BS Yediyurappa: ನಾಗೇಶ್​-ಮುನಿರತ್ನ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲಾಗುತ್ತದೆ; ಸಿಎಂ ಯಡಿಯೂರಪ್ಪ ಆಶ್ವಾಸನೆ

ಹೆಚ್​. ನಾಗೇಶ್​ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟ ಹಾಗೂ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡದ ಬಿಎಸ್​ವೈ ವಿರುದ್ಧ ಬಿಜೆಪಿ ವಲಸೆ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಹೆಚ್​. ವಿಶ್ವನಾಥ್​ ಬಹಿರಂಗವಾಗಿ ಬಿಎಸ್​ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ಸಿಎಂ ಬಿಎಸ್​ ಯಡಿಯೂರಪ್ಪ.

ಸಿಎಂ ಬಿಎಸ್​ ಯಡಿಯೂರಪ್ಪ.

 • Share this:
  ಬೆಂಗಳೂರು (ಜನವರಿ 13); ಸಚಿವ ಸ್ಥಾನ ವಂಚಿತ ಹೆಚ್​. ನಾಗೇಶ್​ ಹಾಗೂ ಶಾಸಕ ಮುನಿರತ್ನ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಇಂದು ಆಶ್ವಾಸನೆ ನೀಡಿದ್ದಾರೆ.  ಕಳೆದ ಒಂದೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ಕೊನೆಗೂ ಇಂದು ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನೂತನ 7 ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಸಿ.ಪಿ. ಯೋಗೇಶ್ವರ್, ಎಂಟಿಬಿ ನಾಗರಾಜ್, ಅರವಿಂದ ಲಿಂಬಾವಳಿ, ಎಸ್. ಅಂಗಾರ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಆರ್​. ಶಂಕರ್​ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದೇ ಮೊದಲ ಬಾರಿಗೆ 5 ಜನ ವಿಧಾನ ಪರಿಷತ್​ ಸದಸ್ಯರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ, ಸಚಿವ ಸ್ಥಾನದ ಪ್ರಬಲ ಆಂಕಾಂಕ್ಷಿಯಾಗಿದ್ದ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ಇನ್ನೂಕಳೆದ ಒಂದೂವರೆ ವರ್ಷದಿಂದ ಅಬಕಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಹೆಚ್​. ನಾಗೇಶ್​ ಅವರಿಗೂ ರಾಜೀನಾಮೆ ನೀಡಲು ಸೂಚಿಸಲಾಗಿದೆ.

  ಹೆಚ್​. ನಾಗೇಶ್​ ಕೋಲಾರ ಭಾಗದ ಪ್ರಮುಖ ದಲಿತ ನಾಯಕ. ಅಲ್ಲದೆ, ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದ ವಿರುದ್ಧ ರಾಜೀನಾಮೆ ನೀಡಿ ಬಿಜೆಪಿಗೆ ಮೊದಲು ಸೇರ್ಪಡೆಯಾಗಿದ್ದೇ ಹೆಚ್​. ನಾಗೇಶ್​. ನಾಗೇಶ್​ ರಾಜೀನಾಮೆ ನೀಡಿದ ನಂತರವೇ ಎಲ್ಲಾ ಶಾಸಕರೂ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಏರಿತ್ತು. ಹೀಗಾಗಿ ಮುಂದಿನ ಮೂರೂವರೆ ವರ್ಷಕ್ಕೂ ಅವರನ್ನು ಸಚಿವರನ್ನಾಗಿ ಮುಂದುವರೆಸುವ ಮಾತು ನೀಡಲಾಗಿತ್ತು.

  ಆದರೆ, ಇಂದು ಸಚಿವ ಸಂಪುಟ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಏಕಾಏಕಿ ಹೆಚ್​. ನಾಗೇಶ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಹೀಗಾಗಿ ಹೆಚ್​. ನಾಗೇಶ್​ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟ ಹಾಗೂ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡದ ಬಿಎಸ್​ವೈ ವಿರುದ್ಧ ಬಿಜೆಪಿ ವಲಸೆ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಹೆಚ್​. ವಿಶ್ವನಾಥ್​ ಬಹಿರಂಗವಾಗಿ ಬಿಎಸ್​ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

  ಇದನ್ನೂ ಓದಿ: Cabinet Expansion Karnataka: ಯಡಿಯೂರಪ್ಪನವರೇ ಸಚಿವರ ಆಯ್ಕೆಗೆ ಮಾನದಂಡವೇನು?; ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಕ್ರೋಶ

  ಈ ಹಿನ್ನೆಲೆಯಲ್ಲಿ ಇಂದು ಸಂಪುಟ ಸಭೆ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಕೊಠಡಿಯಲ್ಲಿ ಹೆಚ್​. ನಾಗೇಶ್​ ಮನವೋಲಿಸುವ ಕೆಲಸಕ್ಕೆ ಬಿಜೆಪಿ ನಾಯಕರು ಮುಂದಾದರು. ಯಡಿಯೂರಪ್ಪ, ಆರ್​. ಅಶೋಕ್ ಸೇರಿದಂತೆ 6 ಜನ ಸಚಿವರು ಹೆಚ್​. ನಾಗೇಶ್ ಮನವೊಲಿಸಲು ಪ್ರಯತ್ನಿಸಿದ್ದರು. ನಾಯಕರ ಮನವಿಗೆ ಕೊನೆಗೂ ಮಣಿದಿರುವ ಸಚಿವ ನಾಗೇಶ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಾಧ್ಯಮಗಳ ಎದುರು ಸ್ಪಷ್ಟಪಡಿಸಿದ್ದಾರೆ.

  ಇದರ ಬೆನ್ನಿಗೆ ಆಶ್ವಾಸನೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, "ಹೆಚ್​. ನಾಗೇಶ್ ಮತ್ತು ಮುನಿರತ್ನ ಅವರು ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ್ದಾರೆ. ಕೆಲವು ಕಾರಣಾಂತರಗಳಿಂದ ನಾಗೇಶ್​ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಆದರೆ, ನಾಗೇಶ್​ ಮತ್ತು ಮುನಿರತ್ನ ಅವರಿಗೆ ಸಚಿವ ಸ್ಥಾನಕ್ಕೆ ಸಮನಾದ ಸೂಕ್ತ ಸ್ಥಾನಮಾನ ನೀಡಲಾಗುವುದು" ಎಂದು ತಿಳಿಸಿದ್ದಾರೆ.
  Published by:MAshok Kumar
  First published: