ವಿಷಮುಕ್ತ ಆಹಾರ ಉತ್ಪಾದನೆ ಸಂಕಲ್ಪ: ಸಂಪೂರ್ಣ ಸಾವಯವ ಕೃಷಿಕನಾದ ಹನುಮಂತಪ್ಪ ಬೆಳಗುಂಪಿ


Updated:June 29, 2018, 5:30 PM IST
ವಿಷಮುಕ್ತ ಆಹಾರ ಉತ್ಪಾದನೆ ಸಂಕಲ್ಪ: ಸಂಪೂರ್ಣ ಸಾವಯವ ಕೃಷಿಕನಾದ ಹನುಮಂತಪ್ಪ ಬೆಳಗುಂಪಿ

Updated: June 29, 2018, 5:30 PM IST
ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ(ಜೂ.29): ಆತನೊಬ್ಬ ಕ್ಯಾನ್ಸರ್ ರೋಗಿಗಳ ಕೌನ್ಸಿಲರ್. ದುಶ್ಚಟ ಇಲ್ಲದೇ ಇರುವವರಿಗೂ ಏಕೆ ಕ್ಯಾನ್ಸರ್ ಬರುತ್ತಿದೆ ಎಂಬ ಸಂಗತಿಯಿಂದ ದಿಗಿಲುಗೊಂಡು, ಅದಕ್ಕೆ ವಿಷ ಆಹಾರ ಸೇವನೆಯೇ ಕಾರಣ ಎಂಬುದನ್ನು ಅರಿತು, ವಿಷಮುಕ್ತ ಆಹಾರ ಉತ್ಪಾದನೆಯಲ್ಲಿ ತೊಡಗಿಕೊಂಡಾತ. ಕೇವಲ ಎರಡೂವರೆ ಎಕರೆ ಜಮೀನಿನಲ್ಲಿ ಸಾವಿರಕ್ಕೂ ಅಧಿಕ ವೈವಿಧ್ಯಮಯ ಹಣ್ಣಿನ ಗಿಡ ಬೆಳೆಸಿದಾತ. ಸಾವಯವ ಕೃಷಿ ಪದ್ಧತಿಯಲ್ಲಿಯೇ ತರಹೇವಾರಿ ಹಣ್ಣು, ಕಬ್ಬು, ತೊಗರಿ ಬೆಳೆಯುತ್ತಿದ್ದಾನೆ. ಹಣ್ಣಿನ ಜೊತೆಗೆ ಪರ್ಯಾಯವಾಗಿ ತರಕಾರಿಯನ್ನೂ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾನೆ. ಕೇವಲ ಹಣ್ಣು ಬೆಳೆಯುವುದೊಂದೇ ಅಲ್ಲ, ಕೆಮಿಕಲ್ ಮುಕ್ತವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಹಣ್ಣನ್ನು ಮಾಗಿಸಿ, ನೇರವಾಗಿ ಗ್ರಾಹಕರ ಕೈಗೆ ತಲುಪಿಸುವ ಕೆಲಸವನ್ನು ಈತ ಮಾಡುತ್ತಿದ್ದಾನೆ. ಬದುಕಿರುವವರೆಗೂ ವಿಷ ಮುಕ್ತ ಆಹಾರ ಉತ್ಪಾದಿಸಿ, ಜನರಿಗೆ ತಲುಪಿಸಬೇಕೆಂಬ ಸಂಕಲ್ಪದೊಂದಿಗೆ ಹಗಲಿರುಳೂ ಕೆಲಸ ಮಾಡುತ್ತಿರುವ ಪ್ರಗತಿಪರ ರೈತ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಹಸರಗುಂಡಗಿಯ ಹನುಮಂತಪ್ಪ ಬೆಳಗುಂಪಿಯವರ ಸಾವಯವ ಕೃಷಿಯತ್ತ ಒಂದು ನೋಟ.

ಈತ ಎಂ.ಎಸ್.ಡಬ್ಲ್ಯೂ ಪದವೀಧರ. ಇವರ ಕುಟುಂಬ ಕೃಷಿಯಲ್ಲಿ ತೊಡಗಿಕೊಂಡಿದ್ದರೂ, ಇವರೂ ಮಾತ್ರ ಯಾವುದಾದರೂ ನೌಕರಿ ಮಾಡಬೇಕೆಂಬ ಧ್ಯೇಯದೊಂದಿಗೆ ಕಲಬುರ್ಗಿ ಸೇರಿದ್ದರು. ಸ್ನಾತಕೋತ್ತರ ಪದವಿ ಪೂರೈಸಿದ ನಂತರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೌನ್ಸಿಲ್ ಮಾಡುವ ಹುದ್ದೆ ಇವರನ್ನು ಹುಡುಕಿಕೊಂಡು ಬಂದಿತು. ನೌಕರಿ ಸಿಕ್ಕ ಖುಷಿಯಲ್ಲಿ ಕ್ಯಾನ್ಸರ್ ರೋಗಿಗಳ ಪೂರ್ವಾಪರ ವಿಚಾರಿಸಿ, ಅವರಿಗೆ ಚಿಕಿತ್ಸೆಯ ಜೊತೆಗೆ ಮಾನಸಿಕವಾಗಿ ಸದೃಢಗೊಳಿಸುವ ಕಾರ್ಯ ಮಾಡುತ್ತಿದ್ದರು. ಈ ವೇಳೆ ಕ್ಯಾನ್ಸರ್ ರೋಗಿಗಳು ಕೇಳಿದ ಪ್ರಶ್ನೆ ಇವರ ದಿಕ್ಕನ್ನೇ ಬದಲಿಸಿತು. ದುಶ್ಚಟಗಳಿರುವವರಿಗೆ ವಿವಿಧ ರೀತಿಯ ಕ್ಯಾನ್ಸರ್ ಬರುವುದು ಸಹಜ. ಆದರೆ ಯಾವುದೇ ದುಶ್ಚಟಗಳಿಲ್ಲದೆ ಇದ್ದವರಿಗೂ ಕ್ಯಾನ್ಸರ್ ಆವರಿಸಿದ್ದುದು, ಅವರನ್ನು ಕಂಗಾಲಾಗುವಂತೆ ಮಾಡಿತು.ಇದಕ್ಕೇನು ಕಾರಣ ಇರಬಹುದೆಂದು ಹುಡುಕುತ್ತಾ ಹೊರಟ ಅವರಿಗೆ ಕಂಡ ಸತ್ಯಗಳನ್ನು ಕೃಷಿಯತ್ತ ವಾಲುವಂತೆ ಮಾಡಿತು. ನಾವು ಸೇವಿಸುತ್ತಿರುವ ಬಹುತೇಕ ಆಹಾರ ವಿಷಮಯವಾಗಿದೆ ಎಂಬ ಸತ್ಯ ಕಂಡುಕೊಂಡ ಆ ಸ್ನಾತಕೋತ್ತರ ಪದವೀಧರ, ವಿಷ ಮುಕ್ತ ಆಹಾರ ಸಂಕಲ್ಪದೊಂದಿಗೆ ಕೃಷಿಯ ಕಡೆ ಮುಖ ಮಾಡಿದೆ. ನನ್ನ ಕೈಲಾದಷ್ಟು ಜನರಿಗಾದರೂ ವಿಷ ಮುಕ್ತ ಆಹಾರ ನೀಡೋಣ ಎಂಬ ಧ್ಯೇಯದೊಂದಿಗೆ ಮಧ್ಯ ವಯಸ್ಸಿನಲ್ಲಿ ಕೃಷಿ ಕ್ಷೇತ್ರ ವಾಲಿದವರು ಹನುಮಂತಪ್ಪ ಬೆಳಗುಂಪಿ. ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಹಿರಿಯರಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಸಾವಯವ ಕೃಷಿ ಪ್ರಯೋಗ ನಡೆಸಿದ್ದಾರೆ.

ಕೇವಲ ಎರಡೂವರೆ ಎಕರೆ ಜಮೀನಿನಲ್ಲಿ ಸುಮಾರು 1 ಸಾವಿರ ವಿವಿಧ ಹಣ್ಣಿನ ಗಿಡಗಳನ್ನು ಇಟ್ಟಿದ್ದಾರೆ. 100 ಮಾವಿನ ಗಿಡ, 100 ಸಪೋಟ ಗಿಡ, 100 ನಿಂಬೆ ಗಿಡ, 100 ಸೀಬೆ ಹಣ್ಣಿನ ಗಿಡ, 100 ತೆಂಗು, 285 ಅಂಜೂರ ಗಿಡ, 15 ನೀಲದ ಹಣ್ಣಿನ ಗಿಡ, 50 ಸೀತಾಫಲ ಗಿಡಗಳ ಜೊತೆಗೆ 200 ಸಾಗುವಾನಿ ಗಿಡಗಳನ್ನು ಇಟ್ಟಿದ್ದಾರೆ. ಒಂದು ಫಲ ಕೊಟ್ಟ ನಂತರ ಮತ್ತೊಂದು ಹಣ್ಣಿನ ಗಿಡಗಳು ಫಲ ಕೊಡುವ ರೀತಿಯಲ್ಲಿ ಒಂದರ ನಂತರ ಒಂದನ್ನು ಇಡಲಾಗಿದೆ. ಉದಾಹರಣೆಗೆ ಬೇಸಿಗೆಯಲ್ಲಿ ಮಾವು ಫಲ ನೀಡುತ್ತದೆ, ಮಾವಿನ ಗಿಡಗಳ ಮಧ್ಯದಲ್ಲಿ ಸೀಬೆ ಹಣ್ಣಿನ ಗಿಡ ಇಟ್ಟಿದ್ದಾರೆ. ಹೀಗೆ ಒಂದು ಹಣ್ಣಿನ ಗಿಡದ ನಂತರ ಮತ್ತೊಂದು ವರೈಟಿ ಹಣ್ಣಿನ ಗಿಡಗಳನ್ನು ಸರತಿಯಾಗಿ ನಾಟಿ ಮಾಡಿದ್ದು, ಒಂದೊಂದು ಅವಧಿಯಲ್ಲಿ ಒಂದೊಂದು ಗಿಡಗಳು ಫಲ ನೀಡುತ್ತವೆ. 2007-08 ರಲ್ಲಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಹನುಮಂತಪ್ಪ ಅವರು, ಮೂರು ವರ್ಷಗಳ ನಂತರ ಫಲ ಉಣ್ಣಲಾರಂಭಿಸಿದ್ದಾರೆ.

ಏಳು ಎಕರೆ ನೀರಾವರಿ ಪ್ರದೇಶದಲ್ಲಿ ಹಣ್ಣಿನ ಗಿಡ, ಕಬ್ಬು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹಣ್ಣಿನಿಂದ ಹಿಡಿದು ಕಬ್ಬು, ತೊಗರಿಯವರೆಗೂ ಸಂಪೂರ್ಣ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಯಾವುದೇ ರಸಾಯನಿಕಗಳನ್ನು ಬಳಕೆ ಮಾಡದೆ ಬೆಳೆಯಲಾಗುತ್ತಿದೆ. ಕೊಟ್ಟಿಗೆ ಗೊಬ್ಬರ, ಎರೆ ಹುಳು ಗೊಬ್ಬರ ಇತ್ಯಾದಿಗಳ ಬಳಕೆಯ ಜೊತೆಗೆ ರೋಗ ನಿಯಂತ್ರಣ ಮತ್ತು ಗಿಡಗಳು ಸಮೃದ್ಧವಾಗಿ ಬೆಳೆಯಲು ಪಂಚಗವ್ಯ, ದಶಪರಣಿ, ಜೀವಾಮೃತಗಳನ್ನು ಬಳಸಲಾಗುತ್ತದೆ. ಪಂಚಗವ್ಯ, ಜೀವಾಮೃತಗಳನ್ನು ತಾವೇ ಸಿದ್ಧಪಡಿಸಿಕೊಳ್ಳುವ ಹನುಮಂತಪ್ಪ ಅವರು, ಅಗತ್ಯಕ್ಕೆ ತಕ್ಕಂತೆ ಗಿಡಗಳಿಗೆ ನೀಡುತ್ತಾ ಸಾಗುತ್ತಾರೆ. ಪರಿಣಾಮ ಉತ್ತಮ ಇಳುವರಿ ಸಿಗುತ್ತಿದ್ದು, ವಿಷಮುಕ್ತ ಆಹಾರ ಉತ್ಪಾದಿಸಿದ ಖುಷಿ ಹನುಮಂತಪ್ಪ ಅವರದ್ದಾಗಿದೆ. ಕೇವಲ ಉತ್ಪಾದನೆಯೊಂದೇ ಅಲ್ಲ ಅವುಗಳನ್ನು ಪರಿಷ್ಕರಿಸಿ, ಸಾಂಪ್ರದಾಯಿಕ ಶೈಲಿಯಲ್ಲಿ ಮಾಗಿಸಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕೆಲಸವನ್ನೂ ಹನುಮಂತಪ್ಪ ಅವರೇ ಮಾಡುತ್ತಿದ್ದಾರೆ. ಹೊಲದಲ್ಲಿ ಉತ್ತಿ ಬಿತ್ತಿ ಬೆಳೆಯುವುದರಿಂದ ಹಿಡಿದು ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರೆಗೂ ಅತ್ಯಂತ ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಕೈಲಾದಷ್ಟು ಜನರಿಗೆ ವಿಷಮುಕ್ತ ಆಹಾರ ನೀಡಿದೆನೆಂಬ ಧನ್ಯತಾಭಾವ ನನ್ನದು ಎನ್ನುತ್ತಾರೆ ಹನುಮಂತಪ್ಪ ಬೆಳಗುಂಪಿ.
Loading...ಹನುಮಂತಪ್ಪ ಬೆಳಗುಂಪಿ ಅವರ ಪ್ರಯತ್ನಕ್ಕೆ ಕುಟುಂಬದ ಸದಸ್ಯರೂ ಸಾಥ್ ನೀಡುತ್ತಿದ್ದಾರೆ. ಹನುಮಂತಪ್ಪ ಅವರು ಹೊಲದಲ್ಲಿ ಮಾವಿನ, ಸಪೋಟ ಇತ್ಯಾದಿ ಹಣ್ಣುಗಳನ್ನು ಕಿತ್ತುಕೊಂಡು ಬಂದರೆ, ಅವರ ಪತ್ನಿ ಜಗದೇವಿ ಅವರು ಹಣ್ಣುಗಳನ್ನು ಮಾಗಿಸುವ ಕಾರ್ಯ ಮಾಡುತ್ತಾರೆ. ಅದೂ ಸಹ ದೇಶೀ ಶೈಲಿಯಲ್ಲಿಯೇ. ಮಾವಿನ ಹಣ್ಣು ಇತ್ಯಾದಿಗಳನ್ನು ಮನೆಯಲ್ಲಿ ಭತ್ತದ ಹುಲ್ಲಿನಲ್ಲಿ ಇಟ್ಟು ಮಾಗಿಸಲಾಗುತ್ತದೆ. ಹಾಗೆ ಮಾಗಿಸಿದ ಹಣ್ಣುಗಳನ್ನು ಕಲಬುರ್ಗಿಯ ವಿವಿಧೆಡೆ ತಾವೇ ಮಾರಾಟ ಮಾಡುತ್ತಾರೆ ಹನುಮಂತಪ್ಪ ಅವರು. ಸಾವಯವ ಕೃಷಿ ಪದ್ಧತಿಯಲ್ಲಿ ಹಣ್ಣು ಬೆಳೆದು, ನಂತರ ರಸಾಯನಿಕ ಬಳಸಿ ಹಣ್ಣು ಮಾಡಿದರೆ ಅದೂ ಸಹ ವಿಷಕಾರಿಯಾಗಲಿದೆ. ಹೀಗಾಗಿ ಸಾಂಪ್ರದಾಯಿಕ ಶೈಲಿಯಲ್ಲಿಯೇ ಹಣ್ಣು ಮಾಡಿ ನಂತರ ಮಾರಾಟ ಮಾಡಲಾಗುತ್ತದೆ. ಇದರಿಂದಾಗಿ ಹಣ್ಣು ರುಚಿಯಾಗಿರುತ್ತದೆ, ಬೇಗನೆ ಕೆಡುವುದೂ ಇಲ್ಲ ಎನ್ನುತ್ತಾರೆ ಹನುಮಂತಪ್ಪ ಪತ್ನಿ ಜಗದೇವಿ.

ಕೇವಲ ಎರಡೂವರೆ ಎಕರೆಯಲ್ಲಿ ವಿವಿಧ ಮಾದರಿಯ ಸುಮಾರು ಸಾವಿರ ಹಣ್ಣಿನ ಗಿಡ ಇಡಲಾಗಿದೆ. ಇವುಗಳ ಮಧ್ಯದಲ್ಲಿಯೇ ತರಕಾರಿ ಬೆಳೆಯುವ ಪ್ರಯತ್ನವನ್ನೂ ಹನುಮಂತಪ್ಪ ಅವರು ಮಾಡುತ್ತಿದ್ದಾರೆ. ಪರ್ಯಾಯ ಬೆಳೆಗಳಾಗಿ ಈರುಳ್ಳಿ, ಬೆಂಡೆಕಾಯಿ, ಚೌಳಿಕಾಯಿ, ಹೀರೆಕಾಯಿ, ತುಪ್ರೆಕಾಯಿ, ಸೌತಿಕಾಯಿ ಮತ್ತು ಕಾಯಿ-ಪಲ್ಯಗಳನ್ನು ಬೆಳೆಯಲಾಗುತ್ತಿದೆ. ಕಳೆದ ವರ್ಷ ಹಣ್ಣಿನ ಗಿಡಗಳ ಮಧ್ಯದಲ್ಲಿ 40 ಕ್ವಿಂಟಲ್ ಬೆಳೆದ ಹನುಮಂತಪ್ಪ, ಎರಡೂವರೆ ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ. ಹಣ್ಣಿನ ಜೊತೆಗೆ ತರಕಾರಿ, ಕಾಯಿ-ಪಲ್ಯಗಳನ್ನೂ ಮಾರಟ ಮಾಡುತ್ತಿದ್ದು, ಎಲ್ಲಿಲ್ಲದ ಬೇಡಿಕೆ ಇದೆ. ಪರ್ಯಾಯ ಬೆಳೆಗಳಿಂದ ಅತ್ಯಧಿಕ ಲಾಭ ಗಳಿಸುತ್ತಿದ್ದಾರೆ.

ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಹಣ್ಣು, ತರಕಾರಿ, ಕಾಯಿಪಲ್ಯಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಕಲಬುರ್ಗಿಯ ಐವಾನ್-ಶಾಹಿ ಪ್ರದೇಶ, ಅರಣ್ಯ ಇಲಾಖೆ ಎದುರು ಸೇರಿ ಕಲಬುರ್ಗಿಯ ಮೂರು-ನಾಲ್ಕು ಕಡೆ ಹನುಮಂತಪ್ಪ ಅವರ ಮಾರಾಟದ ಪಾಯಿಂಟ್ ಗಳಿವೆ. ಮಾವಿನ ಸೀಜನ್ ನಲ್ಲಿ ಹನುಮಂತಪ್ಪ ಅವರ ಮಾವಿನ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗುತ್ತಿದ್ದು, ಕಳ್ಳೆಪುರಿಯಂತೆ ಮಾರಾಟವಾಗುತ್ತವೆ. ಪ್ರತಿ ಕಿಲೋಗೆ 50 ರೂಪಾಯಿಯಿಂದ ಹಿಡಿದು150 ರೂಪಾಯಿವರೆಗೂ ಮಾರಾಟವಾಗುತ್ತಿವೆ. ಗ್ರಾಹಕರ ಆರ್ಥಿಕತೆಗೆ ತಕ್ಕಂತೆ ವಿವಿಧ ವರೈಟಿ ಹಣ್ಣುಗಳನ್ನು ಇಡಲಾಗುತ್ತಿದೆ. ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ.ಕಾಲಕ್ಕೆ ತಕ್ಕಂತೆ ಹಣ್ಣುಗಳ ಮಾರಾಟ ನಡೆಯುತ್ತದೆ. ಮಾವು, ಅದರ ನಂತರ ಸಪೋಟಾ, ಸೀಬೆ, ಸೀತಾಫಲ ಇತ್ಯಾದಿ ಹಣ್ಣುಗಳನ್ನು ಮಾರಾಟಕ್ಕಿಡುತ್ತಾರೆ. ಇನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುವ ತೆಂಗಿನ ಕಾಯಿ ಎಳನೀರು, ಕಾಯಿ ರೂಪದಲ್ಲಿಯೂ ಮಾರಾಟವಾಗುತ್ತವೆ. ಹಣ್ಣು ಮತ್ತು ತರಕಾರಿಗಳು ಒಂದಷ್ಟು ದುಬಾರಿ ಎನಿಸಿದರೂ ಆರೋಗ್ಯದ ದೃಷ್ಟಿಯಿಂದ ಖರೀದಿಸುತ್ತೇವೆ. ಹಲವು ವರ್ಷಗಳಿಂದ ಇವರ ಬಳಿಯೇ ಖರೀದಿಸುತ್ತೇವೆ ಎಂದು ಕೆಲ ಗ್ರಾಹಕರ ಹೆಮ್ಮೆಯಿಂದ ಹೇಳುತ್ತಾರೆ.

ಕೇವಲ ಹಣ್ಣು, ತರಕಾರಿ, ಕಾಯಿಪಲ್ಯೆಗಳಲ್ಲದೆ ಸಾವಯವ ತೊಗರಿ ಮತ್ತು ಕಬ್ಬನ್ನೂ ಬೆಳೆದು ಮಾರಾಟ ಮಾಡುತ್ತಿದ್ದಾರೆ ಹನುಮಂತಪ್ಪ ಅವರು. ಮಳೆಯಾಶ್ರಿತ ಜಮೀನಿನಲ್ಲಿ ಸಾಯವ ಪದ್ಧತಿಯಲ್ಲಿ ತೊಗರಿ ಬೆಳೆದು ಅವರೇ ಬೇಳೆ ಮಾಡಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ ಸಾವಯವ ಪದ್ಧತಿಯಲ್ಲಿಯೇ ಕಬ್ಬನ್ನು ಬೆಳೆದು ನೇರವಾಗಿ ಗ್ರಾಹಕರಿಗೆ ಮುಟ್ಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾವಯವ ಕಬ್ಬಿನಿಂದ ಸಾವಯವ ಬೆಲ್ಲ ಸಿದ್ಧಪಡಿಸುವ ಚಿಂತನೆಯಲ್ಲಿದ್ದಾರೆ ಹನುಮಂತಪ್ಪ. ನಬಾರ್ಡ್ ಯೋಜನೆಯಡಿ ಹನುಮಂತಪ್ಪ ಅವರ ಹೊಲದಲ್ಲಿ ನಾಲ್ಕೈದು ಬಾರಿ ರೈತ ಸಮುದಾಯಕ್ಕೆ ಸಾವಯವ ಕೃಷಿ ಪದ್ಧತಿಯ ತರಬೇತಿ ಕಾರ್ಯಾಗಾರ ಮಾಡಲಾಗಿದೆ. ಹಲವಾರು ಕೃಷಿ ವಿಜ್ಞಾನಿಗಳು ಹನುಮಂತಪ್ಪ ಅವರ ಹೊಲಕ್ಕೆ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಾಭ ಗಳಿಕೆಯ ಯಾವುದೇ ಉದ್ದೇಶವಿಲ್ಲದೆ ವಿಷಮುಕ್ತ ಆಹಾರ ನೀಡಬೇಕೆಂಬ ಒಂದೇ ಧ್ಯೇಯದೊಂದಿಗೆ ಹನುಮಂತಪ್ಪ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಕೆಲಸಕ್ಕೆ ಕುಟಂಬದ ಉಳಿದ ಸದಸ್ಯರೂ ಸಾಥ್ ನೀಡುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳ ಪ್ರೇರಣೆಯಿಂದ ಕೃಷಿಯತ್ತ ವಾಲಿ, ಸಾವಯವ ಕೃಷಿ ಪದ್ಧತಿಯ ಪ್ರಚಾರಕರಾಗಿ ರೂಪುಗೊಂಡ ಹನುಮಂತಪ್ಪ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ