• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕಚೇರಿಗಳ ಸ್ಥಳಾಂತರಕ್ಕೆ ಕಲಬುರ್ಗಿ ಜನ ಆಕ್ರೋಶ; ಮತ್ತೆ ಕೇಳಿಬಂದ ಪ್ರತ್ಯೇಕ ರಾಜ್ಯದ ಕೂಗು

ಕಚೇರಿಗಳ ಸ್ಥಳಾಂತರಕ್ಕೆ ಕಲಬುರ್ಗಿ ಜನ ಆಕ್ರೋಶ; ಮತ್ತೆ ಕೇಳಿಬಂದ ಪ್ರತ್ಯೇಕ ರಾಜ್ಯದ ಕೂಗು

ಕಚೇರಿಗಳ ಸ್ಥಳಾಂತರ

ಕಚೇರಿಗಳ ಸ್ಥಳಾಂತರ

ವಿಭಾಗೀಯ ಆಹಾರ ಪ್ರಯೋಗಾಲಯ ಎತ್ತಂಗಡಿಗೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಕಚೇರಿ ಎತ್ತಂಗಡಿ ಪ್ರಕರಣ ಪ್ರತ್ಯೇಕ ರಾಜ್ಯದ ಕೂಗಿಗೆ ಇಂಬು ಕೊಡಲಾರಂಭಿಸಿದೆ.

  • Share this:

ಕಲಬುರ್ಗಿ(ಡಿ. 26):  ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕೇಳಿ ಬರುತ್ತಿದ್ದ ಪ್ರತ್ಯೇಕ ರಾಜ್ಯದ ಕೂಗು, ಈ ಬಾರಿ ವರ್ಷಾಂತ್ಯದ ಸಂದರ್ಭದಲ್ಲಿಯೂ ಕೇಳಿ ಬಂದಿದೆ. ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಬಿಜೆಪಿ ಸರ್ಕಾರದ ಧೋರಣೆ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುವಂತೆ ಮಾಡಿದೆ. ನಮ್ಮ ಅಭಿವೃದ್ಧಿಯಾಗಬೇಕೆಂದರೆ, ನಮ್ಮದೇ ಪ್ರತ್ಯೇಕ ರಾಜ್ಯ ಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸರ್ಕಾರದ ಧೋರಣೆ ವಿರೋಧ ಕೆಲ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆಯನ್ನೂ ನಡೆಸಿವೆ.  ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ ಇಲ್ಲದಂತಿದ್ದಾರೆ. ಇನ್ನು ವಿಭಾಗೀಯ ಕೇಂದ್ರ ಎನಿಸಿಕೊಂಡಿರುವ ಕಲಬುರ್ಗಿ ಜಿಲ್ಲೆಯ ಒಬ್ಬರನ್ನೂ ಸಚಿವರನ್ನಾಗಿಸಿಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿದ್ದನ್ನು ಬಿಟ್ಟರೆ, ಇರುವುದನ್ನೆಲ್ಲಾ ಕಿತ್ತುಕೊಳ್ಳುವ ಕೆಲಸ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅದಕ್ಕೆ ಇಂಬು ನೀಡೋ ರೀತಿಯಲ್ಲಿ ಜಿಲ್ಲೆಯ ಕಚೇರಿಗಳೆಲ್ಲಾ ಒಂದೊಂದಾಗಿ ಎತ್ತಂಗಡಿಯಾಗಲಾರಂಭಿಸಿವೆ.


ಮೊನ್ನೆ ಮೊನ್ನೆಯಷ್ಟೇ ನವೀಕರಿಸಬಹುದಾದ ಇಂಧನ ಪ್ರಾದೇಶಿಕ ಕಚೇರಿ ಎತ್ತಂಗಡಿಯಾಗಿತ್ತು. ಇದೀಗ ವಿಭಾಗೀಯ ಆಹಾರ ಪ್ರಯೋಗಾಲಯ ಎತ್ತಂಗಡಿಗೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಮುಂದೆ ಯಾವ ಕಛೇರಿ ಎತ್ತಂಗಡಿ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.  ಕಚೇರಿ ಎತ್ತಂಗಡಿ ಪ್ರಕರಣ ಪ್ರತ್ಯೇಕ ರಾಜ್ಯದ ಕೂಗಿಗೆ ಇಂಬು ಕೊಡಲಾರಂಭಿಸಿದೆ. ರಾಜ್ಯ ಸರ್ಕಾರದ ಮಲತಾಯಿ ಧೋರಣೆಗೆ ಜನರ ಕಿಡಿಕಾರಿದ್ದಾರೆ.


ವಿಭಾಗೀಯ ಕೇಂದ್ರವಾಗಿದ್ದರೂ  ಜಿಲ್ಲೆಗೆ ಒಂದೂ ಸಚಿವ ಸ್ಥಾನವನ್ನು ನೀಡಿಲ್ಲ. ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದರೂ ಸಚಿವ ಸ್ಥಾನದ ಭಾಗ್ಯವಿಲ್ಲ. ಡಿಸಿಎಂ ಗೋವಿಂದ ಕಾರಜೋಳ ಜಿಲ್ಲಾ ಉಸ್ತುವಾರಿ ವಹಿಸಿಕೊಂಡರೂ ಜಿಲ್ಲೆಯ ಕಡೆ ತಿರುಗಿಯೂ ನೋಡುತ್ತಿಲ್ಲ. ಕೊರೋನಾ, ಪ್ರವಾಹ, ಅತಿವೃಷ್ಟಿ ಏನೆಲ್ಲಾ ಸಂಕಷ್ಟ ಬಂದರೂ ಕಳೆದ ಮೂರು-ನಾಲ್ಕು ತಿಂಗಳಿಂದ ಕಾರಜೋಳ ಅವರು ಜಿಲ್ಲೆಯ ಕಡೆ ಸುಳಿಯದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.


ಕೆ.ಕೆ.ಆರ್.ಡಿ.ಬಿ.ಗೆ ಅನುದಾನ ನೀಡಿಕೆಯಲ್ಲಿಯೂ ಅನ್ಯಾಯ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದೀಗ  ಒಂದೊಂದೇ ಕಚೇರಿಗಳ ಸ್ಥಳಾಂತರ ಆಗುತ್ತಿರುವುದು ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಸದ್ದಿಲ್ಲದೆ ನವೀಕರಿಸಬಹುದಾದ ಇಂಧನ ಪ್ರಾದೇಶಿಕ ಕಚೇರಿ ಸ್ಥಳಾಂತರಗೊಂಡಿದ್ದು, ಇದರ ಬೆನ್ನ ಹಿಂದೆಯೇ ಕಲಬುರ್ಗಿ ವಿಭಾಗದಲ್ಲಿದ್ದ ಏಕೈಕ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೂ ಬೀಗ ಜಡಿಯಲಾಗಿದೆ. ಆಹಾರ ಪ್ರಯೋಗಾಲಯವನ್ನು ಬೆಳಗಾವಿಗೆ ಸ್ಥಳಾಂತರ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ಯಡಿಯೂರಪ್ಪ ಸಿಎಂ ಆದ ಕೂಡಲೇ ಹೈದರಾಬಾದ್ ಕರ್ನಾಟಕ ವನ್ನು ಕಲ್ಯಾಣ ಕರ್ನಾಟಕ ಅಂತ ಬದಲಾಯಿಸಿದರು. ಆದರೆ, ಬಿಜೆಪಿ ಸರ್ಕಾರದ ಕೆಲಗಳು ಮಾತ್ರ ಅದಕ್ಕೆ ತದ್ವಿರುದ್ಧ. ಹೊಸದನ್ನು ಸರ್ಕಾರದಿಂದ ಕೊಡೋಕೆ ಆಗುತ್ತಿಲ್ಲ. ಸರ್ಕಾರದ ಧೋರಣೆ ಇದೇ ರೀತಿ ಮುಂದುವರಿದರೆ, ಪ್ರತ್ಯೇಕ ರಾಜ್ಯದ ಹೋರಾಟ ತೀವ್ರಗೊಳಿಸೋದಾಗಿ ಸಂಘಟನೆಗಳು ಎಚ್ಚರಿಸಿವೆ. ಸರ್ಕಾರವೇ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿದೆ. ಕೂಡಲೇ ಮಲತಾಯಿ ಧೋರಣೆ ನಿಲ್ಲಿಸುವಂತೆ ಸಂಘಟನೆಗಳು ಆಗ್ರಹಿಸಿವೆ.


ಈ ಭಾಗದ ಬಿಜೆಪಿ ಸಂಸದರು, ಶಾಸಕರು ಏನು ಮಾಡ್ತಿದಾರೆ ಎಂದು ಪ್ರಶ್ನಿಸಿರೋ ಸಂಘಟಕರು, ಇಲ್ಲಿನ ಕಚೇರಿಗಳನ್ನು ಉಳಿಸಿಕೊಳ್ಳಲಾಗದಿದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಸರ್ಕಾರದ ಧೋರಣೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡೋದಾಗಿ ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಮಣ ದಸ್ತಿ ಎಚ್ಚರಿಸಿದ್ದಾರೆ. ಇದೇ ವೇಳೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ಸಹ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ. ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯ ಮಾಡುತ್ತಿದೆ. ಸ್ಥಳಾಂತರಿಸಲ್ಪಟ್ಟ ಕಛೇರಿಗಳನ್ನು ಮತ್ತೆ ವಾಪಸ್ ತರಬೇಕು. ಕಲಬುರ್ಗಿಯಲ್ಲಿಯೇ ವಿಭಾಗೀಯ ಕಛೇರಿಗಳನ್ನು ಮುಂದುವರೆಸಬೇಕು. ಇಲ್ಲದಿದ್ದಲ್ಲಿ ಕಲ್ಯಾಣ ಕರ್ನಾಟಕದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.


ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ


ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲೆಗೆ ಬಾರದಿರುವುದನ್ನು ಖಂಡಿಸಿ, ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಗೋವಿಂದ ಕಾರಜೋಳ ಜಿಲ್ಲೆಯನ್ನು ಕಡೆಗಣಿಸಿದ್ದಾರೆಂದು ಆರೋಪಿಸಿ ಕನ್ನಡ ಭೂಮಿ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಿದರು. ಕಳೆದ ನಾಲ್ಕೈದು ತಿಂಗಳಿನಿಂದ ಕಾರಜೋಳ ಜಿಲ್ಲೆ ಕಡೆ ತಿರುಗಿ ನೋಡಿಲ್ಲ. ಭೀಕರ ಪ್ರವಾಹ ಬಂದಾಗಲೂ ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಕೂಡಲೇ ಗೋವಿಂದ ಕಾರಜೋಳರನ್ನು ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆಯಿಂದ ಕೆಳಗಿಳಿಸಬೇಕು. ಜಿಲ್ಲೆಯ ಶಾಸಕರನ್ನೇ ಸಚಿವರನ್ನಾಗಿಸಬೇಕೆಂದು ಆಗ್ರಹಿಸಿದರು.

Published by:Seema R
First published: