ಪತನಗೊಂಡ ವಿಮಾನದ Black Box ಹುಡುಕಿದ್ದ ವ್ಯಕ್ತಿ.. 30 ವರ್ಷ ಕಳೆದರೂ ಕೈ ಸೇರದ ಬಹುಮಾನ!

1991ರಲ್ಲಿ ಪತನವಾಗಿದ್ದ ನೌಕಾದಳದ ಹೆಲಿಕಾಪ್ಟರ್ ಅವಶೇಷಗಳನ್ನು ಹುಡುಕಿಕೊಟ್ಟಿದ್ದ ಯುವಕ ಈಗ ವೃದ್ಧಾಪ್ಯ ತಲುಪಿದರೂ ಸರ್ಕಾರ ಕೊಟ್ಟ ಬಹುಮಾನದ ಭರವಸೆ ಇಂದಿಗೂ ಈಡೇರಿಲ್ಲ. 33 ವರ್ಷದ ಯುವಕನಾಗಿದ್ದ ನಾನು ಈಗ ವೃದ್ಧಾಪ್ಯ ತಲುಪಿದ್ದೇನೆ. ಈಗಲಾದರೂ ಭರವಸೆ ಈಡೇರಿಸಿ ಎಂದು ಪುಟ್ಟಸ್ವಾಮಿಗೌಡ ಬೇಡಿಕೊಳ್ಳುತ್ತಿದ್ದಾರೆ.

ಪುಟ್ಟಸ್ವಾಮಿಗೌಡ

ಪುಟ್ಟಸ್ವಾಮಿಗೌಡ

  • Share this:
ಹಾಸನ:  ಸಕಲೇಶಪುರ ತಾಲೂಕಿನ (Sakleshpur Taluk) ಪಶ್ಚಿಮಘಟ್ಟ ವ್ಯಾಪ್ತಿಯ ಅರಮನೆ ಗುಡ್ಡದಲ್ಲಿ 1991ರಲ್ಲಿ ಪತನವಾಗಿದ್ದ ನೌಕಾದಳದ ಹೆಲಿಕಾಪ್ಟರ್ (Navy Helicopter Crash) ಅವಶೇಷಗಳನ್ನು ಹುಡುಕಿಕೊಟ್ಟಿದ್ದ ಯುವಕ ಈಗ ವೃದ್ಧಾಪ್ಯ ತಲುಪಿದರೂ ಸರ್ಕಾರ ಕೊಟ್ಟ ಬಹುಮಾನದ ಭರವಸೆ ಇಂದಿಗೂ ಈಡೇರಿಲ್ಲ. 1991 ರಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಅತ್ಯಂತ ಮಹತ್ವದ ದಾಖಲೆಗಳನ್ನು ಸಾಗಿಸುತ್ತಿದ್ದ ನೌಕಾದಳಕ್ಕೆ ಸೇರಿದ ಹೆಲಿಕಾಪ್ಟರ್ ಪಶ್ಚಿಮಘಟ್ಟದ ಅರಮನೆ ಗುಡ್ಡದ ತಪ್ಪಲಿನಲ್ಲಿ ಪತನಗೊಂಡಿತ್ತು. ಈ ಘಟನೆಯಲ್ಲಿ ಓರ್ವ ಕರ್ನಲ್ ಸೇರಿದಂತೆ ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಮೃತಪಟ್ಟಿದ್ದರು. ಎಷ್ಟೇ ವೈಜ್ಞಾನಿಕ ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸಿದರೂ ಮಂಗಳೂರಿನಿಂದ ಪ್ರಯಾಣ ಆರಂಭಿಸಿದ ಇಪ್ಪತ್ತು ನಿಮಿಷಗಳಲ್ಲೇ ಸಂಪರ್ಕ ಕಡಿದುಕೊಂಡಿದ್ದ ಹೆಲಿಕಾಪ್ಟರ್ ಪತ್ತೆ ಸಾಧ್ಯವಾಗಿರಲೇ ಇಲ್ಲ.

ಅಂದು ಹೇಗಿತ್ತು ಕಾರ್ಯಾಚರಣೆ..? 

ನೌಕಾಪಡೆಗೆ ಸೇರಿದ ಹೆಲಿಕಾಪ್ಟರ್ ದಿಢೀರ್ ನಾಪತ್ತೆಯನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿತು. ಸೇನೆಯ ರಹಸ್ಯ ಮಾಹಿತಿಗಳನ್ನು ಒಳಗೊಂಡಿದ್ದ ಚಾಪರ್ ಪತನವಾಗಿರುವ ಸಾಧ್ಯತೆಯೇ ಹೆಚ್ಚಿದೆ ಎನ್ನುವ ತೀರ್ಮಾನಕ್ಕೆ ಬಂದ ಪರಿಣತರು ರಾಜ್ಯ ಅದುವರೆಗೂ ಕಂಡರಿಯದ ಲೋಹದ ಹಕ್ಕಿಯ ಅವಶೇಷಗಳ ಹುಡುಕಾಟದ ಕಾರ್ಯಾಚರಣೆ ಆರಂಭಿಸಿದರು. ಸಕಲೇಶಪುರಕ್ಕೆ ಹತ್ತಾರು ನಾನಾ ಗಾತ್ರ, ಸಾಮರ್ಥ್ಯದ ವಾಯುಪಡೆ ಹಾಗೂ ನೌಕಾಪಡೆಯ ಹೆಲಿಕಾಪ್ಟರ್‌ಗಳು 45 ಯೋಧರೊಂದಿಗೆ ಬಂದಿಳಿದವು. ಈಗಿನ ತಾಲೂಕು ಕ್ರೀಡಾಂಗಣದ ಅಷ್ಟು ಸ್ಥಳವನ್ನು ಸೇನೆ ವಶಕ್ಕೆ ಪಡೆದುಕೊಂಡಿತ್ತು. ನಾಪತ್ತೆಯಾದ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದ ದಿಕ್ಕು, ಎತ್ತರ ಆಧರಿಸಿ ಸಕಲೇಶಪುರ, ಆಲೂರು ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಬೆಳಗ್ಗೆಯಿಂದ ಇಳಿ ಸಂಜೆವರೆಗೂ ಸೇನೆಯ ಹೆಲಿಕಾಪ್ಟರ್‌ಗಳು ನೆಲ ಮಟ್ಟದಿಂದ ಕೇವಲ ನೂರಿನ್ನೂರು ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಹುಡುಕಾಟ ನಡೆಸುತ್ತಿದ್ದವು.  ಇಷ್ಟಾದರೂ ಪತನಗೊಂಡ ಲೋಹದ ಹಕ್ಕಿಯ ಕುರುಹು ಪತ್ತೆ ಸಾಧ್ಯವಾಗಲೇ ಇಲ್ಲ.

ಇದನ್ನೂ ಓದಿ: Mangalore: ದೇವಸ್ಥಾನಗಳ ಹುಂಡಿಗೆ ಕಾಂಡೋಮ್ ಹಾಕುತ್ತಿದ್ದ ನೀಚ.. ಸಿಕ್ಕಿಬಿದ್ದಾಗ ಹೇಳಿದ್ದೇನು ಗೊತ್ತಾ?

ಬ್ಲ್ಯಾಕ್​​ ಬಾಕ್ಸ್​​ ಹುಡುಕಿದ್ದ ಪುಟ್ಟಸ್ವಾಮಿಗೌಡ 

ಹೆಲಿಕಾಪ್ಟರ್‌ನ ಅವಶೇಷಗಳು ಹಾಗೂ ಅದರ ಬ್ಲ್ಯಾಕ್ ಬಾಕ್ಸ್ ವಶಕ್ಕೆ ಪಡೆಯಲೇಬೇಕಿದ್ದ ಕಾರಣ ನೌಕಾದಳ ಸ್ಥಳೀಯರ ನೆರವು ಪಡೆಯಲು ನಿರ್ಧರಿಸಿತು. ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್ ಹುಡುಕಿಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸು ಮೂಲಕ  ಸಾರ್ವಜನಿಕರನ್ನು ಈ ಕೆಲಸದಲ್ಲಿ ತೊಡಗಿಸಿಕೊಂಡಿತು. ಬಹುಮಾನದ ಆಸೆಗೆ ಬಿದ್ದ ಪಶ್ಚಿಮಘಟ್ಟದಂಚಿನ ಹತ್ತಾರು ಗ್ರಾಮಗಳ ನೂರಾರು ಯುವಕರು ವಾರಗಟ್ಟಲೆ ಮನೆಬಿಟ್ಟು ಕಾಡಿನಲ್ಲಿ ಅಲೆದಾಡಿದರೂ ಪತ್ತೆಯಾಗಲಿಲ್ಲ. ಆದರೆ ವನಗೂರು ಗ್ರಾಮದ ಪುಟ್ಟಸ್ವಾಮಿಗೌಡ ಎಂಬ 33ರ ಯುವಕ ಛಲಂದಕ ಮಲ್ಲನ ರೀತಿಯಲ್ಲಿ ಏಕಾಂಗಿಯಾಗಿ ದಟ್ಟಡವಿಯಲ್ಲಿ ಪ್ರಾಣದ ಹಂಗು ತೊರೆದು ಹುಡುಕಾಟ ಮುಂದುವರಿಸಿದ್ದರು. ಸತತ ಎರಡು ವರ್ಷಗಳ ಹುಡುಕಾಟದ ಫಲವಾಗಿ ಎಲ್ಲರಿಗೂ ಮರೆತೇ ಹೋಗಿದ್ದ ಹೆಲಿಕಾಪ್ಟರ್ ಪಳೆಯುಳಿಕೆಯನ್ನು 1992ರ ಅಕ್ಟೋಬರ್‌ನಲ್ಲಿ ಅರಮನೆ ಗುಡ್ಡದ ತಪ್ಪಲಿನಲ್ಲಿ ಹುಡುಕವಲ್ಲಿ ಯಶಸ್ವಿಯಾದರು.

ಕೇಂದ್ರ ಸರ್ಕಾರಿ ನೌಕರಿಯೂ ಇಲ್ಲ, 4 ಎಕರೆ ಭೂಮಿನೂ ಇಲ್ಲ 

ಆಗ ಸಕಲೇಶಪುರದ ಉಪವಿಭಾಗಾಧಿಕಾರಿಯಾಗಿದ್ದ ಅತುಲ್‌ಕುಮಾರ್ ತಿವಾರಿ 10 ಸಾವಿರ ರೂ. ಬಹುಮಾನ ನೀಡಿದ್ದರು. ಆಗಿನ ಜಿಲ್ಲಾಧಿಕಾರಿ ಪುಟ್ಟಸ್ವಾಮಿಗೌಡ ಅವರ ಶ್ರಮಕ್ಕೆ ಪ್ರತಿಫಲವಾಗಿ ಸರ್ಕಾರದಿಂದ ನಾಲ್ಕು ಎಕರೆ ಕೃಷಿ ಭೂಮಿ ಇಲ್ಲವೇ ಕೇಂದ್ರ ಸರ್ಕಾರದ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಬ್ಲಾಕ್‌ಬಾಕ್ಸ್ ಹುಡುಕಿಕೊಟ್ಟ ಪುಟ್ಟಸ್ವಾಮಿಗೌಡರನ್ನು ಸರ್ಕಾರ ಮರೆತೇ ಬಿಟ್ಟಿತು. ಜಿಲ್ಲೆಗೆ ಹೊಸ ಡಿಸಿ, ಸಕಲೇಶಪುರಕ್ಕೆ ಹೊಸ ಎಸಿ ಬಂದಾಗಲೆಲ್ಲ ಅವರನ್ನು ಭೇಟಿಯಾಗಿ ಬಹುಮಾನದ ಭರವಸೆ ಈಡೇರಿಸುವಂತೆ ಮನವಿ ಮಾಡುತ್ತಿದ್ದಾರೆ. ಈಗಲೂ ಎಸಿ ಕಚೇರಿ, ತಾಲೂಕು ಕಚೇರಿಗಳಿಗೆ ಹೋಗಿ ಮನವಿ ಮಾಡುತ್ತಲೇ ಇದ್ದು, 33 ವರ್ಷದ ಯುವಕನಾಗಿದ್ದ ನಾನು ಈಗ ವೃದ್ಧಾಪ್ಯ ತಲುಪಿದ್ದೇನೆ. ಈಗಲಾದರೂ ಸರ್ಕಾರ ಆಗ ಕೊಟ್ಟ ಭರವಸೆ ಈಡೇರಿಸಿ ಎಂದು ಅಂಗಲಾಚುತ್ತಿದ್ದಾರೆ.
Published by:Kavya V
First published: