ಕಲಬುರ್ಗಿ(ಮಾ. 19): ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ನೆರೆಯ ಮಹಾರಾಷ್ಟ್ರದಿಂದ ನಿತ್ಯ ಬರುತ್ತಿರುವ ಜನರಿಂದಾಗಿ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ ಇರುವ ಪರಿಣಾಮ ಸೋಂಕಿತರ ಸಂಖ್ಯೆ ಏರಿಕೆಯಾಗಲಾರಂಭಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಸ್ವತಃ ಡಿಸಿ ವಿಜಯಾ ವಿ ಜ್ಯೋತ್ಸ್ನಾ ಅಖಾಡಕ್ಕಿಳಿದು ಜಾಗೃತಿ ಮೂಡಿಸುವ ಜೊತೆಗೆ, ದಂಡ ಹಾಕಿ ನಿರ್ಲಕ್ಷ್ಯ ಮಾಡುವವರಿಗೆ ಬಿಸಿ ಮುಟ್ಟಿಸಲಾರಂಭಿಸಿದ್ದಾರೆ. ಕೋವಿಡ್ ಎರಡನೆಯ ಅಲೆ ಅಬ್ಬರಿಸುವ ಆತಂಕ ಜಿಲ್ಲೆಯಲ್ಲಿ ಎದುರಾಗಿದೆ. ಕಲಬುರ್ಗಿ ನಗರದ 10 ಬಡಾವಣೆಗಳಲ್ಲಿ ಹೆಚ್ಚು ಸೋಂಕಿತರು ಕಾಣಿಸಿಕೊಂಡಿದ್ದಾರೆ. ಕೊರೋನಾ ಸೋಂಕು ಹೆಚ್ಚಿರುವ ಬಡಾವಣೆಗಳಲ್ಲಿ ಮೈಕ್ರೋ ಕಂಟೈನಮೆಂಟ್ ಜೋನ್ ಅಂತಾ ಜಿಲ್ಲಾಡಳಿತ ಘೋಷಣೆ ಮಾಡಿದೆ.
ನಗರದ ತಾರಫೈಲ್, ಎಂಬಿ.ನಗರ, ಗಾಜಿಪುರ, ಬ್ಯಾಂಕ್ ಕಾಲೋನಿ, ಮಕ್ಕಾ ಕಾಲೋನಿ, ಹನುಮಾನ ನಗರ, ವಿಜಯ ಕಾಲೋನಿಯಲ್ಲಿ ಹೆಚ್ಚು ಸೋಂಕಿತರು ಕಾಣಿಸಿಕೊಂಡಿದ್ದು, ಈ ಬಡಾವಣೆಗಳನ್ನು ಮೈಕ್ರೋ ಕಂಟೈನ್ ಮೆಂಟ್ ಝೋನ್ ಗಳೆಂದು ಗುರುತಿಸಿ ನಿಗಾ ವಹಿಸಲಾಗಿದೆ.
ಜಿಲ್ಲೆಯಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆ ಪ್ರತಿದಿನ 3 ಸಾವಿರಕ್ಕು ಅಧಿಕ ಜನರಿಗೆ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರೋದಾಗಿ ಜಿಲ್ಲಾಧಿಕಾರಿ ವಿಜಯಾ ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.
ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡದಿರುವುದು ಕೊರೋನಾ ಹೆಚ್ಚಳಕ್ಕೆ ಕಾರಣವಾಗಿದೆ. ಕಲಬುರ್ಗಿ ನಗರದಲ್ಲಿ ಮಾಸ್ಕ್ ಹಾಕದೇ ಇರೋರಿಗೆ ದಂಡ ಪ್ರಯೋಗ ಆರಂಭಿಸಲಾಗಿದೆ. ಮಹಾರಾಷ್ಟ್ರದಿಂದ ಬದವರಿಂದ ಸೋಂಕು ದಿಢೀರ್ ಹೆಚ್ಚಳವಾಗಿದೆ ಎನ್ನೋ ಅಭಿಪ್ರಾಯ ವ್ಯಕ್ತವಾಗಿದ್ದು, ನರೆಯ ಮಾಹಾರಾಷ್ಟ್ರ ದಿಂದ ಬಂದವರ ಮೇಲೆ ನಿಗಾ ವಹಿಸಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಬಗಿ ಕ್ರಮಕ್ಕೆ ಜಿಲ್ಲಾಡಾಳಿತ ಮುಂದಾಗಿದೆ.
ಸಮುದಾಯ ಭವನ ಮತ್ತಿತರ ಕಡೆ ನಡೆಯೋ ಸಭೆ, ಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರದಂತೆ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಹೆಚ್ಚುತ್ತಿರೋ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಖುದ್ದು ಫೀಲ್ಡ್ ಗೆ ಇಳಿದಿದ್ದಾರೆ. ಕೊರೋನಾ ನಿಯಂತ್ರಣ ಮಾಡಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಫೀಲ್ಡ್ ಗೆ ಇಳಿದಿದ್ದಾರೆ. ಡಿಸಿ ವಿಜಯಾ ವಿ. ಜ್ಯೋತ್ಸ್ನಾ, ನಗರ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್ ಫೀಲ್ಡ್ ಗೆ ಇಳಿದಿದ್ದಾರೆ. ನಗರದ ಜಗತ್ ವೃತ್ತದಲ್ಲಿ ಮಾಸ್ಕ್ ಹಾಕದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ದಂಡ ಹಾಕಿ ಮಾಸ್ಕ್ ವಿತರಣೆ ಮಾಡಲಾಯಿತು. ಸಾರ್ವಜನಿಕರು, ವಾಹನ ಸವಾರರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅಧಿಕಾರಿಗಳು ಜಾಗೃತಿ ಮೂಡಿಸಿದರು. ನಗರದ ಸಾರಿಗೆ ಬಸ್ ನಲ್ಲಿಯೂ ಹತ್ತಿದ ಜಿಲ್ಲಾಧಿಕಾರಿ, ಅಲ್ಲಿಯೂ ತಪಾಸಣೆ ನಡೆಸಿ ಜಾಗೃತಿ ಮೂಡಿಸಿದರು.
ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಎರಡನೆಯ ಅಲೆ ಅಬ್ಬರಿಸೋ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಖುದ್ದು ಫೀಲ್ಡ್ ಗೆ ಇಳಿದು ಸರ್ಕಾರಿ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಮುಂದಾದ ಹಿರಿಯ ಅಧಿಕಾರಿಗಳು.
ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಡಿಸಿ...
ಜಿಲ್ಲಾಧಿಕಾರಿ ವಿಜಯಾ ವಿ.ಜ್ಯೋತ್ಸ್ನಾ ಇಂದು ಜಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕೊರೋನಾ 2 ನೇ ಲಸಿಕೆ ಪಡೆದರು. ತಮ್ಮ ತಂದೆ 72 ವರ್ಷದ ಜೋಷಿ ಅವರೊಂದಿಗೆ ಸಾರ್ವಜನಿಕರೊಂದಿಗೆ ವೈದ್ಯರ ನಿಗಾದಲ್ಲಿ ಕುಳಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕೊರೋನಾ ವ್ಯಾಕ್ಸಿನ್ ಬಗ್ಗೆ ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ. ಧೈರ್ಯದಿಂದ ವ್ಯಾಕ್ಸಿನ್ ಹಾಕಿಸಿಕೊಂಡು ಮಹಾ ಮಾರಿಯಿಂದ ದೂರವಿರುವಂತೆ ಕರೆ ನೀಡಿದರು.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ