news18-kannada Updated:February 23, 2020, 4:50 PM IST
ಪ್ರಜ್ವಲ್ ರೇವಣ್ಣ
ಹಾಸನ(ಫೆ. 23): ಸಿಎಎ ಪ್ರತಿಭಟನೆ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಮೇಳೈಸಿ ವಿವಾದ ಹುಟ್ಟಿಕೊಳ್ಳುತ್ತಿವೆ. ಬೆಂಗಳೂರಿನಲ್ಲಿ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ಧಾರೆ. ರಾಜಕೀಯ ವಲಯದಲ್ಲಿ ಪರ ವಿರೋಧ ಪ್ರತಿಕ್ರಿಯೆಗಳು ಬರುತ್ತಿವೆ. ಹಾಸನದ ಜೆಡಿಎಸ್ ಸಂಸದ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮದ ಪ್ರಜ್ವಲ್ ರೇವಣ್ಣ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಪರ ಜೈಕಾರ ಕೂಗಿದವರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಯಾರೇ ಒಬ್ಬ ವ್ಯಕ್ತಿ ಅನ್ನದ ಋಣ, ಭೂಮಿಯ ಋಣವನ್ನು ಭಾರತ ಮಾತೆಗೆ ಸಲ್ಲಿಸಬೇಕು. ಸರ್ಕಾರ ತಂದಿರುವ ನಿಯಮ ಇಷ್ಟ ಇಲ್ಲ ಅಂದರೆ ಸರ್ಕಾರದ ವಿರುದ್ಧ ಘೋಷಣೆ ಕೂಗಿರಿ, ಯಾರೂ ಬೇಡ ಅನ್ನಲ್ಲ. ಆದರೆ, ಭಾರತ ದೇಶ ಏನು ಮಾಡಿದೆ? ನಮ್ಮನ್ನು ಸಾಕಿ, ಸಲಹಿ ದೊಡ್ಡಮಟ್ಟಕ್ಕೆ ಬದುಕುತ್ತಿರುವುದಕ್ಕೆ ಕಾರಣವಾದ ದೇಶಕ್ಕೆ ಅವಮಾನ ಮಾಡುವ ರೀತಿ ಮಾತನಾಡಬಾರದು ಎಂದು ಪ್ರಜ್ವಲ್ ರೇವಣ್ಣ ಸಲಹೆ ನೀಡಿದರು.
ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಯಾವತ್ತೂ ಗಂಡಾಂತರ ಇಲ್ಲ: ಸಿ.ಎಂ. ಇಬ್ರಾಹಿಂ
ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ದೇಶಕ್ಕೆ ಅಗೌರವ ತರುವ ಕೆಲಸ ಮಾಡಬಾರದು. ವೇದಿಕೆ ಮೇಲೆ ಪ್ರಚಾರಕ್ಕಾಗಿ ಮಾತನಾಡಬಾರದು. ಈ ಹುಡುಗಿಯರು ಯಾವ ಒತ್ತಡದ ಮೇಲೋ ಅಥವಾ ಪ್ರಚಾರಕ್ಕಾಗಿಯೋ ಈ ರೀತಿ ಹೇಳಿಕೆ ಕೊಟ್ಟಿರಬಹುದೋ ಗೊತ್ತಿಲ್ಲ. ಆಕೆ ನಿಜವಾಗಿಯೂ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದರೆ ಸರ್ಕಾರ ತಕ್ಕ ಶಿಕ್ಷೆ ನೀಡಬೇಕು. ಈ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಈ ಬಗ್ಗೆ ತನಿಖೆಯಾಗಬೇಕು ಎಂದು ಪ್ರಜ್ವಲ್ ಒತ್ತಾಯಿಸಿದರು.
ಇದೇ ವೇಳೆ, ಹೆಚ್.ಡಿ. ದೇವೇಗೌಡರೂ ಕೂಡ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈ ಎಂದ ಅಮೂಲ್ಯ ಬಗ್ಗೆ ಡಿಕೆಶಿ ಹೇಳಿದ್ದೇನು?
ಆರೆಸ್ಸೆಸ್ ಮೀರಿ ಬಿಜೆಪಿ ಬೆಳೆಯುತ್ತಿದೆ: ಪ್ರಜ್ವಲ್ರಾಜ್ಯದಲ್ಲಿ ನೀರಾ ಮತ್ತು ಕ್ಯಾಸಿನೋ ಜಾರಿಗೆ ತರಲು ಸರ್ಕಾರ ಮುಂದಾಗಿರುವುದನ್ನು ಈ ವೇಳೆ ಪ್ರಜ್ವಲ್ ರೇವಣ್ಣ ತರಾಟೆಗೆ ತೆಗೆದುಕೊಂಡರು. ಆರೆಸ್ಸೆಸ್ ಇವನ್ನೆಲ್ಲಾ ವಿರೋಧಿಸುವ ಸಂಘಟನೆಯಾಗಿದೆ. ಬಿಜೆಪಿಯು ಆರೆಸ್ಸೆಸ್ನ ಮಾತು ಮೀರಿ ನಡೆಯುತ್ತಿದೆಯೋ, ಅಥವಾ ಆರೆಸ್ಸೆಸ್ನ ಮಾತು ಕೇಳದೇ ಸರ್ಕಾರ ನಡೆಸುವ ತೀರ್ಮಾನ ತೆಗೆದುಕೊಂಡಿದೆಯೋ ಗೊತ್ತಿಲ್ಲ ಎಂದು ಪ್ರಜ್ವಲ್ ಅನುಮಾನ ವ್ಯಕ್ತಪಡಿಸಿದರು.
ಬಿಜೆಪಿಯವರು ಪ್ರಚಾರದ ವೇಳೆ ಹೇಳೋದೇ ಬೇರೆ. ಯೋಜನೆ ತರುತ್ತಿರುವುದೇ ಬೇರೆ. ಬಿಜೆಪಿಗೆ ಬೆಂಬಲ ಕೊಡುತ್ತಾ ಬಂದಿರುವ ಸಂಘಟನೆಯ ಚಿಂತನೆ ಇದಕ್ಕೆ ಸರಿ ಹೊಂದುತ್ತಿಲ್ಲ ಎಂಬುದು ನನ್ನ ಭಾವನೆ. ಯಾವುದೇ ಯೋಜನೆ ತರುವಾಗ ಜನರಿಗೆ, ಬಡವರಿಗೆ ಅನ್ಯಾಯ ಆಗುತ್ತೆ ಎಂಬುದರ ಚಿಂತನೆ ಮಾಡಬೇಕು. ಬಿಜೆಪಿ ಈ ಹುಚ್ಚನ್ನು ಬಿಟ್ಟು ಆರೆಸ್ಸೆಸ್ನ ಕಾರ್ಯಕ್ರಮದಂತೆ ದೇಶ ಕಟ್ಟುವ ಕೆಲಸದತ್ತ ಗಮನ ಕೊಡಬೇಕು ಎಂದು ಹಾಸನದ ಸಂಸದರು ಸಲಹೆ ನೀಡಿದರು.
(ವರದಿ: ಡಿಎಂಜಿ ಹಳ್ಳಿ ಅಶೋಕ್)
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
First published:
February 23, 2020, 4:50 PM IST