Mahakali Temple: ನಿರ್ಲಕ್ಷಕ್ಕೆ ಒಳಗಾದ ಹಾಸನದ ಮಹಾಕಾಳಿ ದೇವಸ್ಥಾನ; ವರ್ಷದಿಂದ ನಡೆದಿಲ್ಲ ಪೂಜೆ-ಪುನಸ್ಕಾರ

ಶತಮಾನಗಳಿಂದ ಹಿಂದೂ ಧಾರ್ಮಿಕ ಪರಂಪರೆಯನ್ನು ಸಾರುವ ಪುರಾತನ ದೇಗುಲದ ದುರಸ್ಥಿ ಮಾಡದೆ ಇರುವುದು ಭಕ್ತರು ಹಾಗೂ ಸ್ಥಳೀಯ ಅಸಮಾಧಾನಕ್ಕೆ ಕಾರಣವಾಗಿದೆ.

ಮಹಾಕಾಳಿ

ಮಹಾಕಾಳಿ

 • Share this:
  ಹಾಸನ (ಅ.5):  ಜಿಲ್ಲೆ ಶಿಲ್ಪಕಲೆಗಳ ತವರೂರು ಎನಿಸಿದೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಸೇರಿದಂತೆ ಇನ್ನೂ ಹಲವೆಡೆ ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ದ ದೇವಾಲಯಗಳು ಜಿಲ್ಲೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗರಿಮೆ ತಂದಿದೆ. ಇದೇ ಸಾಲಿಗೆ ಸೇರುವ ಹಾಸನ ತಾಲ್ಲೂಕಿನ ದೊಡ್ಡಗದವಳ್ಳಿ ಗ್ರಾಮದಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಚತುಷ್ಕೂಟ ದೇವಾಲಯದಲ್ಲಿ ಒಂದಾಗಿದೆ. 907 ವರ್ಷಗಳ ಹಿಂದೆ ಹೊಯ್ಸಳರು ನಿರ್ಮಿಸಿದ ಮೊಟ್ಟಮೊದಲ ದೇಗುಲ ಇದಾಗಿದೆ. ರಾಜರ ಒತ್ತಾಸೆ, ಶಿಲ್ಪಿಗಳ ಉತ್ತಮ ಕುಸುರಿಯಿಂದಾಗಿ ಚೊಚ್ಚಲ ದೇಗುಲ ಮನಮೋಹಕ ರೂಪ ಪಡೆದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಒಂಭತ್ತು ಗೋಪುರ, ಒಂಭತ್ತು ಕಳಸ, ಒಂಭತ್ತು ಲಾಂಛನ ಹೊಂದಿರುವ ಏಕೈಕ ದೇಗುಲ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಒಂದೇ ದೇಗುಲದೊಳಗೆ ನಾಲ್ಕು ಗರ್ಭಗುಡಿ ಇರುವ ಚತುಷ್ಕೂಟ ದೇವಾಲಯ ಎಂಬ ವಿಶೇಷತೆ ಒಂದೆಡೆಯಾದರೆ, ಮಹಾಕಾಳಿ ಎದುರಾಗಿ ಆಕೆಯ ಸಹೋದರ ಮಹಾವಿಷ್ಣು, ಮಹಾಲಕ್ಷ್ಮಿಗೆ ಎದುರಾಗಿ ಆಕೆಯ ಅಣ್ಣ ಈಶ್ವರನನ್ನ ಪ್ರತಿಷ್ಠಾಪಿಸಲಾಗಿದೆ.

  ಶಾಂತ ಸ್ವರೂಪಿಣಿ ಮಹಾಕಾಳಿ

  ಕಲ್ಕತ್ತಾದಲ್ಲಿ ಉಗ್ರ ಸ್ವರೂಪಿಣಿ ಮಹಾಕಾಳಿ ಮೂರ್ತಿ ಇದ್ದರೆ, ಹಾಸನದಲ್ಲಿ ನೆಲೆಗೊಂಡಿರುವುದು ಶಾಂತ ಸ್ವರೂಪಿಣಿ ಮಹಾಕಾಳಿ. ಕೊಲ್ಲಾಪುರದ ಸಾಕ್ಷಾತ್ ಮಹಾಲಕ್ಮಿ ರೂಪವನ್ನೇ ಇಲ್ಲೂ ಕಾಣಬಹುದು ಎಂಬುದು ಭಕ್ತರ ಮಾತಾಗಿದೆ. ಕೈಯಲ್ಲಿ ಗದೆ ಹಿಡಿದು ನಿಂತ ಭಂಗಿಯಲ್ಲಿರುವ ಮಹಾಲಕ್ಷ್ಮಿ ಇಲ್ಲಿನ ಮತ್ತೊಂದು ವಿಶೇಷ. ಇಂತಹ ದೇವಾಲಯ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದ್ದು, ಒಂದಲ್ಲ ಒಂದು ಆರೋಪ ಸುತ್ತಿಕೊಳ್ಳುತ್ತಲೇ ಇವೆ. ಕಳೆದ ವರ್ಷ ನ. 21 ರಂದು ರಾತ್ರಿ ನಿಧಿ ಆಸೆಗಾಗಿ ಕಿಡಿಗೇಡಿಗಳು ಮಹಾಕಾಳಿ ವಿಗ್ರಹವನ್ನು ಭಗ್ನಗೊಳಿಸಿದ್ದರು. ಇದೇ ದೇವಾಲಯದಲ್ಲಿ ನೂರಾರು ವರ್ಷಗಳ ಹಿಂದಿನ ಎರಡು ವಿಗ್ರಹ ಕಳ್ಳತನವಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿತ್ತು. ಆದರೂ ಯಾವುದೇ ಕುರುಹು ಸಿಗದ ಹಿನ್ನೆಲೆಯಲ್ಲಿ ವಿಗ್ರಹಕ್ಕೆ ಅಲಂಕರಿಸಿದ್ದ ಹೂವಿನ ಭಾರದಿಂದ ಪೀಠ ಬಿದ್ದಿರಬಹುದು ಎಂಬ ತೀರ್ಮಾನಕ್ಕೆ ಬಂದು ಚೆನ್ನೈನಿಂದ ಶಿಲ್ಪಿಗಳನ್ನು ಕರೆಸಿ ಮರುಜೋಡಣೆ ಮಾಡಿ ಮತ್ತೆ ವಿಗ್ರಹವನ್ನು ಪ್ರತಿಷ್ಠಾಪಿಸಿತು.

  ಮಹಾಕಾಳಿ ದೇವಸ್ಥಾನ


  ಮಹಾಕಾಳಿಗೆ  ದಿಗ್ಬಂಧನ

  ಶತಮಾನಗಳಿಂದ ಹಿಂದೂ ಧಾರ್ಮಿಕ ಪರಂಪರೆಯನ್ನು ಸಾರುವ ಪುರಾತನ ದೇಗುಲದ ದುರಸ್ತಿ ಮಾಡದೆ ಇರುವುದು ಭಕ್ತರು ಹಾಗೂ ಸ್ಥಳೀಯ ಅಸಮಾಧಾನಕ್ಕೆ ಕಾರಣವಾಗಿದೆ. ಈ ಎಲ್ಲಾ ಘಟನೆಗಳು ಕಳೆದು ವರ್ಷ ಸಮೀಪಿಸುತ್ತಿದ್ದರೂ ಪೂಜಾ ಕೈಂಕರ್ಯ ಆರಂಭವಾಗಿಲ್ಲ. ಕೋಲ್ಕತ್ತಾ ಬಿಟ್ಟರೆ ಹಾಸನದಲ್ಲಿ ಮಾತ್ರ ಇರುವ ಮಹಾಕಾಳಿ ವಿಗ್ರಹವನ್ನ ಗರ್ಭಗುಡಿಯಲ್ಲಿಟ್ಟು ದಿಗ್ಬಂಧನ ಹೇರಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದೆ.

  ಪೂಜೆ ಇಲ್ಲ ಪುನಸ್ಕಾರವಿಲ್ಲ

  ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳು ಗರ್ಭಗುಡಿಗೆ ಬೀಗ ಹಾಕಿ ಹೋಗಿದ್ದು ಬಿಟ್ಟರೆ ವರ್ಷದಿಂದ ಮೂರ್ತಿಗೆ ಪೂಜೆ, ಪುನಸ್ಕಾರ ಮಾಡಲು ಅವಕಾಶ ಕೊಟ್ಟಿಲ್ಲ. ಇಷ್ಟೆಲ್ಲಾ ಹಿರಿಮೆ ಗರಿಮೆ ಹೊಂದಿರುವ ಅಪರೂಪದ ದೇವಾಲಯದೊಳಗಿನ ವಿಗ್ರಹಗಳಿಗೆ ಹಾನಿಯಾಗುತ್ತಿರುವುದು,  ಕಳ್ಳತನವಾಗುತ್ತಿರುವುದು ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿಯೇ ಇರುವವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಮಹಾಕಾಳಿ ವಿಗ್ರಹಕ್ಕೆ ಹಾನಿಯಾದ ನಂತರ ಎಚ್ಚೆತ್ತ ಪುರಾತತ್ವ ಇಲಾಖೆ, ಇದೀಗ ಸಿಸಿ ಕ್ಯಾಮೆರಾ ಅಳವಡಿಸಿ ಹೊಸ ಬಾಗಿಲುಗಳನ್ನೂ ನಿರ್ಮಿಸಲಾಗಿದೆ.

  ವಿಗ್ರಹ ಹಾಳಾಗಿರುವುದು


  ಇದಾದ ಬಳಿಕ ಮಹಾಕಾಳಿ ನೆಲೆಸಿರುವ ಗರ್ಭಗುಡಿ ಬಾಗಿಲು ಶಾಶ್ವತವಾಗಿ ಬಂದ್ ಆಗಿದೆ. ವಿಗ್ರಹ ಮರುಜೋಡಣೆ ನಂತರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ರಾಜ್ಯ ಧಾರ್ಮಿಕ ಪರಿಷತ್‌ನ ಆಗಮಿಕರ ತಂಡ, ಯಾವುದೇ ವಿಗ್ರಹದ ಪ್ರಮುಖ ಅಂಗ ಭಗ್ನವಾದರೆ ಅದು ಮರು ಪೂಜೆಗೆ ಯೋಗ್ಯವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  ಇದನ್ನು ಓದಿ: ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾಯ್ತು ಯುವತಿಯ 30 ಸೆಕೆಂಡ್ ಡ್ಯಾನ್ಸ್ ವಿಡಿಯೋ- ಏನಿದು ವಿವಾದ?

  ಭಕ್ತರ ಆಕ್ರೋಶ

  ಇದಾದ ನಂತರ ಹೊಸ ವಿಗ್ರಹ ನಿರ್ಮಿಸಿ ನಿತ್ಯ ಪೂಜೆಗೆ ಅವಕಾಶ ನೀಡಬಹುದು ಎನ್ನಲಾಗಿತ್ತು. ಆದರೆ ಈವರೆಗೂ ಯಾವುದೇ ಬೆಳವಣಿಗೆ ಆಗಿಲ್ಲ. ಹೊಸ ವಿಗ್ರಹವೂ ನಿರ್ಮಾಣವಾಗಿಲ್ಲ, ಹಳೇ ವಿಗ್ರಹಕ್ಕೂ ಪೂಜೆ ನೆರವೇರುತ್ತಿಲ್ಲ. ಪುರಾತತ್ವ ಇಲಾಖೆ ಕೊಕ್ಕೆಯಿಂದ ಯಾವುದೂ ಕೆಲಸ ಆಗುತ್ತಿಲ್ಲ ಎಂಬುದು ಭಕ್ತರ ಆರೋಪವಾಗಿದೆ. 907 ವರ್ಷಗಳಿಂದ ಪೂಜಿಸ್ಪಡುತ್ತಿದ್ದ ಮಾಹಾಕಾಳಿಗೆ ಅಲಂಕಾರ, ಅಭಿಷೇಕ ಇಲ್ಲದೆ ಗರ್ಭಗುಡಿಯೊಳಗೆ ಬಂಧಿಯಾಗಿದ್ದಾಳೆ. ಇನ್ನಾದರೂ ಸರ್ಕಾರ ಹಾಗೂ ಕೇಂದ್ರ ಪುರಾತತ್ವ ಇಲಾಖೆ ಇತ್ತ ಗಮನಹರಿಸಿ, ದೇವರ ವಿಗ್ರಹ ಮರುಸ್ಥಾಪನೆ ಮಾಡಿ ಕಾಳಿಮಾತೆಯ ಪೂಜೆಗೆ ಅವಕಾಶ ಕಲ್ಪಿಸಬೇಕೆಂದು ಭಕ್ತರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
  (ಶಶಿಧರ್.ಬಿ.ಸಿ.)
  Published by:Seema R
  First published: