ಮೈಸೂರು (ಅ.21): ನಂಜನಗೂಡು ಕುರಿತಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ಈಗ ಬಿಜೆಪಿ ನಾಯಕರಲ್ಲಿಯೇ ಆಕ್ರೋಶ ವ್ಯಕ್ತವಾಗುತ್ತಿದೆ.. ಕ್ಷೇತ್ರದ ಶಾಸಕರಾದ ಹರ್ಷವರ್ಧನ್ ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಅವರು ಯಾರು ಎಂದು ಬಹಿರಂಗವಾಗಿ ತಮ್ಮ ಪಕ್ಷದ ಸಂಸದರ ವಿರುದ್ಧ ಹರಿಹಾಯ್ದಿದ್ದಾರೆ. ಈಗ ಮೈಸೂರು-ಕೊಡಗು ಸಂಸದರ ವಿರುದ್ಧ ಅಸಮಾಧಾನ ಹೊರಹಾಕಿರುವ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್, ಅವರನ್ನು ಆಯ್ಕೆಮಾಡುವ ಮತಗಳು ಇಲ್ಲಿ ಇದ್ದಿದ್ದರೆ, ಈ ರೀತಿಯ ಹೇಳಿಕೆಗಳನ್ನು ಅವರು ನೀಡುತ್ತಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ ಕ್ಷೇತ್ರ ವ್ಯಾಪ್ತಿಯಲ್ಲಿ ನಂಜನಗೂಡು ಬರುವುದಿದ್ದರೆ, ಹುಷಾರಾಗಿ ಮಾತನಾಡುತ್ತಿದ್ದರು. ಮತ ಇಲ್ಲದ ಕಾರಣ ಹೀಗೆ ಮಾತನಾಡಿದ್ದಾರೆ ಎಂದು ಕುಟುಕಿದ್ದಾರೆ.
ಇದೇ ವೇಳೆ ನಂಜನಗೂಡು ಶಾಸಕರು ದಲಿತ ಎಂಬ ಕಾರಣಕ್ಕೆ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಈ ವಿಚಾರದಲ್ಲಿ ಜಾತಿ ಕಾರ್ಡ್ ಉಪಯೋಗಿಸಬಾರದು. ಇಬ್ಬರೂ ಸಮಾಧಾನವಾಗಿ ಕುಳಿತು ಮಾತನಾಡಬೇಕು. ಜಾತಿ ಕಾರ್ಡ್ ಮೇಲೆ ಪಾಲಿಟಿಕ್ಸ್ ಮಾಡುವುದು ಸರಿಯಲ್ಲ. ಕರ್ನಾಟಕದಲ್ಲಿ ಎಲ್ಲಾ ಜನಾಂಗದವರಿಗೂ ಅವಕಾಶ ಸಿಕ್ಕಿದೆ. ನಮ್ಮ ನಮ್ಮ ಸ್ವಾರ್ಥಕ್ಕೆ ಜಾತಿ ಕಾರ್ಡ್ ಉಪಯೋಗಿಸ ಬಾರದು ಎಂದು ಸಲಹೆ ನೀಡಿದರು.
ಬಾಂಬೆ ಟೀಮ್ ಅಲ್ಲಿ ಬಿರುಕಿಲ್ಲ
ಬಾಂಬೆ ತಂಡದ ಪ್ರಮುಖನಾಯಕರಾದ ವಿಶ್ವನಾಥ್ ಮತ್ತು ಸೋಮಶೇಖರ್ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿದೆ. ವಿಶ್ವನಾಥ್ನಿಂದ ಸೋಮಶೇಖರ್ ಅಂತರ ಕಾಯ್ದುಗೊಳ್ಳುತ್ತಿದ್ದಾರೆ ಎಂಬ ಟೀಕೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಆ ರೀತಿಯ ಯಾವುದೇ ಬಿರುಕಿಲ್ಲ. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಇವೆಲ್ಲಾ ಕೇವಲ ವದಂತಿ ಎಂದರು.
ಸಿಎಂ ಬದಲಾವಣೆ ಬಿಜೆಪಿ ಹೇಳಿಕೆಯಲ್ಲ
ಮುಖ್ಯಮಂತ್ರಿ ಬದಲಾವಣೆ ಕುರಿತ ಯತ್ನಾಳ್ ಹೇಳಿಕೆ ಕೇವಲ ಹೇಳಿಕಯಷ್ಟೇ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ.ಸಿಎಂ ಬದಲಾವಣೆ ವಿಚಾರ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ನೂರಕ್ಕೆ ನೂರು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಾರೆ. ಸದ್ಯಕ್ಕೆ ಬದಲಾವಣೆ ವಿಷಯ ಇಲ್ಲ. ಈ ವಿಚಾರ ಕುರಿತು ಯತ್ನಾಳ್ ಅನಿಸಿಕೆ ಹೇಳಿದ್ದಾರೆ. ಆದರೆ, ಇದು ಬಿಜೆಪಿ ಅನಿಸಿಕೆಯಲ್ಲ. ಪಕ್ಷದ ನಿರ್ಧಾರಗಳೇ ಬೇರೆ, ವೈಯಕ್ತಿಕ ಅಭಿಪ್ರಾಯಗಳೇ ಬೇರೆ ಎಂದರು.
ಮುನಿರತ್ನ ಪರ ಪ್ರಚಾರ
ಬಾಂಬೆ ಶಾಸಕರಲ್ಲಿ ಪ್ರಮುಖರಾಗಿದ್ದ ಮುನಿರತ್ನಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದ ನಾಯಕರು ಈಗ ಅವರ ಪರ ಪ್ರಚಾರ ಕೂಡ ನಡೆಸುವುದಾಗಿ ತಿಳಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಸದ್ಯದಲ್ಲೇ ಪ್ರಚಾರಕ್ಕೆ ತೆರಳುತ್ತೇನೆ.
ಸಾರಾ ಮಹೇಶ್ ಕೊಚ್ಚೆಗುಂಡಿ
ಕಳ್ಳ ಹಕ್ಕಿ ಎಂದು ತಮ್ಮನ್ನು ಟೀಕಿಸಿದ ಸಾರಾ ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಾ. ರಾ. ಮಹೇಶ್ ಕೊಚ್ಚೆಗುಂಡಿ ಎಂದು ಈಗಾಗಲೇ ಹೇಳಿದ್ದೇನೆ. ನಾನು ಶುಭ್ರವಾಗಿದ್ದೇನೆ. ಕೊಚ್ಚೆಗುಂಡಿಗೆ ಕಲ್ಲು ಹಾಕಿ ನನ್ನ ಮೇಲೆ ಕೊಚ್ಚೆ ಹಾರಿಸಿಕೊಳ್ಳುವುದಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ