Uttara Kannada: ಬಲಿಗಾಗಿ ಕಾದು ಕುಳಿತಿದೆ ತೂಗುಸೇತುವೆ! ಮಕ್ಕಳು, ಕಾರ್ಮಿಕರ ಸಾವಿನ ಸಂಚಾರ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿಯಲ್ಲಿ ತೂಗು‌ಸೇತುವೆ ಪಾಳುಬಿದ್ದಿದೆ. ಒಂದು ಕಾಲದಲ್ಲಿ ಟೂರಿಸ್ಟ್ ಸ್ಪಾಟ್ ಆಗಿ, ಫೋಟೋಶೂಟ್ ತಾಣವಾಗಿ ಪ್ರಸಿದ್ಧಿ ಪಡೆದಿದ್ದ ಈ ಸೇತುವೆ ಇದೀಗ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಕರ್ಕಿ ತೂಗುಸೇತುವೆ

ಕರ್ಕಿ ತೂಗುಸೇತುವೆ

  • Share this:
ಕರಾವಳಿ ಭಾಗಗಳಲ್ಲಿ (Coastal), ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada) ತೂಗು ಸೇತುವೆಗಳು ಸಾಮಾನ್ಯ. ದೂರದೂರಿಗೆ ವೇಗವಾಗಿ ಮತ್ತು ಕಾಲ್ನಡಿಗೆಯಲ್ಲಿ ಸಾಗಲು ಸುಲಭವಾಗಿ ತೂಗುಸೇತುವೆಗಳನ್ನು (Hanging Bridge)  ಬಳಸ್ತಾರೆ. ದೊಡ್ಡ ದೊಡ್ಡ ನದಿಗೆ (River) ಅಡ್ಡವಾಗಿ ಸಂಪರ್ಕ ಸಾಧಿಸಲು ತೂಗುಸೇತುವೆಗಳಿವೆ. ಆದರೆ ಈಗ ಉತ್ತರಕನ್ನಡ ಜಿಲ್ಲೆಯಲ್ಲಿ ಕೆಲ ತೂಗುಸೇತುವೆಗಳು ಬಲಿಗಾಗಿ ಬಾಯ್ತೆರೆದು ಕಾಯುತ್ತಿದೆ. ತೀರಾ ಶಿಥಿಲಾವಸ್ಥೆಗೆ (Disrepair)  ತಲುಪಿದ ತೂಗು‌ಸೇತುವೆ ಮೇಲೆ ಜನರ ಓಡಾಟ ಭಯ ಹುಟ್ಟಿಸುತ್ತಿದೆ. ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿಯಲ್ಲಿ ತೂಗು‌ಸೇತುವೆ ಪಾಳುಬಿದ್ದಿದೆ. ಜೀವ ಬಲಿಗಾಗಿ ಕಾಯುತ್ತಿರುವ ಈ ತೂಗು ಸೇತುವೆ ಇಂದೋ ನಾಳೆಯೋ ಬೀಳುವ ಸ್ಥಿತಿಗೆ ತಲುಪಿದೆ. ಇದರ ವಿವರ ನೋಡೋಣ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಬಡಗಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆಯ ಪರಿಸ್ಥಿತಿ ದೇವರಿಗೇ ಪ್ರೀತಿ. ಸುಮಾರು 20 ವರ್ಷಗಳ ಹಿಂದೆ ನಿರ್ಮಾಣವಾದ ಈ ತೂಗುಸೇತುವೆಯು ರಾಷ್ಟ್ರೀಯ ಹೆದ್ದಾರಿಯಿಂದ ಒಳ ಬಂದರೆ ಅನತಿ ದೂರದಲ್ಲಿದೆ.

ಒಂದು ಕಾಲದಲ್ಲಿ ಫೋಟೋಶೂಟ್​ಗೆ ಫೇಮಸ್
ಒಂದು ಕಾಲದಲ್ಲಿ ಟೂರಿಸ್ಟ್ ಸ್ಪಾಟ್ ಆಗಿ, ಫೋಟೋಶೂಟ್ ತಾಣವಾಗಿ ಪ್ರಸಿದ್ಧಿ ಪಡೆದಿದ್ದ ಈ ಸೇತುವೆ ಇದೀಗ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ನಿರ್ಲಕ್ಷ್ಯ ಇಲ್ಲಿನ ಗ್ರಾಮಸ್ಥರ ಜೀವಕ್ಕೆ ಅಪಾಯ ತಂದಿಡುವ ಆತಂಕಕ್ಕೆ ಕಾರಣವಾಗಿದೆ.

Hanging bridge disrepair waiting for sacrifice Children labors deaths
ಶಿಥಿಲಾವಸ್ಥೆ ತಲುಪಿದ ತೂಗುಸೇತುವೆ


ಗ್ರಾಮಸ್ಥರಿಗೇ ಸಂಚರಿಸಲು ಭಯ!
ಒಂದು ಬದಿಯಲ್ಲಿ ಕರ್ಕಿ, ಇನ್ನೊಂದು ಬದಿಯಲ್ಲಿ ಪಾವಿನಕುರ್ವೆ ಗ್ರಾಮವನ್ನ ಸಂಪರ್ಕಿಸುವ ಈ ತೂಗುಸೇತುವೆಯ ಕೆಳಕ್ಕೆ ಬಡಗಣಿ ನದಿ ಹರಿಯುತ್ತದೆ. ಸುಂದರ ವಿಹಂಗಮ ನೋಟ ಇಲ್ಲಿದ್ದರೂ ಸಹ, ಇತ್ತೀಚಿಗಂತೂ ಈ ಸೇತುವೆಯ ದುಃಸ್ಥಿತಿಯ ಕಂಡು ಗ್ರಾಮಸ್ಥರೇ ಸಂಚರಿಸಲು ಭಯಪಡುವಂತಾಗಿದೆ.

ಇದನ್ನೂ ಓದಿ: ಮಳೆ ಬರ್ಲಿ, ಗುಂಡಿನೇ ಇರ್ಲಿ ಹೋಗ್ತಿರ್ಬೇಕು ಅಷ್ಟೇ! ಇಲ್ಲಾಂದ್ರೆ ಫೈನ್ ಗ್ಯಾರೆಂಟಿ

ಸಂಪೂರ್ಣ ಹದಗೆಟ್ಟ ಸೇತುವೆ ಮೇಲೆ ಜನ‌ಸಂಚಾರ
ಸೇತುವೆಗೆ ಹಾಕಲಾಗಿರುವ ಹಲಗೆಗಳು ಹಾಳಾಗಿದ್ದು, ಸರಳುಗಳು ತುಕ್ಕು ಹಿಡಿದಿವೆ. ಸೇತುವೆಯ ಕೆಳಭಾಗದ ಆಧಾರದ ಕಬ್ಬಿಣದ ಪಟ್ಟಿಗಳು ಕೂಡ ಈಗಲೋ ಆಗಲೋ ತುಂಡಾಗಿ ಬೀಳುವ ಹಂತದಲ್ಲಿದೆ. ಪ್ರತಿದಿನ ಇಲ್ಲಿ ಆತಂಕದಲ್ಲಿ ಓಡಾಡುವ ಪರಿಸ್ಥಿತಿ ಇದೆ ಎಂದು ದೂರುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು.

Hanging bridge disrepair waiting for sacrifice Children labors deaths
ಕರ್ಕಿ ತೂಗುಸೇತುವೆ


ದೂರು ನೀಡಿದರೂ ಸ್ಥಳೀಯ ಆಡಳಿತ ಡೋಂಟ್​​ಕೇರ್ 

ಹತ್ತಾರು ಬಾರಿ ಇಲ್ಲಿನ ಗ್ರಾಮಸ್ಥರು ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದರಾದರು ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ಚುನಾವಣೆ ಸಂದರ್ಭದಲ್ಲಿ ಬಂದು‌ಹೋಗುವ ಜನಪ್ರತಿನಿಧಿಗಳಿಗೆ ಸೇತುವೆ ದುಸ್ಥಿತಿ ಕಣ್ಣಿಗೆ ಕಂಡರು ಕಾಣದಂತೆ ನಟಿಸುತ್ತಿದ್ದಾರೆ ಅಂತಾರೆ ಜನ.

ಪಾವಿನಕುರ್ವಾ ಗ್ರಾಮದಲ್ಲಿ ವಾಸಿಸುತ್ತಿರುವ ಹೆಚ್ಚಿನವರು ಮೀನುಗಾರರು, ಕೂಲಿಕಾರರು. ಹೀಗಾಗಿ ಸಮಯದ ಪರಿವೇ ಇಲ್ಲದೇ ತಮ್ಮ ದುಡಿಮೆಗಾಗಿ ಪಟ್ಟಣಕ್ಕೆ ಓಡಾಡುತ್ತಿರುತ್ತಾರೆ. ಹೀಗೆ ಓಡಾಟಕ್ಕೆ ಇರುವ ಏಕೈಕ ದಾರಿಯೆಂದರೆ ಈ ತೂಗು ಸೇತುವೆ.

ಶಾಲೆ-ಕಾಲೇಜಿಗೂ ಇದೇ ತೂಗುಸೇತುವೆಯಲ್ಲಿ ಸಂಚಾರ
ಅಲ್ಲದೆ ಗ್ರಾಮದ ಮಕ್ಕಳು ಶಾಲಾ- ಕಾಲೇಜುಗಳಿಗೆ ತೆರಳಲು ಕೂಡ ಇದೇ ತೂಗು ಸೇತುವೆಯನ್ನೇ ಬಳಸಿ ಪಟ್ಟಣಕ್ಕೆ ತೆರಳಬೇಕಿದ್ದು, ಸೇತುವೆ ಪಾಳುಬಿದ್ದ ಸ್ಥಿತಿಗೆ ತಲುಪಿರುವುದು ಎಲ್ಲರಲ್ಲೂ ಆತಂಕಕ್ಕೆ ಕಾರಣವಾಗಿದೆ.

ಹೆಚ್ಚಿನ ಮಟ್ಟದ ದುರಸ್ತಿ ಕಾರ್ಯಕ್ಕೆ ಆಗ್ರಹ
ಸದ್ಯ ಸ್ಥಳೀಯ ಪಾವಿನಕುರ್ವಾ ಗ್ರಾಮ ಪಂಚಾಯತಿ ಗ್ರಾಮಸ್ಥರ ದೂರಿನ ಮೇರೆಗೆ ತೂಗು ಸೇತುವೆಯ ಒಂದಷ್ಟು ಹಲಗೆಗಳನ್ನು ಬದಲಿಸುವ ಕಾರ್ಯವನ್ನೇನೋ ಮಾಡಿದೆ. ಆದರೆ, ಸಂಪೂರ್ಣ ಸೇತುವೆಯೇ ದುಃಸ್ಥಿತಿಯ ಹಂತ ತಲುಪಿರುವುದರಿಂದ ಸರ್ಕಾರ ಹೆಚ್ಚಿನ ಮಟ್ಟದ ದುರಸ್ತಿ ಕಾರ್ಯವನ್ನ ನಡೆಸಬೇಕಿದೆ.

ಇದನ್ನೂ ಓದಿ: ಪಂಚಾಯ್ತಿ ಮುಂದೆಯೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ; ಕೊನೆಗೆ ಚಿತೆ ಮೇಲೆ ಕೋಳಿ ಇಟ್ಟು ದಹನ

ಅವಘಡಗಳು ನಡೆಯುವ ಮುನ್ನ ಎಚ್ಚೆತ್ತುಕೊಳ್ಳಿ
ಒಂದರ್ಥದಲ್ಲಿ ಸಂಪೂರ್ಣ ತೂಗು ಸೇತುವೆಯನ್ನೇ ಪುನಃ ನಿರ್ಮಿಸುವ ಅನಿವಾರ್ಯತೆ ಕೂಡ ಇಲ್ಲಿದ್ದು, ಜನಪ್ರತಿನಿಧಿಗಳು ಈ ಬಗ್ಗೆ ಕಣ್ಣೆತ್ತಿ ನೋಡಬೇಕಿದೆ. ಈ ತೂಗುಸೇತುವೆಯ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿ, ಅವಘಡಗಳು ನಡೆಯುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
Published by:Thara Kemmara
First published: