ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಯ (Assembly Election 2023) ರಣಕಣ ದಿನಕಳೆಯುತ್ತಿದ್ದಂತೆ ರಂಗೇರುತ್ತಿದೆ. ಹಾಸನದಲ್ಲಿ ಜೆಡಿಎಸ್ ಟಿಕೆಟ್ ವಿಚಾರವಾಗಿ ಎಚ್‌ಡಿ ರೇವಣ್ಣ (HD Revanna) ಮತ್ತು ಎಚ್‌ಡಿ ಕುಮಾರಸ್ವಾಮಿ (HD Kumaraswamy) ಕುಟುಂಬದ ಮಧ್ಯೆ ಉಂಟಾದ ವೈಮನಸ್ಸಿನಿಂದ ಎಚ್‌ಡಿ ದೇವೇಗೌಡರ (HD Deve Gowda) ಕುಟುಂಬ ಒಡೆಯಿತು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾಗಲೇ ಇದೀಗ ಎಲ್ಲವೂ ಸರಿ ಹೋಗುವತ್ತ ಜೆಡಿಎಸ್ ಮುಖ ಮಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ (HP Swaroop) ಅವರು ಎಚ್‌ಡಿ ರೇವಣ್ಣರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು.. ಆರಂಭದಲ್ಲಿ ಎಚ್‌ಡಿ ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಅವರ ಕುಟುಂಬ ಭವಾನಿ ರೇವಣ್ಣ ಅಥವಾ ಎಚ್‌ಡಿ ರೇವಣ್ಣಗೆ ಟಿಕೆಟ್ ನೀಡಬೇಕು. ಆ ಮೂಲಕ ಹಾಲಿ ಶಾಸಕ ಪ್ರೀತಂ ಗೌಡರನ್ನು ಸೋಲಿಸಬೇಕು ಎಂದು ಪಣ ತೊಟ್ಟು ಟಿಕೆಟ್‌ಗೆ ಆಗ್ರಹಿಸಿತ್ತು. ಆದರೆ ಎಚ್‌ಡಿ ಕುಮಾರಸ್ವಾಮಿ ಮಾತ್ರ ಸ್ವರೂಪ್‌ಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಲ್ಲದೇ, ಸ್ವರೂಪ್‌ಗೆ ಟಿಕೆಟ್ ನೀಡುವಲ್ಲಿ ಯಶಸ್ವಿಯಾಗಿದ್ದರು.
ಮುನಿಸು ಮರೆತು ಒಂದಾದ ದಳಪತಿಗಳು
ಇದೀಗ ಈ ಜಿದ್ದಾಟವೆಲ್ಲವನ್ನೂ ಮರೆತು ಪಕ್ಷದ ಗೆಲುವೇ ಮುಖ್ಯ ಎಂದು ಅರಿತಿರುವ ಎಚ್‌ಡಿ ರೇವಣ್ಣ ಹಾಸನ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪರ ಪ್ರಚಾರಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ. ಎಚ್‌ಡಿ ರೇವಣ್ಣ ಅವರ ಮನವೊಲಿಸುವಲ್ಲಿ ಹಾಸನ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಯಶಸ್ವಿಯಾಗಿದ್ದು, ಇದೀಗ ಎಚ್‌ಪಿ ಸ್ವರೂಪ್ ಪರ ಪ್ರಚಾರಕ್ಕೆ ಇಳಿಯಲು ಎಚ್‌ಡಿ ರೇವಣ್ಣ ಮತ್ತು ಫ್ಯಾಮಿಲಿ ರೆಡಿಯಾಗಿದೆ.
ಈ ಹಿನ್ನೆಲೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ಇಂದು ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಹಿರಿಯರ ಸಭೆ ಕರೆದಿದ್ದು, ಈ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಎಚ್‌ಡಿ ರೇವಣ್ಣ, ಭವಾನಿ ರೇವಣ್ಣ, ಹಾಗೂ ಎಂಎಲ್‌ಸಿ ಸೂರಜ್ ರೇವಣ್ಣ ಭಾಗಿಯಾಗಲಿದ್ದಾರೆ. ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಎಚ್‌ಡಿ ರೇವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Sudan Clashes: ಸುಡಾನ್ ಕನ್ನಡಿಗರ ಬಗ್ಗೆ ಸಿದ್ದರಾಮಯ್ಯ ಆತಂಕ; ಜೈಶಂಕರ್ ‘ರಾಜಕೀಯ’ ಹೇಳಿಕೆಗೆ ಮಾಜಿ ಸಿಎಂ ಕೌಂಟರ್!
ಇನ್ನು ಜೆಡಿಎಸ್ ಅಭ್ಯರ್ಥಿ ಎಚ್‌ಪಿ ಸ್ವರೂಪ್ ಅವರು ನಾಳೆ ಹಾಸನದಲ್ಲಿ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಲಿದ್ದು, ಈ ಬೃಹತ್ ರ್ಯಾಲಿಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭಾಗಿಯಾಗುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ