ಹಾಸನ (ನ.11): ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಏತ ನೀರಾವರಿ ಮೂಲಕ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಲವು ಕೆರೆಗಳನ್ನು ತುಂಬಿಸುವ ಕೆಲಸವಾಗಿದೆ. ಆದರೆ ತುಂಬಿರುವ ಕೆರೆಗಳಿಗೆ ಜೆಡಿಎಸ್ ಶಾಸಕ ಬಾಲಕೃಷ್ಣ ಮತ್ತು ಕಾಂಗ್ರೆಸ್ ಎಂಎಲ್‌ಸಿ ಗೋಪಾಲಸ್ವಾಮಿ ಪೈಪೋಟಿಗೆ ಬಿದ್ದವರಂತೆ ಒಬ್ಬರಾದ ಮೇಲೆ ಒಬ್ಬರು ಬಾಗಿನ ಬಿಡುತ್ತಿದ್ದಾರೆ. ಇಬ್ಬರು ನಾಯಕರ ಬಾಗಿನ ರಾಜಕೀಯದ ನಡುವೆಯೇ ಕೆರೆ ತುಂಬಿಸಲು ನಿಜವಾದ ಕಾರಣಕರ್ತರು ಯಾರು ಎಂಬ ಚರ್ಚೆ ಶುರುವಾಗಿದೆ. ಒಂದು ಕಡೆ ಭಗೀರಥ ಸುತ ಎಂದು ಜೆಡಿಎಸ್ ಶಾಸಕ ಬಾಲಕೃಷ್ಣ ಅವರ ಪರ ಹಾಕಿರುವ ಬ್ಯಾನರ್. ಮತ್ತೊಂದೆಡೆ ಕಾಂಗ್ರೆಸ್ ಎಂಎಲ್‌ಸಿ ಗೋಪಾಲಸ್ವಾಮಿಗೆ ಸ್ವಾಗತ ಕೋರುತ್ತಿರುವ ಫ್ಲೆಕ್ಸ್‌ಗಳು. ಈ ರೀತಿಯ ದೃಶ್ಯ ಚನ್ನರಾಯಪಟ್ಟಣದ ಸ್ಥಳಗಳ ಕೆರೆಯ ಏರಿಯ ಮೇಲೆ ಕಂಡು ಬರುತ್ತಿದೆ. ಇಬ್ಬರು ನಾಯಕರು ಪೈಪೋಟಿಗೆ ಬಿದ್ದವರಂತೆ ಒಬ್ಬರಾದ ಮೇಲೆ ಒಬ್ಬರು ತಮ್ಮ ಸಾವಿರಾರು ಜನ ಬೆಂಬಲಿಗರೊಂದಿಗೆ ಕೆರೆಗೆ ಬಾಗಿನ ಬಿಡುವ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಎಂಎಲ್‌ಸಿ ಗೋಪಾಲಸ್ವಾಮಿ, ಶಾಸಕ ಬಾಲಕೃಷ್ಣ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ನುಗ್ಗೇಗಳ್ಳಿ ಏತನೀರಾವರಿ ಯೋಜನೆಗೆ ಶಂಕುಸ್ಥಾಪನೆ ಆದಾಗ ನಾನು ಎಂಎಲ್‌ಸಿಯೂ ಆಗಿರಲಿಲ್ಲ. ಬಾಲಕೃಷ್ಣ ಎಂಎಲ್‌ಎಯೂ ಆಗಿರಲಿಲ್ಲ. ಹೀಗಾಗಿ ತುಂಬಿರುವ ಕೆರೆಗಳಿಗೆ ಒಟ್ಟಾಗಿ ಕಾರ್ಯಕ್ರಮ ರೂಪಿಸಿ ಬಾಗಿನ ಬಿಡಲು ಜೆಡಿಎಸ್‌ನವರಲ್ಲಿ ಕೇಳಿಕೊಂಡೆ. ಆದರೆ, ಇದಕ್ಕೆ ಒಪ್ಪದೆ ಅವರು ತಮ್ಮ ಜೆಡಿಎಸ್ ಪಕ್ಷದ ಬಾವುಟ ಹಾಕಿಕೊಂಡು ಬಾಗಿನ ಬಿಡಲು ಮುಂದಾದರು. ಹೀಗಾಗಿ ನಾವೂ ಪ್ರತ್ಯೇಕವಾಗಿ ಬಾಗಿನ ಬಿಡಲು ಮುಂದಾದೆವು. ಬಾಗಿನ ಬಿಡುವ ವಿಷಯದಲ್ಲಿ ಜೆಡಿಎಸ್, ಕಾಂಗ್ರೆಸ್ ಎಂದು ಪೈಪೋಟಿ ಶುರುವಾಗಿರುವುದು ನನಗೂ ನೋವಾಗಿದೆ ಎನ್ನುತ್ತಿದ್ದಾರೆ.
ಎಂಎಲ್‌ಸಿ ಗೋಪಾಲಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಶಾಸಕ ಬಾಲಕೃಷ್ಣ, ನಾನು ಶಾಸಕನಾದ ಎರಡನೇ ಅವಧಿಯ ನಂತರ ಕೆರೆ ತುಂಬಿಸುವ ಕಾಮಗಾರಿ ವಿಳಂಬ ಆಗದ ರೀತಿ ಇದ್ದ ಎಲ್ಲ ಅಡೆತಡೆ ನಿವಾರಿಸಿ ಕೆಲಸ ನಿರ್ವಹಿಸಿದ್ದೇನೆ. ರೈತರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಿದ್ದೇನೆ. ನಾವು ಯಾವುದೇ ರಾಜಕೀಯ ಪೈಪೋಟಿಯಿಂದ ಬಾಗಿನ ಬಿಡುವ ಕೆಲಸ ಮಾಡುತ್ತಿಲ್ಲ. ಈ ಹಿಂದೆ ನಾವು ಬಾಗಿನ ಅರ್ಪಿಸುವಾಗ ಕೆಲವರು ಬೇರೆ ಬೇರೆ ರೀತಿ ಮಾತನಾಡುವ ಸನ್ನಿವೇಶ ನಿರ್ಮಾಣವಾಗಿತ್ತು. ಬಸವರಾಜ ಬೊಮ್ಮಾಯಿರವರು ಈ ಯೋಜನೆಯ ಹಿಂದೆ ಈಗಿನ ಗೃಹ ಸಚಿವ ಬಸವರಾಜ ಬೊಮ್ಮಾಯಿರವರು ಈ ಯೋಜನೆ ಅನುಷ್ಠಾನಗೊಳಿಸಲು ಸಹಕಾರ ನೀಡಿದರು ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ.
ಇದನ್ನು ಓದಿ: Diwali 2020: ಜೋಕೆ..! ಅಪ್ಪಿತಪ್ಪಿಯೂ ಸ್ಯಾನಿಟೈಸರ್ ಬಳಸಿ ದೀಪ, ಹಸಿರು ಪಟಾಕಿ ಹಚ್ಚಬೇಡಿ
ರೈತರಿಗೆ ಪರಿಹಾರ ಮತ್ತು ಯೋಜನೆಗೆ ಅನುದಾನ ಒದಗಿಸಲು ಶ್ರಮಪಟ್ಟಿದ್ದೇವೆ. ಈ ಬಾಗಿನ ಬಿಡುವ ವಿಚಾರದಲ್ಲಿ ಯಾವುದೇ ಪೈಪೋಟಿ ಇಲ್ಲ ಯಾರೂ ಕೂಡ ನನ್ನ ಜೊತೆ ಮಾತನಾಡಿಲ್ಲ, ತಿಳಿಯಾದಂತಹ ವಾತಾವರಣದಲ್ಲಿ ಕೆರೆಗೆ ನೀರು ತುಂಬಿಸುವುದು ನಮ್ಮ ಆದ್ಯತೆಯಾಗಿದೆ ಎಂದರು. ಹೀಗಾಗಿ ಮತ್ತೆ ಅದೇ ರೀತಿ ಸನ್ನಿವೇಶ ನಿರ್ಮಾಣವಾಗದೆ ತಿಳಿಯಾದ ಸನ್ನಿವೇಶದಲ್ಲಿ ಬಾಗಿನ ಅರ್ಪಿಸಬೇಕು ಎಂದು ಪ್ರತ್ಯೇಕವಾಗಿ ಬಾಗಿನ ಅರ್ಪಿಸಿದ್ದೇವೆ ಎನ್ನುತ್ತಿದ್ದಾರೆ.
ಶಾಸಕ ಬಾಲಕೃಷ್ಣ ಈಗಾಗಲೇ ಶ್ರವಣಬೆಳಗೂಳ ಕ್ಷೇತ್ರದ ಶಾಸಕರಾಗಿದ್ದಾರೆ. ಎಂಎಲ್‌ಸಿ ಗೋಪಾಲಸ್ವಾಮಿಯೂ ಕೂಡ ಮುಂಬರುವ ಚುನಾವಣೆಗೆ ಶ್ರವಣಬೆಳಗೂಳ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಉತ್ಸಾಹಕರಾಗಿದ್ದಾರೆ. ಹೀಗಾಗಿ ಇಬ್ಬರೂ ನಾಯಕರು ಕೆರೆಗೆ ಬಾಗಿನ ಬಿಡುವ ವಿಷ್ಯದಲ್ಲಿ ಪೈಪೋಟಿಗೆ ಬಿದ್ದವರಂತೆ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆರೆ ತುಂಬಿಸಲು ತಮ್ಮ ಕೊಡುಗೆ ಎಷ್ಟಿದೆ ಎಂಬುದನ್ನು ಜನರ ಮುಂದಿಡಲು ಯತ್ನಿಸುತ್ತಿದ್ದಾರೆ. ಆದರೆ ಈ ಬಾಗಿನ ಪಾಲಿಟಿಕ್ಸ್ ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತೆ ಎಂಬುದನ್ನು ಕಾದು ನೋಡಬೇಕಿದೆ.
(ವರದಿ: ಡಿಜಿ ಹಳ್ಳಿ ಅಶೋಕ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ