ಬೆಂಗಳೂರು; ಟಿಪ್ಪು ಸುಲ್ತಾನ್ ಈ ನೆಲದ ಮಗ. ವೀರ ಹೋರಾಟಗಾರ ಟಿಪ್ಪು ಯಾವುದೇ ಪಕ್ಷ ಜಾತಿ ಹಾಗೂ ಧರ್ಮಕ್ಕೆ ಸೇರಿದವನಲ್ಲ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಟಿಪ್ಪುವನ್ನು ಹಾಡಿ ಹೊಗಳಿರುವುದನ್ನು ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್ ಹಾಗೂ ಈಶ್ವರ್ ಖಂಡ್ರೆ ಉಲ್ಲೇಖಿಸಿ ಬಿಜೆಪಿ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ.
ವಿಶ್ವನಾಥ್ ಹೇಳಿಕೆ ಸಂಬಂಧ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಪಠ್ಯ ಪುಸ್ತಕದಿಂದ ತೆಗೆಯುವ ಕೆಲಸ ಮಾಡುತ್ತಿದೆ. ಆದರೆ ಬಿಜೆಪಿ ಪಕ್ಷದ ನಾಯಕ ಎಚ್.ವಿಶ್ವನಾಥ್ ಟಿಪ್ಪು ಈ ದೇಶ ಹಾಗೂ ಈ ನೆಲದ ಮಣ್ಣಿನ ಮಗ ಎನ್ನುತ್ತಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಹೋರಾಟಗಾರ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಬಿಜೆಪಿ ನಾಯಕರೇ ಈಗಲಾದರೂ ಸತ್ಯ ಅರ್ಥವಾಯಿತೆ? ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಹೇಳಿಕೆ ನೀಡಿದ್ದಾರೆ. ವಿಶ್ವನಾಥ್ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿಯವರು ಸತ್ಯ ಮರೆಮಾಚುವ ಕೆಲಸವನ್ನು ಮಾಡುತ್ತಿದ್ದಾರೆ. ಟಿಪ್ಪು ಒಬ್ಬ ದೇಶ ಭಕ್ತ, ವೀರ ಸೇನಾನಿ. ಟಿಪ್ಪು ನಿರ್ಮಿಸಿರುವ ದೇವಸ್ಥಾನ ಮತ್ತು ಕೋಟೆಗಳನ್ನು ನಾಶಮಾಡಲು ಆಗುತ್ತಾ? ಬಿಜೆಪಿ ಇತಿಹಾಸ ತಿರುಚುವ ಪ್ರಯತ್ನ ಮಾಡುತ್ತಿದೆ. ವಿಶ್ವನಾಥ್ ಸತ್ಯವನ್ನು ಹೇಳಿದ್ದಾರೆ. ಹಾಗಾಗಿ ನಾನು ವಿಶ್ವನಾಥ್ ಹೇಳಿಕೆಯನ್ನು ಬೆಂಬಲಿಸುವೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಪ್ರವಾಹ ಪರಿಸ್ಥಿತಿಗೆ ನೀಡಲಾದ ಅನುದಾನದ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ; ಕಾಂಗ್ರೆಸ್ ಒತ್ತಾಯ
ಸಂಗೊಳ್ಳಿ ರಾಯಣ್ಣ ಈ ರಾಷ್ಟ್ರದ ಆಸ್ತಿ. ದೇಶದ ಹೆಮ್ಮೆಯ ಸುಪುತ್ರ. ಅವರಿಗೆ ಸಿಗಬೇಕಾದ ಗೌರವ ರಾಜ್ಯ ಸರ್ಕಾರದಿಂದ ಸಿಗಬೇಕು ಅಂತ ಒತ್ತಯ ಮಾಡುತ್ತೇನೆ ಎಂದು ಖಂಡ್ರೆ ಆಗ್ರಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ