ಹಾಸನ: ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election 2023) ರಂಗು ಕಾವೇರುತ್ತಿದ್ದು, ಇತ್ತ ಹೈವೋಲ್ಟೇಜ್ ಕ್ಷೇತ್ರಗಳಲ್ಲೊಂದಾದ ಹಾಸನ (Hassan) ವಿಧಾನಸಭಾ ಕ್ಷೇತ್ರದಲ್ಲಿ ಕೂಡ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಹಾಸನವನ್ನು ಮತ್ತೆ ತಮ್ಮ ವಶಕ್ಕೆ ತೆಗೆದುಕೊಳ್ಳಲು ಎಚ್‌ಡಿ ರೇವಣ್ಣ (HD Revanna) ಕುಟುಂಬ ಪಣ ತೊಟ್ಟರೆ, ಇತ್ತ ತಾನು ಪುನಃ ಗೆದ್ದೇ ಗೆಲ್ಲಬೇಕೆಂಬ ಹಠ ತೊಟ್ಟು ಹಾಲಿ ಶಾಸಕ ಪ್ರೀತಂ ಗೌಡ (Preetham Gowda) ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಇದೆಲ್ಲ ಬೆಳವಣಿಗೆ ಮಧ್ಯೆ ಹಾಸನ ಶಾಸಕ ಪ್ರೀತಂ ಗೌಡ ಅವರು ದೇವರ ಹೆಸರಿನಲ್ಲಿ ಮತದಾರರಿಗೆ ಆಮಿಷವೊಡ್ಡಿ ಮತ ಗಳಿಸಲು ಯತ್ನ ನಡೆಸಿರುವ ಘಟನೆ ನಡೆದಿದೆ. ಹಾಸನ ತಾಲ್ಲೂಕಿನ, ಸಾಲಗಾಮೆ ಹೋಬಳಿ, ಮಲ್ಲನಾಯಕನಹಳ್ಳಿಯಲ್ಲಿ ಎರಡು ದಿನದ ಹಿಂದೆ ರಾತ್ರಿ ವೇಳೆ ದೇವರ ಮುಂದೆ ಮಂಗಳಾರತಿ ಮಾಡಿ ನನಗೆ ಮಾತು ಕೊಟ್ರೆ ದೇವಸ್ಥಾನ ಕಟ್ಟಿಸಿಕೊಡ್ತೇನೆ ಎಂದು ಶಾಸಕ ಪ್ರೀತಂ ಗೌಡ ಅವರು ಆಮಿಷವೊಡ್ಡಿದ್ದಾರೆ.
ಇದನ್ನೂ ಓದಿ: Pralhad Joshi: ಕರ್ನಾಟಕಕ್ಕೆ ನರೇಂದ್ರ ಮೋದಿ ಆದೇಶ ಪಾಲಿಸುವ ಸಿಎಂ ಮತ್ತು ಮಂತ್ರಿ ಬೇಕಾಗಿದೆ: ಪ್ರಹ್ಲಾದ್ ಜೋಶಿ
ಸಾಲಗಾಮೆ ಹೋಬಳಿ, ಮಲ್ಲನಾಯಕನ ಹಳ್ಳಿಯಲ್ಲಿ ಪ್ರೀತಂ ಗೌಡ ಅವರು ಮತ ಪ್ರಚಾರಕ್ಕೆ ಬಂದಿದ್ದ ವೇಳೆ ಊರಿನ ಗ್ರಾಮಸ್ಥರು ದೇವಸ್ಥಾನ ಕಟ್ಟಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಪ್ರೀತಂಗೌಡ, ಊರಲ್ಲಿ ಎಷ್ಟು ಓಟು ಇದೆಯಣ್ಣ, ನಿಮ್ಮೂರಿನಲ್ಲಿ ಹೇಳಿ, ಬೂತ್‌ನಲ್ಲಿ ಬೇಡ ಎಂದು ಹೇಳಿದ್ದಾರೆ. ಆಗ ಗ್ರಾಮದ ಯುವಕ 150 ಓಟು ಇದೆ ಎಂದು ಹೇಳಿದ್ದಾನೆ. ಆಗ ಶಾಸಕ 150 ಇದೆ. ಆದರೆ ಓಟಿಂಗ್ ಆಗೋದು 120- 130 ಅಲ್ವೇನಣ್ಣ, ಇದರಲ್ಲಿ ಎಷ್ಟು ಮತ ಹಾಕಿಸ್ತೀರಿ? ಒಂದು ಲೆಕ್ಕ ಇರಲಿ ನಂಗೆ ಎಂದು ಕೇಳಿದ್ದಾರೆ. ಆಗ ಗ್ರಾಮಸ್ಥರು 65-70 ವೋಟ್ ಹಾಕಿಸ್ತೀವಿ ಎಂದಿದ್ದಾರೆ. ಆಗ ಪ್ರೀತಂ ಗೌಡ ಅವರು, 65- 70 ಓಟು ಹಾಕಿಸ್ತಿನಿ ಅಂತ ನಮ್ಮ ಹಿರಿಯರು, ನಮ್ಮ ತಾಯಂದಿರು ಎಲ್ಲಾ ಸೇರಿ ಹೇಳ್ತಿದ್ದಾರೆ. ದೇವಸ್ಥಾನದ ವಿಚಾರದಲ್ಲಿ ಯಾರು ಸುಳ್ಳು ಹೇಳಂಗಿಲ್ಲ. ಮತ ಹಾಕುವ 70 ಜನ ಯಾರ್ಯಾರು ಬಂದು ದೇವಸ್ಥಾನದ ಮುಂದೆ ಮಂಗಳಾರತಿ ಮಾಡ್ಸಿ, ನೀವು ಗುದ್ದಲಿ ಪೂಜೆ ಮಾಡಿ ಕೆಲಸ ಪ್ರಾರಂಭ ಮಾಡಿಸಿ. ದೇವಸ್ಥಾನ ಮಾಡಿಕೋಡೊದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Siddaramaiah: ಶೋಭಾ ಕರಂದ್ಲಾಜೆಯನ್ನು ವಿಚಾರಣೆಗೊಳಪಡಿಸಿ ಚುನಾವಣಾ ಪ್ರಚಾರದಿಂದ ನಿಷೇಧಿಸಿ: ಸಿದ್ದರಾಮಯ್ಯ ಆಕ್ರೋಶ
ಅಲ್ಲದೇ, ನನಗೆ ಮತ ಹಾಕುವ ಆ ಎಪ್ಪತ್ತು ಜನಾನು ಬಂದು ಪೂಜೆ ಮಾಡ್ಸಿ, ಪ್ರೀತಂಗೌಡರ ಜೊತೆ ಇರ್ತೀವಿ, ಓಟು ಹಾಕ್ತೀವಿ ಅಂತ ಮಾತು ಕೊಡಿ, ಉಳಿದಿದ್ದು ಕೆಲಸ ನಾನು ಮಾಡ್ತೀನಿ ಆಗಬಹುದಾ? ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು, ಎಪ್ಪತ್ತಕ್ಕಿಂತ ಕಡಿಮೆ ಓಟು ಬಂದ್ರೆ ಚುನಾವಣೆ ಆದ್ಮೇಲೆ ಮಾತಾಡೋದು. ಯಾರು ಎಪ್ಪತ್ತು ಜನ ಅಂತ ಈಗ ಕರೆಸಣ್ಣ, ಪೂಜೆ ಮಾಡ್ಸಿ ಬಿಟ್ಟು ನನಗೆ ಮಾತು ಕೊಡಿ. ಏಕೆಂದರೆ ನನಗೆ ನೆಂಟಸ್ಥನದ್ದು ಕಾಟ ಜಾಸ್ತಿ ಇದೆ. ಊರಲ್ಲಿ ಇರ್ತಾರೆ, ಹಾಸನದಲ್ಲಿ ಇರ್ತಾರೆ. ಚುನಾವಣೆ ಬಂದ ತಕ್ಷಣ ಇಲ್ಲಿ ಬಂದು ನೆಂಟಸ್ಥನ ಮಾಡ್ಕಂಡು, ನಮ್ಮ ಅಣ್ಣ ತಮ್ಮ, ಅವರು ನನಗೆ, ನೆಂಟರು, ಇವರು ನನಗೆ ನೆಂಟರು ಅಂತ ಅವರ ಕಡೆಗೆ ಮುಖ ಕೊಟ್ಟರೆ ನಾನ್ ಮಾಡಿದ್ ಕೆಲ್ಸಕ್ಕೆ ಕೂಲಿ ಯಾರು ಕೊಡೋದು? ಓಟು ಹಾಕೋ ಎಪ್ಪತ್ತು ಜನರನ್ನು ಸೇರಿಸ್ಕಳ್ಳಿ ಅಣ್ಣಾ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಪ್ರೀತಂ ಗೌಡ, ನಿಮ್ಮ ಕೈಮುಗಿದು ಕೇಳ್ಕೋತೀನಿ. ಎಪ್ಪತ್ತು ಜನಾನು ಮಂಗಳಾರತಿ ಮಾಡಿ ಪ್ರೀತಂಗೌಡಂಗೆ ಓಟು ಹಾಕ್ತೀವಿ ಅಂತ ತೀರ್ಮಾನ ಮಾಡಿ. ದೇವಸ್ಥಾನ ನಾನು ಮಾಡಿಕೊಡ್ತೀನಿ, ಅದು ನನ್ನ ಜವಾಬ್ದಾರಿ ಆಗಬಹುದಾ? ಎಂದು ಕೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ