ಹಾಸನ(ನ.04): ಈ ಮಹಾಮಾರಿ ಕೊರೋನಾ ಈ ವರ್ಷ ಜನರ ಎಲ್ಲಾ ಖುಷಿ ಮತ್ತು ಸಂಭ್ರಮವನ್ನು ಕಸಿದುಕೊಂಡಿದೆ. ಪ್ರತೀ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಹಬ್ಬಗಳು ಕೊರೋನಾ ಕಾರಣದಿಂದ ಕಳೆಗುಂದಿವೆ. ನಾಡಹಬ್ಬ ದಸರಾ ಕೂಡ ಸರಳವಾಗು ನಡೆದೇ ಹೋಯಿತು. ಇನ್ನು ಈ ಕೊರೋನಾ ಎಫೆಕ್ಟ್ ಹಾಸನದ ಹಾಸನಾಂಬೆ ದರ್ಶನಕ್ಕೂ ತಟ್ಟಿದೆ. ಹೌದು, ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನ ಜಿಲ್ಲೆಯ ಶಕ್ತಿದೇವತೆ ಹಾಸನಾಂಬೆ ಈ ಬಾರಿ ಸಾರ್ವಜನಿಕರಿಗೆ ದರ್ಶನ ನೀಡುತ್ತಿಲ್ಲ. ಕೊರೋನಾ ಹಿನ್ನೆಲೆ ಈ ಬಾರಿ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ. ಈ ವರ್ಷ ನವೆಂಬರ್ 5ರಿಂದ 15ರವರೆಗೆ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಿದೆ.
ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬ ದೇಗುಲಕ್ಕೆ ರಾಜ್ಯ ಮಾತ್ರವಲ್ಲದೇ, ವಿವಿಧ ಕಡೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಕೊರೋನಾ ಹಿನ್ನೆಲೆ, ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಇಲ್ಲ. ದೇವಾಲಯದ ಬಾಗಿಲು ತೆರೆಯುವ ಮೊದಲ ದಿನ ಮತ್ತು ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾತ್ರ ಹಾಸನಾಂಬ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ.ಉಳಿದಂತೆ ಹಾಸನಾಂಬ ದೇವರ ದರ್ಶನಕ್ಕೆ ಇನ್ಯಾರಿಗೂ ಅವಕಾಶವಿಲ್ಲ.
ಹಾಸನಾಂಬ ದೇವಿಗೆ ಸಲ್ಲುವ ಪೂಜೆ ವೀಕ್ಷಿಸಲು ಅನುಕೂಲವಾಗುವಂತೆ ಸಾರ್ವಜನಿಕರಿಗೆ ಹಾಸನ ನಗರದ 10 ಕಡೆ ಎಲ್‌ಇಡಿ ಪರದೆ ಅಳವಡಿಕೆ ಮಾಡಲಾಗಿದೆ. hasanambalive2020 ಎಂದು ಸರ್ಚ್ ಮಾಡುವ ಮೂಲಕ ಯೂಟ್ಯೂಬ್‌ನಿಂದ ಪೂಜೆಯ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಈ ಬಾರಿ ಪ್ರಸಾದದ ವ್ಯವಸ್ಥೆ ಕೂಡ ಇರುವುದಿಲ್ಲ.
ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ, ಇದು ಸೂರ್ಯ-ಚಂದ್ರ ಇರೋವರೆಗೂ ಸತ್ಯ; ಬಿಜೆಪಿ ಅಭ್ಯರ್ಥಿ ಮುನಿರತ್ನ
ಕಳೆದ ವರ್ಷ ಸುಮಾರು 5 ಲಕ್ಷ ಜನ ನೇರವಾಗಿ ಹಾಸನಾಂಬೆ ದರ್ಶನ ಪಡೆದಿದ್ದರು. ಅಂದರೆ ಕಳೆದ ವರ್ಷ ಪ್ರತಿ ದಿನ ಸುಮಾರು 50 ಸಾವಿರ ಭಕ್ತರು ದೇವರ ದರ್ಶನ ಪಡೆದು ಪುನೀತರಾಗಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚು ಜನ ಬಂದರೆ ನಿಯಂತ್ರಿಸುವುದು ಕಷ್ಟ ಸಾಧ್ಯ ಎಂದು ಭಕ್ತರ ದರ್ಶನಕ್ಕೆ ಅವಕಾಶ ನೀಡಿಲ್ಲ.
ಹಾಸನಾಂಬ ದೇವಾಲಯದ ಬಾಗಿಲು ವರ್ಷಕ್ಕೊಮ್ಮೆ ತೆಗೆದರೂ, ಹಾಸನಾಂಬ ದೇವಿ ಹಲವಾರು ಪವಾಡಕ್ಕೆ ಹೆಸರು ವಾಸಿಯಾಗಿದೆ. ದೇವಾಲಯದ ಬಾಗಿಲು ಹಾಕುವಾಗ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆದಾಗಲೂ ಆರಿರುವುದಿಲ್ಲ. ದೇವರಿಗೆ ಮುಡಿಸಿದ ಹೂವು ಬಾಡಿರುವುದಿಲ್ಲ, ದೇವರ ನೈವೇದ್ಯಕ್ಕೆ ಇಟ್ಟ ಅನ್ನ ಹಳಸಿರುವುದಿಲ್ಲ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ