ಬೆಂಗಳೂರು: ಏರೋ ಇಂಡಿಯಾ 2023ರ (Aero India)ವಿಮಾನಗಳ ಪ್ರದರ್ಶನದಲ್ಲಿ ಎಚ್ಎಎಲ್ ನಿರ್ಮಾಣದ ಮಾರುತ್ ಹೆಸರಿನ HLFT-42 ಯುದ್ದ ವಿಮಾನದ ಮೇಲೆ ಹನುಮಂತನ (Hanuman) ಚಿತ್ರವನ್ನು ಹಾಕಿದ್ದಕ್ಕೆ ಪರ-ವಿರೋಧ ಚರ್ಚೆಗಳು ಶುರುವಾದ ಬೆನ್ನಲ್ಲೇ ಎಚ್ಎಎಲ್ ಅಧಿಕಾರಿಗಳು ಆ ಚಿತ್ರವನ್ನು ವಿಮಾನದಿಂದ ತೆಗೆದು ಹಾಕಿದ್ದಾರೆ. ಎಚ್ಎಎಲ್ (HAL) ಸಂಸ್ಥೆಯಿಂದ ತಯಾರಿಸಲ್ಪಟ್ಟ HLFT-42 ವಿಮಾನದ ಮೇಲೆ ಭಜರಂಗಬಲಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಇದರ ಬಗ್ಗೆ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಕೆಲವರು ಭಾರತೀಯ ಸೇನೆಗೆ ಸಂಬಂಧಿಸಿದ ವಿಮಾನದ ಮೇಲೆ ಒಂದು ಧರ್ಮದ ಭಾವಚಿತ್ರ ಅಂಟಿಸಿರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಗಳು ವಿಮಾನದ ರೆಕ್ಕೆಯ ಮೇಲೆ ಅಂಟಿಸಲಾಗಿದ್ದ ಹನುಮಂತನ ಸ್ಟಿಕ್ಕರ್ ತೆಗೆದಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್, " ಆಂತರಿಕ ಚರ್ಚೆಯ ನಂತರ ಹನುಮಂತನ ಚಿತ್ರವನ್ನು ಈಗ ಹಾಕುವುದು ಸೂಕ್ತವಲ್ಲ ಎಂಬ ಕಾರಣದಿಂದ ಅದನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ " ಎಂದು ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ವಿಮಾನದ ಶಕ್ತಿಯನ್ನು ಪ್ರದರ್ಶಿಸಲು ಹನುಮಂತನ ಚಿತ್ರವನ್ನು ಬಳಸಲು ನಿರ್ಧರಿಸಲಾಗಿತ್ತು ಎಂದು ಮಾಹಿತಿ ನೀಡಲಾಗಿತ್ತು.
ಯಾರಿಂದ ಒತ್ತಡ ಇರಲಿಲ್ಲ
ಯುದ್ದ ವಿಮಾನದ ಮೇಲೆ ಹನುಮನ ಫೋಟೋ ತೆರವು ಮಾಡಲು ಎಚ್‌ಎಎಲ್‌ಗೆ ಯಾರೂ ಒತ್ತಡ ಹೇರಿಲ್ಲ. ಸಂಸ್ಥೆ ಸ್ವಇಚ್ಛೆಯಿಂದಲೇ ಫೋಟೋವನ್ನು ತೆಗೆದು ಹಾಕಿದೆ. ಎಚ್‌ಎಲ್‌ಎಫ್‌ಟಿ ಶಕ್ತಿ ಎಷ್ಟು ಎಂದು ತೋರಿಸಲು ಅದನ್ನು ಹಾಕಲಾಗಿತ್ತು. ಆದರೆ, ಅದು ಅಪ್ರಸ್ತುತ ಎಂಬ ಕಾರಣಕ್ಕೆ ತೆರವು ಮಾಡಲಾಗಿದೆ ಎಚ್ಎಎಲ್ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಆತ್ಮನಿರ್ಭರ್ ಯೋಜನೆ ಅಡಿಯಲ್ಲಿ ನಿರ್ಮಾಣ
HAL ಈ ಹೊಸ ವಿಮಾನದ ಮಾಡೆಲ್ ಅನ್ನು ಕೇಂದ್ರ ಸರ್ಕಾರ ಆತ್ಮನಿರ್ಭರ್ ಯೋಜನೆ ಅಡಿಯಲ್ಲಿ ಅಭಿವೃದ್ದಿ ಪಡಿಸಿದೆ. ಇದಕ್ಕೆ ಶಕ್ತಿಯ ಸಂಕೇತವಾಗಿ ಭಜರಂಗಬಲಿ ಫೋಟೋ ಹಾಕಲಾಗಿತ್ತು. ಆದರೆ ಆಂಜನೇಯ ಫೋಟೋವನ್ನು ಹಾಕುವ ಮೂಲಕ ಯುದ್ದ ವಿಮಾನವನ್ನು ಒಂದು ಧರ್ಮಕ್ಕೆ ಸೀಮಿತ ಎಂದು ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಚಂಡಮಾರುತ ಬರುತ್ತಿದೆ ಎಂಬ ಅಡಿಬರಹ
ಮಾರುತ್ HLFT-42 ವಿಮಾನದಲ್ಲಿ ಭಜರಂಗಬಲಿ ಚಿತ್ರ ಎಲ್ಲರ ಗಮನ ಸೆಳೆದಿತ್ತು. ಈ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದರು. ಎಚ್ಎಎಲ್ ನಿರ್ಮಾಣದ ಈ ವಿಮಾನದ ಮೇಲೆ ಹನಮನ ಚಿತ್ರದ ಜೊತೆಗೆ ದಿ ಸ್ಟ್ರಾಮ್ ಈಸ್ ಕಮಿಂಗ್ (ಚಂಡಮಾರುತ ಬರುತ್ತಿದೆ) ಎಂದು ಅಡಿಬರಹವನ್ನು ನೀಡಲಾಗಿತ್ತು. ಈ ವಿಮಾನ ಅತ್ಯಾಧುನಿಕ ಯುದ್ದ ವಿಮಾನವಾಗಿದೆ.
ಗದೆ ಹಿಡಿದಿದ್ದ ಹನಮನ ಚಿತ್ರ
ಮಾರುತ್ HLFT-42 ವಿಮಾನದಲ್ಲಿ ಅಂಟಿಸಲಾಗಿದ್ದ ಆಂಜನೇಯ ಕೈಯಲ್ಲಿ ಗದೆಯನ್ನು ಹಿಡಿದು ಹಾರುತ್ತಿರುವ ಮಾದರಿಯಲ್ಲಿ ಚಿತ್ರವನ್ನು ಸಿದ್ಧಪಡಿಸಲಾಗಿತ್ತು. ವಿಮಾನದ ಹಿಂಬದಿಯ ಎಡ ಮತ್ತು ಬಲ ಎರಡೂ ಕಡೆಯ ರೆಕ್ಕಗಳ ಮೇಲೆ ಹನುಮಾನ್ ಚಿತ್ರವನ್ನು ಅಂಟಿಸಲಾಗಿತ್ತು. ಈ ವಿಮಾನ 2030ರ ವೇಳೆಗೆ ಹಾರಾಟ ಆರಂಭಿಸಲಿದೆ. ಇದು ತೇಜಸ್ ಮಾರ್ಕ್ 2 ಮಾದರಿಯ ತಂತ್ರಜ್ಞಾನ ಹೊಂದಿದೆ. ಯುದ್ಧವಿಮಾನಗಳಲ್ಲಿ ಅತಿ ಶಕ್ತಿಶಾಲಿಯಾದ, ಕ್ಲಿಷ್ಟ ಪರಿಸ್ಥಿತಿಯಲ್ಲೂ ಹಾರಾಡಬಲ್ಲ ಯುದ್ಧ ವಿಮಾನ ಇದಾಗಿದೆ ಎಂದು ಎಚ್‌ಎಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದರು.
100ಕ್ಕೂ ಹೆಚ್ಚು ದೇಶಗಳು ಬಾಗಿ
14ನೇ ಆವೃತಿಯ ಏರ್ ಶೋ ದಲ್ಲಿ 100ಕ್ಕೂ ಅಧಿಕ ದೇಶಗಳು ಭಾಗಿಯಾಗುತ್ತಿದೆ. ಕಳೆದ ಎಲ್ಲಾ ವರ್ಷಗಳ ಏರೋ ಇಂಡಿಯಾ ದಾಖಲೆಗಳನ್ನು ಈ ಶೋ ಮುರಿಯಲಿದೆ. ಏರೋ ಇಂಡಿಯಾ ದೇಶದ ಐಟಿ ಕ್ಯಾಪಿಟಲ್ನಲ್ಲಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ನಾಯಕರು ಆಗಮಿಸುತ್ತಿದ್ದಾರೆ. ಅಮೆರಿಕಾ, ಬ್ರಿಟನ್, ಇಸ್ರೇಲ್, ಇಟಲಿ, ಜಪಾನ್ ಸೇರಿ 20ಕ್ಕೂ ಹೆಚ್ಚು ರಾಷ್ಟ್ರಗಳ ಯುದ್ಧ ವಿಮಾನಗಳು ಏರ್ ಶೋದಲ್ಲಿ ಕಸರತ್ತು ಪ್ರದರ್ಶಿಸಲಿವೆ. ಅಲ್ಲದೆ, ಒಟ್ಟು 809 ವೈಮಾನಿಕ ವಲಯದ ಪ್ರದರ್ಶನಗಳು ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ