ರೋಗಮುಕ್ತ ಸಮಾಜಕ್ಕೆ ಶ್ರಮಿಸುತ್ತಿರುವ ಯೋಗ ಗುರು ಸೋಮನಾಥರೆಡ್ಡಿ


Updated:June 21, 2018, 9:24 AM IST
ರೋಗಮುಕ್ತ ಸಮಾಜಕ್ಕೆ ಶ್ರಮಿಸುತ್ತಿರುವ ಯೋಗ ಗುರು ಸೋಮನಾಥರೆಡ್ಡಿ

Updated: June 21, 2018, 9:24 AM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ ( ಜೂನ್ 21) :  ಆತನೊಬ್ಬ ಪ್ರಗತಿಪರ ರೈತ. ವಿಷಮುಕ್ತ ಆಹಾರ ನೀಡಬೇಕೆಂಬ ಧ್ಯೇಯದೊಂದಿಗೆ ಹತ್ತಾರು ವರ್ಷಗಳಿಂದ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಬಂದಿದ್ದಾನೆ. ನಂತರದಲ್ಲಿ ರೈತರನ್ನೂ ರೋಗಮುಕ್ತಗೊಳಿಸುವ ಧ್ಯೇಯದೊಂದಿಗೆ ಯೋಗ ತರಬೇತಿಯನ್ನೂ ನೀಡುತ್ತಿದ್ದಾರೆ. ಹಳ್ಳಿಯಿಂದ ಹಿಡಿದು ನವದೆಹಲಿಯ ವರೆಗೆ ಯೋಗ ತರಬೇತಿ ಮೂಲಕ ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಸೋಮನಾಥರೆಡ್ಡಿ ಪುರ್ಮಾ ಅವರು ಎಲ್ಲರ ಗಮನ ಸೆಳೆದಿದ್ದಾರೆ.

ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಆರೋಗ್ಯ ಪೂರ್ಣ ಸಮಾಜಕ್ಕಾಗಿ ಯೋಗದ ತರಬೇತಿ ನೀಡುತ್ತಾ ಸಾಗಿರುವ ಯೋಗ ಸಾಧಕನತ್ತ ಒಂದು ನೋಟ.. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಬೆಳೆಯಬೇಕೆಂದು ರೈತರು ರಸಗೊಬ್ಬರ ಹಾಕಿ, ಕ್ರಿಮಿನಾಷಕ ಸಿಂಪಡಿಸಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಿಂದಾಗಿ ಭೂಮಿಯೂ ವಿಷಮಯಗೊಳ್ಳಲಾರಂಭಿಸಿದೆ. ಹೀಗೆ ಕಲುಷಿತಗೊಳ್ಳುತ್ತಿರುವ ಭೂಮಿಯನ್ನು ಆರೋಗ್ಯಪೂರ್ಣವಾಗಿಡಲು ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಸೋಮನಾಥರೆಡ್ಡಿ ಪುರ್ಮಾ ಅವರು, ಹತ್ತಾರು ವರ್ಷಗಳಿಂದ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಬಂದಿದ್ದಾರೆ.

ಕಡಿಮೆ ವೆಚ್ಚದಲ್ಲಿ ಅಧಿಕ ಬೆಳೆ ಬೆಳೆಯುವ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾದರಿ ರೈತರೆನಿಸಿಕೊಂಡಿರುವ ಸೋಮನಾಥರೆಡ್ಡಿ ಅವರು ಕಳೆದ 10 ವರ್ಷಗಳಿಂದ ಯೋಗ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 85 ತೂಕ ಹೊಂದಿ, ಮೊಳಕಾಲು ನೋವು ಸೇರಿದಂತೆ ವಿವಿಧ ದೈಹಿಕ ಸಮಸ್ಯೆ ಎದುರಿಸುತ್ತಿದ್ದ ಸೋಮನಾಥರೆಡ್ಡಿ ಅವರು ಯೋಗಾಭ್ಯಾಸ ಆರಂಭಿಸಿದ ನಂತರ 55 ಕೆ.ಜಿ.ಗೆ ಇಳಿದಿದ್ದಾರೆ.  ತಾವೊಂದೇ ಯೋಗಾಭ್ಯಾಸ ಮಾಡದೆ ರೈತ ಸಮುದಾಯವನ್ನೂ ಯೋಗದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದಾರೆ.

ಕೋಡ್ಲಾ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಹಿಡಿದು ರೈತರವರೆಗೂ ಸೋಮನಾಥರೆಡ್ಡಿ ಯೋಗದ ತರಬೇತಿ ನೀಡುತ್ತಿದ್ದಾರೆ. ಹೇಗೆ ಭೂಮಿಯನ್ನು ರೋಗಮುಕ್ತಗೊಳಿಸುವ ಅವಶ್ಯಕತೆಯಿದೆಯೋ ಹಾಗೆಯೇ ರೈತರೂ ರೋಗಮುಕ್ತವಾಗಬೇಕಿದೆ. ಹೀಗಾಗಿಯೇ ರೈತರಿಗೂ ನಿತ್ಯ ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ನಮ್ಮ ಶರೀರದಲ್ಲಿಯೇ ವೈದ್ಯನಿರುತ್ತಾನೆ. ಆತನನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದರೆ ಯೋಗದ ಅವಶ್ಯಕತೆ ಇದೆ. ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಾ ಸಾಗಿದರೆ ವೈದ್ಯನ ಬಳಿಗೆ ಹೋಗುವ ಅವಶ್ಯಕತೆಯೇ ಬೀಳುವುದಿಲ್ಲ ಎನ್ನುತ್ತಾರೆ ಸೋಮನಾಥರೆಡ್ಡಿ ಪುರ್ಮಾ.

ಸೋಮನಾಥರೆಡ್ಡಿ ಅವರ ಯೋಗ ಹಳ್ಳಿಯಿಂದ ದಿಲ್ಲಿಯವರೆಗೂ ಗಮನ ಸೆಳೆದಿದೆ. ಯೋಗ ಗುರು ಬಾಬಾ ರಾಮದೇವ್, ರವಿಶಂಕರ್ ಗುರೂಜಿ ಸೇರಿದಂತೆ ಮೊದಲಾದವರ ಸಂಪರ್ಕದಲ್ಲಿರುವ ಸೋಮನಾಥರೆಡ್ಡಿ ಅವರು, ದೇಶದ ವಿವಿಧ ಭಾಗಗಳಲ್ಲಿ ರೈತರಿಗೆ ಮತ್ತು ಜನ ಸಾಮಾನ್ಯರಿಗೆ ಯೋಗದ ತರಬೇತಿ ನೀಡಿದ್ದಾರೆ. ಸರ್ವಾಂಗಾಸನ, ಶೀರ್ಷಾಸನ, ದ್ವಿಪಾದಾಸನ ಸೇರಿದಂತೆ ಯೋಗದ ಬಹುತೇಕ ಆಸನಗಳನ್ನು ಕಲಿತಿದ್ದಾರೆ.

ವಿಚಿತ್ರವೆಂದರೆ ಅವರು ಯೋಗಾಭ್ಯಾಸ ಆರಂಭಿಸಿದ್ದೇ 53ನೇ ವಯಸ್ಸಿನಲ್ಲಿ. ಈಗ ಅವರಿಗೆ 65 ವರ್ಷಗಳಿದ್ದರೂ ಆರೋಗ್ಯಪೂರ್ಣರಾಗಿದ್ದಾರೆ. ತಮ್ಮ ಹಠದಿಂದಾಗಿ ಯೋಗ ಪಟುವಾಗಿ ರೂಪುಗೊಂಡ ಸೋಮನಾಥರೆಡ್ಡಿ ತಾಳ್ಮೆಯನ್ನು ಮೆಚ್ಚಲೇಬೇಕು ಎನ್ನುತ್ತಾರೆ ಕೋಡ್ಲಾ ಗ್ರಾಮದ ದೈಹಿಕ ಶಿಕ್ಷಕ ನಾಗಯ್ಯ ಮಠ. ಕಿಡ್ನಿ ಸಮಸ್ಯೆ, ಮೂಲವ್ಯಾಧಿಯಿಂದ ಹಿಡಿದು ವಿವಿಧ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಸೋಮನಾಥರೆಡ್ಡಿ ಅವರು ಯೋಗ ತರಬೇತಿ ನೀಡುತ್ತಿದ್ದಾರೆ.
Loading...

ಮಕ್ಕಳಿಂದ ಹಿಡಿದು ವೃದ್ಧರವರೆಗೂ ತರಬೇತಿ ನೀಡುತ್ತಿದ್ದಾರೆ. ಏನೇನು ಸಮಸ್ಯೆಯಿದ್ದರೆ, ಏನೇನು ಆಸನ ಮಾಡಬೇಕು, ಯಾರ ರೀತಿ ಊಟ ಸೇವಿಸಬೇಕೆಂಬುದನ್ನು ಹೇಳುತ್ತಿದ್ದಾರೆ. ಸೋಮನಾಥರೆಡ್ಡಿ ನೀಡಿದ ಮಾರ್ಗದರ್ಶನದನ್ವಯ ಹಲವರು ಕಿಡ್ನಿ ಹರಳಿನ ಸಮಸ್ಯೆ, ಮೂಲವ್ಯಾಧಿ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಹೊಂದಿರುವುದಾಗಿ ಕೋಡ್ಲಾ ಗ್ರಾಮದ ಹನುಮಂತಪ್ಪ.

ಒಟ್ಟಾರೆ ಸಾವಯವ ಕೃಷಿಕನಾಗಿ ಉತ್ತಮ ಆಹಾರ ಉತ್ಪಾದಿಸಿ ಸಮಾಜಕ್ಕೆ ನೆರವಾಗುತ್ತಿರುವ ಸೋಮನಾಥರೆಡ್ಡಿ, ರೈತರ ಆರೋಗ್ಯಕ್ಕಾಗಿ ಯೋಗದ ತರಬೇತಿ ನೀಡುತ್ತಿದ್ದಾರೆ. ಇವರ ಸಾಧನೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳೂ ಲಭಿಸಿವೆ. ಸರ್ವ ರೋಗಕ್ಕೂ ಯೋಗದಲ್ಲಿ ಮದ್ದಿದೆ ಎಂದು ಹೇಳುತ್ತಿರುವ ಸೋಮನಾಥರೆಡ್ಡಿ ಅವರು, ದೇಶಾದ್ಯಂತ ಯೋಗದ ಪ್ರಚಾರ ಮಾಡುತ್ತಿದ್ದಾರೆ.
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...