ಉತ್ತರ ಪ್ರದೇಶದಲ್ಲಿ ಯುವತಿ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನ ಖಂಡಿಸಿ ಕೋಲಾರ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ಮುಂದುವರೆದಿದೆ. ಕೊಲೆಯಾದ ಸಂತ್ರಸ್ತೆಯ ನಿವಾಸಕ್ಕೆ ಭೇಟಿ ನೀಡಿ, ಸಾಂತ್ವಾನ ಹೇಳಲು ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದ, ರಾಹುಲ್ ಗಾಂಧಿ ಹಾಗು ಪ್ರಿಯಾಂಕ ಗಾಂಧಿ ಯವರ ಮೇಲೆಯೇ ಉತ್ತರಪ್ರದೇಶ ಸರ್ಕಾರ ದಬ್ಬಾಳಿಕೆ ಮಾಡಿದೆಯೆಂದು ಆರೋಪಿಸಿ, ಕೋಲಾರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ ಚಂದ್ರಾರೆಡ್ಡಿ ನೇತೃತ್ವದಲ್ಲಿ ಹತ್ತಾರು ಮುಖಂಡರು, ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ಮಾಡುವ ಮೂಲಕ ಘಟನೆಯನ್ನ ಖಂಡಿಸಿದ್ದಾರೆ. ಗಾಂಧೀ ಜಯಂತಿ ದಿನದಂದೆ ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಘಟನೆಯನ್ನ ಸರ್ಕಾರ ಮರೆಮಾಚುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಮೆಕ್ಕೆ ವೃತ್ತದ ರಸ್ತೆಯಲ್ಲಿ ಅರೆಬೆತ್ತಲೆಯಾಗಿ ಕುಳಿತ ಮುಖಂಡರು, ಉತ್ತರ ಪ್ರದೇಶದ ರಾಜ್ಯ ಸರ್ಕಾರವನ್ನ ಗೂಂಡಾ ಸರ್ಕಾರವೆಂದು ಕಾಂಗ್ರೆಸ್ ಮುಖಂಡರು ಕಿಡಿಕಾರಿದರು. ಇದೇ ವೇಳೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ವಿರುದ್ದ ಕ್ರಮಕ್ಕೆ ಆಗ್ರಹಿಸಿ, ರಾಷ್ಟ್ರಪತಿಗಳಿಗೆ ಕಾಂಗ್ರೆಸ್ ಮುಖಂಡರು ಸಹಾಯಕ ಕಮೀಷನರ್ ಸೋಮಶೇಖರ್ ಮೂಲಕ ಮನವಿ ಸಲ್ಲಿಸಿದರು.
ಯಾವ ಶಕ್ತಿಯೂ ನನ್ನನ್ನು ತಡೆಯಲು ಆಗಲ್ಲ; ಇಂದು ಮತ್ತೆ ಹತ್ರಾಸ್ಗೆ ತೆರಳಲಿರುವ ರಾಹುಲ್ ಗಾಂಧಿ ಮಾತು
ಪ್ರತಿಭಟನೆ ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ ಚಂದ್ರಾರೆಡ್ಡಿ, ಯಾವುದೇ ಕಾರಣಕ್ಕೂ ಬಿಜೆಪಿಯ ಪ್ರಜಾ ವಿರೋಧಿ ಅಟ್ಟಹಾಸ ನಡೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಮೋದಿಯವರು ಹಲವು ಬಾರಿ ಎದೆ ತೋರಿಸಿ ಮಾತನಾಡುತ್ತಾರೆ, ಆದರೆ ಕಾಂಗ್ರೆಸ್ಗೂ ಎದೆಯಿದೆ, ಗುಂಡಿಗೆಯು ಇದೆ. ಎದೆಯುಬ್ಬಿಸಿ ಬಿಜೆಪಿ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ