HOME » NEWS » State » HARANGI DAM AND RIVER CAUVERY MAY CAUSE FLOOD AGAIN IN KODAGU DISTRICT EXPERTS FEARED HK

ಹಾರಂಗಿ ಜಲಾಶಯ, ಕಾವೇರಿ ನದಿಯ ಹೂಳೆತ್ತದಿದ್ದರೆ ಮತ್ತೆ ಪ್ರವಾಹ ಖಚಿತ..!

ಕಾವೇರಿ ನದಿ ಮತ್ತು ಜಲಾಶಯದ ಹಿನ್ನೀರಿನಲ್ಲಿ ತುಂಬಿದ್ದ ಹೂಳಿನಲ್ಲಿ ಗಿಡಗಂಟಿಗಳು ಬೆಳೆದು ಕಾವೇರಿ ನದಿಯ ಸಾಕಷ್ಟು ಕಡೆ ನಡುಗಡ್ಡೆಗಳೇ ನಿರ್ಮಾಣವಾಗಿ, ನದಿ ಹರಿಯುವಿಕೆ ಬದಲಾಗಿದೆ.

news18-kannada
Updated:March 10, 2020, 8:08 PM IST
ಹಾರಂಗಿ ಜಲಾಶಯ, ಕಾವೇರಿ ನದಿಯ ಹೂಳೆತ್ತದಿದ್ದರೆ ಮತ್ತೆ ಪ್ರವಾಹ ಖಚಿತ..!
ಹಾರಂಗಿ ಜಲಾಶಯ
  • Share this:
ಕೊಡಗು(ಮಾ.10) : ಜಿಲ್ಲೆಯಲ್ಲಿ ಸತತ ಎರಡು ವರ್ಷಗಳಿಂದ ಪ್ರವಾಹ ಬಂದು ಸಾವಿರಾರು ಕುಟುಂಬಗಳು ಬೀದಿಪಾಲಾಗಿದ್ದು ಗೊತ್ತೇ ಇದೆ. ಅದಕ್ಕೆಲ್ಲಾ ಮುಖ್ಯವಾಗಿ ಪ್ರಕೃತಿ ಮೇಲೆ ಮಾನವನ ಹಸ್ತಕ್ಷೇಪವೇ ಕಾರಣ ಎಂದು ಭೂಗೋಳಶಾಸ್ತ್ರಜ್ಞರು ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ ಈ ಎರಡು ವರ್ಷಗಳಿಂದ ಉಂಟಾದ ಪ್ರವಾಹದಿಂದ ಹಾರಂಗಿ ಜಲಾಶಯ ಹಾಗೂ ಕಾವೇರಿ ನದಿಯಲ್ಲಿ ಸಂಪೂರ್ಣ ಹೂಳು ತುಂಬಿದ್ದು, ಇದನ್ನು ತೆರವು ಮಾಡದಿದ್ದರೆ, ಪುನಃ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ. 

ಕೊಡಗು ಜಿಲ್ಲೆ ಎರಡು ವರ್ಷಗಳಿಂದ ನಿರಂತರವಾಗಿ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. 2018 ರಲ್ಲಿ ಭೂಕುಸಿತ ಮತ್ತು ಪ್ರವಾಹ ಎರಡು ಒಟ್ಟೊಟ್ಟಿಗೆ ಸಂಭವಿಸಿತ್ತು. ಈ ವೇಳೆ ಇಡೀ ಬೆಟ್ಟಗಳ ಮಣ್ಣು ಜಲಾಶಯ, ನದಿಗಳಲ್ಲಿ ತುಂಬಿ ಹೋಗಿತ್ತು. ಕೊಡಗಿನ ಏಕೈಕ ಜಲಾಶಯದಲ್ಲಿ 7 ರಿಂದ 8 ಅಡಿಯಷ್ಟು ಮಣ್ಣು ತುಂಬಿತ್ತು.

ಇನ್ನು 2019 ರಲ್ಲಿ ಕಾವೇರಿ ನದಿ ಉಕ್ಕಿಹರಿದ ಪರಿಣಾಮ ನದಿ ತಟಕ್ಕೆ ಹೊಂದಿಕೊಂಡಂತೆ ಇರುವ ನಾಪೋಕ್ಲು, ಕೊಟ್ಟಡಮುಡಿ, ಕುಶಾಲನಗರ ಸೇರಿದಂತೆ ಹತ್ತಾರು ಹಳ್ಳಿಗಳು ತೀವ್ರ ಸಮಸ್ಯೆ ಎದುರಿಸಿದ್ದವು. ಇದೆಲ್ಲದಕ್ಕೂ ಪ್ರಕೃತಿ ಮೇಲೆ ಮಾನವನು ನಡೆಸಿರುವ ಹಸ್ತಕ್ಷೇಪವೇ ಮುಖ್ಯಕಾರಣ ಎಂದು ಭೂವಿಜ್ಞಾನಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದರು.

ಈ ಎರಡು ವರ್ಷಗಳಲ್ಲೂ ಹಾರಂಗಿ ಜಲಾಶಯ ಮತ್ತು ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿಕೊಂಡಿದೆ. ಕಾವೇರಿ ನದಿ ಮತ್ತು ಜಲಾಶಯದ ಹಿನ್ನೀರಿನಲ್ಲಿ ತುಂಬಿದ್ದ ಹೂಳಿನಲ್ಲಿ ಗಿಡಗಂಟಿಗಳು ಬೆಳೆದು ಕಾವೇರಿ ನದಿಯ ಸಾಕಷ್ಟು ಕಡೆ ನಡುಗಡ್ಡೆಗಳೇ ನಿರ್ಮಾಣವಾಗಿ, ನದಿ ಹರಿಯುವಿಕೆ ಬದಲಾಗಿದೆ.

ಜೊತೆಗೆ ನದಿಯಲ್ಲಿ ನೀರಿನ ಸರಾಗ ಹರಿಯುವಿಕೆಗೆ ಅಡ್ಡಿಯಾಗಿದ್ದು ಸ್ವಲ್ಬ ಜೋರಾಗಿ ಮಳೆ ಬಂದರೂ ಮತ್ತೆ ಪ್ರವಾಹ ಉಂಟಾಗುವ ಅಪಾಯ ಎದುರಾಗಿದೆ. ಹೀಗಾಗಿ ಕೂಡಲೇ ಹೂಳು ತೆಗೆಯಬೇಕು ಎಂದು ಸ್ಥಳೀಯರ ಆಗ್ರಹಿಸುತ್ತಿದ್ದಾರೆ.

ಹಾರಂಗಿ ಜಲಾಶಯದ ಹೂಳು ಎತ್ತಲು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರೇ ಬಜೆಟ್‍ನಲ್ಲಿ 138 ಕೋಟಿಯನ್ನು ಘೋಷಣೆ ಮಾಡಿದರು. ಬಳಿಕ ಹೂಳು ತೆಗೆಯುವುದಕ್ಕೆ ಜಲಾಶಯದಲ್ಲಿ ಸರ್ವೇ ಕೂಡ ಮಾಡಲಾಗಿತ್ತು. ಆದರೆ, ನಂತರ ಹೂಳು ಎತ್ತಲೇ ಇಲ್ಲ. ಇದೀಗ ಕಾವೇರಿ ನದಿಯಲ್ಲೂ ಹೂಳು ತುಂಬಿದ್ದು, ಹೂಳು ತೆಗೆಯುವಂತೆ ಜನರು ಒತ್ತಾಯಿಸಿದ್ದಾರೆ. ಹೀಗಾಗಿ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಾವೇರಿ ನದಿಯ ಹಲವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಸಹ ನಡೆಸಿದ್ದಾರೆ.

ಇದನ್ನೂ ಓದಿ : ವಾಸಯೋಗ್ಯವಲ್ಲದ ಸ್ಥಳದಲ್ಲಿ ನಿವೇಶನ ಹಂಚಿಕೆ; ಕೊಡಗಿನ ಪ್ರವಾಹ ಸಂತ್ರಸ್ತರ ಅಳಲುಬಳಿಕ ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದೆ. ಇದನ್ನು ತೆಗೆಯದಿದ್ದರೆ ಮತ್ತೆ ಪ್ರವಾಹ ಉಂಟಾಗೋದು ಖಚಿತ. ಅದಕ್ಕಾಗಿ ಕನಿಷ್ಠ 130 ಕೋಟಿ ಅಗತ್ಯವಿದ್ದು, ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸಿಎಂ ಯಡಿಯೂರಪ್ಪನವರು ಗಮನಹರಿಸಿ ರೈತರ ಸಮಸ್ಯೆ ಆಲಿಸಿ ಹೂಳು ತೆಗೆಯುವುದಕ್ಕೆ ಅನುದಾನ ನೀಡಬೇಕು. ಮಳೆಗಾಲ ಆರಂಭದ ಒಳಗಾಗಿ ಹೂಳು ತೆಗೆಯುವ ಅಗತ್ಯತೆ ಇದೆ ಎಂದರು.

ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆಯ ಜನತೆ ಪ್ರಾಕೃತಿಕ ವಿಕೋಪದಿಂದ ತೀವ್ರ ಸಂಕಷ್ಟ ಎದುರಿಸಿದ್ದಾರೆ. ಇದೀಗ ಹಾರಂಗಿ ಜಲಾಶಯ ಮತ್ತು ಕಾವೇರಿ ನದಿಯಲ್ಲಿ ತುಂಬಿರುವ ಅಪಾರ ಪ್ರಮಾಣದ ಹೂಳು ಮತ್ತೆ ಪ್ರವಾಹ ಸೃಷ್ಟಿಸುವ ಭೀತಿ ಎದುರಾಗಿದೆ.

(ವರದಿ : ರವಿ.ಎಸ್ ಹಳ್ಳಿ)
Youtube Video
First published: March 10, 2020, 7:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories