ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳ ಕಿರುಕುಳ; ಕ್ರಮಕ್ಕೆ ಒತ್ತಾಯಿಸಿ ಎಎಪಿಯಿಂದ ಪರೀಕ್ಷಾ ಮಂಡಳಿ ಮುತ್ತಿಗೆ!

ಶುಲ್ಕ ಪಾವತಿ ಮಾಡದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶ ಪತ್ರ ನೀಡದೇ ಸತಾಯಿಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿ ಎಎಪಿಯ ನೂರಾರು ಕಾರ್ಯಕರ್ತರು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಚೇರಿಗೆ ಇಂದು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಮನವಿ ಪತ್ರ ಸಲ್ಲಿಸಿದ ಎಎಪಿ ಕಾರ್ಯಕರ್ತರು.

ಮನವಿ ಪತ್ರ ಸಲ್ಲಿಸಿದ ಎಎಪಿ ಕಾರ್ಯಕರ್ತರು.

  • Share this:
    ಬೆಂಗಳೂರು (ಜುಲೈ 14): ಆನ್​ಲೈನ್ ಶಿಕ್ಷಣಕ್ಕೆ ಅಧಿಕ ಹಣ ವಸೂಲಿ ಮಾಡುತ್ತಿರುವ ಮತ್ತು ಶುಲ್ಕ ಪಾವತಿ ಮಾಡದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶ ಪತ್ರ ನೀಡದೇ ಸತಾಯಿಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿ ಎಎಪಿಯ ನೂರಾರು ಕಾರ್ಯಕರ್ತರು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಚೇರಿಗೆ ಇಂದು ಮುತ್ತಿಗೆ ಹಾಕಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಅನ್ಯಾಯವೆಸಗುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮನವಿ ಪತ್ರವನ್ನೂ ನೀಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರಿನ ಮಲ್ಲೇಶ್ವರಂ ವೃತ್ತದ ಸಮೀಪವಿರುವ ಮಂಡಳಿಯ ಕಚೇರಿಯ ಎದುರು ಜಮಾಯಿಸಿದ ಕಾರ್ಯಕರ್ತರು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಕೂಗಿದರು.

    ಅಸಮರ್ಥ ಶಿಕ್ಷಣ ಸಚಿವ, ಬಹು ಅಂಗಾಂಗ ವೈಕಲ್ಯದಿಂದ ಬಳಲುತ್ತಿರುವ ಸರ್ಕಾರ ಎಂದು ಬರೆದಿದ್ದ ಫಲಕ ಹಿಡಿದು ಪ್ರತಿಭಟನೆ ನಡೆಸಿದರು. ಖಾಸಗಿ ಶಾಲೆಗಳ ವಿರುದ್ಧ ಗೂಂಡಾ ಕಾಯ್ದೆಯಿಡಿ ಕ್ರಮ ಕೈಗೊಳ್ಳಬೇಕು ಹಾಗೂ ಆನ್‌ಲೈನ್‌ ಮೂಲಕ ಪ್ರವೇಶಪತ್ರ ಕೂಡಲೇ ಪ್ರವೇಶಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಹಕ್ಕೊತ್ತಾಯ ಪತ್ರವನ್ನು ಮಂಡಳಿಯ ನಿರ್ದೇಶಕರಿಗೆ ನೀಡಿದರು.

    ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ನಗರದ ಎಎಪಿ ಅಧ್ಯಕ್ಷ ಮೋಹನ್‌ ದಾಸರಿಯವರು, "ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದಾಗಿ ಪೋಷಕರು ಆದಾಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವುದು ಖಾಸಗಿ ಶಾಲೆಗಳಿಗೆ ಕಾಣುತ್ತಿಲ್ಲ. ಶೇ.70ರಷ್ಟು ಮಾತ್ರ ಶುಲ್ಕವನ್ನು ಮಾತ್ರ ಪಡೆಯಬೇಕೆಂಬ ನಿಯಮವನ್ನು ಅವು ಗಾಳಿಗೆ ತೂರಿವೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

    ಖಾಸಗಿ ಶಾಲೆಗಳಿಂದ ಸುರೇಶ್‌ ಕುಮಾರ್‌ರವರಿಗೆ ಎಷ್ಟು ಕಮಿಷನ್‌ ಬರುತ್ತಿದೆ? ವಿದ್ಯಾರ್ಥಿಗಳು ಹಾಗೂ ಪೋಷಕರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಸುರೇಶ್‌ ಕುಮಾರ್‌ರವರು ಶಿಕ್ಷಣ ಸಚಿವರಾಗಿರುವುದು ರಾಜ್ಯದ ದುರಾದೃಷ್ಟ. ಅಸಮರ್ಥರಾಗಿರುವ ಅವರು ತಕ್ಷಣವೇ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದರು.

    ಇದನ್ನೂ ಓದಿ: Election 2024 India| 2024ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ ಪ್ರಶಾಂತ್ ಕಿಶೋರ್; ಗಾಂಧಿ ಕುಟುಂಬದ ಜೊತೆ ಚರ್ಚೆ

    ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್‌ ವಿ. ಸದಂರವರು, "ವಿದ್ಯಾರ್ಥಿಗಳು ಹಾಗೂ ಪೋಷಕರ ಬದುಕಿನ ಜೊತೆ ಖಾಸಗಿ ಶಾಲೆಗಳು ಚೆಲ್ಲಾಟ ಆಡುತ್ತಿವೆ. ದುಬಾರಿ ಶುಲ್ಕ ಕಟ್ಟಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ನೀಡದೇ ಸತಾಯಿಸುತ್ತಿವೆ. ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿಯಿದ್ದರೆ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ನೇರವಾಗಿ ಪ್ರವೇಶಪತ್ರ ವಿತರಿಸಬೇಕು.

    ಇದನ್ನೂ ಓದಿ: ಜೈಲ್ ಬ್ರೇಕ್ ಪ್ರಕರಣದಲ್ಲಿ ಜೈಲು ಪಾಲಾಗಿ ಜೈಲಿಂದಲೇ ನಕಲಿ ಸರ್ಕಾರಿ ವೆಬ್‌ಸೈಟ್ ನಡೆಸಿದ ಆರೋಪಿಗಳು!

    ಶುಲ್ಕದಂಧೆಯಲ್ಲಿ ತೊಡಗಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವ ಬದಲು ಜಾಣ ಕುರುಡು ಪ್ರದರ್ಶಿಸುತ್ತಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಕಾರಣಕ್ಕೆ ವಿದ್ಯಾರ್ಥಿಗಳು ಅಥವಾ ಪೋಷಕರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಶಿಕ್ಷಣ ಸಚಿವರೇ ನೇರ ಹೊಣೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟದಲ್ಲಿ ಎಎಪಿ ಮುಖಂಡರಾದ ಬಿ.ಟಿ.ನಾಗಣ್ಣ, ಸುಮನ್‌ ಪ್ರಶಾಂತ್‌, ಉಷಾ ಮೋಹನ್‌, ಪುಟ್ಟಣ್ಣ ಗೌಡ, ಡಾ. ಸುಹಾಸಿನಿ, ಡಾ. ಸತೀಶ್‌ ಕುಮಾರ್‌ ಮುಂತಾದವರು ಭಾಗವಹಿಸಿದ್ದರು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: