ಹೆಚ್. ವಿಶ್ವನಾಥ್ ಬಿಜೆಪಿಗೆ ಕರೆತಂದದ್ದು ಯಾರು? ಬಿಎಸ್​ವೈ ಅಲ್ಲ, ಅಶ್ವಥನಾರಾಯಣ ಅಲ್ಲ, ಯೋಗೇಶ್ವರ್ ಅಲ್ಲ; ರಹಸ್ಯ ಬಿಚ್ಚಿಟ್ಟ ಹಳ್ಳಿಹಕ್ಕಿ

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರದ್ದೂ ಇಬ್ಬಂದಿ ನೀತಿಯಾಗಿದೆ. ಸಿದ್ದರಾಮಯ್ಯ ಜೆಡಿಎಸ್​ನ 7 ಮಂದಿಯನ್ನು ಕರೆದುಕೊಂಡು ಹೋದರಲ್ಲ, ಅದೇನು? ಅದು ಪಕ್ಷಾಂತರ ಅಲ್ಲವಾ? ಅದು ರಾಜಕೀಯ ಧ್ರುವೀಕರಣವಾ? ಅದು ಧ್ರುವೀಕರಣ ಆದರೆ ನಮ್ಮದೂ ಕೂಡ ಅದೆಯೇ ಎಂದು ಹಳ್ಳಿಹಕ್ಕಿ ಕುಟುಕಿದ್ದಾರೆ.

news18
Updated:November 15, 2019, 1:31 PM IST
ಹೆಚ್. ವಿಶ್ವನಾಥ್ ಬಿಜೆಪಿಗೆ ಕರೆತಂದದ್ದು ಯಾರು? ಬಿಎಸ್​ವೈ ಅಲ್ಲ, ಅಶ್ವಥನಾರಾಯಣ ಅಲ್ಲ, ಯೋಗೇಶ್ವರ್ ಅಲ್ಲ; ರಹಸ್ಯ ಬಿಚ್ಚಿಟ್ಟ ಹಳ್ಳಿಹಕ್ಕಿ
ಚಾಮುಂಡಿ ದೇವಿಯ ಬಳಿ ಹೆಚ್. ವಿಶ್ವನಾಥ್(ಎಡದಿಂದ ಮೂರನೇಯವರು) ಮತ್ತಿತರರು
  • News18
  • Last Updated: November 15, 2019, 1:31 PM IST
  • Share this:
ಮೈಸೂರು(ನ. 15): ಕಾಂಗ್ರೆಸ್ ಪಕ್ಷದ ಶಾಸಕರು ಬಂಡಾಯವೆದ್ದು ಬಿಜೆಪಿ ಕಡೆ ಮುಖ ಮಾಡಿ ನಿಂತುಕೊಳ್ಳಲು ಅವರದ್ದೇ ಕಾರಣವಿತ್ತು. ಆದರೆ, ಹೆಚ್. ವಿಶ್ವನಾಥ್ ಅವರು ರಾಜೀನಾಮೆ ನೀಡಿದಾಗ ರಾಜ್ಯ ರಾಜಕಾರಣಕ್ಕೆ ಅಚ್ಚರಿಯ ತಿರುವು ಸಿಕ್ಕಿತ್ತು. ವಿಶ್ವನಾಥ್ ನಡೆ ಅನಿರೀಕ್ಷಿತವಾಗಿತ್ತು. ಮಾಡಿದ ಸಾಲ ತೀರಿಸಲು ವಿಶ್ವನಾಥ್ ಬಿಜೆಪಿ ಸೇರಿದ್ದಾರೆಂದು ಸಾ.ರಾ. ಮಹೇಶ್ ಆದಿಯಾಗಿ ಅನೇಕ ಮುಖಂಡರು ಟೀಕಿಸಿದರು. ಆದರೆ, ತಾವು ಬಿಜೆಪಿ ಸೇರಲು ನಿಜವಾದ ಕಾರಣ ಏನೆಂದು ವಿಶ್ವನಾಥ್ ಇವತ್ತು ಬಾಯಿಬಿಟ್ಟಿದ್ದಾರೆ. ಚಾಮರಾಜನಗರದ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ನೀಡಿದ ಆಹ್ವಾನದ ಮೇರೆಗೆ ತಾವು ಬಿಜೆಪಿಗೆ ಬಂದಿದ್ದಾಗಿ ಹುಣಸೂರು ಕ್ಷೇತ್ರದ ಅನರ್ಹ ಶಾಸಕ ವಿಶ್ವನಾಥ್ ಹೇಳಿಕೊಂಡಿದ್ದಾರೆ.

ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿಶ್ವನಾಥ್ ಅವರು, ತಮಗೆ ಶ್ರೀನಿವಾಸ ಪ್ರಸಾದ್ ಅವರಲ್ಲದೇ ಬೇರೆ ಯಾರೇ ಆಹ್ವಾನ ನೀಡಿದ್ದರೂ ಬಿಜೆಪಿಗೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆರ್. ಶಂಕರ್​ಗೂ ಇಲ್ಲ, ಈಶ್ವರಪ್ಪ ಮಗನಿಗೂ ಇಲ್ಲ: ರಾಣೆಬೆನ್ನೂರು ಬಿಜೆಪಿ ಟಿಕೆಟ್ ಅರುಣ್ ಕುಮಾರ್ ಪಾಲು

ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆಯಲು ವಿ. ಶ್ರೀನಿವಾಸ ಪ್ರಸಾದ್ ಅವರೇ ಕಾರಣ. ಶ್ರೀನಿವಾಸ ಪ್ರಸಾದ್ ಮೂಲಕ ಯಡಿಯೂರಪ್ಪ ನನಗೆ ಪಕ್ಷಕ್ಕೆ ಆಹ್ವಾನಿಸಿದರು. ಇಬ್ಬರು ಮೂವರು ಬರುತ್ತಾರೆ ಹೋಗುತ್ತಾರೆ. ನಿಮ್ಮಂಥವರು ಬರೋಕೆ ಆಗುತ್ತಾ ಅಂದರು. ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೀವೇ ಮುಂದೆ ನಿಲ್ಲಬೇಕು ಎಂದವರು ಕೇಳಿದರು. ಆವತ್ತು ಶ್ರೀನಿವಾಸ ಪ್ರಸಾದ್ ಮನೆಯಲ್ಲೇ ಎಲ್ಲವೂ ತೀರ್ಮಾನವಾಗಿ ಹೋಯಿತು ಎಂದು ಹೆಚ್. ವಿಶ್ವನಾಥ್ ವಿವರಿಸಿದ್ದಾರೆ.

ರಾಜಕೀಯ ಧ್ರುವೀಕರಣ:

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಬಂಡಾಯವೆದ್ದು ಶಾಸಕರು ಬಿಜೆಪಿಗೆ ಬಂದಿರುವುದನ್ನು ವಿಶ್ವನಾಥ್ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ಧಾರೆ.

ರಾಜ್ಯದಲ್ಲಾದ ರಾಜಕೀಯ ಪಲ್ಲಟವನ್ನು ಯಾವ ಸಾಹಿತಿಯಾಗಲೀ, ರಾಜಕೀಯ ಚಿಂತಕರಾಗಲೀ ಸರಿಯಾಗಿ ವಿಶ್ಲೇಷಿಸಲಿಲ್ಲ. ನಮ್ಮನ್ನು ಬಾಯಿಗೆ ಬಂದಂತೆ ಅನರ್ಹರು, ಅಬ್ಬೇಪಾರಿಗಳು ಎಂದು ಕರೆದದ್ದು ನಮಗೆ ನೋವು ತಂದಿತು. ನಾವ್ಯಾರು ಪಕ್ಷಾಂತರಿಗಳಲ್ಲ. ಇದು ರಾಜಕೀಯ ಧ್ರುವೀಕರಣವೇ ಆಗಿದೆ. ರಾಜ್ಯದಲ್ಲಿ ರಾಕ್ಷಸ ರಾಜಕಾರಣ, ಜಾತಿ ರಾಜಕಾರಣ ಮಿತಿ ಮೀರಿದ್ದಾಗ ನಾವು ತೆಗೆದುಕೊಂಡ ತೀರ್ಮಾನವೇ ರಾಜೀನಾಮೆ ಎಂದು ವಿಶ್ವನಾಥ್ ವಿಶ್ಲೇಷಿಸಿದ್ದಾರೆ.ಇದನ್ನೂ ಓದಿ: ಅನರ್ಹರನ್ನು ಮಂತ್ರಿ ಮಾಡುತ್ತೇವೆಂದು ಜನರ ಬ್ರೈನ್​ವಾಶ್ ಮಾಡುತ್ತಿದ್ದಾರೆ: ಯಡಿಯೂರಪ್ಪ ವಿರುದ್ಧ ದೇವೇಗೌಡ ಕಿಡಿ

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರದ್ದೂ ಇಬ್ಬಂದಿ ನೀತಿಯಾಗಿದೆ. ಸಿದ್ದರಾಮಯ್ಯ ಜೆಡಿಎಸ್​ನ 7 ಮಂದಿಯನ್ನು ಕರೆದುಕೊಂಡು ಹೋದರಲ್ಲ, ಅದೇನು? ಅದು ಪಕ್ಷಾಂತರ ಅಲ್ಲವಾ? ಅದು ರಾಜಕೀಯ ಧ್ರುವೀಕರಣವಾ? ಅದು ಧ್ರುವೀಕರಣ ಆದರೆ ನಮ್ಮದೂ ಕೂಡ ಅದೆಯೇ ಎಂದು ಹಳ್ಳಿಹಕ್ಕಿ ಕುಟುಕಿದ್ದಾರೆ.

ಜನರನ್ನು ಕೇಳದೆಯೇ ನಾನು ರಾಜೀನಾಮೆ ನೀಡಿದೆ. ಅದಕ್ಕೆ ಜನರಲ್ಲಿ ಕ್ಷಮೆಯಾಚಿಸುತ್ತೇನೆ. ಜನರು ಮತ್ತೆ ನಮ್ಮನ್ನು ಸ್ವೀಕಾರ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಜನರು ನಮ್ಮನ್ನು ಸ್ವೀಕರಿಸುವಂಥ ರೀತಿಯ ವಾತಾವರಣ ನಿರ್ಮಿಸುವ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ ಎಂದವರು ಕರೆ ನೀಡಿದ್ಧಾರೆ.

ಜಾತಿ ಇಲ್ಲದೇ ಬಂದವರು ಮೋದಿ, ಅರಸು:

ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಮಾಜಿ ಸಿಎಂ ದೇವರಾಜು ಅರಸು ಅವರೊಂದಿಗೆ ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಸ್ವತಂತ್ರವಾಗಿ ಸ್ಪರ್ಧಿಸುವುದು ರೋಷನ್​ ಬೇಗ್​ಗೆ ಬಿಟ್ಟ ವಿಚಾರ, ಏನಾದರೂ ಮಾಡಿಕೊಳ್ಳಲಿ; ಬಿಎಸ್​ ಯಡಿಯೂರಪ್ಪ

ದೇವರಾಜು ಅರಸು ಹೇಗೆ ಜಾತಿ ಇಲ್ಲದ ಜಾತಿಯಿಂದ ಬಂದರೋ, ಅದೇ ರೀತಿ ಮೋದಿ ಕೂಡ ಜಾತಿ ಇಲ್ಲದ ಜಾತಿಯಿಂದ ಬಂದಿದ್ಧಾರೆ. ದೇವರಾಜ ಅರಸು ಜೊತೆ ಮೋದಿ ಅವರನ್ನು ಸಮೀಕರಣ ಮಾಡಿ ನೋಡಬೇಕು. ಮೋದಿ ಜಾತಿವಾದಿ ಪಕ್ಷದಿಂದ ಬಂದವರು ಎಂಬ ವಿಚಾರವಷ್ಟೇ ಇಟ್ಟುಕೊಂಡು ವಿಶ್ಲೇಷಣೆ ನಡೆಯುತ್ತಿದೆ. ಆದರೆ, ಮೋದಿ ಅವರು ಎಲ್ಲರೂ ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿದ್ದಾರೆ. ಅತೀ ಚಿಕ್ಕ ಸಮುದಾಯದಿಂದ ಬಂದ ಅವರು ಜಾಗತಿಕವಾಗಿ ಭಾರತವನ್ನು ಕಟ್ಟಿದ್ಧಾರೆ ಎಂದು ಹೆಚ್. ವಿಶ್ವನಾಥ್ ಶ್ಲಾಘನೆ ವ್ಯಕ್ತಪಡಿಸಿದ್ಧಾರೆ.

ಹೆಚ್. ವಿಶ್ವನಾಥ್ ಅವರು ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಕನಕದಾಸ ಜಯಂತಿ ಆಚರಣೆಯಲ್ಲಿ ಭಾಗಿಯಾದರು. ಇತ್ತೀಚೆಗಷ್ಟೇ ಕಾಂಗ್ರೆಸ್​ನಿಂದ ಬಿಜೆಪಿಗೆ ವಾಪಸ್ ಬಂದ ವಿಜಯಶಂಕರ್ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಮೊದಲಾದವರು ಈ ಸಂದರ್ಭದಲ್ಲಿದ್ದರು.

ನಾನು ಮತ್ತು ವಿಜಯಶಂಕರ್ ಇಂದು ಒಟ್ಟಿಗೆ ಬಿಜೆಪಿ ಕಚೇರಿಗೆ ಬಂದಿದ್ದೇವೆ. ಕನಕಜಯಂತಿಯಂದು ಇಬ್ಬರು ಕನಕರು ಬಿಜೆಪಿ ಮನೆಗೆ ಬಂದಿದ್ದೇವೆ. ಇದು ಒಳ್ಳೆಯ ಬೆಳವಣಿಗೆ. ಬಿಜೆಪಿಗೆ ಶುಭದಿನಗಳು ಕಾದಿವೆ ಎಂದವರು ಈ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.

(ವರದಿ: ಪುಟ್ಟಪ್ಪ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 15, 2019, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading