news18-kannada Updated:January 28, 2021, 3:24 PM IST
ಹೆಚ್.ವಿಶ್ವನಾಥ್
ಮೈಸೂರು(ಜ.28): ವಿಧಾನಪರಿಷತ್ ಸದಸ್ಯ ಹಿರಿಯ ರಾಜಕಾರಣಿ ಹೆಚ್.ವಿಶ್ವನಾಥ್ಗೆ ಸುಪ್ರೀಂಕೋರ್ಟ್ನಲ್ಲೂ ಹಿನ್ನಡೆಯಾಗಿದ್ದು, ಯಾವುದೇ ಆಯ್ಕೆ ಪ್ರಕ್ರಿಯೆಗೆ ಒಳಗಾಗದೆ ಸಾಂವಿಧಾನಿಕ ಹುದ್ದೆ ಹೊಂದುವಂತಿಲ್ಲ ಎಂಬ ರಾಜ್ಯ ಹೈಕೋರ್ಟ್ ಆದೇಶವನ್ನ ಸುಪ್ರೀಂಕೋರ್ಡ್ ಎತ್ತಿ ಹಿಡಿದಿದೆ. ಮಂತ್ರಿಯಾಗುವ ಇರಾದೆಯಿಂದ ತನ್ನ ಮೇಲಿದ್ದ ರಾಜ್ಯ ಹೈಕೋರ್ಟ್ ಆದೇಶವನ್ನ ರದ್ದು ಮಾಡುವಂತೆ ಮನವಿ ಮಾಡಿ ಹೆಚ್.ವಿಶ್ವನಾಥ್ ಸುಪ್ರೀಂಗೆ ಮೊರೆಹೋಗಿದ್ದರು. ಇಂದು ಸುಪ್ರೀಂನಲ್ಲಿ ವಿಚಾರಣೆಗೆ ಬಂದ ಹೆಚ್.ವಿಶ್ವನಾಥ್ ಅವರ ಅರ್ಜಿಯನ್ನ ಪರಿಶೀಲಿಸಿದ ನ್ಯಾಯಾಧೀಶರು ಕೆಳಹಂತದ ನ್ಯಾಯಾಲಯದ ಆದೇಶವನ್ನೇ ಎತ್ತಿಹಿಡಿದಿದ್ದು, ಜನರಿಂದ ಅಥವಾ ಜನಪ್ರತಿನಿಧಿಗಳಿಂದ ಆಯ್ಕೆಯಾಗದೆ ಮಂತ್ರಿ ಅಥವಾ ಸಾಂವಿಧಾನಿಕ ಹುದ್ದೆ ಹೊಂದುವಂತಿಲ್ಲ ಎಂದು ಆದೇಶ ನೀಡಿದೆ. ಈ ಆದೇಶದಿಂದಾಗಿ ಹೆಚ್.ವಿಶ್ವನಾಥ್ ಅವರು ಮಂತ್ರಿಯಾಗುವ ಆಸೆಗೆ ಮತ್ತೆ ಹಿನ್ನಡೆಯಾದಂತಾಗಿದೆ.
ಇತ್ತ ಮೈಸೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಲ್ಸಿ ಹೆಚ್.ವಿಶ್ವನಾಥ್ ನನಗರ ಸಚಿವರುಗಳ ಸಹಾನುಭೂತಿ ಬೇಕಿಲ್ಲ ಎಂದು ತನ್ನ ಬಿಜೆಪಿಯ ಸಂಗಡಿಗರಿಗೆ ಟಾಂಗ್ ಕೊಟ್ಟಿದ್ದಾರೆ. ನಾವು 17 ಮಂದಿ ಒಟ್ಟಿಗೆ ಬೇರೆ ಬೇರೆ ಪಕ್ಷದಿಂದ ಹೊರಬಂದಿದ್ದೆವು. ಎಲ್ಲರೂ ಒಟ್ಟಿಗೆ ಬಾಂಬೆಗೆ ಹೋಗಿದ್ದೆವು. ಆದ್ರೆ ಅವರಲ್ಲಿ ಎಲ್ಲರೂ ಮಂತ್ರಿಯಾದರು, ನಾನು ಆಗಿಲ್ಲ. ನನ್ನ ಜೊತೆ ಇದ್ದ 17 ಮಂದಿ ಟೀಂ ಸಿಎಂ ಬಿಎಸ್ವೈ ಜೊತೆ ಮಾತನಾಡಬೇಕಿತ್ತು. ಅದು ಬಿಟ್ಟು ತಮ್ಮ ಬಗ್ಗೆ ಸಚಿವರುಗಳ ಬಾಯಿ ಮಾತಿನ ಸಹಾನುಭೂತಿ ತೋರುತ್ತಿರುವುದು ನನಗೆ ಬೇಕಿಲ್ಲ ಅಂತ ಖಾರವಾಗಿ ಉತ್ತರಿಸಿದ್ದಾರೆ.
ಸಚಿವರಾಗುವ ವಿಶ್ವನಾಥ್ ಆಸೆ ಭಗ್ನ; ಹೈಕೋರ್ಟ್ನ ‘ಅನರ್ಹತೆ’ ತೀರ್ಪು ಎತ್ತಿಹಿಡಿದ ಸುಪ್ರೀಂ
ಇಂದು ಹುಣಸೂರು ತಾಲೂಕಿನ ನಾಗಾಪುರದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಎಂಎಲ್ಸಿ ಹೆಚ್.ವಿಶ್ವನಾಥ್, ತನ್ನನ್ನು ಒಬ್ಬಂಟಿಯಲ್ಲ ಎಂದು ಹೇಳಿರುವ ಬಾಂಬೆ ಟೀಂನ ಕೆಲ ಬಿಜೆಪಿ ಮುಖಂಡರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್ ವಿಶ್ವನಾಥ್ ನಮ್ಮ ಜೊತೆಯಲ್ಲೇ ಇದ್ದಾರೆಂದು ಹೇಳಿದ್ದಾರೆ. ಹೌದು, ನಾವೆಲ್ಲರೂ ಜೊತೆಯಲ್ಲೇ ಇದ್ದೇವೆ. ಆದರೆ ಅವರು ಮಂತ್ರಿಯಾಗಿದ್ದಾರೆ, ನಾನು ಖಾಲಿ ಇದ್ದೀನಿ ಬಿಡಿ. ಎಲ್ಲವೂ ಪವರ್ ಪಾಲಿಟಿಕ್ಸ್ . ನಾನು ಕ್ಯಾಬಿನೆಟ್ ದರ್ಜೆ ಸಚಿವನಾಗಿದ್ದವನು, ವಿಧಾನಪರಿಷತ್ ಉಪಸಭಾಪತಿ ಹುದ್ದೆಯನ್ನ ಒಪ್ಪಲಾರೆ. ಆದರೆ ಪಕ್ಷ, ಸಿಎಂ ವಿಶ್ವಾಸವಿಟ್ಟು ಸಭಾಪತಿ ಹುದ್ದೆ ಕಲ್ಪಿಸಿದರೆ ಅದರ ಬಗ್ಗೆ ಆಮೇಲೆ ನೋಡೋಣ ಅಂತ ಹೇಳಿದ್ದಾರೆ.
ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ 17 ಮಂದಿಯಲ್ಲಿ 16 ಮಂದಿ ಸಚಿವರಾಗಿದ್ದು ಎಂಎಲ್ಸಿ ಹೆಚ್.ವಿಶ್ವನಾಥ್ ಮಾತ್ರ ಮಂತ್ರಿಯಾಗದೆ ಕೇವಲ ಪರಿಷತ್ ಸದಸ್ಯರಾಗಿದ್ದಾರೆ. ಹುಣಸೂರು ಉಪಚುನಾಣೆಯಲ್ಲಿ ಸೋತ ಹೆಚ್.ವಿಶ್ವನಾಥ್ರನ್ನ ಬಿಜೆಪಿ ಸರ್ಕಾರ ಸಾಹಿತ್ಯ ಕೋಟಾದಲ್ಲಿ ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದೆ. ಪಕ್ಷ ಬಿಟ್ಟು ಹೋಗಿದ್ದ 17 ಮಂದಿಯನ್ನ ಅನರ್ಹರು ಎಂದು ಘೋಷಿಸಿದ ಸ್ಪೀಕರ್ ಆದೇಶಕ್ಕೆ ಹೈಕೋರ್ಟ್ ಒಪ್ಪಿಗೆ ಸೂಚಿಸಿ ಎಲ್ಲರೂ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬರಬೇಕು ಅಥವಾ ಜನಪ್ರತಿನಿಧಿಗಳಿಂದ ಆಯ್ಕೆಯಾಗಬೇಕು. ಇಲ್ಲವಾದಲ್ಲಿ ನಾಮ ನಿರ್ದೇಶಿತ ಸದಸ್ಯರಿಗೆ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದುವಂತಿಲ್ಲ ಅಂತ ಆದೇಶ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ಸಹ ಅದೇ ಆದೇಶವನ್ನ ಎತ್ತಿಹಿಡಿದಿದ್ದು ಹಳ್ಳಿಹಕ್ಕಿ ಖ್ಯಾತಿಯ ಹೆಚ್.ವಿಶ್ವನಾಥ್ಗೆ ಈ ಆದೇಶದಿಂದ ದೊಡ್ಡ ಹಿನ್ನಡೆಯಾಗಿದೆ.
Published by:
Latha CG
First published:
January 28, 2021, 3:15 PM IST