ಎಂದಿನಂತೆ ಯುಗಾದಿ, ವರ್ಷತೊಡಕು ಆಚರಿಸಿ, ಇವರ ಸೋಗಲಾಡಿತನಕ್ಕೆ ಇತಿಶ್ರೀ ಹಾಡೋಣ: HD Kumaraswamy ಕರೆ

ತಲೆತಲಾಂತರಗಳಿಂದ ಇಲ್ಲದ ʼಆಹಾರ ತಾರತಮ್ಯʼ ಈಗೇಕೆ ಬಂತು? 150 ಸ್ಥಾನಗಳ ಗುರಿ ಮುಟ್ಟಲು ರೂಪಿಸಿದ ʼರೋಡ್ ಮ್ಯಾಪ್ʼ ಇದೇ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ಇಂದು ಯುಗಾದಿ (Ugadi 2022) ಹಬ್ಬದ ಹಿನ್ನೆಲೆ ನಾಡಿನ ಜನತೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy) ಅವರು ಶುಭಾಶಯಗಳನ್ನು ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಉಂಟಾಗಿರುವ ಹಲಾಲ್ ವರ್ಸಸ್ ಜಟ್ಕಾ (Halal Vs Jatka) ವಿವಾದಕಕ್ಕೆ ತಮ್ಮ ಅಭಿಪ್ರಾಯವನ್ನು ಟ್ವಿಟರ್ ಮೂಲಕ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸಂಭ್ರಮದಿಂದ ಯುಗಾದಿ ಮತ್ತು ಹೊಸ ತೊಡಕು (Hosa todaku) ಆಚರಿಸುವ ಮೂಲಕ ಕರ ಪತ್ರ ಹಂಚುತ್ತಿರುವರ ಸೋಗಲಾಡಿತನಕ್ಕೆ ಇತಿಶ್ರೀ ಹಾಡೋಣ ಎಂದು ರಾಜ್ಯದ ಜನತೆಗೆ ಕರೆ ಕೊಟ್ಟಿದ್ದಾರೆ.

ಯುಗಾದಿ ಪರ್ವದಿನದಂದು ನಾವೆಲ್ಲ ಒಂದು ಸಂಕಲ್ಪ ಮಾಡೋಣ. ಕರ್ನಾಟಕವು ಕರ್ನಾಟಕವಾಗಿಯೇ ಉಳಿಯಬೇಕೆಂಬ ಆಶಯದಿಂದಲೇ ಈ ಸಂಕಲ್ಪ. ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಕಿಡಿಗೇಡಿಗಳಿಗೆ, ಧರ್ಮವಿನಾಶಕ್ಕೆ ಕಂಕಣತೊಟ್ಟ ಕಿರಾತಕರಿಗೆ ಪಾಠ ಕಲಿಸುವ ಧೈರ್ಯ ಮಾಡೋಣ. ಕರ್ನಾಟಕ ನಮ್ಮದು. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ ಎಂದು ಕಿಡಿಕಾರಿದ್ದಾರೆ.

ಈ ನಕಲಿಗಳ ಮಾತನ್ನು ಯಾರು ನಂಬಬಾರದು

ಕುರ್ಚಿ ಹಿಡಿಯಲು ಮನಸುಗಳನ್ನು ಮುರಿಯುತ್ತಿದ್ದಾರೆ. ನಾಳೆ ಮನೆಗಳನ್ನೂ ಒಡೆದು ಅಣ್ಣ-ತಮ್ಮ, ಅಕ್ಕ-ತಂಗಿ ನಡುವೆಯೂ ಬೆಂಕಿ ಇಟ್ಟು ಮನೆ ಮುರುಕರೂ ಆಗುತ್ತಾರೆ. ಹಿಂದುತ್ವದ ಹೆಸರೇಳಿಕೊಂಡು ʼಹಿಂದುತ್ವದ ವಿನಾಶʼ ಮಾಡುತ್ತಿರುವ ಈ ನಕಲಿಗಳ ಮಾತನ್ನು ಯಾರೂ ನಂಬಬಾರದು. ಕರಪತ್ರ ಹಿಡಿದು ಬಂದರೆ ಭಾವೈಕ್ಯತೆಯ ಪಾಠ ಹೇಳಿ ಕಳಿಸಿ.

ತಲೆತಲಾಂತರಗಳಿಂದ ಯುಗಾದಿ ಇದೆ, ವರ್ಷತೊಡಕೂ ಇದೆ, ಹಲಾಲೂ ಇದೆ. ʼಹಲಾಲ್ ಹಾಲಾಹಲʼವನ್ನುಈಗ ಸೃಷ್ಟಿಸಲಾಗಿದೆ. ಹಲಾಲು, ಜಟ್ಕಾ ಎಂದು ಜನರನ್ನು ಭಾವನಾತ್ಮಕವಾಗಿ ಛಿದ್ರಗೊಳಿಸಿ ಮತ ಗಿಟ್ಟಿಸುವ ಗಿಡುಗಗಳಿವು. ಹಿಂದುತ್ವ ಹೆಸರಿನಲ್ಲಿ ರಾಜಕೀಯ ಜನ್ಮ ಪಡೆದು ರಕ್ಕಸರೂಪದಲ್ಲಿ ಬೆಳೆದಿರುವ ಪಕ್ಷದ ಬಾಲಂಗೋಚಿಗಳಿವು. ಇವರು ನೈಜ ಹಿಂದುಗಳೇ ಅಲ್ಲ.

ಇದನ್ನೂ ಓದಿ: Price Hike: ಹಬ್ಬದ ಸಂಭ್ರಮದ ನಡುವೆ ಬೆಲೆ ಏರಿಕೆ ಬರೆ; ಎಲ್ಲಾ ಕಾಸ್ಟ್ಲಿ ಶಿವಾ!

ಸಂವಿಧಾನವನ್ನೇ ಮುಗಿಸುವ ರಕ್ಕಸ ಹುನ್ನಾರಕ್ಕೆ ಇದು ನಾಂದಿ!

ತಲೆತಲಾಂತರಗಳಿಂದ ಇಲ್ಲದ ʼಆಹಾರ ತಾರತಮ್ಯʼ ಈಗೇಕೆ ಬಂತು? 150 ಸ್ಥಾನಗಳ ಗುರಿ ಮುಟ್ಟಲು ರೂಪಿಸಿದ ʼರೋಡ್ ಮ್ಯಾಪ್ʼ ಇದೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸರ್ವಸಮಾನ, ಸರ್ವಹಕ್ಕು, ಸರ್ವಕಲ್ಯಾಣ; ಅಂದರೆ, ʼಸರ್ವೇ ಜನಾಃ ಸುಖಿನೋ ಭವಂತುʼ ಎಂಬ ಆಶಯವುಳ್ಳ ಸಂವಿಧಾನವನ್ನೇ ಮುಗಿಸುವ ರಕ್ಕಸ ಹುನ್ನಾರಕ್ಕೆ ಇದು ನಾಂದಿಯಷ್ಟೇ.

ಅನ್ನ-ಆಹಾರದಲ್ಲಿ ಅರಾಜಕತೆ ಉಂಟು ಮಾಡಿ ಬೇಳೆ ಬೇಯಿಸಿಕೊಳ್ಳುವವರು ʼಭಾರತಕ್ಕೆ ಮತ್ತು ಭಾವೈಕ್ಯ ಪರಂಪರೆಗೆ ದೊಡ್ಡ ಅಪಾಯ.ʼ ಮನಸುಗಳ ನಡುವೆ ಯುದ್ಧವನ್ನೇ ಸೃಷ್ಟಿಸುತ್ತಿರುವ ಈ ಕಿಡಿಗೇಡಿಗಳು ಯುದ್ಧೋನ್ಮಾದ ಸರ್ವಾಧಿಕಾರಿಗಳಿಗಿಂತಲೂ ವಿನಾಶಕಾರಿ. ಇದನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು.

ಇದುವೇ ಇವರ ಹಿಡನ್ ಅಜೆಂಡಾ

ಯುಗಾದಿ ಹಬ್ಬದ ದಿನ ನೈಜ ಹಿಂದುಗಳು ಯಾರೂ ಮಾಂಸ ಮಾರುವುದಿಲ್ಲ, ಖರೀದಿಸುವುದೂ ಇಲ್ಲ. ಆದರೆ, ಜಟ್ಕಾ ಕಟ್ ಹೆಸರಿನಲ್ಲಿ ಕೆಲವರು ಇವತ್ತೇ ಮಾಂಸದ ಅಂಗಡಿಗಳನ್ನು ತೆರೆದಿದ್ದಾರೆ! ಇವರಾ ಹಿಂದುಗಳು? ʼಇಂಡಿಯಾದಿಂದಲೇ ಹಿಂದೂ ಧರ್ಮವನ್ನು ಮೂಲೋತ್ಪಾಟನೆ ಮಾಡುವುದೇ ಇವರ ಹಿಡನ್ ಅಜೆಂಡಾ ಆಗಿದೆʼ ಎನ್ನುವುದು ನನ್ನ ಅಭಿಪ್ರಾಯ

ಅನಾದಿ ಕಾಲದಿಂದ ಯುಗಾದಿ, ವರ್ಷತೊಡಕನ್ನು ನಾವೆಲ್ಲರೂ ಆಚರಿಸಿದಂತೆ, ಈ ವರ್ಷವೂ ಆಚರಿಸೋಣ. ʼಭಾರತವನ್ನು ಒಡೆಯುವ ವಿಷಬೀಜಾಸುರರನ್ನು ಹಿಮ್ಮೆಟ್ಟಿಸೋಣ.ʼ ಸರ್ವ ಜನಾಂಗದ ತೋಟ ಕರುನಾಡಿನಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಮನವಿ ಇದು. ಇಡೀ ದೇಶಕ್ಕೆ ಮಾದರಿಯಾದ ನೆಮ್ಮದಿಯ ಕರುನಾಡನ್ನು ಕಾಪಾಡಿಕೊಳ್ಳೋಣ

ಸೋಗಲಾಡಿತನಕ್ಕೆ ಇತಿಶ್ರೀ ಹಾಡೋಣ!

ಕರ್ನಾಟಕವು ಎಲ್ಲರನ್ನೂ ಒಳಗೊಳ್ಳುವ ಶುದ್ಧ ಅಂತಃಕರಣದ ಮನಸುಗಳದ್ದು. ಭಾವನೆಗಳ ಕೆಂಡದ ಮಳೆ ಸುರಿಸುವ ಕಿರಾತಕರದ್ದಲ್ಲ. ಜನಪೀಡಕರನ್ನು ತಿರಸ್ಕರಿಸೋಣ. ಪರಂಪರಾಗತವಾಗಿ ಬಂದಿರುವ ಯುಗಾದಿ, ವರ್ಷತೊಡಕನ್ನು ಎಂದಿನಂತೆ ಸಂಭ್ರಮಿಸುವ ಮೂಲಕ ಇವರ ಸೋಗಲಾಡಿತನಕ್ಕೆ ಇತಿಶ್ರೀ ಹಾಡೋಣ ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ:  ಇವರೆಲ್ಲ ರಾಜಕೀಯ ಪಕ್ಷದ ಬಾಲಂಗೋಚಿಗಳಷ್ಟೇ; ಹಿಂದೂ, ಹಿಂದುತ್ವ ಎನ್ನುವ ಪರಂಪರೆ ಇವರ ಗುತ್ತಿಗೆಯಲ್ಲ: HD Kumaraswamy

ಹಿಂದು ಸಂಘಟನೆಗಳು ಜೊತೆ ನಾವಿದ್ದೇವೆ: ಶಶಿಕಲಾ ಜೊಲ್ಲೆ

ಮುಖ್ಯಮಂತ್ರಿಗಳ ಆಶಯದಂತೆ ಸಚಿವೆಯಾಗಿ ದೇವಸ್ಥಾನಕ್ಕೆ ಸೀಮಿತವಾಗಿರದೇ ಯುಗಾದಿ ಹಬ್ಬ ಆಚರಣೆ ಮಾಡಲಾಗಿದೆ. ಹಿಂದು ವರ್ಷಾಚರಣೆ ಹಾಗೂ ಚೈತ್ರ ಮಾಸ ಪ್ರಾರಂಭ ಹಿನ್ನಲೆ ಧಾರ್ಮಿಕ ದಿನವಾಗಿ ಆಚರಣೆ. ಜನವರಿ ನಮ್ಮ ಹೊಸವರ್ಷಾಚರಣೆ ಅಲ್ಲ ಚೈತ್ರ ಮಾಸ ನಮಗೆ ಹೊಸ ವರ್ಷಾಚರಣೆ. ಮುಂದಿನ ಪೀಳಿಗೆಗೆ ನಮ್ಮ ಧರ್ಮ ಆಚರಣೆ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನ ವಿಶಿಷ್ಟವಾಗಿ ಆಚರಣೆ ಮಾಡಿದ್ದೇವೆ ಎಂದು ಧಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಸಚಿವೆ ಶಶಿಕಲಾಜೊಲ್ಲೆ ಹೇಳಿಕೆ ನೀಡಿದ್ದಾರೆ.

ಹಿಂದುಪರ ಸಂಘಟನೆಗಳ ಜೋತೆಗೆ ನಾವಿದ್ದೇವೆ. ಜಟ್ಕಾ ಕಟ್ ಎಲ್ಲಾ ಕಡೆಗೆ ನಡೆಯಬೇಕು ಎನ್ನುವ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಚಿಂತನೆ ಮಾಡುತ್ತೇವೆ ಅವರ ಪರ ನಾವಿದ್ದೇವೆ. ಹಲಾಲ್ ಕಟ್ ನಿಷೇಧ ಮಾಡಬೇಕು ಎಂದು ಈಗಾಗಲೇ ಕೆಲ ಸಂಘಟನೆಗಳು ಒತ್ತಾಯ ಮಾಡ್ತಿವೆ. ಹಲಾಲ್ ನಿಷೇಧ ಮಾಡುವ ಬಗ್ಗೆ ಸರ್ಕಾರದ ಹಿರಿಯ ಸಚಿವರು ಹಾಗೂ ಮುಖ್ಯಮಂತ್ರಿಗಳು ಚಿಂತನೆ ಮಾಡುತ್ತಾರೆ ಎಂದರು.
Published by:Mahmadrafik K
First published: