ಬೆಂಗಳೂರು (ಜ. 13): ಇಂದು ಸಂಜೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ 7 ಸಚಿವರ ಪಟ್ಟಿ ಅಂತಿಮವಾಗಿದ್ದು, ಹಾಲಿ ಸಚಿವ ಹೆಚ್. ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಡಲು ನಿರ್ಧರಿಸಲಾಗಿದೆ. ಇಂದು ತುರ್ತಾಗಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆಯಲ್ಲೇ ಹೆಚ್. ನಾಗೇಶ್ ಅವರ ಮನವೊಲಿಕೆ ಮಾಡಿ, ರಾಜೀನಾಮೆ ನೀಡಲು ಸೂಚಿಸಿದ್ದಾರೆ. ಕೊನೆಕ್ಷಣದವರೆಗೂ ಸಚಿವ ಸ್ಥಾನವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಹೆಚ್. ನಾಗೇಶ್ ಅವರಿಗೆ ಇದರಿಂದ ಭಾರೀ ನಿರಾಸೆಯಾಗಿದೆ.
ಈಗಾಗಲೇ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಆರ್. ಶಂಕರ್, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಸಿ.ಪಿ. ಯೋಗೇಶ್ವರ್, ಎಸ್. ಅಂಗಾರ ಅವರ ಹೆಸರನ್ನು ಸಚಿವ ಸಂಪುಟಕ್ಕೆ ಅಂತಿಮಗೊಳಿಸಲಾಗಿದೆ. ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದ ಹೆಚ್. ವಿಶ್ವನಾಥ್ ಹಾಗೂ ಮುನಿರತ್ನ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಹಾಲಿ ಅಬಕಾರಿ ಸಚಿವರಾಗಿರುವ ಹೆಚ್. ನಾಗೇಶ್ ಅವರನ್ನು ಕೂಡ ಸಂಪುಟದಿಂದ ಕೈ ಬಿಟ್ಟಿರುವುದು ವಲಸಿಗ ಬಿಜೆಪಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಹೆಚ್. ನಾಗೇಶ್ ಅವರ ಮನವೊಲಿಕೆ ಮಾಡಿ, ರಾಜೀನಾಮೆ ನೀಡಲು ಒಪ್ಪಿಸಿದ್ದಾರೆ. ಮುಂದೆ ನೋಡೋಣ, ಈಗ ಸದ್ಯಕ್ಕೆ ರಾಜೀನಾಮೆ ಕೊಡು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಭೆಯಲ್ಲೇ ಸಚಿವ ಹೆಚ್. ನಾಗೇಶ್ ಅವರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಇಂದು ಸಚಿವ ಸಂಪುಟ ವಿಸ್ತರಣೆ; ಹೆಚ್. ನಾಗೇಶ್ಗೆ ಕೊಕ್, ಮುನಿರತ್ನ ಕೈ ತಪ್ಪಿತಾ ಮಂತ್ರಿಗಿರಿ?
ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ, ಯಡಿಯೂರಪ್ಪನವರ ಮನವೊಲಿಸಲು ಸಚಿವ ಹೆಚ್. ನಾಗೇಶ್ ಮುಂದಾಗಿದ್ದರು. ಆದರೆ, ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಲು ಹೆಚ್. ನಾಗೇಶ್ಗೆ ಸಾಧ್ಯವಾಗಿರಲಿಲ್ಲ. ಸಿಎಂ ರಾಜೀನಾಮೆಗೆ ಸೂಚಿಸಿದ ನಂತರ ತೀವ್ರ ಬೇಸರದಿಂದಲೇ ಕ್ಯಾಬಿನೆಟ್ನಿಂದ ಹೊರಬಂದ ಹೆಚ್. ನಾಗೇಶ್ ಅವರ ಪರವಾಗಿ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಗೋಪಾಲಯ್ಯ, ನಾರಾಯಣ ಗೌಡ ನಿಂತರು. ಆದರೂ ಸಿಎಂ ಯಡಿಯೂರಪ್ಪ ತಮ್ಮ ನಿಲುವನ್ನು ಬದಲಾಯಿಸಲಿಲ್ಲ.
ತಮ್ಮನ್ನು ಯಾವುದೇ ಕಾರಣಕ್ಕೂ ಸಂಪುಟದಿಂದ ಕೈ ಬಿಡುವುದಿಲ್ಲ ಎಂದು ನಿನ್ನೆ ಸುದ್ದಿಗೋಷ್ಠಿ ನಡೆಸಿ ವಿಶ್ವಾಸ ವ್ಯಕ್ತಪಡಿಸಿದ್ದ ಸಚಿವ ಹೆಚ್. ನಾಗೇಶ್ ಅವರಿಗೆ ಸಿಎಂ ಯಡಿಯೂರಪ್ಪನವರ ನಿರ್ಧಾರದಿಂದ ಭಾರೀ ಆಘಾತ ಉಂಟಾಗಿದೆ. ಬಿಜೆಪಿ ಸರ್ಕಾರ ರಚನೆಗೆ ನನ್ನಿಂದಲೇ ಟರ್ನಿಂಗ್ ಪಾಯಿಂಟ್ ಸಿಕ್ಕಿತು. ನೀನು ಮೂರೂವರೆ ವರ್ಷ ಸಚಿವನಾಗಿರುತ್ತೀಯ ಎಂದು ಸಿಎಂ ಯಡಿಯೂರಪ್ಪ ನನಗೆ ಮಾತು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆಂಬ ಎಂಬ ವಿಶ್ವಾಸ ನನಗಿದೆ. ನನ್ನನ್ನು ಸಂಪುಟದಿಂದ ಕೈ ಬಿಡುವ ಮಾತೇ ಇಲ್ಲ ಎಂದು ಹೆಚ್. ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ