ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಕಠಿಣ ಪರಿಶ್ರಮವೊಂದೇ ದಾರಿ

ನಿಮಗೆ ಒಂದು ವಿಷಯದಲ್ಲಿ ಮಾಡಿರುವ ಸಿದ್ಧತೆ ಮೇಲೆ ವಿಶ್ವಾಸವಿದ್ದು ಮತ್ತೊಂದು ವಿಷಯದಲ್ಲಿ ಸಿದ್ಧತೆ ಸಾಲದು ಎನಿಸಿದರೆ , ಕಡಿಮೆ ವಿಶ್ವಾಸವಿರುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಒಂದು ವಿಷಯವನ್ನು ಓದುವಾಗ ಮುಖ್ಯಾಂಶಗಳನ್ನು ಒಂದೆಡೆ ಗುರುತು ಹಾಕಿಕೊಳ್ಳಿ. ಈ ಟಿಪ್ಪಣಿ ನಿಮಗೆ ಮುಂದೆ ಸಹಾಯವಾಗುತ್ತದೆ. ವಿಷಯವನ್ನು ಕಂಟಪಾಠ ಮಾಡುವ ಬದಲು ಅದರ ಮುಖ್ಯಾಂಶ ಅಥವಾ ತಿರುಳನ್ನು ಗ್ರಹಿಸಿ .

ನಿರಂಜನಾರಾಧ್ಯ.

ನಿರಂಜನಾರಾಧ್ಯ.

  • Share this:
ನನ್ನ ಹಿಂದಿನ ಬರಹದಲ್ಲಿ ಪರೀಕ್ಷೆ ಎಂದರೇನು,ಅದರ ಅನಿವಾರ್ಯತೆ ,ಅದಕ್ಕಿರುವ ಚೌಕಟ್ಟು ಮತ್ತು ಪರೀಕ್ಷೆಯನ್ನು ಎದುರಿಸುವ ವಿಧಾನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ/ನಿಯ ಸಾಮರ್ಥ್ಯ ಭಿನ್ನವಾಗಿರುತ್ತದೆ ಎಂದು ಚರ್ಚಿಸಿದ್ದೆ. ಈ ಲೇಖನದಲ್ಲಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಎದುರಿಸುವ ಕೆಲವು ಕ್ರಮಗಳ ಬಗ್ಗೆ ಚರ್ಚಿಸೋಣ

ಕ್ರಮಬದ್ಧತೆ –ನಿರಂತರತೆಯಿದ್ದರೆ ಪರೀಕ್ಷೆ ಬರೆಯುವುದು ದೊಡ್ಡ ವಿಷಯವೇನಲ್ಲ!

ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಕ್ರಮಬದ್ಧವಾಗಿ ಮತ್ತು ನಿರಂತರವಾಗಿ ಓದುತ್ತಾ ಬಂದವರಿಗೆ ಪರೀಕ್ಷೆ ಬರೆಯುವುದು ದೊಡ್ಡ ವಿಷಯವೇನಲ್ಲ. ಆದರೆ, ಸಾಮಾನ್ಯವಾಗಿ ಚಿಕ್ಕವರು-ದೊಡ್ಡವರೆನ್ನದೆ, ಬಹುತೇಕ ಮನುಷ್ಯ ಜೀವಿಗಳು ಸಾಮಾನ್ಯ ಗುಣವೆಂದರೆ ,ಪರಿಸ್ಥಿತಿ/ಸಂದರ್ಭ ಎದುರಾದಾಗ ಮಾತ್ರ ಸಿದ್ಧತೆ ಮಾಡಿಕೊಳ್ಳುವ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ.

ಒಂದು ಸರಳ ಉದಾಹರಣೆಗೆ ಹೇಳುವುದಾದರೆ, ನಾವು ಜೂನ್ ಮೊದಲದ ವಾರದಲ್ಲಿ ದೂರದ ನವದೆಹಲಿಗೆ ಸಮಾರಂಭವೊಂದರಲ್ಲಿ ಭಾಗವಹಿಸಲು ಹೋಗಬೇಕಾಗಿದೆ ಎಂದು ಭಾವಿಸೋಣ .ಜೂನ್ ನಲ್ಲಿ ಪ್ರಯಾಣಿಸುವ ಸಿದ್ಧತೆಯ ಭಾಗವಾಗಿ ಇಂದೇ ನಮ್ಮ ಪ್ರಯಾಣದ ರೈಲು ಟಿಕೆಟ್ಟನ್ನು ಕಾದಿರಿಸುವ ಕ್ರಮಕ್ಕೆ ಮುಂದಾದರೆ ನಾವು ಬಯಸುವ ದರ್ಜೆ,ಬೇಕಾದ ಆಸನ ,ಬೋಗಿ ಇತ್ಯಾದಿಗಳೆಲ್ಲವೂ ಹೆಚ್ಚು ಖರ್ಚಿಲ್ಲದೆ ನಿಗದಿತ ದರದಲ್ಲಿ ಸುಲಭವಾಗಿ ದೊರೆಯುತ್ತದೆ.

ಹೀಗೆ, ಮಾಡುವ ಬದಲು ಪ್ರಯಾಣದ ಮುನ್ನಾದಿನ ಸೀಟು ಕಾದಿರಸಲು ಹೋದರೆ ನಾವು ಬಯಸುವ ದರ್ಜೆ,ಬೇಕಾದ ಆಸನ ಇತ್ಯಾದಿ ಸಿಗುವುದಿರಲಿ, ದುಪ್ಪಟು ಹಣ ವ್ಯಯಿಸಿದರೂ ಅವರು ನೀಡುವ ಆಸನಕ್ಕೆ ಒಪ್ಪಿಕೂರಬೇಕಾಗುತ್ತದೆಯಲ್ಲದೆ ಒಟ್ಟು ಪ್ರಕ್ರಿಯೆ ನಮ್ಮಲ್ಲಿ ಆತಂಕ ಮತ್ತು ಒತ್ತಡವನ್ನು ಸೃಷ್ಟಿಸುತ್ತದೆ. ಇದನ್ನೇ ನಾವು ಪೂರ್ವಯೋಜಿತ ಸಿದ್ಧತೆ ಎಂದು ಕರೆಯುವುದು .

ಪೂರ್ವಯೋಜಿತ ಸಿದ್ಧತೆ-ಪರಿಶ್ರಮ ಸಂತೋಷ,ನೆಮ್ಮದಿ ಮತ್ತು ತೃಪ್ತಿಯನ್ನು ತಂದುಕೊಟ್ಟರೆ , ಸಿದ್ಧತೆಯಿಲ್ಲದ ಅರಾಜಕತೆಯ ಬದುಕು ಆತಂಕ ಭಯ ಸೃಷ್ಟಿಸಿ ನೆಮ್ಮದಿ ಕಸಿಯುತ್ತದೆ. ಒಟ್ಟಾರೆ, ಕೊನೇ ಗಳಿಗೆಯ ಯಾವುದೇ ಕೆಲಸ ನಮ್ಮನ್ನು ಆತಂಕ, ಉನ್ಮಾದ ಮತ್ತು ಖಿನ್ನತೆಗೆ ದೂಡುತ್ತದೆ.

ಆದರೆ , ನೀವು ಇದಕ್ಕೆ ಹೊರತು ಎಂದು ನನಗೆ ಗೊತ್ತು. ಖಂಡಿತವಾಗಿ ತಾವೆಲ್ಲರೂ ಪ್ರಾರಂಭದಿಂದಲೂ ಕಠಿಣ ಪರಿಶ್ರಮ ಹಾಕುತ್ತಲೇ ಬಂದಿದ್ದೀರಿ ಎಂಬುದು ನನ್ನ ನಂಬಿಕೆ . ಯಶಸ್ಸು ತಮಗೆ ಕಟ್ಟಿಟ್ಟ ಬುತ್ತಿ. ಆದರೆ, ತಮ್ಮ ಈ ಒಂದು ವರ್ಷದ ಪರಿಶ್ರಮ ಸಾರ್ಥಕವಾಗಬೇಕಾದರೆ “ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕೂರಿದಂತಾಗುವುದು ಬೇಡ” ಎಂಬ ಆಶಯದಿಂದ ಮಾತ್ರ ಈ ಒತ್ತಾಸೆಯ ಮಾತುಗಳನ್ನು ಹೇಳುತ್ತಿದ್ದೇನೆ .

ಯಶಸ್ಸಿಗೆ ಅಡ್ಡ ದಾರಿಗಳಿಲ್ಲ –ಕಠಿಣ ಪರಿಶ್ರಮವೊಂದೇ ದಾರಿ!

ಸಾಮಾನ್ಯವಾಗಿ ಜಗತ್ತಿನಲ್ಲಿ ಯಶಸ್ಸುಗಳಿಸಿದ ಎಲ್ಲರೂ ಬಳಸಿದ ಮಾರ್ಗವೆಂದರೆ ಕಠಿಣ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಪ್ರಯತ್ನ. ಇದು ಶ್ರಮಿಕ,ಶ್ರಮಿಕನಲ್ಲದ ಉದ್ಯೋಗಿ, ರೈತ ,ವಿಜ್ಞಾನಿ, ಗಗನಯಾನಿ, ರಾಜಕಾರಣಿ , ಕ್ರೀಡಾಪಡು ಇತ್ಯಾದಿ ರಂಗಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲರಿಗೂ ಅನ್ವಯಿಸುತ್ತದೆ.

ಹಲವರು ಜೀವನದಲ್ಲಿ ಯಶಸ್ಸು ಸಾಧಿಸಲು ಅವರು ಅನುಸರಿಸಿದ ತತ್ವ ಅಥವಾ ಕ್ರಮ ಅವರಿಗೆ ನಿರೀಕ್ಷಿತ ಯಶಸ್ಸು ದೊರಕಿಸಿದೆಯೆಂದರೆ, ಅದು ನನಗೂ –ನಿನಗೂ ಕೂಡ ಅನ್ವಯಿಸುತ್ತದೆಯಲ್ಲವೇ? ನಮ್ಮ ಕಲಿಕೆಯ ಭಾಗವಾಗಿ ಪರೀಕ್ಷೆ ನಾವು ಎಷ್ಟು ಕಲಿತ್ತಿದ್ದೇವೆಯೆಂದು ಅಳೆದು ನಿರ್ಧರಿಸುವ ಒಂದು ಸಾಧನವೆಂದಾದರೆ , ಅದನ್ನು ಎದುರಿಸಲು ಭಯ-ಅಂತಂಕವೇಕೆ? ಕಠಿಣ ಪರಿಶ್ರಮ ಸಾಕಲ್ಲವೇ!

ಹೀಗಾಗಿ,ಅಡ್ಡದಾರಿಗಳಾದ ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಪಡೆಯಬಹುದೆಂದಾಗಲಿ, ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳ ಮಾಹಿತಿ ಮೊದಲೇ ದೊರೆಯುತ್ತದೆಯೆಂದಾಗಲಿ, ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶವಿರುತ್ತದೆಯೆಂದಾಗಲಿ, ಪರೀಕ್ಷೆಯ ನಂತರ ಮೌಲ್ಯಮಾಪನ ಸಂದರ್ಭದಲ್ಲಿ ವಾಮ ಮಾರ್ಗದ ಮೂಲಕ ಹಣ ಖರ್ಚು ಮಾಡಿ ಹೆಚ್ಚು ಅಂಕ ಪಡೆಯುವ ಸಾಧ್ಯತೆಗಳಿರುತ್ತವೆಯೆಂಬ ಊಹಾಪೋಹಗಳ ಬಗ್ಗೆ ಯೋಚಿಸುವುದಾಗಲಿ ,ಮಾತನಾಡುವುದಾಗಲಿ ಅಥವಾ ಮಾತನಾಡುವವರ ಜೊತೆ ಸೇರುವುದಾಗಲಿ ನಮಗಿರುವ ಅಮೂಲ್ಯವಾದ ಸಮಯವನ್ನು ಹಾಳುಮಾಡಬಹುದೇ ಹೊರತು ಯಶಸ್ಸನ್ನು ತಂದುಕೊಡುವುದಿಲ್ಲವೆಂಬ ದೃಢ ನಂಬಿಕೆಯಿಂದ ಸಿದ್ಧತೆ ಪ್ರಾರಂಭಿಸೋಣ.

ನಮಗಿರುವ ಸಮಯವೆಷ್ಟು? ಏನನ್ನು ಮಾಡಬಹುದು ?

ನಮ್ಮ ಪರೀಕ್ಷಾ ಸಿದ್ಧತೆಯ ಭಾಗವಾಗಿ ನಾವು ಕೆಲವು ವಿಷಯಗಳನ್ನು ಯೋಚಿಸಿ ತೀರ್ಮಾನಿಸಬೇಕಾಗುತ್ತದೆ. ನೀವು 10ನೇ ತರಗತಿಯ ಅಂತಿಮ ಮಂಡಳಿ ಪರೀಕ್ಷೆ ಬರೆಯುತ್ತಿದ್ದರೆ , ಸಾಮಾನ್ಯವಾಗಿ ಎಲ್ಲಾ ವಿಷಯಗಳಿಗೆ ಸಮಾನ ಒತ್ತು ನೀಡಿ ಸಿದ್ಧತೆ ನಡೆಸಬೇಕಾಗುತ್ತದೆ . ಕಾರಣ ,11 ನೇತರಗತಿ ಅಥವಾ ಪ್ರಥಮ ಪದವಿ-ಪೂರ್ವ ಶಿಕ್ಷಣಕ್ಕೆ ಪ್ರವೇಶ ನಾವು ಅಂತಿಮ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮುಖ್ಯವಾಗುತ್ತದೆ. ಇದೇ ರೀತಿ, ನೀವು 12ನೇ ತರಗತಿ ಅಥವಾ ದ್ವಿತೀಯ ಪದವಿ-ಪೂರ್ವ ಪರೀಕ್ಷೆ ಬರೆಯುತ್ತಿದ್ದರೆ, ಐಚ್ಛಿಕ ವಿಷಯಗಳಲ್ಲಿ ಗಳಿಸುವ ಅಂಕಗಳು ನೀವು ಬಯಸುವ ವೃತ್ತಿಪರ ಕೋರ್ಸಗಳಿಗೆ ಮತ್ತು ಸಾಮಾನ್ಯ ಕಲೆ , ವಿಜ್ಞಾನ ಮತ್ತು ವಾಣಿಜ್ಯ ಪದವಿಗಳ ಪ್ರವೇಶಕ್ಕೆ ನಿರ್ಣಾಯಕವಾಗುತ್ತವೆ.

ನಿಜ, ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಗಿಂತ ಜ್ಞಾನ ಮತ್ತು ಅನುಭವ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಕಲಿಕೆಯ ಮೂಲ ಉದ್ದೇಶವೇ ಜ್ಞಾನಾರ್ಜನೆ ಮತ್ತು ನಮ್ಮ ಅರಿವು-ತಿಳುವಳಿಕೆಯ ವಿಸ್ತರಣೆ,ಅನ್ವಯ. ಆದರೇನು ಮಾಡುವುದು? ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಗಳಿಸುವ ಅಂಕ ನಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ,ಬಯಸುವ ಉದ್ಯೋಗಕ್ಕೆ ಮತ್ತು ಸಾಮಾಜಿಕವಾಗಿ ಮೇಲ್ಮುಖ ಚಲನೆಗೆ ಅನಿವಾರ್ಯವಾಗಿರುವ ಕಾರಣ ವ್ಯವಸ್ಥೆಯ ಕೆಲವು ಅತಿರೇಕಗಳನ್ನು ಅನಿವಾರ್ಯವಾಗಿ ಒಪ್ಪಿಕೊಂಡೇ ಮುಂದೆ ಹೋಗಬೇಕಾಗುತ್ತದೆ.

ಈ ಎಲ್ಲಾ ವಿಷಯಗಳ ಬಗ್ಗೆ ಯೋಚಿಸಿದ ನಂತರ, ನೀವು ಯಾವ ತರಗತಿ/ಗ್ರೇಡ್ ನಲ್ಲಿ ಕಲಿಯುತ್ತಿದ್ದೀರಿ?, ನಿಮ್ಮ ಪರೀಕ್ಷೆಗಳು ಯಾವಾಗ ಪ್ರಾರಂಭವಾಗಲಿವೆ? ಇಂದಿನಿಂದ ನಿಮಗೆ ಎಷ್ಟು ದಿನಗಳು ದೊರೆಯಲಿವೆ ? ವಿಷಯದಿಂದ ವಿಷಯಕ್ಕೆ ಅಂತರವಿದೆಯೇ ಅಥವಾ ಒಂದಾದ ನಂತರ ಒಂದರಂತೆ ನಿರಂತರವಾಗಿದೆಯೇ? ಇತ್ಯಾದಿ ಅಂಶಗಳನ್ನು ಪರೀಕ್ಷಿಸಿಕೊಳ್ಳಿ. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಒಂದು ಯೋಜನೆ ತಯಾರಿಸಿಕೊಳ್ಳಿ.

ಕಾರ್ಯಸಾಧುವಾದ ಒಂದು ವೇಳಾಪಟ್ಟಿ ತಯಾರಿಸಿಕೊಳ್ಳಿ

ನಿಮಗೆ ಲಭ್ಯವಿರುವ ಸಮಯವನ್ನು ಆಧರಿಸಿ ಒಂದು ಅಚ್ಚುಕಟ್ಟಾದ ವೇಳಾಪಟ್ಟಿ ತಯಾರಿಸಿಕೊಳ್ಳಿ. ಅಗತ್ಯನಿದ್ದೆ , ವಿಶ್ರಾಂತಿ ಮತ್ತು ವಿಷಯದಿಂದ ಮತ್ತೊಂದು ವಿಷಯಕ್ಕೆ ಬದಲಾಯಿಸುವಾಗ ಒಂದು ಸಣ್ಣ ವಿರಾಮ ಇತ್ಯಾದಿಗಳನ್ನು ಅಳವಡಿಸಿಕೊಂಡು ದಿನದಲ್ಲಿ ಕನಿಷ್ಠ ಎಷ್ಟು ಗಂಟೆಗಳ ತಯಾರಿ ನಡೆಸಬಹುದೆಂದು ಅಂದಾಜಿಸಿ ವೇಳಾಪಟ್ಟಿ ತಯಾರಿಸಿಕೊಳ್ಳಿ.ಇದು ಪ್ರಾಯೋಗಿಕವಾಗಿರಲಿ. ಈ ರೀತಿ ತಾವೇ ಯೋಚಿಸಿ ಯೋಜಿಸಿ ತಯಾರಿಸಿಕೊಂಡ ವೇಳಾಪಟ್ಟಿಯಂತೆ ಅಧ್ಯಯನ ಪ್ರಾರಂಭಿಸಿ.ತಡ ಬೇಡ .ಇಂದೇ ಈಗಲೇ ಪ್ರಾರಂಭವಾಗಲಿ.

ನಿಮಗೆ ಒಂದು ವಿಷಯದಲ್ಲಿ ಮಾಡಿರುವ ಸಿದ್ಧತೆ ಮೇಲೆ ವಿಶ್ವಾಸವಿದ್ದು ಮತ್ತೊಂದು ವಿಷಯದಲ್ಲಿ ಸಿದ್ಧತೆ ಸಾಲದು ಎನಿಸಿದರೆ , ಕಡಿಮೆ ವಿಶ್ವಾಸವಿರುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಒಂದು ವಿಷಯವನ್ನು ಓದುವಾಗ ಮುಖ್ಯಾಂಶಗಳನ್ನು ಒಂದೆಡೆ ಗುರುತು ಹಾಕಿಕೊಳ್ಳಿ. ಈ ಟಿಪ್ಪಣಿ ನಿಮಗೆ ಮುಂದೆ ಸಹಾಯವಾಗುತ್ತದೆ. ವಿಷಯವನ್ನು ಕಂಟಪಾಠ ಮಾಡುವ ಬದಲು ಅದರ ಮುಖ್ಯಾಂಶ ಅಥವಾ ತಿರುಳನ್ನು ಗ್ರಹಿಸಿ .

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ,ನಮ್ಮ ಸಿದ್ಧತಾ ಕ್ರಮ ವಿಷಯದಿಂದ ವಿಷಯಕ್ಕೆ ಭಿನ್ನವಾಗಿರುತ್ತದೆ. ಭಾಷಾ ವಿಷಯಗಳಿಗೆ ತಯರಾಗುವ ಸಂದರ್ಭದಲ್ಲಿ ಭಾಷೆಯ ಸ್ಪಷ್ಟ ಬರವಣಿಗೆ, ದೋಷಮುಕ್ತ ಪದ ಪ್ರಯೋಗ, ಭಾಷಾ ಸಾಮರ್ಥ್ಯ ಮತ್ತು ಅದರ ಮೇಲಿನ ಪ್ರಭುತ್ವ ಮತ್ತು ನಾವು ಮಂಡಿಸುವ ವಿಷಯ ಮಂಡನೆಯ ವಿಧಾನ ಮುಖ್ಯವಾಗುತ್ತದೆ. ಪರೀಕ್ಷೆಯಲ್ಲಿನ ಪ್ರಶ್ನೆಗಳು ನಿಮ್ಮ ಭಾಷಾ ಸಾಮರ್ಥ್ಯವನ್ನು ಅಳೆಯುತ್ತವೆ.

ವಿಜ್ಞಾನದ ವಿಷಯಕ್ಕೆ ಬಂದಾಗ, ಪರಿಕಲ್ಪನೆ, ಸಿದ್ಧಾಂತ, ಕಾರಣ ಮತ್ತು ಪರಿಣಾಮ,ಜ್ಞಾನದ ಅನ್ವಯ, ಪ್ರಾಯೋಗಿಕ ಉದಾಹರಣೆ ಇತ್ಯಾದಿಗಳು ಮುಖ್ಯವಾಗುತ್ತವೆ. ಅದರಲ್ಲಿ ಭೌತಶಾಸ್ತ್ರ , ರಸಾಯನ ಶಾಸ್ತ್ರ ಮತ್ತು ಜೀವ ಶಾಸ್ತ್ರ/ವಿಜ್ಞಾನ ಬೇರೆ ಬೇರೆ ಆಯಾಮಗಳನ್ನು ಹೊಂದಿರುತ್ತದೆ. ಗಣಿತದ ವಿಷಯಕ್ಕೆ ಬಂದಾಗ , ಸೂತ್ರ, ಸಮಸ್ಯೆ ಬಿಡಿಸುವ ವಿಧಾನ , ಹೊಸ ಸಂದರ್ಭದಲ್ಲಿ ಕೊಟ್ಟ ಸೂತ್ರವನ್ನು ಅಳವಡಿಸಿ ಸಮಸ್ಯೆ ಬಿಡಿಸುವುದು ಇತ್ಯಾದಿ ಮುಖ್ಯವಾಗುತ್ತದೆ. ಗಣಿತದಲ್ಲಿ ಅಂಕಗಣಿತ, ಬೀಜ ಗಣಿತ, ಜಾಮೆಟ್ರಿ, ಟ್ರಿಗ್ನಾಮೆಟ್ರಿ, ಕ್ಯಾಲ್ಯುಕಸ್ ಇತ್ಯಾದಿಗಳು ಬೇರೆ ಬೇರೆ ಆಯಾಮ ಹೊಂದಿರುತ್ತವೆ.

ಮಾನವಿಕ ಶಾಸ್ತ್ರಕ್ಕೆ ಬಂದಾಗ ಮಾಹಿತಿ, ಕಾಲಾನುಕ್ರಮಣಿಕೆ, ಹೆಸರು , ತರ್ಕ, ಕಾರಣ , ಸಾಧಕ-ಬಾಧಕ, ಸಮಾಜದ ಮೇಲೆ ಆಗಬಹುದಾದ ಪರಿಣಾಮ ಇತ್ಯಾದಿಗಳು ಮುಖ್ಯವಾಗುತ್ತವೆ . ಇಲ್ಲಿ ಪ್ರಸ್ತಾಪಿಸಿದ ಅಂಶಗಳು ಅಥವಾ ಪಟ್ಟಿ ಮಾಡಿದ ವಿಷಯ/ಆಯಾಮಗಳು ಅಂತಿಮವಲ್ಲ. ಕೇವಲ ಉದಾಹರಣೆ ಮಾತ್ರ. ಪ್ರಸ್ತಾಪಿಸಿದ ಉದ್ದೇಶ , ವಿಷಯಗಳ ವಿಸ್ತಾರ ಮತ್ತು ವ್ಯಾಪಕತೆಯನ್ನು ತಮಗೆ ತಿಳಿಸುವ ಉದ್ದೇಶದಿಂದ ಮಾತ್ರ. ಈ ಎಲ್ಲಾ ಅಂಶಗಳು ತಾವು ಕಲಿಯುತ್ತಿರುವ ವಿಷಯಗಳಲ್ಲಿ ಎಷ್ಟು ಆಳವಾಗಿ ಮತ್ತು ವ್ಯಾಪಕವಾಗಿ ಅಡಗಿವೆ ಎಂಬುದನ್ನು ಅಂದಾಜಿಸಿಕೊಳ್ಳಿ.

ನ್ಯೂನತೆಗಳನ್ನು ಬಲವನ್ನಾಗಿಸುವ ಹಾಗು ಬೆದರಿಕೆಗಳನ್ನು ಅವಕಾಶವನ್ನಾಗಿಸುವುದೇ ನಿಮ್ಮ ಯಶಸ್ಸಿನ ಗುಟ್ಟು

ಮೇಲೆ ಚರ್ಚಿಸಿದ ಅಂಶಗಳ ಆಧಾರದ ಮೇಲೆ, ನೀವು ನಿಮ್ಮ ಸಿದ್ಧತೆಯಲ್ಲಿ ಎಲ್ಲಿದ್ದೀರಿ ಎಂದು ಒಂದು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಿ. ಅಂದರೆ, ಪ್ರತಿಯೊಂದು ವಿಷಯದಲ್ಲಿ ನಿಮ್ಮನ್ನು ನೀವು ಸ್ವಾಟ್ (SWOT) ವಿಶ್ಲೇಷಣೆಗೆ ಒಳಪಡಿಸಿಕೊಳ್ಳಿ. SWOT ಎಂದರೆ, ಆ ವಿಷಯದಲ್ಲಿ ನಮ್ಮ ಬಲ(Strengths) , ನ್ಯೂನತೆ (Weaknesses) , ಅವಕಾಶ (Opportunities) ಮತ್ತು ಬೆದರಿಕೆಗಳ (Threats) ಪೂರ್ಣ ಅರಿವು ನಮಗಾಗುತ್ತದೆ. ಇಲ್ಲಿ ಆಯಾ ವಿಷಯದಲ್ಲಿ ತಮಗಿರುವ ನ್ಯೂನತೆಗಳನ್ನು ಬಲವನ್ನಾಗಿಸುವ ಹಾಗು ಬೆದರಿಕೆಗಳನ್ನು ಅವಕಾಶಗಳನ್ನಾಗಿಸಿಕೊಳ್ಳುವುದೇ ನಿಮ್ಮ ಯಶಸ್ಸಿನ ಗುಟ್ಟು.

ಹಿಂದಿನ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಅವಲೋಕಿಸಿ
ನೀವು ಪಬ್ಲಿಕ್/ಮಂಡಳಿ ಪರೀಕ್ಷೆ ಬರೆಯುತ್ತಿರುವುದರಿಂದ , ಹಿಂದಿನ ವರ್ಷಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಸಿಗುತ್ತವೆ. ಅವುಗಳನ್ನು ಒಮ್ಮೆ ಪರಿಶೀಲಿಸಿದರೆ ನಿಮಗೆ ಆಯಾ ವಿಷಯದಲ್ಲಿ ಪ್ರಶ್ನೆ ಪತ್ರಿಕೆಯ ಸ್ವರೂಪ ,ನಮೂನೆ , ಅಂಕಗಳ ಹಂಚಿಕೆ ಮತ್ತು ಯಾವ ಬಗೆಯ ಪ್ರಶ್ನೆಗಳು ಬರಬಹುದೆಂಬ ಕಲ್ಪನೆ ಬರುತ್ತದೆ. ಈ ಅಂಶಗಳ ಆಧಾರದಲ್ಲಿ ತಾವು ವಿಷಯವಾರು ಸಿದ್ಧತೆ ಮಾಡಿಕೊಂಡು ಯಾವ ಪ್ರಶ್ನೆಗೆ ಯಾವ ರೀತಿಯ ಉತ್ತರ ಬರೆಯಬಹುದೆಂದು ತಿಳಿಯಲು ಮತ್ತು ಆಭ್ಯಾಸ ಮಾಡಲು ಸಹಾಯವಾಗುತ್ತದೆ.

ಪಬ್ಲಿಕ್/ಮಂಡಳಿ ಪರೀಕ್ಷೆಗಳ ವೇಳಾಪಟ್ಟಿ ಮೊದಲೇ ಪ್ರಕಟಗೊಂಡು ಯಾವ ವಿಷಯಗಳ ಪರೀಕ್ಷೆ ಎಂದು ಮತ್ತು ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಅಂತರವಿದೆಯೆ ಇತ್ಯಾದಿ ವಿಚಾರಗಳು ಮೊದಲೇ ತಿಳಿಯುವುದರಿಂದ ತಾವು ತಮ್ಮ ಸಿದ್ಧತೆಯನ್ನು ಅದಕ್ಕನುಗುಣವಾಗಿ ರೂಪಿಸಿಕೊಳ್ಳಬಹುದು. ಕಡಿಮೆ ಅಂತರವಿರುವ ವಿಷಯಗಳನ್ನು ಪರೀಕ್ಷೆಗೆ ಮುನ್ನ ತಮಗಿರುವ ಸಮಯದಲ್ಲಿ ಹೆಚ್ಚಿನ ಗಮನವಿರಿಸಿ ಆಧ್ಯಯನ ಮಾಡಿ ಅಧ್ಯಾಯವಾರು ಟಿಪ್ಪಣಿ ಮಾಡಿಕೊಂಡರೆ, ಪರೀಕ್ಷೆಯ ಮುನ್ನಾದಿನ ಹೆಚ್ಚಿನ ಒತ್ತಡ ಆತಂಕವಿಲ್ಲದೆ ಮನನ ಮಾಡಿಕೊಳ್ಳಬಹುದು.

ಹೆಚ್ಚಿನ ಸಮಯವಿರುವ ವಿಷಯಗಳನ್ನು ಪರೀಕ್ಷೆಗೆ ಮುನ್ನ ಒಮ್ಮೆ ಸಂಪೂರ್ಣವಾಗಿ ಓದಿಕೊಂಡರೆ , ಪರೀಕ್ಷಾ ಸಂದರ್ಭದಲ್ಲಿಯೂ ಸಮಯ ಸಿಗುವುದರಿಂದ ಆತಂಕವಿಲ್ಲದೆ ಪರೀಕ್ಷೆ ಎದುರಿಸಬಹುದು.ಒಟ್ಟಾರೆ , ವ್ಯವಸ್ಥಿತ ಯೋಜನೆ, ಸಿದ್ಧತೆ ಮತ್ತು ಓದಿದ್ದೇನೆಂಬ ಆತ್ಮಸ್ಥೈರ್ಯ ತಮ್ಮನ್ನು ಪರೀಕ್ಷೆಗಳನ್ನು ಸರಾಗವಾಗಿ ಎದುರಿಸಲು ಅಣಿಗೊಳಿಸುವುದಲ್ಲದೆ ಆತಂಕ ಭಯದ ಬದಲು ನಿಮ್ಮಲ್ಲಿ ಕ್ರೀಡೋತ್ಸಾಹವನ್ನು ತುಂಬುತ್ತದೆ. ಸೋಲು-ಗೆಲುವಿಗಿಂತ ಪ್ರಾಮಾಣಿಕ ಪ್ರಯತ್ನ ಮುಖ್ಯ.ಪರಿಶ್ರಮ-ಪ್ರಯತ್ನವಿದ್ದಲ್ಲಿ ಫಲಿತಾಂಶದ ಹಿಂದೆ ನಾವು ಓಡುವ ಬದಲು ಫಲಿತಾಂಶ ನಮ್ಮ ಹಿಂದೆ ಓಡುತ್ತದೆ. ನಿಮ್ಮೆಲ್ಲರಿಗೂ , ಒಳ್ಳೆಯದಾಗಲಿ! ಆಲ್ ದ ವೆರಿ ಬೆಸ್ಟ್ !

ಬರಹಗಾರರು

ನಿರಂಜನಾರಾಧ್ಯ .ವಿ.ಪಿ
ಹಿರಿಯ ಫೆಲೋ ಹಾಗು ಮುಖ್ಯಸ್ಥರು
ಸಮಾನ ಗುಣಮಟ್ಟದ ಶಿಕ್ಷಣ ಸಾರ್ವತ್ರೀಕರಣ ಕಾರ್ಯಕ್ರಮ
ಮಗು ಮತ್ತು ಕಾನೂನು ಕೇಂದ್ರ
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ
First published: