ಬಂದೇ ನವಾಜ್ ದರ್ಗಾಕ್ಕೆ ಬಂದವರ ಬಾಯಲ್ಲಿ ನೀರೂರಿಸುವ ಹಲ್ವಾ-ಪರೋಟ

news18
Updated:August 6, 2018, 8:41 PM IST
ಬಂದೇ ನವಾಜ್ ದರ್ಗಾಕ್ಕೆ ಬಂದವರ ಬಾಯಲ್ಲಿ ನೀರೂರಿಸುವ ಹಲ್ವಾ-ಪರೋಟ
news18
Updated: August 6, 2018, 8:41 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ (ಆಗಸ್ಟ್ 06) :  ಕಲಬುರ್ಗಿಯ ಖ್ವಾಜಾ ಬಂದೇನವಾಜ್ ಉರುಸ್ ಹಲವು ವಿಶೇಷತೆಗಳ ಸಂಗಮ. ಮಹಿಳೆಯರು, ಪುರುಷರು, ಮಕ್ಕಳನ್ನು ಆಕರ್ಷಿಸುವ ಹತ್ತಾರು ವಿಶೇಷಗಳು ಉರುಸ್ ನಲ್ಲಿರುತ್ತವೆ. ಧರಿಸುವ ಆಭರಣದಿಂದ ಹಿಡಿದು, ತಿನ್ನುವ ಖಾದ್ಯದವರೆಗೂ ಹತ್ತಾರು ವರೈಟಿಗಳನ್ನು ಉರುಸ್ ವೇಳೆ ಕಾಣುತ್ತೇವೆ. ಉರುಸ್ ಸಂದರ್ಭದಲ್ಲಿ ಮಾತ್ರ ಸಿಗುವ ಕೆಲವೊಂದು ಖಾದ್ಯಗಳಿವೆ. ಅದರ ಪೈಕಿ ಮುಖ್ಯವಾಗಿ ಭಕ್ತರನ್ನು ಆಕರ್ಷಿಸುವುದು ಹಲ್ವಾ ಪರೋಟ. ದೊಡ್ಡ ಗಾತ್ರದ ಪರೋಟಗಳನ್ನು ಸಿದ್ಧಪಡಿಸುವ ಪರೋಟಾವನ್ನು, ಹಲ್ವಾ ಜೊತೆ ಸವಿದು ಭಕ್ತರು ಸಂಭ್ರಮಿಸುತ್ತಾರೆ. ಒಂದು ತಿಂಗಳ ಕಾಲ ಈ ಹಲ್ವಾ ಪರೋಟಾ ಲಭ್ಯವಾಗುತ್ತಿದ್ದು, ಎಂಥವರ ಬಾಯಲ್ಲೂ ನೀರೂರಿಸುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಸಾಮಾನ್ಯವಾಗಿ ನೀವು ಖಾರದ ಪದಾರ್ಥಗಳೊಂದಿಗೆ ಪರೋಟಾ ತಿನ್ನುವುದು ಸಹಜ. ಆದರೆ ಕಲಬುರಗಿಯ ಖ್ವಾಜಾ ಬಂದೇನವಾಜ್ ಉರುಸ್ ಗೆ ಬರುವ ಭಕ್ತರು ಪರೋಟಾವನ್ನು ಸಿಹಿಯಾದ ಹಲ್ವಾದ ಜೊತೆ ಸವಿಯುತ್ತಾರೆ. ಎಲ್ಲರ ಬಾಯಲ್ಲಿ ನೀರೂರಿಸುವ ಈ ಹಲ್ವಾ-ಪರೋಟ ಬಂದೇನವಾಜ್ ಉರುಸ್ ನ ವಿಶೇಷಗಳಲ್ಲೊಂದು. ಪ್ರತಿ ವರ್ಷ ಖ್ವಾಜಾ ಬಂದೇನವಾಜ್ ಉರುಸ್ ಬಂತೆಂದರೆ ಈ ಖಾದ್ಯ ತಯಾರಿಸುವ ಬಾಣಸಿಗರು ದೂರದ ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶಗಳಿಂದ ದೌಡಾಯಿಸಿ ಬರುತ್ತಾರೆ. ದೊಡ್ಡ ಗಾತ್ರದ ಪರೋಟಗಳನ್ನು ಸಿದ್ಧಪಡಿಸಿ ಹಲ್ವಾದೊಂದಿಗೆ ಸವಿಯಲು ಗ್ರಾಹಕರಿಗೆ ನೀಡುತ್ತಾರೆ. ಉರುಸ್ ಗೆ ಬಂದ ಬಹುತೇಕ ಭಕ್ತರು ಈ ಖಾದ್ಯವನ್ನು ಸವಿದೇ ಹೋಗುವುದು ವಾಡಿಕೆ. ವರ್ಷಕ್ಕೆ ಒಮ್ಮೆ ಮಾತ್ರ ಸಿಗುವ ಈ ಖಾದ್ಯವನ್ನು ಗ್ರಾಹಕರು ಖುಷಿಯಿಂದ ಆಸ್ವಾದಿಸುತ್ತಾರೆ.

ಕೆಲವೊಬ್ಬರು ಅಲ್ಲಿಯೇ ಕುಳಿತು ತಿಂದರೆ, ಮತ್ತೆ ಕೆಲವರು ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ. ಸಿಹಿಯಾದ ಹಲ್ವಾದೊಂದಿಗೆ ಪರೋಟ ಸವಿಸುವುದು ಡಿಫರೆಂಟ್ ಅನುಭವ ನೀಡುತ್ತದೆ. ಈ ಅನುಭವ ಸಿಗಬೇಕೆಂದರೆ ಪ್ರತಿ ಬಾರಿಯೂ ಬರುವ ಉರುಸ್ ವರೆಗೆ ಕಾಯಲೇಬೇಕು. ಉರುಸ್ ಸಂದರ್ಭದಲ್ಲಿ ದರ್ಗಾಕ್ಕೆ ಬಂದಲ್ಲಿ ತಪ್ಪದೇ ಹಲ್ವಾ-ಪರೋಟ ಸವಿಯುವುದನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ಭಕ್ತರು.

ತುಪ್ಪದಿಂದ ನಾದಿದ ಮೈದಾ ಹಿಟ್ಟಿನ ಮೂಲಕ ದೊಡ್ಡ ದೊಡ್ಡ ಗಾತ್ರದ ಪರೋಟಗಳನ್ನು ಸಿದ್ಧಪಡಿಸಲಾಗುತ್ತದೆ. ಅದಕ್ಕೆ ಗೋಧಿ ರವೆ, ಸಕ್ಕರೆ, ತುಪ್ಪ, ಡ್ರೈ ಫ್ರೂಟ್ ಗಳ ಮಿಶ್ರಣದಿಂದ ತಯಾರಿಸಿದ ಹಲ್ವಾದೊಂದಿಗೆ ಸವಿಯಲು ನೀಡಲಾಗುತ್ತದೆ.

ಹಲ್ವಾ ಮತ್ತು ಪರೋಟಗಳ ಕಾಂಬಿನೇಷನ್ ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಭಕ್ತರ ಬೇಡಿಕೆಯನ್ನು ಗಮನಿಸಿಯೇ ಸಾವಿರಾರೂ ಮೈಲಿ ದೂರದಿಂದ ಬರುವ ಬಾಣಸಿಗರು ವಿಶೇಷ ಖಾದ್ಯವನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶಗಳಿಂದ ಬರುವ ಬಾಣಸಿಗರು ಒಂದು ತಿಂಗಳ ಕಾಲ ಬೀಡು ಬಿಟ್ಟು, ಹಲ್ವಾ-ಪರೋಟದ ಸವಿಯನ್ನು ಬಂದೇನವಾಜರ ಭಕ್ತರಗಿ ಉಣಬಡಿಸುತ್ತಾರೆ. ದರ್ಗಾಕ್ಕೆ ಬರುವ ಭಕ್ತರು ಇಷ್ಟಪಟ್ಟು ಹಲ್ವಾ ಪರೋಟ ಸವಿಯುವುದರಿಂದಾಗಿ ಒಳ್ಳೆಯ ವ್ಯಾಪರವೂ ನಡೆಯುತ್ತದೆ ಎನ್ನುತ್ತಾರೆ ಅಂಗಡಿಯ ಮಾಲೀಕ ಮ ಮಹಮ್ಮದ್ ಷಾಹೀದ್.

ಒಟ್ಟಾರೆ ಬಂದೇನವಾಜ್ ರ ಉರುಸ್ ಗೆ ಬರುವ ಭಕ್ತರನ್ನು ಹಲ್ವಾ - ಪರೋಟ ವಿಶೇಷವಾಗಿ ಆಕರ್ಷಿಸುತ್ತಿವೆ. ಬಾಯಲ್ಲಿ ನೀರೂರಿಸುವ ಈ ಖಾದ್ಯವನ್ನು ಸವಿಯುವ ಮೂಲಕ ಭಕ್ತರು ವಿಭಿನ್ನ ಅನುಭವ ಪಡೆಯುತ್ತಾರೆ. ಇಂತಹ ವಿಭಿನ್ನ ಅನುಭವ ನಿಮ್ಮದಾಗಬೇಕಿದ್ದಲ್ಲಿ ನೀವೂ ಕಲಬುರ್ಗಿಗೆ ಬನ್ನಿ.
Loading...

 
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...