ಕಲಬುರ್ಗಿ (ಫೆ. 16): ಅವರಿಬ್ಬರ ಪ್ರೀತಿಗೆ ಪೋಷಕರೂ ಗ್ರೀನ್ ಸಿಗ್ನಲ್ ನೀಡಿದ್ದರು. ಕೆಲ ತಿಂಗಳಲ್ಲಿ ಮದುವೆ ಮಾಡಿಲು ಪೋಷಕರು ಚರ್ಚಿಸಿ ನಿರ್ಧರಿಸಿದ್ದರು. ಆದರೆ ಅಷ್ಟರೊಳಗಾಗಲೇ ಮದುವೆಗೆ ಸಿದ್ಧಗೊಳ್ಳಬೇಕಾದ ಜೋಡಿಯೇ ನೇಣಿಗೆ ಶರಣಾಗಿದೆ. ವರಸೆಯಲ್ಲಿ ಮಾವ, ಸೊಸೆಯಾಗಬೇಕಾದ ಇವರಿಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮದುವೆ ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲಿ ಈಗ ಶೋಕ ಸಾಗರ ಕಂಡು ಬರುತ್ತಿದೆ. ಜೋಡಿಯ ದುಡುಕ ನಿರ್ಧಾರದಿಂದ ಎರಡು ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ. ಮದುವೆಗೆ ಮನೆಯವರು ಒಪ್ಪಿದರೂ ಫೆ. 11 ರಂದು ಮನೆ ಬಿಟ್ಟು ಹೋದ ಈ ಜೋಡಿ ಇಲ್ಲಿನ ಯಡ್ರಾಮಿ ತಾಲೂಕಿನ ಅಖಂಡಹಳ್ಳಿ ಗ್ರಾಮದ ಹೊರವಲದ ಮರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯವರಿಗೆ ದಿಗ್ಭ್ರಮೆ ಮೂಡಿಸಿದೆ.
ಮಾನಶಿವಣಗಿ ಗ್ರಾಮದ ಪರಶುರಾಮ ಪೂಜಾರಿ (23) ಹಾಗೂ ಭಾಗ್ಯಶ್ರೀ ಒಡೆಯರ್ (18) ಸಾವನ್ನಪ್ಪಿದವರು. ಫೆ. 11ರಂದು ಮನೆ ಬಿಟ್ಟು ಹೋಗಿದ್ದ ಪ್ರೇಮಿಗಳು,ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರೂ ಸಂಬಂಧಿಕರೇ ಆಗಿದ್ದು, ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಪರುಶುರಾಮ ಕೃಷಿ ಕೆಲಸ ಮಾಡಿಕೊಂಡಿದ್ದರೆ, ಭಾಗ್ಯಶ್ರೀ ಪಿಯುಸಿ ಓದುತ್ತಿದ್ದಳು. ಇಬ್ಬರ ನಡುವೆ ಕೆಲ ವರ್ಷಗಳ ಹಿಂದೆಯೇ ಪ್ರೇಮಾಂಕುರವಾಗಿತ್ತು. ಪರಶುರಾಮನೊಂದಿಗೆ ಮದುವೆಯಾಗುವುದಾಗಿ ಯುವತಿ ಪಟ್ಟು ಹಿಡಿದಿದ್ದಳು. ಪರಶುರಾಮ ಭಾಗ್ಯಶ್ರೀಯ ಸೋದರತ್ತೆ ಮಗನಾದ ಕಾರಣ ಮನೆಯ ಹಿರಿಯರು ಚರ್ಚಿಸಿ, ಆದಷ್ಟು ಬೇಗ ನಿಶ್ಚಿತಾರ್ಥ ಮಾಡಿದರಾಯಿತು. ಮದುವೆ ಸ್ವಲ್ಪ ತಡವಾಗಿ ಮಾಡಿದರಾಯ್ತು ಎಂದು ನಿರ್ಧರಿಸಿದ್ದರು.
ಪೋಷಕರು ಮದುವೆಗೆ ಒಪ್ಪಿದ್ದರಾದರೂ ಬೇಸಿಗೆಯಾದ ನಂತರ ಮಾಡಿದರಾಯಿತೆಂದು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಯುವತಿ ಭಾಗ್ಯಶ್ರೀ ಆಕ್ಷೇಪ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ. ಮದುವೆ ಏಕೆ ತಡ ಮಾಡುತ್ತೀರಿ ಎಂದು ಪ್ರೇಮಿಗಳು ಪೋಷಕರ ಬಳಿ ಬೇಸರ ವ್ಯಕ್ತಪಡಿಸಿದ್ದರು. ಇದಾದ ನಂತರ ಇದ್ದಕ್ಕಿದ್ದಂತೆ ಫೆ. 11ರಂದು ಮನೆ ಬಿಟ್ಟು ಹೋಗಿದ್ದರು ನಾಪತ್ತೆಯಾಗಿದ್ದರು. ಕೊನೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.
ಇದನ್ನು ಓದಿ: ಐಶ್ವರ್ಯ ಶಿವಕುಮಾರ್ ಮದುವೆ ವಿಡಿಯೋ ಝಲಕ್ ಇಲ್ಲಿದೆ
ಮದುವೆ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು. ಇದರ ಜೊತೆಗೆ ಬೇರೆಯ ಅಂಶಗಳನ್ನೂ ಇಟ್ಟುಕೊಂಡು ತನಿಖೆ ನಡೆಸುತ್ತಿರುವುದಾಗಿ ಕಲಬುರ್ಗಿ ಎಸ್.ಪಿ. ಸಿಮಿ ಮರಿಯಮ್ ಜಾರ್ಜ್ ತಿಳಿಸಿದ್ದಾರೆ.
ಮದುವೆ ಮಾಡುವುದಾಗಿ ಹೇಳಿ, ಬಳಿಕ ತಮ್ಮನ್ನು ದೂರ ಮಾಡಬಹುದು ಎಂಬ ಸಂದೇಹದಿಂದ ಪ್ರೇಮಿಗಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರೇಮಿಗಳ ದುಡುಕಿನ ನಿರ್ಧಾರಿಂದಾಗಿ ಪೋಷಕರು ಕಣ್ಣೀರಲ್ಲೇ ಕೈ ತೊಳೆಯುವಂತಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ