ಹಾಸನ (ಜೂ 24): ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಕಾನ್ಸ್‌ಟೇಬಲ್ (Constable) ಮೇಲೆ ಡಿವೈಎಸ್ಪಿ (DySP) ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಲ್ಲೆಯಿಂದ ಗಾಯಗೊಂಡ ಕಾನ್ಸ್‌ಟೇಬಲ್ ವೇಣುಗೋಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಹಾಸನ ನಗರ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ (SrinivasGowda) ಭೇಟಿ ನೀಡಿದ್ದರು. ಈ ವೇಳೆ 303 ವೆಪನ್‌ನ ಬಿಡಿ ಭಾಗಗಳನ್ನು ಬೇರ್ಪಡಿಸಿ ವಾಪಾಸ್ ಜೋಡಿಸುವಂತೆ ಠಾಣೆಯ ಎಲ್ಲಾ ಕಾನ್ಸ್‌ಟೇಬಲ್‌ಗಳಿಗೆ ಡಿವೈಎಸ್‌ಪಿ ಉದಯ್ ಭಾಸ್ಕರ್ ಸೂಚನೆ ನೀಡಿದ್ದಾರೆ. ಈ ವೇಳೆ ನಗರಠಾಣೆ ಕಾನ್ಸ್‌ಟೇಬಲ್ ವೇಣು ತಪ್ಪೆಸಿಗಿದ್ದಾರೆ. ಇದರಿಂದ ಕೋಪಗೊಂಡ ಹಾಸನ ಉಪವಿಭಾಗ ಡಿವೈಎಸ್‌ಪಿ ಉದಯ್‌ಭಾಸ್ಕರ್ ಎಸ್‌ಪಿ ಸಮ್ಮುಖದಲ್ಲೇ ಹಲ್ಲೆ ಮಾಡಿದ್ದಾರೆ ಎಂದು ವೇಣು ಆರೋಪಿಸಿದ್ದಾರೆ.
ಠಾಣೆಯಲ್ಲಿಯೇ ಕುಸಿದು ಬಿದ್ದಿದ್ದ ವೇಣು
ಹಲ್ಲೆಯಿಂದ ಪೊಲೀಸ್ ಠಾಣೆಯಲ್ಲಿಯೇ ವೇಣು ಕುಸಿದು ಬಿದ್ದಿದ್ದು, ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ವೇಣುಗೋಪಾಲ್‌ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಲ್ಲೆ ಸುದ್ದಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಮಾಜಿಸಚಿವ ಹೆಚ್.ಡಿ ರೇವಣ್ಣ ಕಾನ್ಸ್‌ಟೇಬಲ್ ವೇಣುಗೋಪಾಲ ಆರೋಗ್ಯ ವಿಚಾರಿಸಿದರು. ವೇಣು ಹೊಳೆನರಸೀಪುರ ತಾಲ್ಲೂಕಿನ ರಂಗಾಪುರದವನು, ನನ್ನ ಕ್ಷೇತ್ರದ ಮತದಾರ. ಡಿವೈಎಸ್‌ಪಿ ಉದಯಭಾಸ್ಕರ್ ಈತನ ಹಲ್ಲೆ ಮಾಡಿದ್ದಾರೆ. ಅವರಿಗೆ ಕಪಾಳಕ್ಕೆ ಹೊಡೆಯವಂತಹದ್ದು ಏನಿದೆ. ಯಾಕೆ ಹಲ್ಲೆ ಮಾಡಿದ್ದಾರೆ. ಈತ ಏನಾದರೂ ಹಣ ಹೊಡೆದಿದ್ದಾನಾ, ಈತ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ. ರೈಫಲ್ ಜೋಡಿಸುವ ವಿಚಾರದಲ್ಲಿ ತಪ್ಪು ಮಾಡಿದ್ದರೆ ಕಪಾಳಕ್ಕೆ ಹೊಡಿತಾರಾ, ಪೊಲೀಸ್ ಮ್ಯಾನ್ಯೂಯಲ್‌ನಲ್ಲಿ ಇದಕ್ಕೆ ಅವಕಾಶ ಇದೆಯಾ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ರೇವಣ್ಣ ಕಿಡಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರಿನಲ್ಲೇ ಹಲ್ಲೆ ನಡೆದಿದೆ. ಕೂಡಲೇ ಡಿವೈಎಸ್‌ಪಿ ವಿರುದ್ಧ ಎಫ್.ಐ.ಆರ್. ದಾಖಲಾಗಬೇಕು. ಈ ಹಲ್ಲೆ ಕೇಸ್‌ನಲ್ಲಿ ಎಸ್ಪಿ ಹೇಳಿಕೆಯನ್ನು ಪಡೆಯಬೇಕು, ಹಿರಿಯ ಅಧಿಕಾರಿಗಳು ಕಾನ್ಸ್‌ಟೇಬಲ್‌ಗೆ ಹಲ್ಲೆ ಮಾಡಬಹುದಾ ಎಂದು ಹೋಂ ಮಿನಿಸ್ಟರ್, ಡಿಜಿ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿವೈಎಸ್‌ಪಿ ಉದಯ್ ಭಾಸ್ಕರ್ ಅವನದ್ದೆ ಆದ ರೌಡಿಗಳ ಗ್ಯಾಂಗ್ ಇಟ್ಟು ಕೊಂಡಿದ್ದಾನೆ. ಹೇಳೋರು ಕೇಳೋರು ಯಾರು ಇಲ್ಲಾ ಎನ್ನುವ ರೀತಿ ಆಗಿದೆ. ಸರ್ಕಾರ ಇದೆ, ನನಗೆ ಪ್ರಭಾವ ಇದೆ ಏನು ಬೇಕಾದರೂ ಮಾಡಬಹುದು ಎನ್ನುವಂತಿದೆ. ಕೂಡಲೇ ಡಿವೈಎಸ್‌ಪಿ ಮೇಲೆ ಕೇಸ್ ದಾಖಲಿಸಿ ಅವರನ್ನು ಅಮಾನತು ಮಾಡಬೇಕು. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಇದರ ಪರಿಣಾಮ ಎಸ್ಪಿ ಎದುರಿಸಬೇಕಾಗುತ್ತೆ ಎಂದು ರೇವಣ್ಣ ಕಿಡಿಕಾರಿದರು.
ಇದನ್ನೂ ಓದಿ: 5 Rupees Doctor: ಆಸ್ಪತ್ರೆಯಿಂದ 5 ರೂಪಾಯಿ ಡಾಕ್ಟರ್ ಶಂಕರೇಗೌಡ ಡಿಸ್ಚಾರ್ಜ್; ಕೆಲ ದಿನಗಳಲ್ಲಿ ಮತ್ತೆ ಸೇವೆಗೆ ಹಾಜರ್
ಆರೋಪಿಗಳಿಗೆ ಬಿರಿಯಾನಿ ತಿನ್ನಿಸಿ ಸಿಐಡಿಗೆ ಒಪ್ಪಿಸಿದ್ದಾರೆ
ಮೊನ್ನೆ ನಮ್ಮ ಪಕ್ಷದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಆರೋಪಿಗಳಿಗೆ ಬಿರಿಯಾನಿ ತಿನ್ನಿಸಿ ಸಿಐಡಿಗೆ ಒಪ್ಪಿಸಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಗೆ ಇಂತಹ ಅಧಿಕಾರಿಗಳಿಂದ ಧಕ್ಕೆಯಾಗುತ್ತಿದೆ, ಕೂಡಲೇ ಕೇಸ್ ದಾಖಲಿಸಿ ಅವರನ್ನು ಬಂಧಿಸಿ ಎಂದು ಒತ್ತಾಯಿಸಿದರು. ಇವನೇನು ದೊಡ್ಡ ಮನುಷ್ಯನ ಇವನು ನಮ್ಮ ಹಾಗೆ ಸಾಮಾನ್ಯ ಮನುಷ್ಯ, ಆತನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಷ್ಟಕ್ಕೆ ಸುಮ್ಮನಾಗದ ರೇವಣ್ಣ ಆಸ್ಪತ್ರೆಯಿಂದಲೇ ಬಡಾವಣೆ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಂರಾಜು ಕರೆ ಮಾಡಿ ದೂರು ದಾಖಲಾಗಿಲ್ಲ ಯಾಕೆ, ಕೇಸ್ ದಾಖಲಾಗದಿದ್ದರೆ ಇದರ ಪರಿಣಾಮ ಬೇರೆ ಇರುತ್ತೆ ಎಂದು ಎಚ್ಚರಿಸಿದರು. ಇದೇ ವೇಳೆ ಕಾನ್ಸ್‌ಟೇಬಲ್ ತಂದೆ ಮಳಲಿಗೌಡ ಮಗನ ಮೇಲಿನ ಹಲ್ಲೆ ನೆನೆದು ಕಣ್ಣೀರು ಹಾಕಿದರು.
ಇದನ್ನೂ ಓದಿ: Pregnant: ಒಂದೇ ಆಸ್ಪತ್ರೆಯ 14 ನರ್ಸ್‌ಗಳು ಒಂದೇ ಸಮಯಕ್ಕೆ ಪ್ರಗ್ನೆಂಟ್! ವೈರಲ್ ಆಯ್ತು ಬೇಬಿ ಬಂಪ್ ಫೋಟೋಸ್
ಮಗ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ, ನಾನು ಸರ್ಕಾರಿ ಕೆಲಸ ಮಾಡಿದ್ದೇನೆ ಯಾರಿಗೂ ನಾನು ಈ ರೀತಿ ಮಾಡಿಲ್ಲ. ನನ್ನ ಮಗನಿಗೆ ಒಂದು ಚಿಕ್ಕ ಮಗು ಇದೆ. ಏನಾದರೂ ಹೆಚ್ಚುಕಮ್ಮಿ ಆಗಿದ್ದರೆ ಅವನ ಕುಟುಂಬದ ಕಥೆ ಏನು. ನನ್ನ ಮಗನಿಗೆ ಪೊಲೀಸ್ ಕೆಲಸವೇ ಬೇಡ ಎಂದು ಗದ್ಗರಿತರಾದರು. ವೇಣು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ