ಪೋಷಕರೇ ಎಚ್ಚರ: ನಿಶ್ಚಿತಾರ್ಥದ ಬಳಿಕ ಯುವಕನ ಅಸಲಿಯತ್ತು ಬಯಲು..!

ಖುಷಿ ಖುಷಿಯಾಗಿ ಅತ್ತೆ ಮನೆ ಸೇರಬೇಕಾಗಿದ್ದ ಹುಡುಗಿ ಸಾವನ್ನಪ್ಪಿದ್ದಾಳೆ. ಪಲ್ಲಕ್ಕಿಯಲ್ಲಿ ಕಣ್ತುಂಬಿಕೊಳ್ಳಬೇಕಾದ ಸ್ಪೂರ್ತಿ ಪೋಷಕರು ಇದೀಗ ತಮ್ಮ ಮಗಳನ್ನ ಚಟ್ಟದ ಮೇಲೆ ನೋಡುವ ದುಸ್ಥಿತಿ ಕಂಡು ಕಣ್ಣೀರಿಡುವಂತಾಗಿರುವುದು ದುರಂತವೇ ಸರಿ.

ಗೋವರ್ಧನ್-ಸ್ಪೂರ್ತಿ

ಗೋವರ್ಧನ್-ಸ್ಪೂರ್ತಿ

  • Share this:
ಉಡುಪಿ: ಮದುವೆ ಅನ್ನೋದು ಅದೊಂದು ಪ್ರತೀ ಹೆಣ್ಣಿನ ಬಾಳಲ್ಲಿ ಅದೊಂದು‌ ಸುಂದರ ಕ್ಷಣ ಆಗಿರುತ್ತದೆ.‌ ಸಪ್ತಪದಿ ತುಳಿಯಬೇಕಾದ ಹುಡುಗ ನಿಶ್ಚಿತಾರ್ಥದ‌ ಸಮಯದಲ್ಲೇ ದೈಹಿಕ ಹಾಗೂ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ರೆ ಹೇಗಾಗಬೇಡ ಹೇಳಿ.‌ ಇಂತಹದ್ದೇ ಸೈಕೋ ಯುವಕನೊಬ್ಬ ಯುವತಿ ಬಾಳಲ್ಲಿ ಆಟವಾಡಿದ ಪರಿಣಾಮ ಪ್ರಾಣವನ್ನೇ ಬಿಟ್ಟಿದ್ದಾಳೆ ಆ ಯುವತಿ. ಮದುವೆ ಎಂಬ ಸುಂದರ ಕನಸು ನನಸಾಗುವಷ್ಟರಲ್ಲೇ ಆಕೆಯ ಜೀವನವೇ ಕಮರಿ ಹೋಗಿದೆ. 

ಹೌದು,‌ ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ  ಆಕೆ ಹಸೆಮಣೆ ಏರಲು ರೆಡಿಯಾಗಿರುತ್ತಿದ್ದಳು. ಆದರೆ ನಡೆದದ್ದೇ ಬೇರೆ. ‌ಆ ಯುವಕ ದೊಡ್ಡ ಸೈಕೋ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಮದುವೆ ಮೊದಲೇ ಹಿಂಸೆ‌ ನೀಡುತ್ತಿದ್ದ, ಯುವತಿ‌ ಮನೆಯವರಲ್ಲೂ ವರದಕ್ಷಿಣೆಗಾಗಿ ಒತ್ತಾಯಪಡಿಸುತ್ತಿದ್ದ. ಅದ್ಯಾವುದು ನಡೆಯದೇ ಹೋದಾಗ ನಿಶ್ಚಿತಾರ್ಥ ಮಾಡಿಕೊಂಡ‌ ಯುವತಿಗೆ ಕೈಕೊಟ್ಟಿದ್ದ.‌ ಈ ಯುವಕನ ನಡತೆಯಿಂದ ಬೇಸತ್ತ ಯುವತಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೀಗೆ ಮನನೊಂದು ಕೆಟ್ಟ ನಿರ್ಧಾರ ತೆಗೆದುಕೊಂಡ 26 ವರ್ಷದ ಯುವತಿ ಹೆಸರು ಸ್ಪೂರ್ತಿ ಎಂ ನಾಯಕ್.

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ನಾಡ ಪಡುಕೋಣೆ‌ ನಿವಾಸಿಯಾಗಿರುವ ಈಕೆ ಅಕ್ಷರಶಃ ಹಳ್ಳಿ ಸೊಗಡಿನ ಹುಡುಗಿ. ತಂದೆ ತಾಯಿಯ ಮುದ್ದಾದ ಮಗಳಾಗಿ ಮನೆಯಲ್ಲಿ ರಾಣಿಯಂತೆ ಬೆಳೆದಿದ್ದಳು. ವಯಸ್ಸಿಗೆ ಬಂದಂತೆ ಒಂದೊಳ್ಳೆ ವೆಲ್ ಸೆಟಲ್  ಹುಡುಗನಿಗೆ ಕೊಡಬೇಕು. ಆ ಮನೆಯಲ್ಲೂ ಸುಖವಾಗಿ‌ ಇರಲಿ ಅಂತ‌ ಬಯಸಿದ್ದ ಸ್ಪೂರ್ತಿ ಮನೆಯವರ ಕನಸು ಇದೀಗ ಭಗ್ನ ವಾಗಿದೆ. ನಾವು ಕೊಟ್ಟಿರೋದು ಗಿಡುಗನ ಕೈಗೆ ಅಂತ ಗೊತ್ತಾಗಿದ್ದೆ ಮಗಳ ನಿಶ್ಚಿತಾರ್ಥವಾದ ಮೇಲೆ.

ಹೌದು, ಹಸಿ ಹಸಿ ಸುಳ್ಳು ಹೇಳಿ ಮ್ಯಾಟ್ರಿಮೋನಿ ಸೈಟ್ ನಲ್ಲಿ ಪರಿಚಯವಾದವನೇ ಈ 28ವರ್ಷದ ಯುವಕ ಗೋವರ್ಧನ್ ಆರ್ ನಾಯಕ್. ಈ ಗೋವರ್ಧನ್ ಅಷ್ಟೇ ಅಲ್ಲ ಈತನ ಇಡೀ ಕುಡುಂಬವೇ ದೊಡ್ಡ 420 ಅಂದರೆ ತಪ್ಪಾಗಲ್ಲ.‌ ಮ್ಯಾಟ್ರಿಮೋನಿಯಲ್ಲಿ ಮದುವೆ ಪ್ರಸ್ತಾಪ ಇಟ್ಟ ಗೋವರ್ಧನ್, ಮಾತುಕತೆ ಬಳಿಕ ಸ್ಪೂರ್ತಿ ಮನೆಗೆ ಹೆಣ್ಣು ನೋಡಲು ಬರುವಾಗಲೇ ಯಾರದ್ದೋ ಕಾರಿನಲ್ಲಿ ತನ್ನ ಕಾರು ಎಂಬಂತೆ ಫೋಸು ಕೊಟ್ಟಿದ್ದ. ಮದುವೆ ಮಾತುಕತೆ ಬಳಿಕ ಉಡುಪಿಯಲ್ಲಿರುವ ಸ್ನೇಹಿತನ ಫ್ಲಾಟ್ ಅನ್ನು ತನ್ನ ಫ್ಲಾಟ್ ಅಂತ ಸುಳ್ಳು ಹೇಳಿದ್ದ ಅದಾದ ಬಳಿಕ ಆನ್​ಲೈನ್ ಸೇಲ್ಸ್ ಉದ್ಯಮ ಮಾಡುತ್ತಿದ್ದೇನೆ ಅಂತ ಯಾರದ್ದೋ ಮಳಿಗೆಯನ್ನೇ ತನ್ನ ಕಚೇರಿ ಎಂದು ತೋರಿಸಿ ಯುವತಿ ಮನೆಯವರಿಗೆ ನಂಬಿಸಿ ಮೋಸ ಮಾಡಿದ್ದ. ಅದೇಗೋ ಈ 420 ಕುಟುಂಬವನ್ನ ನಂಬಿ ಹುಡುಗನಿಗೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ರು ಸ್ಪೂರ್ತಿ ಕುಟುಂಬ.

ಇನ್ನೇನು ತನ್ನ ಮಗಳ ನಿಶ್ಚಿತಾರ್ಥ ಆಯಿತೆಂದು ಖುಷಿಯಾಗಿದ್ದ ಯುವತಿ ಕುಟುಂಬ ಮನೆಯ ಸಮೀಪದಲ್ಲೇ ಇದ್ದ ಸೀತಾರಾಮ ಹಾಲ್ ನಲ್ಲಿ ಆಗಷ್ಟ್ 16ಕ್ಕೆ ನಿಶ್ಚಿತಾರ್ಥ ವೂ ಆಯಿತು. ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಗೋವರ್ಧನ್ ಆಗಾಗ ಯುವತಿ‌ ಮನೆಗೆ ಬಂದು ಮದುವೆಯಾಗುವ ಹುಡುಗಿಯನ್ನ ಹೊರಗಡೆ ಕರೆದುಕೊಂಡು ಹೋಗುತ್ತಿದ್ದ. ಆದರೆ ಅದೊಂದು ದಿನ ಹೊರಗಡೆ ಆಕೆಗೆ ಕಿಸ್ ಕೊಟ್ಟು ಕೆನ್ನೆಯನ್ನೇ ಕಚ್ಚಿ ಗಾಯಮಾಡಿದ್ದ ಅಷ್ಟೇ ಅಲ್ಲ ಪದೇ ಪದೇ ವಾಟ್ಸಾಪ್ ನಲ್ಲಿ ನಗ್ನ ಚಿತ್ರ ಕಳುಹಿಸು, ಬೆತ್ತಲೆಯಾಗಿ ವೀಡಿಯೋ ಕಾಲ್ ಮಾಡು‌‌ ಹೀಗೆ ಅಶ್ಲೀಲ ವಾಗಿ ಬೇಡಿಕೆ ಇಟ್ಟಿದ್ದ. ಆಗಲೇ  ಗೊತ್ತಾಗಿದ್ದು ಈತ ಸೈಕೋ ಕಾಮುಕ ಅಂತ.

ಈ ಎಲ್ಲದಕ್ಕೂ ಒಪ್ಪದಾಗ ಮದುವೆಗೆ 10ಲಕ್ಷ ನಗದು 50 ಪವನ್ ಚಿನ್ನ ಕೊಡಲೇ ಬೇಕು ಅಂತ ಪಟ್ಟು ಹಿಡಿದಿದ್ದ ಗೋವರ್ಧನ್. ಇದಕ್ಕೆ‌ ಒಪ್ಪದಿದ್ದಾಗ ನಿಮ್ಮ ಮಗಳಿಗೆ ವಿಷ‌ ಕೊಟ್ಟು ಸಾಯಿಸಿ ಎಂದು ಬೆದರಿಸಿದ್ದ. ಇವೆಲ್ಲದರಿಂದ ಖಿನ್ನತೆಗೆ ಜಾರಿದ್ದ ಸ್ಪೂರ್ತಿ ನವೆಂಬರ್ 6ರಂದು ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದೀಗ ಗಂಗೋಳ್ಳಿ ಪೊಲೀಸ್ ಠಾಣೆಯಲ್ಲಿ  ಈ ಗೋವರ್ಧನ್ ವಿರುದ್ದ ಪ್ರಕರಣ ದಾಖಲಾಗಿದ್ದು ತಾಯಿ‌ ಮಗ ನಾಪತ್ತೆಯಾಗಿದ್ದಾರೆ. ಇನ್ನೊಂದು ಕಡೆ ಆತನನ್ನ ಬೇಗ ಹುಡುಕಿ ಶಿಕ್ಷೆ ಕೊಡುವಂತೆ ಒತ್ತಾಯಸಿರುವ ಸ್ಪೂರ್ತಿ ಪೋಷಕರು ಇನ್ಯಾರು ಆತನಿಗೆ ಹುಡುಗಿ‌ ಕೊಡಬೇಡಿ ಎಂದು ವಿನಂತಿಸಿದ್ದಾರೆ.

ಒಟ್ಟಾರೆ ಖುಷಿ ಖುಷಿಯಾಗಿ ಮಗಳನ್ನ ಪಲ್ಲಕ್ಕಿಯಲ್ಲಿ ಕೂರಿಸಿ ಮದುವೆ ಮಾಡುವ ಖುಷಿಯಲ್ಲಿದ್ದ ಸ್ಪೂರ್ತಿ ಎಂ ನಾಯಕ್ ಇದೀಗ ಸಾವನ್ನಪ್ಪಿದ್ದಾಳೆ. ಪಲ್ಲಕ್ಕಿಯಲ್ಲಿ ಕಣ್ತುಂಬಿಕೊಳ್ಳಬೇಕಾದ ಸ್ಪೂರ್ತಿ ಪೋಷಕರು ಇದೀಗ ತಮ್ಮ ಮಗಳನ್ನ ಚಟ್ಟದ ಮೇಲೆ ನೋಡುವ ದುಸ್ಥಿತಿ ಕಂಡು ಕಣ್ಣೀರಿಡುವಂತಾಗಿರುವುದು ದುರಂತವೇ ಸರಿ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ಬೈ ಹೇಳಿದ ನ್ಯೂಜಿಲೆಂಡ್ ಕ್ರಿಕೆಟಿಗ: ಅಮೆರಿಕ ಪರ ಹೊಸ ಇನಿಂಗ್ಸ್
Published by:zahir
First published: