news18-kannada Updated:December 26, 2020, 4:29 PM IST
ಸಚಿವ ಕೆ.ಸುಧಾಕರ್
ಬೆಂಗಳೂರು (ಡಿಸೆಂಬರ್ 26); ಹೊಸ ಪ್ರಭೇದದ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ ರೂಪಿಸಬೇಕಿದೆ. ಇದಕ್ಕಾಗಿ ಗೃಹ ಇಲಾಖೆಯ ಜೊತೆ ಸಭೆ ನಡೆಸಿ ಹೊಸ ಬಗೆಯ ಪ್ರಭೇದದ ಕೊರೋನಾ ನಿಯಂತ್ರಣಕ್ಕೆ ಮಾರ್ಗಸೂಚಿ ರೂಪಿಸಲಾಗುವುದು ಎಂದರು.
ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಈ ಲಸಿಕೆಯನ್ನು ಪ್ರಾಯೋಗಿಕವಾಗಿ ಪಡೆಯಬಹುದು. ಕೊರೋನಾ ವಾರಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಈ ಲಸಿಕೆಯನ್ನು ಪಡೆದು ಪ್ರಯೋಗದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದೇನೆ. ಕ್ಲಿನಿಕಲ್ ಟ್ರಯಲ್ ನಲ್ಲಿ ಪಾಲ್ಗೊಂಡು ಸಹಾಯ ಮಾಡಬಹುದು ಎಂದರು.
ಇದನ್ನು ಓದಿ: ವಿದೇಶಿ ವಿದ್ಯಾರ್ಥಿಯಿಂದ ಮೈಸೂರಿಗೆ ಬ್ರಿಟನ್ ವೈರಸ್ ಆತಂಕ: ಜಿನ್ಸ್ ಸಿಕ್ವೆನ್ಸಿಂಗ್ ವರದಿಗಾಗಿ ಕಾಯುತ್ತಿರುವ ಜಿಲ್ಲಾಡಳಿತ
ಯು.ಕೆ.ಯಿಂದ ಬಂದ 2,500 ಜನ ಪೈಕಿ, 1,638 ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 14 ಜನರಿಗೆ ಪಾಸಿಟಿವ್ ಆಗಿದೆ. ಇವರ ಮಾದರಿಯನ್ನು ನಿಮ್ಹಾನ್ಸ್ ನ ಲ್ಯಾಬ್ ಗೆ ಕಳುಹಿಸಲಾಗಿದೆ. ಈ ಮಾದರಿಗಳನ್ನು ಜೆನೆಟಿಕ್ ಸೀಕ್ವೆನ್ಸಿಂಗ್ ಮಾಡಲಾಗುತ್ತಿದೆ. ಇದಕ್ಕೆ 48 ಗಂಟೆಗಳ ಕಾಲ ಬೇಕಾಗುತ್ತದೆ. ವರದಿ ಬಂದ ಬಳಿಕ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಇಡೀ ದೇಶದಲ್ಲಿ ಯು.ಕೆ.ಯಿಂದ ಒಟ್ಟು 38,500 ಜನರು ಬಂದಿದ್ದಾರೆ. ಎಲ್ಲ ರಾಜ್ಯಗಳಿಂದ ಬಂದ ಮಾದರಿ, ವರದಿಯನ್ನು ಕಲೆಹಾಕಿ ಅಂತಿಮ ವರದಿಯನ್ನು ಐಸಿಎಂಆರ್ ಪ್ರಕಟಿಸಲಿದೆ ಎಂದು ಮಾಹಿತಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಸೂಕ್ತ ತಪಾಸಣೆ ವ್ಯವಸ್ಥೆ ಇದೆ. ನೆಗೆಟಿವ್ ವರದಿ ಇಲ್ಲದವರನ್ನೂ ನಿಲ್ದಾಣದಲ್ಲೇ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.
Published by:
HR Ramesh
First published:
December 26, 2020, 4:28 PM IST