HOME » NEWS » State » GUJJAR KI SHAADI A SEPARATE LEGAL ENTITY UNDER THE CONTROL OF LOVE JIHAD SAKLB HK

ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು ; ಮುನ್ನಲೆಗೆ ಬಂದ ಗುಜ್ಜರ್ ಕಿ ಶಾದಿ

ಲವ್ ಜಿಹಾದ್ ನಿಯಂತ್ರಣಕ್ಕೆ ಕಾನೂನು ಆಮೇಲೆ ತನ್ನಿ. ಅದಕ್ಕಿಂತ ಜ್ವಲಂತವಾಗಿರುವ ಗುಜ್ಜರ್ ಕಿ ಶಾದಿ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೆ ತನ್ನಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

news18-kannada
Updated:December 9, 2020, 8:29 PM IST
ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು ; ಮುನ್ನಲೆಗೆ ಬಂದ ಗುಜ್ಜರ್ ಕಿ ಶಾದಿ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ (ಡಿಸೆಂಬರ್​. 09): ಕರ್ನಾಟಕ ರಾಜ್ಯದಲ್ಲಿ ಸದ್ಯದ ಮಟ್ಟಿಗೆ ಲವ್ ಜಿಹಾದ್ ವಿಷಯ ಜೋರಾಗಿ ಚರ್ಚೆಯಾಗುತ್ತಿದೆ. ಅಂತರ್ ಧರ್ಮೀಯರ ನಡುವೆ ಸಂಭವಿಸುವ ಲವ್ ನಂತರ ಮದುವೆ ಇತ್ಯಾದಿಗಳ ಹಿಂದೆ ಬೇರೊಂದು ಅಜೆಂಡಾ ಇದೆ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಲವ್ ಜಿಹಾದ್ ನಿರ್ಬಂಧಕ್ಕೆ ಪ್ರತ್ಯೇಕ ಕಾನೂನು ಜಾರಿಗೆ ತರಲು ಮುಂದಾಗಿದೆ. ಇದು ಹೀಗಿರುವಾಗಲೇ ಗುಜ್ಜರ್ ಕಿ ಶಾದಿ  ಮುನ್ನೆಲೆಗೆ ಬಂದಿದೆ. ಲವ್ ಜಿಹಾದ್ ಗಿಂತ ಅಪಾಯಕಾರಿ ಮದುವೆಗಳೆಂದರೆ ಗುಜ್ಜರ್ ಕಿ ಶಾದಿಗಳು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ನಡೆಯುವ ಗುಜ್ಜರ್ ಕಿ ಶಾದಿ ತಡೆಗಟ್ಟುವುದನ್ನು ಬಿಟ್ಟು, ಲವ್ ಜಿಹಾದ್ ಮೇಲೇಕೆ ರಾಜ್ಯ ಸರ್ಕಾರ ಹೆಚ್ಚು ಕೇಂದ್ರೀಕೃತಗೊಂಡಿದೆ ಎಂಬ ಮಾತು ಉತ್ತರ ಕರ್ನಾಟಕದಲ್ಲಿ ಕೇಳಿ ಬರುತ್ತಿದೆ. ಲವ್ ಜಿಹಾದ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಪ್ರತ್ಯೇಕ ಕಾನೂನಿಗೆ ಮುಂದಾದಾಗಲೇ ಗುಜ್ಜರ್ ಕಿ ಶಾದಿ ಮುನ್ನಲೆಗೆ ಬಂದಿದೆ. ಲವ್ ಜಿಹಾದ್ ಬ್ಯಾನ್ ಮಾಡುವುದಾದದ್ರೆ ಗುಜ್ಜರ್ ಕಿ ಶಾದಿ ಬ್ಯಾನ್ ಏಕಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕದ ಜನ ಪ್ರಶ್ನಿಸುತ್ತಿದಾರೆ.

ಅಷ್ಟಕ್ಕೂ ಈ ಗುಜ್ಜರ್ ಕಿ ಶಾದಿ ಅಂದ್ರೆ  ಗುಜರಾತ್, ರಾಜಸ್ಥಾನ ಕಡೆಯವರು ಬಂದು ರಾತ್ರೋ ರಾತ್ರಿ ಮಾಡಿಕೊಂಡು ಹೋಗುವ ಮದುವೆಗಳನ್ನು ಉತ್ತರ ಕರ್ನಾಟಕದಲ್ಲಿ ಗುಜ್ಜರ್ ಕಿ ಶಾದಿ ಅಥವಾ ಗುಜ್ಜರ್ ಮದುವೆ ಎಂದು ಕರೆಯುತ್ತಾರೆ. ಮಧ್ಯವರ್ತಿಗಳ ನೆರವಿನೊಂದಿಗೆ ಮದುವೆಗಳು ನಡೆದು ಹೋಗುತ್ತವೆ. ಗುಜರಾತ್ ಕಡೆಯಿಂದ ಬಂದವರೊಂದಿಗೆ ಮದುವೆಯಾದ ಕಾರಣಕ್ಕೆ ಗುಜ್ಜರ್ ಕಿ ಶಾದಿ ಎನ್ನುವ ವಾಡಿಕೆಯೂ ಇದೆ.

ಬಡ, ನಿರ್ಗತಿಕ ಹೆಣ್ಣು ಮಕ್ಕಳೇ ಗುಜ್ಜರ್ ಮಧ್ಯವರ್ತಿಗಳ ಟಾರ್ಗೆಟ್ ಆಗಿದ್ದಾರೆ. ಅಪ್ಪ ಅಥವಾ ಅಮ್ಮನನ್ನು ಕಳೆದುಕೊಂಡ ಮಕ್ಕಳೇ ಮಧ್ಯವರ್ತಿಗಳು ಮತ್ತು ಮದುವೆ ಗಂಡಗಳು ಟಾರ್ಗೆಟ್ ಆಗಿರುತ್ತಾರೆ. ಅಪ್ರಾಪ್ತ ಬಾಲಕಿಯನ್ನು ಮುಖ್ಯ ಟಾರ್ಗೆಟ್ ಮಾಡಿಕೊಳ್ಳುವ ಮಧ್ಯವರ್ತಿಗಳು, ಪೋಷಕರನ್ನು ಪುಸಲಾಯಿಸಿ, ಹಣದ ಆಮಿಷವೊಡ್ಡಿ ಮದುವೆ ಮಾಡಿಕೊಂಡು ಹೋಗುತ್ತಾರೆ. ಅಪ್ರಾಪ್ತರನ್ನು, ವಯಸ್ಕರನ್ನು ವಯಸ್ಸಾದವರಿಗೆ ಕೊಟ್ಟು ಮದುವೆ ಮಾಡೋ ಪದ್ಧತಿ ಈ ಭಾಗದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಗುಜ್ಜರ್ ಮದುವೆಗಳು ರಾತ್ರೋ ರಾತ್ರಿ ಗುಡಿಗಳಲ್ಲಿ ನೆರವೇರುತ್ತವೆ.

ಉತ್ತರ ಕರ್ನಾಟಕದ ಕಲಬುರ್ಗಿ, ಬೀದರ್, ಯಾದಗಿರಿ, ಧಾರವಾಡ, ಬೆಳಗಾವಿ ಮತ್ತಿತರ ಕಡೆ ಈ ಜಾಲ ದೊಡ್ಡ ಪ್ರಮಾಣದಲ್ಲಿದೆ. ಗುಜರಾತ್, ರಾಜಸ್ಥಾನಗಳಲ್ಲಿ ಹೆಣ್ಣಿನ ಕೊರತೆ ಕಾರಣಕ್ಕೆ ಇಲ್ಲಿನ ಹೆಣ್ಣುಮಕ್ಕಳಿಗೆ ಡಿಮ್ಯಾಂಡ್ ಇದೆ. ಹೀಗಾಗಿ ಗುಜರಾತ್, ರಾಜಸ್ತಾನ ರಾಜ್ಯಗಳಿಂದ ಬರುವ ಗಂಡುಗಳಿಗೆ ಗುಜ್ಜರ್ ಕಿ ಶಾದಿ ಮಾಡಲೆಂದೇ ಹಲವಾರು ಬ್ರೋಕರ್ ಗಳಿದ್ದಾರೆ. ಗಂಡಿನ ಕಡೆಯವರಿಂದ ಕಂತೆ ಕಂತೆ ಹಣ ಪಡೆದು ಬ್ರೋಕರ್ ಗಳು ಮದುವೆ ಮಾಡಿಸಿ ಕೈತೊಳೆದುಕೊಳ್ಳುತ್ತಾರೆ. ಹೆಣ್ಣಿನ ಪೋಷಕರಿಗೆ ಒಂದಷ್ಟು ಹಣ ಕೊಟ್ಟು ಮದುವೆ ಶಾಸ್ತ್ರ ಮುಗಿಸುತ್ತಾರೆ. ಮದುವೆಗೂ ಮುಂಚೆಯೇ ಮದುವೆಯಾದ ನಂತರ ತವರಿನ ಜೊತೆ ಸಂಬಂಧ ಕಡಿತದ ಕಂಡೀಷನ್ ಹಾಕಲಾಗುತ್ತದೆ. ಇದುವರೆಗೂ ಗುಜ್ಜರ್ ಮದುವೆಯಾದ ಬಹುತೇಕರು ತಮ್ಮ ಊರಿಗೆ ವಾಪಸ್ಸಾಗಿಲ್ಲ. ಹೀಗೆ ಮದುವೆಯಾಗಿ ಹೋದ ಹೆಣ್ಣುಗಳ ಕಥೆ ದಯನೀಯ ಎಂಬ ಮಾಹಿತಿ ಇದೆ.

ಇದನ್ನೂ ಓದಿ : ಸದನವನ್ನು ಕೇಸರಿಮಯ ಮಾಡಿದರು; ನಾಳೆಯಿಂದ ಎಲ್ಲಾ ಕಲಾಪ ಬಹಿಷ್ಕಾರ: ಸಿದ್ದರಾಮಯ್ಯ

ಉತ್ತರ ಕರ್ನಾಟಕದಲ್ಲಿ ಇಂತಹ ಸಾವಿರಕ್ಕೂ ಅಧಿಕ ಮದುವೆಗಳು ನಡದು ಹೋಗಿವೆ. ಕಲಬುರ್ಗಿ ಜಿಲ್ಲೆಯಲ್ಲಿ ಈ ಮದುವೆಗಳು ವ್ಯಾಪಕವಾಗಿವೆ. ಇಲ್ಲಿನ ಹೆಣ್ಣು ಮಕ್ಕಳಾದ್ರೆ ಹೊಲದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಾರೆ ಅನ್ನುತ್ತಾರೆ ಮದುವೆ ಗಂಡುಗಳು.

ಬಡತನದ ಕಾರಣಕ್ಕೆ ಪೋಷಕರು ವಯಸ್ಸಾದವರಿಗೆ ತಮ್ಮ ಮಕ್ಕಳನ್ನು ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ವಿಚತ್ರವೆಂದರೆ ಉತ್ತರ ಕರ್ನಾಟಕದಲ್ಲಿ ಸಾವಿರಾರು ಮದುವೆಗಳಾದರೂ ಯಾವುದೇ ಪ್ರಕರಣದಲ್ಲಿ ಶಿಕ್ಷೆಗಳಾಗಿಲ್ಲ. ಪ್ರಕರಣ ದಾಖಲಿಸಿಕೊಳ್ಳುವಾಗಲೇ ಪೊಲೀಸರ ಯಡವಟ್ಟು ಮಾಡುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಬಹುತೇಕ ಪ್ರಕರಣಗಳನ್ನು ಪೊಲೀಸರು ಬಾಲ್ಯ ವಿವಾಹ ಎಂದು ಕೇಸ್ ಮಾಡಿಕೊಳ್ಳುತ್ತಿದ್ದಾರೆ. ಆರೋಪಿಗಳು ತಪ್ಪಿಸಿಕೊಳ್ಳಲು ಪೊಲೀಸರಿಂದಲೇ ಪರೋಕ್ಷ ನೆರವು ಸಿಕ್ಕಂತಾಗುತ್ತಿದೆ.ಮಾನವ ಕಳ್ಳ ಸಾಗಣೆ ಎಂದು ಮಾಡಿಕೊಂಡರೆ ಶಿಕ್ಷೆಯ ಪ್ರಮಾಣ ಹೆಚ್ಚಾಗುತ್ತದೆ. ಆದರೆ, ಇದುವರೆಗೆ ಮಾನವ ಕಳ್ಳ ಸಾಗಣೆ ಎಂದು ಪ್ರಕರಣ ದಾಖಲಿಸಿಕೊಳ್ಳುವ ಪ್ರಯತ್ನವನ್ನು ಪೊಲೀಸರು ಮಾಡಿಲ್ಲ. ಇದರಿಂದಾಗಿ ಗುಜ್ಜರ್ ಕಿ ಶಾದಿಗಳಿಗೆ ಮತ್ತಷ್ಟು ಕುಮ್ಮಕ್ಕು ಸಿಕ್ಕಂತಾಗಿದೆ. ಸದ್ದಿಲ್ಲದೆ ಈಗಲೂ ಗುಜ್ಜರ್ ಕಿ ಶಾದಿಗಳು ಮುಂದುವರೆದಿವೆ. ಲವ್ ಜಿಹಾದ್ ಸಂದರ್ಭದಲ್ಲಿ ಗುಜ್ಜರ್ ಕಿ ಶಾದಿ ಮುನ್ನೆಲೆಗೆ ಬಂದಿದೆ. ಲವ್ ಜಿಹಾದ್ ಗಿಂತ ಗುಜ್ಜರ್ ಕಿ ಶಾದಿ ಡೇಂಜರ್ ಎಂದು ಚಿಂತಕರು ಅಭಿಪ್ರಾಯಪಡುತ್ತಿದ್ದಾರೆ.

ಲವ್ ಜಿಹಾದ್ ಅಂತರ್ ಧರ್ಮೀಯರ ನಡುವಿನ ಮದುವೆಯಾದರೆ, ಗುಜ್ಜರ್ ಕಿ ಶಾದಿ ಅಂತರ್ ರಾಜ್ಯದ ವ್ಯಕ್ತಿಗಳ ನಡುವೆ ಮದುವೆಯಾಗಿದೆ. ಅದೂ ಸಹ ಅಪ್ರಾಪ್ತ ಬಾಲಕಿಯರ ಜೊತೆಗೆ ಮದುವೆ ಅನ್ನೋದು ವಿಶೇಷ. ದುಡ್ಡಿನ ಆಸೆಯಲ್ಲಿ ಮಕ್ಕಳನ್ನು ಪೋಷಕರು ಮಾರಿಕೊಳ್ಳುತ್ತಿದ್ದಾರೆ. ಲವ್ ಜಿಹಾದ್ ನಿಯಂತ್ರಣಕ್ಕೆ ಕಾನೂನು ಆಮೇಲೆ ತನ್ನಿ. ಅದಕ್ಕಿಂತ ಜ್ವಲಂತವಾಗಿರುವ ಗುಜ್ಜರ್ ಕಿ ಶಾದಿ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೆ ತನ್ನಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಚಿಂಚೋಳಿಯಲ್ಲಿ ನಡೆದ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಈ ಸಂಬಂಧ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದ್ರೂ ಗುಜ್ಜರ್ ಕಿ ಶಾದಿಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಪ್ರತಿಕ್ರಿಯಿಸಿರುವ ಸಾಮಾಜಿಕ ಪರಿವರ್ತನ ಜನಾಂದೋಲನ ಸಂಘಟನೆ ರಾಜ್ಯ ಕಾರ್ಯದರ್ಶಿ ವಿಠಲ ಚಿಕಣಿ, ಲವ್ ಜಿಹಾದ್ ಇದೆಯೋ ಇಲ್ಲವೊ ಗೊತ್ತಿಲ್ಲ. ಆದರೆ, ಅದರ ಮೇಲೆಯೇ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಅದಕ್ಕಿಂತಲೂ ಜ್ವಲಂತ ಸಮಸ್ಯೆಯಾಗಿರುವ, ಉತ್ತರ ಕರ್ನಾಟಕದಲ್ಲಿ ಅಪ್ರಾಪ್ತ ಬಾಲಕಿಯರ ಸಾಗಾಟಕ್ಕೆ ನೆರವಾಗುತ್ತಿರುವ ಗುಜ್ಜರ್ ಕಿ ಶಾದಿ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ.

ಇದನ್ನೂ ಓದಿ : ವಿಪಕ್ಷಗಳ ಗದ್ದಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ; ಗುಜರಾತ್, ಉ.ಪ್ರದೇಶ ಮಾದರಿಯಲ್ಲಿ ಕಾಯ್ದೆ ರಚನೆ

ನಾವು ಈ ಹಿಂದೆ ಹತ್ತಾರು ಪ್ರಕರಣಗಳಲ್ಲಿ ನ್ಯಾಯ ದೊರಕಿಸಿಕೊಡಲು ಯತ್ನಿಸಿದ್ದೇವೆ. ಆದರೆ ಪೊಲೀಸರು ದುರ್ಬಲ ಸೆಕ್ಷನ್ ಗಳನ್ನು ಹಾಕುತ್ತಿರವುದರಿಂದಾಗಿ ಮದುವೆ ಮಾಡುವ ಬ್ರೋಕರ್, ಬಾಲಕಿಯ ಪೋಷಕರು ಮತ್ತು ಮದುವೆ ಗಂಡುಗಳು ತಪ್ಪಿಸಿಕೊಂಡು ಹೋಗಲು ಕಾರಣವಾಗುತ್ತಿದೆ. ಲವ್ ಜಿಹಾದ್ ಬಗ್ಗೆ ತೀವ್ರ ಕ್ರಮ ಕೈಗೊಳ್ಳಲು ಮುಂದಾಗಿರುವ ಸರ್ಕಾರ ಮೊದಲು ಇತ್ತ ಕಡೆ ಗಮನ ಹರಿಸಲಿ. ಗುಜ್ಜರ್ ಕಿ ಶಾದಿ ಮೇಲೆ ನಿರ್ಬಂಧ ಹೇರುವ ಜೊತೆಗೆ, ಮಾಡಿದವರ ವಿರುದ್ಧ ಕ್ರಮಕ್ಕೆ ಕಠಿಣ ಕಾನೂನು ಜಾರಿಗೆ ತರಲಿ ಎಂದು ಆಗ್ರಹಿಸಿದ್ದಾರೆ.
Youtube Video

ಒಟ್ಟಾರೆ ಲವ್ ಜಿಹಾದ್ ಕಾನೂನು ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿ ಗುಜ್ಜರ್ ಕಿ ಶಾದಿಯನ್ನು ಮುನ್ನಲೆಗೆ ಬರುವಂತೆ ಮಾಡಿದ್ದು, ಮೊದಲು ಇಂತಹ ಅನಿಷ್ಟಗಳ ಮೇಲೆ ನಿರ್ಬಂಧ ಹಾಕಿ ಎಂಬ ಕೂಗು ಕೇಳಿ ಬಂದಿದೆ.

 ವರದಿ : ಶಿವರಾಮ್​ ಅಸುಂಡಿ
Published by: G Hareeshkumar
First published: December 9, 2020, 8:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories