ಮಾಜಿ ಸಿಎಂ ಕುಮಾರಸ್ವಾಮಿ (H.D. Kumaraswamy) ಒಂದೆಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ನಂತರ ನನ್ನ ಹೇಳಿಕೆ ತಿರುಚಲಾಗಿದೆ ಎಂದು ಸ್ಪಷ್ಟೀಕರಣ ನೀಡುತ್ತಾರೆ. ಇಂದು ಸಹ ಹಾಗೆಯೇ ಆಗಿದ್ದು, ನಿನ್ನೆ ನೀಡಿರುವ ಪಕ್ಷದ ಸಂಘಟನೆ ಕುರಿತಾದ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಧ್ಯಮಗಳ (Media) ಮೇಲೆ ಗೂಬೆ ಕೂರಿಸಿದ್ದಾರೆ. ಜೆಪಿ ಭವನದಲ್ಲಿ ಸುದ್ದಿಗೋಷ್ಟಿ (Press meet) ನಡೆಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಿನ್ನೆ ನಮ್ಮ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದೆ. ಕೆಲವು ಮಾಧ್ಯಮದಲ್ಲಿ ತಪ್ಪು ಮಾಹಿತಿ ಹೋಗಿದೆ. 2023 ಕ್ಕೆ ಕಾರ್ಯಕರ್ತರ ಶ್ರಮದಿಂದ ನಮ್ಮ ಶಕ್ತಿ ಸಾಬೀತು ಮಾಡ್ತೀವಿ ಅಂದಿದ್ದೆ, ಇಲ್ಲಿ ಜೆಡಿಎಸ್ (JDS) ಶಕ್ತಿ ಏನು, ಜೆಡಿಎಸ್ ಬಿಟ್ಟು ಏನು ಮಾಡಲು ಆಗಲ್ಲ ಅನ್ನೋದು ಹೇಳಿದ್ದೆ ಹೊರತು ಬೇರೇನೂ ಅಲ್ಲ ಮಾಧ್ಯಮಗಳು ನನ್ನ ಹೇಳಿಕೆಗೆ ತಪ್ಪು ಅರ್ಥ ನೀಡಿದೆ ಎಂದು ನಿನ್ನೆಯ ಹೇಳಿಕೆಗೆ ಇಂದು ಸ್ಪಷ್ಟೀಕರಣ ನೀಡಿದ್ಧಾರೆ.
ನಮ್ಮ ಶ್ರಮ ಏನು ಎಂದು 2023ರ ಚುನಾವಣೆಯಲ್ಲಿ ಎರಡು ಪಕ್ಷಕ್ಕೆ ತಿಳಿಯಲಿದೆ ಎಂದಿದ್ದೆ, ಆದರೆ ಕೆಲ ಮಾಧ್ಯಮಗಳಲ್ಲಿ ಮುಂದಿನ ಚುನಾವಣೆಗೆ ನಾವೇ ಬೇಕಲು ಎನ್ನುವ ರೀತಿ ಹೇಳಿಕೆ ನೀಡಿದ್ದೇನೆ ಎಂದು ಅರ್ಥೈಸಲಾಗಿದೆ. ಇದು ತಪ್ಪು ಎಂದಿದ್ದಾರೆ.
ಕೊರೊನಾ ಇರುವ ಕಾರಣ ಪಕ್ಷ ಸಂಘಟನೆ ಮಾಡಲು ಆಗಿರಲಿಲ್ಲ. ನಮ್ಮ ಸಂಘಟನೆಯ ಕೆಲಸದ ಕಾರಣದಿಂದ ಜನರಿಗೆ ತೊಂದರೆ ಆಗಬಾರದು ಎಂದು ಸಂಘಟನೆಗೆ ಒತ್ತು ಕೊಟ್ಟಿಲ್ಲ, ಆದರೆ ಆಂತರಿಕವಾಗಿ ಸಹ ಸಂಘಟನೆ ಮಾಡಲು ಆಗಿಲ್ಲ ಎಂದು ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ; ‘ಕೈ‘ ತೊರೆಯಲು ನಿರ್ಧರಿಸಿದ ಸಿಎಂ ಇಬ್ರಾಹಿಂ
ಮಾಧ್ಯಮಗಳ ಮೇಲೆ ಕಿಡಿ ಕಾರಿದ ಮಾಜಿ ಸಿಎಂ
ನಿನ್ನೆ ನನ್ನ ಹೇಳಿಕೆಯ ಬಗ್ಗೆ ಮಾಧ್ಯಮದಲ್ಲಿ ನೋಡಿದೆ. ನೀವು ನಿಮಗೆ ಬೇಕಾದ ವಿಶ್ಲೇಷಣೆ ಮಾಡಬೇಡಿ. ತಿರುಚುವ ಕೆಲಸವನ್ನು ಯಾವುದೇ ಕಾರಣಕ್ಕೂ ದಯವಿಟ್ಟು ಮಾಡಲೇಬೇಡಿ. ನಮಗೆ ಸವಾಲಿದೆ, ನಮಗೆ ಗುರಿ ಇದೆ. ಪ್ರತ್ಯುತ್ತರ ಕೊಡಲು ನಾವು ಸಿದ್ದ ಇದ್ದೇವೆ ಎಂದು ಕಿಡಿಕಾರಿದ್ದಾರೆ.
ಇನ್ನು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಹೋಗಲು ಸಿದ್ದವಿಲ್ಲ. ಈಗಲೂ ಹೋಗಿಲ್ಲ ಮುಂದೆಯೂ ಹೋಗಲ್ಲ. ಅತಂತ್ರ ಸ್ಥಿತಿ ಬಂದಾಗಲೂ ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ. 123 ಸ್ಥಾನ ಗೆಲ್ಲಲು ನಾನು ಸಂಘಟನೆ ಮಾಡುತ್ತಿದ್ದೇನೆ ಹೆಚ್ಚಿನ ಶ್ರಮ ಹಾಕಲಾಗುತ್ತಿದೆ ಎಂದಿದ್ದಾರೆ.
ಅಲ್ಲದೇ ನಿನ್ನೆ ಸಿಎಂ ಹೇಳಿಕೆ ನೋಡಿದ್ದೇನೆ, ಜೆಡಿಎಸ್ ಅತಂತ್ರ ಆದಾಗ ಸ್ವತಂತ್ರರಾಗ್ತಾರೆ ಅಂದಿದ್ದಾರೆ. ನಾವೆಂದೂ ಅತಂತ್ರರಾಗಿಲ್ಲ. ಅವರಿಗೆ ಅತಂತ್ರರಾದಾಗ ಜೆಡಿಎಸ್ ಬಾಗಿಲು ಬಡಿದಿದ್ದಾರೆ ಎಂಬುದನ್ನ ಮರೆಯಬಾರದು. ಬಿಜೆಪಿ ನಾಯಕರಲ್ಲಿ ಕಡಿವಾಣ ಹಾಕುವ ಸ್ಥಿತಿ ಇಲ್ಲ. ಗೊಂದಲ ಸೃಷ್ಟಿ ಮಾಡುವುದಕ್ಕೆ ನಾವು ಅವಕಾಶ ಕೊಟ್ಟಿಲ್ಲ. ಅವರ ಪಕ್ಷದವರನ್ನೇ ಹದ್ದು ಬಸ್ತಲ್ಲಿ ಇಟ್ಟುಕೊಳ್ಳಲಿಕ್ಕೆ ಆಗಿಲ್ಲ ಬಿಜೆಪಿಗೆ, ಅವರ ಪಕ್ಷದ ಉಳಿವಿಗಾಗಿ ಏನು ಮಾಡ್ತಾ ಇದ್ದಾರೋ ಹಾಗೇ ನಾವು ಮಾಡ್ತಾ ಇದ್ದೀವಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿ.ಎಂ. ಇಬ್ರಾಹಿಂರನ್ನು ಪಕ್ಷಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ
ಇಬ್ರಾಹಿಂ ಅವರು ಹಿರಿಯರ ನಾಯಕರು, ಅವರು ನಮ್ಮ ಪಕ್ಷ ಹಾಗೂ ದೇವೇಗೌಡರ ಏಳು ಬೀಳುಗಳಲ್ಲಿ ಜೊತೆಯಾದವರು. ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಅವರ ಹೆಸರು ಕೇಳಿ ಬಂದಿತ್ತು. ವಿ.ಪ ನಾಯಕರ ಸ್ಥಾನ ಸಿಕ್ಕಿದರೆ ಉಪಯೋಗ ಮಾಡಿಕೊಳ್ಳಿ ಅಲ್ಲೇ ಅಂದಿದ್ದೆ. ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲ್ಲ ಎಂದಿದ್ದೆ. ಅವರಿಗೆ ಇನ್ನೂ ದೇವೇಗೌಡರು ಹಾಗೂ ನಮ್ಮ ಪಕ್ಷದ ಬಗ್ಗೆ ವ್ಯಾಮೋಹ ಇದೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಪರೋಕ್ಷವಾಗಿ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ಗೆ ಆಹ್ವಾನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಬೆಸ್ಕಾಂ ಶಾಕ್- ಇಂದು ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ
ನಾವು ಕದ್ದು ಮುಚ್ಚಿ ಯಾವುದನ್ನೂ ಮಾಡಿಲ್ಲ, ಇಂದೂ ಕೂಡ ನಾನು ಕರೆ ಮಾಡಿ ಮಾತಾಡಿದ್ದೀನಿ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ