Hampi: ಪ್ರವಾಸಿಗರ ಸಂಖ್ಯೆ ಇಳಿಮುಖ: ಸಂಕಷ್ಟಕ್ಕೆ ತಲುಪಿದ ಹಂಪಿ ಪ್ರವಾಸಿ ಗೈಡ್​ಗಳು

ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸುಧಾಮೂರ್ತಿಯವರು ಕಳೆದ ಬಾರಿ ಹಾಗೂ ಈ ಬಾರಿ ಪ್ರತಿಯೊಬ್ಬ ಪ್ರವಾಸಿ ಮಾರ್ಗದರ್ಶಿಗೂ ತಲಾ 10 ಸಾವಿರ ಸಹಾಯ ಮಾಡಿದ್ದಾರೆ.

ಸಾಂದರ್ಭಿಕ ಚಿತರ

ಸಾಂದರ್ಭಿಕ ಚಿತರ

 • Share this:
  ಬಳ್ಳಾರಿ (ಸೆ. 8):  ಅದು ವಿಶ್ವವಿಖ್ಯಾತ ಹಂಪಿ (hampi). ಯುನೆಸ್ಕೋ (UNESCO) ಗುರುತುಮಾಡಿರುವ ರಾಜ್ಯದ ಪ್ರಥಮ ಸ್ಥಳ. ಆದರೆ ಅಲ್ಲಿನ ಸ್ಮಾರಕಗಳ ಕಥೆ ಹೇಳುವ ಪ್ರವಾಸಿ ಮಾರ್ಗದರ್ಶಿಗಳ ಜೀವನ ಮಾತ್ರ ಈಗ ಎಳ್ಳಷ್ಟೂ ಸರಿಯಿಲ್ಲ. ಕಳೆದ ಎರಡು ವರ್ಷದಿಂದ ಪ್ರವಾಸಿಗರಿಲ್ಲದೆ, ಸರಿಯಾದ ದುಡಿಮೆಯೂ ಇಲ್ಲದೆ, ಕಷ್ಟದಲ್ಲಿ ಕಾಲ ದೂಡುತ್ತಿದ್ದಾರೆ. ಮಾರ್ಗದರ್ಶನ ಮಾಡಲು ದಿನವೆಲ್ಲಾ ಕಾದರೂ ಸರಿಯಾದ ಪ್ರವಾಸಿಗರು ದೊರಕುತ್ತಿಲ್ಲ. ನಮ್ಮ ಕಷ್ಟ ಯಾರಿಗೆ ಹೇಳೋಣ ಎನ್ನುತ್ತಿದ್ದಾರೆ ಗೈಡ್ ಗಳು. ಹಂಪಿ ಎಂದಾಕ್ಷಣ ಕಣ್ಮುಂದೆ ಥಟ್ಟನೆ ಬರುವುದು ವಿಜಯನಗರ ಸಾಮ್ರಾಜ್ಯದ ಗತವೈಭವ. ಇಂದಿನ ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಆರಂಭವಾಗಿದ್ದೇ ಹಂಪಿಯಲ್ಲಿ. ಇದೊಂದು ಬಯಲು ವಸ್ತುಸಂಗ್ರಹಾಲಯ. ಆದರೆ ಇಂತಹ ಹಂಪಿಯ ಗತವೈಭವವನ್ನು ಸಾರಿ ಹೇಳುವ ಇಲ್ಲಿನ ಪ್ರವಾಸಿ ಮಾರ್ಗದರ್ಶಿಗಳ ಪಾಡೀಗ ಕಷ್ಟಕರವಾಗಿದೆ.

  ದಿನವೆಲ್ಲಾ ಕಾದರೂ ಪ್ರವಾಸಿಗರು ಎಲ್ಲರಿಗೂ ಸಿಗದೇ ಪರದಾಡುವ ಸ್ಥಿತಿ ಎದುರಾಗಿದೆ. ಇನ್ನು ಕೆಲವರಿಗೆ ಸಿಕ್ಕರೂ ಅಪೇಕ್ಷೆ ಮಾಡಿ ದಷ್ಟು ದುಡಿಮೆಯಿಲ್ಲದೇ ಮನೆಗೋಗೋ ಪರಿಸ್ಥಿತಿ ಎದುರಾಗಿದೆ. ದಿನವೊಂದಕ್ಕೆ ಸಾವಿರಾರು ರೂಪಾಯಿ ದುಡಿಯಿತ್ತಿದ್ದ ಗೈಡ್ ಗಳೀಗ ನೂರು ರೂಪಾಯಿ ಗಳಿಸಲೂ ಸಹ ಪ್ರಯಾಸ ಪಡುವ ಹಾಗಾಗಿದೆ. ಇನ್ನು ಪದವಿ‌ ಮುಗಿಸಿದ ಅದೆಷ್ಟೋ ವಿದ್ಯಾವಂತರಿಗೆ ಗೈಡ್ ಕೆಲಸ ಆಸರೆಯಾಗಿತ್ತು. ಆದರೀಗ ಅದರಲ್ಲಿಯೂ ಸಹ ಹಿನ್ನಡೆಯಾಗಿ ಮುಂದೇನು ಮಾಡೋದು ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ ಗೈಡ್ ಗಳು.

  ಇನ್ನು ಸರ್ಕಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ 5 ಸಾವಿರ ರೂಗಳ ಸಹಾಯಧನವನ್ನು ನೀಡಿದೆ. ಆದರೆ ಇದು ಏತಕ್ಕೂ ಸಾಲದು ಎನ್ನುವುದು ಮಾರ್ಗದರ್ಶಿಗಳ ಅಳಲು. ಸರ್ಕಾರಕ್ಕಿಂತ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸುಧಾಮೂರ್ತಿಯವರು ಕಳೆದ ಬಾರಿ ಹಾಗೂ ಈ ಬಾರಿ ಪ್ರತಿಯೊಬ್ಬ ಪ್ರವಾಸಿ ಮಾರ್ಗದರ್ಶಿಗೂ ತಲಾ 10 ಸಾವಿರ ಸಹಾಯ ಮಾಡಿದ್ದಾರೆ. ಸರ್ಕಾರ ಇತ್ತ ಗಮನ ನೀಡಿ ನಮ್ಮ ಸಹಾಯಕ್ಕೆ ಬರಬೇಕು ಎನ್ನುವುದು ಗೈಡ್ ಗಳ ಅಳಲು.

  ಇದನ್ನು ಓದಿ: ಅಯೋಧ್ಯೆಯಲ್ಲಿ ಈ ಬಾರಿ ಪ್ರಧಾನಿ ಮೋದಿ ಅವರಿಂದ ದೀಪಾವಳಿ ಉದ್ಘಾಟನೆ

  ಎರಡು ವರ್ಷದಿಂದ ಪ್ರಪಂಚವನ್ನೇ ಆವರಿಸಿರುವ ಕೊರೊನಾ ಇವರೆಲ್ಲಾ ಬಾಳಲ್ಲೂ ಆಟವಾಡುತ್ತಿದೆ. ಹಂಪಿ ನೋಡಲು ಬರುವ ಪ್ರವಾಸಿಗರ ಸಂಖ್ಯೆಯನ್ನೇ ಇಳಿಮುಖವಾಗಿಸಿದೆ. ಇನ್ನು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಪ್ರವಾಸೋದ್ಯಮ ಸಚಿವರಾಗಿದ್ದ ಕಾಲದಲ್ಲಿ ಪ್ರತಿ ಮಾರ್ಗದರ್ಶಿಗಳಿಗೂ ತಿಂಗಳಿಗೆ 3 ಸಾವಿರ ರೂಪಾಯಿಗಳ ಗೌರವ ಧನಕ್ಕೆ ಶಿಫಾರಸ್ಸು ಮಾಡಿ, ಸರ್ಕಾರಿ ಆದೇಶದವರೆಗೂ ಕೊಂಡೊಯ್ದಿದ್ದರು. ಆದರೆ ನಂತರ ಅಸ್ತಿತ್ವಕ್ಕೆ ಬಂದ ಯಾವೊಂದು ಸರ್ಕಾರವೂ ಇತ್ತ ಗಮನ ನೀಡಿಲ್ಲ ಎನ್ನುವುದು ಮಾರ್ಗದರ್ಶಿಗಳ ಅಳಲು. ಈ ವಿಷಯದ ಕುರಿತು ಈಗಲಾದರೂ ಗಮನ ನೀಡಿ, ಆದಶವನ್ನು ಜಾರಿ ಮಾಡಿದರೆ, ಮಾರ್ಗದರ್ಶಿಗಳಿಗೆ ಆರ್ಥಿಕವಾಗಿ ಕೊಂಚವಾದರೂ ಸಹಕಾರವಾಗುತ್ತದೆ ಎನ್ನುವುದು ಗೈಡ್ ಗಳ ಅಳಲು.

  ಈಗಂತೂ ಜಿಲ್ಲೆಯವರೇ ಆದ ಹಾಗೂ ಕ್ಷೇತ್ರದವರೇ ಆದ ಆನಂದ್ ಸಿಂಗ್ ಅವರೇ ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವುದರಿಂದ ಮಾರ್ಗದರ್ಶಿಗಳಿಗೆ ಆಶಾಭಾವನೆಯಿದೆ. ಆದರೆ ಒಲ್ಲದ ಮನಸ್ಸಿನಿಂದ ಇಲಾಖೆ ಹೊಣೆ ಹೊತ್ತಿರುವ ಆನಂದ್ ಸಿಂಗ್ ಅವರು ಗೈಡ್ ಗಳ ಸಮಸ್ಯೆಗೆ ಸ್ಪಂದಿಸುತ್ತಾರೋ ಅಥವಾ ಕೇಳಿಯೂ ಕೇಳದಂತೆ, ನೋಡಿಯೂ ನೋಡದಂತೆ ವರ್ತಿಸುತ್ತಾರೋ ಅವರ ನಡೆಯೇ ಉತ್ತರವಾಗಬೇಕಾಗಿದೆ.

  (ವರದಿ ;ವಿನಾಯಕ್​ ಬಡೀಗೇರ್​)

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Seema R
  First published: