ಹಾಸನ: ಭಾರತೀಯ ಸೇನೆಗೆ (Indian Army) ಯುವಕರೇ (Boys) ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವತಿಯರು (Girls) ದೇಶ ಸೇವೆಗೆ ಸೇರುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು. ಹಾಸನ (Hassan) ಜಿಲ್ಲೆ, ಬೇಲೂರು (Belur) ತಾಲ್ಲೂಕಿನ ಬಳ್ಳೂರು ಗ್ರಾಮದ 23 ವರ್ಷದ ಬಿ.ಎಸ್.ಚಿಂತು ಎಂಬ ಯುವತಿ ಬಿಎಸ್‌ಎಫ್‌ಗೆ (BSF) ಸೇರುವ ಮೂಲಕ ಹಾಸನ ಜಿಲ್ಲೆಯಲ್ಲಿಯೇ ಬಿಎಸ್‌ಎಫ್ ಸೇರಿದ ಪ್ರಥಮ ಯುವತಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾರೆ. ಬಳ್ಳೂರು ಗ್ರಾಮದ ಹೋಂ ಗಾರ್ಡ್ (Home Guard)ಶಿವರಾಜ್ ಹಾಗೂ ರುದ್ರಮ್ಮ ದಂಪತಿಯ ದ್ವಿತೀಯ ಪುತ್ರಿ ಚಿಂತು ಬಿಎಸ್ಸಿ (BSc) ಓದಿದ್ದು, ತಂದೆ ಶಿವರಾಜ್ ಹೋಂ ಗಾರ್ಡ್ ಆಗಿದ್ದರಿಂದ ಅವರು ಧರಿಸುತ್ತಿದ್ದ ಖಾಕಿ ಬಟ್ಟೆಯನ್ನು ನೋಡಿ ತಾನು ಪೊಲೀಸ್ ಹುದ್ದೆಗೆ ಸೇರಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದರು. ಇದೀಗ ಸೇನೆ ಸೇರುವ ಮೂಲಕ ಆಕೆಯ ಕನಸು ನನಸಾಗಿದೆ.
ಚಿಕ್ಕವಳಾಗಿದ್ದಾಗಲೇ ದೇಶ ಸೇವೆಯ ಕನಸು
ತಮ್ಮ ಹುಟ್ಟೂರು ಬಳ್ಳೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಎಂಟನೇ ತರಗತಿಯಿಂದ ದ್ವಿತಿಯ ಪಿಯುಸಿವರೆಗೂ ಬೇಲೂರಿನ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಈ ಅವಧಿಯಲ್ಲಿ ಎನ್‌ಸಿಸಿ ಸೇರಿದ ಅವರು ಸೈನಿಕಾಧಿಕಾರಿಗಳು ನೀಡುತ್ತಿದ್ದ ತರಬೇತಿಯಿಂದ ಪ್ರೇರಣೆಗೊಂಡು ವಿದ್ಯಾರ್ಥಿ ದಿಸೆಯಿಂದಲೇ ದೇಶಕ್ಕಾಗಿ ದುಡಿಯುವ ಹಂಬಲ ಹೊಂದಿದ್ದರು. ಜೊತೆಗೆ ತಂದೆ, ತಾಯಿ, ಅಣ್ಣ ಹಾಗೂ ತಮ್ಮನ ಸಹಕಾರವಿತ್ತು.
ಒಂದು ವರ್ಷದ ಬಳಿಕ ಫಲಿತಾಂಶ ಪ್ರಕಟ
ಪಿಯುಸಿ ಮುಗಿದ ಮೇಲೆ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾಗಲೇ 2018 ರಲ್ಲಿ ಭಾರತೀಯ ಸೇನೆಯಿಂದ ಬಿಎಸ್‌ಫ್‌ಗೆ ಅರ್ಜಿ ಆಹ್ವಾನಿಸಲಾಗಿತ್ತು. ಚಿಂತು ಕೂಡ ಅರ್ಜಿ ಸಲ್ಲಿಸಿದ್ದರು. 2019 ರಲ್ಲಿ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡರು. 2020 ರಲ್ಲಿ ಲಿಖಿತ ಪರೀಕ್ಷೆ ಬರೆದಿದ್ದರು.
ಇದನ್ನೂ ಓದಿ: CT Ravi: "ಪ್ರೀತಿಯ ಪಲ್ಲವಿ, ಕನ್ನಡ ಮಂತ್ರದೊಂದಿಗೆ ಮನ ಸೇರಿದ ಕನ್ನಡತಿ!" ಪತ್ನಿಗೆ ಸಿಟಿ ರವಿ ಪ್ರೇಮಪತ್ರ
ಅಷ್ಟರಲ್ಲಿ ದೇಶಾದ್ಯಂತ ಕೊರೊನಾ ಮಹಾಮಾರಿ ವಕ್ಕರಿಸಿ ಹತ್ತು ತಿಂಗಳು ಲಾಕ್‌ಡೌನ್ ಆಗಿದ್ದರಿಂದ ಒಂದು ವರ್ಷ ಬಳಿಕ 2021 ಜನವರಿಯಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ಮಾರ್ಚ್‌ನಲ್ಲಿ ಸೈನಿಕ ತರಬೇತಿಗೆ ಆಗಮಿಸುವಂತೆ ಆದೇಶ ಪತ್ರ ಕಳುಹಿಸಲಾಗಿತ್ತು.
ತರಬೇತಿಯಲ್ಲಿ ಕಠಿಣ ಸವಾಲು
2021 ರ ಮಾ.30 ರಂದು ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ತೆಕ್ಕಣಪುರದ ಎಸ್‌ಡಿಸಿ ಬಿಎಸ್‌ಎಫ್ ತರಬೇತಿಗೆ ಸೇರ್ಪಡೆಯಾದರು. ಈ ಸಂದಭದಲ್ಲಿ ಅವರಿಗೆ ಕಠಿಣ ಸವಾಲು ಎದುರಾಗಿತ್ತು. ಪ್ರತಿನಿತ್ಯ 10-12 ಕಿ.ಮೀ. ಓಟ, ಜೊತೆಗೆ 8 ಕೆ.ಜಿ. ತೂಕದ ಬ್ಯಾಕ್ ಹೊತ್ತು 2 ಕಿ.ಮೀ. ಓಡಬೇಕಿತ್ತು. ಅಲ್ಲದೆ ಲಾಂಗ್ ಜಂಪ್, ಹಗ್ಗ ಹತ್ತುವುದು ಸೇರಿದಂತೆ ಶಸ್ತ್ರಾಸ್ತ್ರಗಳ ತರಬೇತಿ ಇರುತ್ತಿತ್ತು. ಇವೆಲ್ಲವನ್ನೂ ಕಷ್ಟ ಪಟ್ಟು ಎದುರಿಸಿ ಇಂದು ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಣ್ಣನಿಗಿಂತ ಮೊದಲೇ ಉದ್ಯೋಗಕ್ಕೆ ಸೇರಿದ ಚಿಂತು
ಚಿಂತು ಅವರ ಅಣ್ಣ ಕೂಡ ಪದವೀಧರನಾಗಿದ್ದು, ಓದು ಮುಗಿದ ಮೇಲೆ ಸರ್ಕಾರಿ ನೌಕರಿ ಪಡೆಯಬೇಕು ಎಂಬ ಹಠದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತಯಾರಿ ನಡೆಸಿ ಹಲವಾರು ಪರೀಕ್ಷೆಗಳನ್ನು ಬರೆದಿದ್ದರು, ಸರ್ಕಾರಿ ಕೆಲಸ ಸಿಕ್ಕಿಲ್ಲ. ಆದರೆ ಚಿಂತು ಅಣ್ಣನಿಗಿಂತ ಮೊದಲೇ ಸೈನ್ಯಕ್ಕೆ ಸೇರಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.
ಮುಂದೆ ಉನ್ನತ ಹುದ್ದೆಗೆ ಏರುವ ಕನಸು
ಬಾಲ್ಯದಿಂದಲೂ ನನಗೆ ಸೈನಿಕರ ಮೇಲೆ ಅಪಾರ ಗೌರವವಿತ್ತು. ಸೇನೆ ಸೇರಲು ನನಗೆ ನನ್ನ ಅಣ್ಣ, ತಮ್ಮ, ತಂದೆ, ತಾಯಿಯೇ ಪ್ರೇರಣೆ, ತನ್ನ ಸ್ವಂತ ದುಡಿಮೆಯಲ್ಲೇ ಜೀವನ ಸಾಗಿಸಬೇಕು ಎಂಬ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಸೇನೆ ಸೇರಿದ್ದೇನೆ. ಮುಂದೆ ಕೂಡ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಇನ್ನೂ ಉನ್ನತ ಹುದ್ದೆ ಸೇರಬೇಕು ಎಂಬ ಬಯಕೆಯಿದೆ ಎನ್ನುತ್ತಾರೆ ಚಿಂತು.
ಇದನ್ನೂ ಓದಿ: BMW Car ಕಾವೇರಿ ನದಿಯಲ್ಲಿ ಮುಳುಗಿಸಿ ಮಾಲೀಕ ಪರಾರಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ
ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಮೂಲಕ ತನ್ನ ಛಾಫು ಮೂಡಿಸಿದ್ದಾಳೆ. ಅದರಂತೆ ಚಿಂತು ಕೂಡ ಸೇನೆ ಸೇರುವ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ