿರುವುದು ಕಂಡುಬಂದರೆ ತಕ್ಷಣ ಅಂಥವರನ್ನು ತಮ್ಮ ತಂಡದೊಂದಿಗೆ ತೆರಳಿ ವಿಚಾರಣೆಗೊಳಪಡಿಸಿ. ರಾತ್ರಿ ಹತ್ತು ಗಂಟೆಯ ವೇಳೆ, ಹತ್ತು ಗಂಟೆಯ ನಂತರ ಮಹಿಳೆಯರು ಒಂಟಿಯಾಗಿ ಹೋಗುವ ಸಂದರ್ಭದಲ್ಲಿ ಅವರನ್ನು ವಿಚಾರಿಸಿ. ಏನಾದರೂ ಸಹಾಯ ಬೇಕಾದಲ್ಲಿ ಅವರಿಗೆ ಸಹಕರಿಸಿ ಎಂದು ಸೂಚಿಸಿದರು.

ರಾತ್ರಿ 10:30ರ ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ತಿಳಿಸಬೇಕು. ರಾತ್ರಿ ಪಾಳೆಯದ ಪೊಲೀಸರು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದೀರಾ, ಹೀಗಾಗಿ ಭದ್ರತೆಯ ದೃಷ್ಟಿಯಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ವಾಕಿ-ಟಾಕಿಯನ್ನು ತೆಗೆದುಕೊಂಡು ಹೋಗಲೇಬೇಕು. ಮದ್ಯದಂಗಡಿಗಳನ್ನು ಕಡ್ಡಾಯವಾಗಿ ರಾತ್ರಿ 10.30ರ ಮೇಲೆ ಮುಚ್ಚಿಸಬೇಕು ಎಂದರು.

ಮನೆಗಳ್ಳತನ ಮತ್ತು ಅಪರಾಧ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸದಾ ನೀವು ಸಿದ್ಧರಿರಬೇಕು. ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ನಿಯಂತ್ರಣಕ್ಕೆ ತರಲು ಇಂದಿನಿಂದ ನಾನು ಸೇರಿದಂತೆ ನೀವೆಲ್ಲರೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು. ಪ್ರತಿನಿತ್ಯ ತಾವು ತಪಾಸಣೆಗೊಳಪಡಿಸಿದಾಗ ವಾಹನಗಳ ಸಂಖ್ಯೆ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ದಾಖಲಾತಿಗಳನ್ನು ಇಂದಿನಿಂದಲೇ ಪಡೆಯುವ ಮೂಲಕ ತಮ್ಮ ಬೀಟ್ ಪುಸ್ತಕದಲ್ಲಿ ದಾಖಲು ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು.

ಇದನ್ನೂ ಓದಿ: ನೈರುತ್ಯ ಚೀನಾದಲ್ಲಿ ಕಲ್ಲಿದ್ದಲು ಗಣಿ ದುರಂತ - 16 ಕಾರ್ಮಿಕರು ಸಾವು

ಹಾಸನಕ್ಕೆ ಬಂದ ಬಳಿಕ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರತಿ ಹೆಜ್ಜೆ-ಹೆಜ್ಜೆಗೂ ಸವಾಲುಗಳು ಎದುರಾಗುತ್ತವೆ. ಕಳೆದ ಆರು ತಿಂಗಳಿನಿಂದ ಕೋವಿಡ್-19 ತಡೆಗಟ್ಟಲು ತಮ್ಮ ಸಿಬ್ಬಂದಿಯ ಸಹಕಾರದಿಂದ ಹಗಲಿರುಳೆನ್ನದೆ ಶ್ರಮವಹಿಸಿ 45 ದಿನಗಳ ಕಾಲ ಹಸಿರು ವಲಯವನ್ನಾಗಿ ಮಾಡಿದ ಹೆಮ್ಮೆ ಶ್ರೀನಿವಾಸಗೌಡರಿಗೆ ಸಲ್ಲುತ್ತದೆ. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಭೇದಿಸುವ ಕೆಲಸ ಇವರಿಗೆ ಸವಾಲಾಗಿತ್ತು. ಆದರೂ ಛಲ ಬಿಡದೆ ಇವರು ಕೊನೆಗೂ ಆರೋಪಿಗಳನ್ನು ಹೆಡೆಮುರಿಕಟ್ಟಿ ಜನರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ತಗ್ಗಿಸಲು ಪೊಲೀಸರು ಸನ್ನದ್ದರಾಗಿದ್ದಾರೆ.
Published by: Ganesh Nachikethu
First published: September 27, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading