• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕರ್ನಾಟಕ ಬಂದ್​ಗೆ ಕರೆ: ವಾಟಾಳ್ ನಾಗರಾಜ್ ಕಾರ್ಯವೈಖರಿಗೆ ಕನ್ನಡ ಪರ ಸಂಘಟನೆಗಳ ಆಕ್ರೋಶ

ಕರ್ನಾಟಕ ಬಂದ್​ಗೆ ಕರೆ: ವಾಟಾಳ್ ನಾಗರಾಜ್ ಕಾರ್ಯವೈಖರಿಗೆ ಕನ್ನಡ ಪರ ಸಂಘಟನೆಗಳ ಆಕ್ರೋಶ

ಕಲಬುರ್ಗಿ ಕನ್ನಡ ಸಂಘಟನೆ ಮುಖಂಡರು

ಕಲಬುರ್ಗಿ ಕನ್ನಡ ಸಂಘಟನೆ ಮುಖಂಡರು

ಕಲಬುರ್ಗಿ ನಗರಕ್ಕೆ ನವೆಂಬರ್ 25 ರಂದು ಬರುವುದಾಗಿ ಹೇಳಿದ್ದರು. ಆದರೆ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನಕ್ಕೆ ಬರದೆ ವಾಟಾಳ್ ಮಲತಾಯಿ ನೀತಿ ಅನುಸರಿಸುತ್ತಿದ್ದಾರೆ.

  • Share this:

ಕಲಬುರ್ಗಿ (ಡಿ.4):  ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಯ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಡಿಸೆಂಬರ್ 05 ರಂದು ಬಂದ್ ಗೆ ಕರೆ ನೀಡಲಾಗಿದೆ. ವಾಟಾಳ್​ ನಾಗಾರಾಜ್​ ಕರೆದಿರುವ ಈ ಬಂದ್​ಗೆ ಕೆಲ ಕನ್ನಡಪರ ಸಂಘಟನೆಗಳು ಬೆಂಬಲವ್ಯಕ್ತಪಡಿಸಿವೆ. ಆದರೆ ಇದೀಗ ಬಂದ್ ಒಂದು ದಿನ ಬಾಕಿ ಇರುವಾಗಲೇ ವಾಟಾಳ್ ನಾಗರಾಜ್ ಕಾರ್ಯವೈಖರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಾಟಾಳ್ ನಾಗರಾಜ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿದ್ದಾರೆ. ಕಲಬುರ್ಗಿ ನಗರಕ್ಕೆ ನವೆಂಬರ್ 25 ರಂದು ಬರುವುದಾಗಿ ಹೇಳಿದ್ದರು. ಆದರೆ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನಕ್ಕೆ ಬರದೆ ವಾಟಾಳ್ ಮಲತಾಯಿ ನೀತಿ ಅನುಸರಿಸುತ್ತಿದ್ದಾರೆ. ವಾಟಾಳ್ ಜಿಲ್ಲೆಗೆ ಬಂದಿದ್ದರೆ ಕನ್ನಡಪರ ಸಂಘಟನೆಗಳು ಅತ್ಯಂತ ಉತ್ಸಾಹದಿಂದ ಬಂದ್ ಆಚರಿಸುವ ಹುಮ್ಮಸ್ಸು ಹೊಂದಿದ್ದವು. ವಾಟಾಳ್ ನಗರಕ್ಕೆ ಬಾರದಿದ್ದರೂ ಬಂದ್ ಬೆಂಬಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದ ಹೈದರಾಬಾದ್ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡ ಮಂಜುನಾಥ ನಾಲವಾರಕರ್ ತಿಳಿಸಿದ್ದಾರೆ.


ಇದೇ ವೇಳೆ ಮಾತನಾಡಿರುವ ಜೈ ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಸಚಿನ್ ಫರತಾಬಾದ್, ಮರಾಠಾ ಅಭಿವೃದ್ದಿ ನಿಗಮ ಘೋಷಿಸಿ ರಾಜ್ಯ ಸರ್ಕಾರ ಕನ್ನಡಿಗರಿಗೆ ದ್ರೋಹ ಬಗೆದಿದೆ. ಕನ್ನಡಪರ ಸಂಘಟನೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದ್ದಾರೆ. ಯತ್ನಾಳ್ ಹೇಳಿಕೆ ನೀಡದೇ ಇದ್ದಲ್ಲಿ ನಾವು ಬಂದ್ ನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಯತ್ನಾಳ್ ಕನ್ನಡಪರ ಸಂಘಟನೆಗಳ ಸ್ವಾಭಿಮಾನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ಬಂದ್ ಮಾಡಿಯೇ ತೀರುತ್ತೇವೆ ಎಂದು ತಿಳಿಸಿದ್ದಾರೆ.


ಇದನ್ನು ಓದಿ: ಶನಿವಾರ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ


ಆದರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾತ್ರ ಬಂದ್ ವಿರೋಧಿಸಿದೆ. ಈ ಕುರಿತು ಪ್ರತಿಕ್ರಿಯಿಸಿರು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ, ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿದೆಯೇ ಹೊರತು, ಮರಾಠಿ ಭಾಷೆಗೆ ಸಂಬಂಧಿಸಿದ್ದಲ್ಲ. ಮರಾಠಾ ಸಮುದಾಯ ರಾಜ್ಯದಲ್ಲಿ ನೂರಾರು ವರ್ಷಗಳಿಂದ ನೆಲೆಸಿದೆ. ಅವರೂ ಕನ್ನಡಿಗರಾಗಿದ್ದಾರೆ. ಹೀಗಿರುವಾಗ ಅವರಿಗೊಂದು ನಿಗಮ ಸ್ಥಾಪಿಸಿದ್ದಾರೆ ಎಂದ ಕೂಡಲೇ ಬಂದ್ ಆಚರಿಸೋದು ಸರಿಯಲ್ಲ. ನಾಳಿನ ಬಂದ್ ನ್ನು ವಿರೋಧಿಸುವುದಾಗಿ ಸಿಂಪಿ ತಿಳಿಸಿದ್ದಾರೆ.


ಒಟ್ಟಾರೆ ನಾಳಿನ ಕರ್ನಾಟಕ ಬಂದ್ ಗೆ ಕರವೇ, ಹೈದರಾಬಾದ್ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಬೀದಿ ವ್ಯಾಪಾರಿಗಳ ಸಂಘವೂ ಬಂದ್ ಬೆಂಬಲಿಸಿದೆ. ಕೆಲ ಸಂಘಟನೆಗಳು ರಾಜ್ಯ ಸರ್ಕಾರದ ಶವಯಾತ್ರೆ ಮಾಡಲು ಮುಂದಾಗಿದ್ದರೆ, ಮತ್ತೆ ಕೆಲ ಸಂಘಟನೆಗಳು ರಸ್ತೆ ತಡೆ ಮಾಡಲು ತೀರ್ಮಾನಿಸಿವೆ.


ಬಂದ್ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜನೆಗೆ ತೀರ್ಮಾನಿಸಿದೆ. ಸುಮಾರು 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಚಿಂತನೆ ನಡೆಸಿದೆ. ಬಂದ್ ಯಶಸ್ವಿಗಾಗಿ ಕನ್ನಡಪರ ಸಂಘಟನೆಗಳು ಈಗಿನಿಂದಲೇ ಸಿದ್ಧತೆ ನಡೆಸಿವೆ.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು