ಹಾಸನ: ಕರ್ನಾಟಕದಲ್ಲಿ (Karnataka) ಜೆಡಿಎಸ್ (JDS) ಸ್ವತಂತ್ರ್ಯ ಸರ್ಕಾರ ರಚಿಸುತ್ತಾ? ರಚಿಸುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಹಾಸನದ (Hassan) ಜಂಜಾಟಕ್ಕೆ ಬ್ರೇಕ್ ಹಾಕದಿದ್ದರೆ ಗುರಿ ಮುಟ್ಟುವುದು ಕಷ್ಟ ಅನ್ಸುತ್ತೆ. ಏಕೆಂದರೆ ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ನೀಡುವ ವಿಚಾರದಲ್ಲಿ ಮತ್ತೆ ಜೆಡಿಎಸ್ನಲ್ಲಿ ಸಮರ ಶುರುವಾಗಿದೆ. ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸೋ ವಿಷ್ಯದಲ್ಲಿ ರೇವಣ್ಣ ಕುಟುಂಬ ಹಠಕ್ಕೆ ಬಿದ್ದಿದೆ. ಮಾಧ್ಯಮಗಳ ಮುಂದೆ, ಮತದಾರರ ಮುಂದೆ ದೇವೇಗೌಡರ (HD Devegowda) ನಿರ್ಧಾರಕ್ಕೆ ಬಿಡುತ್ತೇವೆ ಎಂದಿದ್ದ ಹೆಚ್ಡಿ ರೇವಣ್ಣ (HD Revanna) ಅವರು, ಹಾಸನ ಕ್ಷೇತ್ರದ ಸಾಧಕ ಬಾಧಕದ ಬಗ್ಗೆ ದೇವೇಗೌಡರನ್ನ ಭೇಟಿ ಮಾಡಿ, ನಿನ್ನೆ ರಾತ್ರಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಸೂರಜ್ ರೇವಣ್ಣ (Suraj Revanna) ಮತ್ತು ಹೆಚ್ಡಿ ರೇವಣ್ಣ ತಡರಾತ್ರಿವರೆಗೂ ಗೌಡರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದೇವೇಗೌಡರ ಎದುರು ಭವಾನಿ ರೇವಣ್ಣ ಭವಿಷ್ಯ
ಹಾಸನದ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷ ಗೆಲ್ಲಬೇಕು. ಹಾಸನ ಕ್ಷೇತ್ರ ಮಾತ್ರ ಬಿಜೆಪಿ ಪಾಲಾಗಿ ಹೋಗಿದೆ. ಹಾಸನ ಮರಳಿ ಜೆಡಿಎಸ್ ಪಕ್ಷ ಹಿಡಿತಕ್ಕೆ ಪಡೆಯಲು ಭವಾನಿ ರೇವಣ್ಣ ಅವರ ಸ್ಪರ್ಧೆ ಅನಿವಾರ್ಯ. ಬಿಜೆಪಿ ಶಾಸಕ ಪ್ರೀತಂಗೌಡ ಅವರನ್ನು ಕಟ್ಟಿ ಹಾಕಲು ಭವಾನಿ ಸ್ಪರ್ಧೆ ಮಾಡಲೇಬೇಕು.
ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಸ್ವರೂಪ್ ಅವರಿಗೆ ಶಕ್ತಿಯಿದೆ. ಆದರೆ ಭವಾನಿ ಅವರಿಗೆ ಇರುವಷ್ಟು ಜನ ಬೆಂಬಲವಿಲ್ಲ. ಸ್ವರೂಪ್ಗೆ ಟಿಕೆಟ್ ಕೊಟ್ಟರೆ ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಕುಮಾರಸ್ವಾಮಿ ಅವರ ಬಳಿ ನೀವೇ ಮಾತನಾಡಿ ಫೈನಲ್ ಮಾಡಿ ಅಂತ ರೇವಣ್ಣ, ದೇವೇಗೌಡರ ಬಳಿ ಮನವಿ ಮಾಡಿದ್ದಾರಂತೆ.
ಮತ್ತೆ ಭವಾನಿ ರೇವಣ್ಣ ಸ್ಪರ್ಧೆ ಅನಿವಾರ್ಯ ಅಲ್ಲ ಅಂದ್ರು ಹೆಚ್ಡಿಕೆ
ಹೆಚ್ಡಿ ರೇವಣ್ಣ ಹಾಗೂ ದೇವೇಗೌಡರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ ಮಾತಾಡಿದರು. ಕುಟುಂಬ ರಾಜಕಾರಣ ಬಗ್ಗೆ ಈಗಾಗಲೇ ಹಲವು ಬಾರಿ ಮಾತನಾಡಿದ್ದೇನೆ. ಜೆಡಿಎಸ್ ಪಕ್ಷಕ್ಕೆ ಅನಿವಾರ್ಯ ಎಂದಾಗ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದ್ದೇವೆ ಎಂದು ಹೇಳಿದ್ದಾರೆ. ಎಲೆಕ್ಷನ್ ಬಂದಾಗ ಒಂದು ಕುಟುಂಬದಲ್ಲಿ ಆಸೆ ಇದ್ದೇ ಇರುತ್ತೆ. ಆದರೆ ನಾವು ಯಾವುದೇ ಗೊಂದಲಕ್ಕೂ ಆಸ್ಪದ ಕೊಡಲ್ಲ. ಹಾಸನ ವಿಚಾರದಲ್ಲಿ ಇನ್ನೂ ಯಾವುದೇ ಚರ್ಚೆ ಆಗಿಲ್ಲ ಅನ್ನೋ ಮೂಲಕ ಪರೋಕ್ಷವಾಗಿ ಭವಾನಿಗೆ ಟಿಕೆಟ್ ಡೌಟು ಅಂತ ಹೇಳಿದ್ದರು.
ಅರಸಿಕೆರೆಗೆ ಹೊಸ ಅಭ್ಯರ್ಥಿ; ಅರಕಲಗೂಡಿಗೆ ಎ.ಮಂಜು ಫಿಕ್ಸ್!
ಕಳೆದ ಎರಡು ವರ್ಷಗಳಿಂದ ಜೆಡಿಎಸ್ ಪಕ್ಷದಿಂದ ಅಂತ ಕಾಯ್ದುಕೊಂಡಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಜೆಡಿಎಸ್ನ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಹೀಗಾಗಿ ಅರಸೀಕೆರೆಗೆ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷ ಹೊಸ ಅಭ್ಯರ್ಥಿ ಹುಡುಕಾಟ ನಡೆಸುತ್ತಿದೆ. ಅರಕಲಗೂಡಿಗೆ ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗಿದ್ದ ಎ.ಮಂಜು ಜೆಡಿಎಸ್ ಅಭ್ಯರ್ಥಿ ಆಗುವುದು ಬಹುತೇಕ ಫೈನಲ್ ಆಗಿದೆ.
ಈಗಾಗಲೇ ಜೆಡಿಎಸ್ನಿಂದ ಒಂದು ಕಾಲು ಹೊರಗಿಟ್ಟಿರುವ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ರಾಜಕೀಯದ ಬಗ್ಗೆಯೇ ಅಸಮಾಧಾನ ಹೊರಹಾಕಿದ್ದಾರೆ. ದುಡ್ಡಿದ್ದವರನ್ನು ರಾಜಕೀಯ ಹುಡುಕಾಡುತ್ತಿದೆ. ಜಿಲ್ಲೆಯಲ್ಲಿ ರಾಮಸ್ವಾಮಿ ಉತ್ತಮ ರಾಜಕಾರಣಿ, ಇಂತಹವನ್ನು ಮೂಲೆ ಗುಂಪು ಮಾಡಲು ಪ್ರಮುಖ ಪಕ್ಷಗಳು ಮುಂದಾಗಿದೆ. ದುಡ್ಡು ಇರುವ ವ್ಯಕ್ತಿಗಳನ್ನು ಪಕ್ಷಗಳು ಹುಡುಕುತ್ತಿವೆ. ಪಕ್ಷಕ್ಕೆ ಎಷ್ಟು ಫಂಡ್ ಕೊಡ್ತಾರೆ, ಯಾರು ಎಷ್ಟು ಖರ್ಚು ಮಾಡುತ್ತಾರೆ. ಯಾರು ಎಷ್ಟು ಅಕ್ರಮವಾಗಿ ಸಂಪಾದನೆ ಮಾಡಿದ್ದಾರೆ ಎಂದು ನೋಡುವ ಸ್ಥಿತಿಗೆ ಪ್ರಜಾಪ್ರಭುತ್ವ ಮುಟ್ಟಿದೆ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ಹೊರ ಹಾಕಿದರು.
ಇತ್ತ ಹಾಸನದ ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಜೆಡಿಎಸ್ ಪಕ್ಷಕ್ಕೆ ಸೋಲುಣಿಸಲು ಬಿಜೆಪಿ ಮತ್ತು ಕಾಂಗ್ರೆಸ್ ನೀಲನಕ್ಷೆ ಸಿದ್ಧಪಡಿಸುತ್ತಿವೆ. ಇದರ ನಡುವೆ ಭವಾನಿ ರೇವಣ್ಣ ಟಿಕೆಟ್ಗೆ ಪಟ್ಟು ಹಿಡಿದಿರುವುದು ಜೆಡಿಎಸ್ಗೆ ಕಗ್ಗಂಟಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ