news18-kannada Updated:December 16, 2020, 1:25 PM IST
ಹೆಚ್. ವಿಶ್ವನಾಥ್
ಮೈಸೂರು (ಡಿ. 16): ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿಗೆ ಬೆಂಬಲ ನೀಡಿದ್ದ ಜೆಡಿಎಸ್ ನಡೆಯ ಕುರಿತು ಎಂಎಲ್ಸಿ ಹೆಚ್. ವಿಶ್ವನಾಥ್ ಲೇವಡಿ ಮಾಡಿದ್ದಾರೆ. ಜೆಡಿಎಸ್ ಪಕ್ಷವೆಂಬುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಂದು ಮಗು. ಆ ಮಗುವಿಗೆ ಯಾರು ಮಿಠಾಯಿ ತೋರಿಸುತ್ತಾರೋ ಅವರ ಕಡೆಗೆ ಮಗು ಹೋಗುತ್ತದೆ ಎನ್ನುವ ಮೂಲಕ ಜೆಡಿಎಸ್ ಪಕ್ಷವನ್ನು ಮಿಠಾಯಿ ಪಕ್ಷವೆಂದು ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ಒಂದು ಮಗುವಿನಂತೆ. ಅದಕ್ಕೆ ಯಾರು ಮಿಠಾಯಿ ತೋರಿಸುತ್ತಾರೋ ಅವರ ಕಡೆಗೆ ಹೋಗುತ್ತದೆ. ಹೀಗಾಗಿ, ಅವರ ಬಗ್ಗೆ ಹೆಚ್ಚು ಮಾತನಾಡೋದು ಬೇಡ ಎಂದು ವಿಧಾನ ಪರಿಷತ್ ಸದನದಲ್ಲಿ ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿದ್ದಕ್ಕೆ ಹೆಚ್. ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ನಿನ್ನೆ ಸಾರ್ವಭೌಮ ಸದನದ ಬಾಗಿಲನ್ನು ಕಾಂಗ್ರೆಸ್ನವರು ಬೂಟು ಕಾಲಿನಿಂದ ಒದ್ದರು. ಇವರಿಗೆ ಸದನದ ಬಗ್ಗೆ ಅದ್ಯಾವ ಗೌರವ ಇದೆ? ನಿನ್ನೆ ಇಡೀ ರಾಜ್ಯ ಸದನವನ್ನು ವೇದನೆಯಿಂದ ನೋಡಿದೆ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.
ಭಾರತದ ಎಲ್ಲ ಸದನಗಳನ್ನು ನಮ್ಮ ವಿಧಾನ ಪರಿಷತ್ ಮೀರಿ ನಿಂತಿದೆ. ತನ್ನದೇ ಆದ ಸಂಸ್ಕೃತಿಯನ್ನು ಇಡೀ ದೇಶದಲ್ಲಿ ಬಿಂಬಿಸಿದೆ. ಅಂತಹ ವಿಧಾನ ಪರಿಷತ್ನ ವಿಶಿಷ್ಟ ಸ್ಥಾನವನ್ನು ನಾವೆಲ್ಲರೂ ಸೇರಿ ಕಳೆದಿದ್ದೇವೆ. ಯಾರು ಜನತಂತ್ರ ವ್ಯವಸ್ಥೆಯ ಬಗ್ಗೆ ಭಾಷಣ ಮಾಡಿದರೋ ಅವರೇ ನಿನ್ನೆ ಅದನ್ನ ಸದನದಲ್ಲಿ ಅದನ್ನ ಕೊಚ್ಚಿಕೊಚ್ಚಿ ಕೊಂದಿದ್ದಾರೆ. ಸದನವನ್ನ ನಾವು ದೇವಾಲಯ ಅಂದಿದ್ದೆವು. ಅದಕ್ಕೆ ಪ್ರಧಾನಿ ಲೋಕಸಭೆಗೆ ಹಣೆಯಿಟ್ಟು ನಮಸ್ಕಾರ ಮಾಡಿ ಹೋಗಿದ್ದರು. ಅಂತಹ ಸಾರ್ವಭೌಮ ಸದನದ ಬಾಗಿಲನ್ನು ನಿನ್ನೆ ಕಾಂಗ್ರೆಸ್ನವರು ಬೂಟಿನ ಕಾಲಿನಲ್ಲಿ ಒದ್ದರು. ಭಾರತಾಂಬೆ ನಮ್ಮನ್ನು ಕ್ಷಮಿಸಲಿ, ಅಧಿಕಾರ ಕೊಟ್ಟ ಜನರು ನಮ್ಮನ್ನು ಕ್ಷಮಿಸಲಿ. ನಿನ್ನೆಯ ಘಟನೆ ಖಂಡನೀಯವಾದುದು ಎಂದು ಮೈಸೂರಿನಲ್ಲಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ನಿನ್ನೆ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಬಿಜೆಪಿಗೆ ಜೆಡಿಎಸ್ ಕೂಡ ಬೆಂಬಲ ನೀಡಿತ್ತು. ಜೆಡಿಎಸ್ ಬೆಂಬಲದೊಂದಿಗೆ ಹೊಸ ಸಭಾಪತಿ ಆಯ್ಕೆ ಮಾಡಿ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಪಾಸ್ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದ ಬಿಜೆಪಿಯ ಯೋಚನೆಯನ್ನು ತಲೆಕೆಳಗು ಮಾಡಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮತ್ತೊಮ್ಮೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸರಿಯಾಗಿ ಕಲಾಪವನ್ನು ನಡೆಸಿಲ್ಲ ಎಂದು ಬಿಜೆಪಿ ಜೊತೆ ಸೇರಿ ಜೆಡಿಎಸ್ ಕೂಡ ಆರೋಪಿಸಿತ್ತು.
Published by:
Sushma Chakre
First published:
December 16, 2020, 1:24 PM IST