news18-kannada Updated:February 17, 2020, 11:56 AM IST
ಜಿ.ಟಿ.ದೇವೇಗೌಡ
ಬೆಂಗಳೂರು (ಫೆ.17): ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಇಂದೇ ಕೂಡ ವಿಧಾನಪರಿಷತ್ ಚುನಾವಣೆ ಕೂಡ ನಡೆಯುತ್ತಿದೆ. ಅಧಿವೇಶನಕ್ಕೆ ಹಾಜರಾಗುವ ಮುನ್ನ ವಿಧಾನಸಭೆ ಸದಸ್ಯರು ಬಿರುಸಿನ ಮತದಾನದಲ್ಲಿ ಭಾಗಿಯಾಗುತ್ತಿರುವ ದೃಶ್ಯ ಕಂಡುಬಂದಿದೆ. ಈ ನಡುವೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ನಡುವಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಅಧಿವೇಶನಕ್ಕೂ ಮುನ್ನ ಸದನದಲ್ಲಿ ಚರ್ಚೆಯಾಗುವ ವಿಚಾರಗಳ ಕುರಿತು ಇಂದು ಜೆಡಿಎಸ್ ಸಭೆ ಕರೆದಿತ್ತು. ಅಲ್ಲದೇ, ಪರಿಷತ್ ಚುನಾವಣೆಯಲ್ಲಿ ಭಾಗಿಯಾಗದಂತೆ ಜೆಡಿಎಸ್ ನಿರ್ಧರಿಸಿತ್ತು. ಈ ಬೆಳವಣಿಗೆ ನಡುವೆ ಪಕ್ಷದ ಸಭೆಗೆ ಗೈರಾದ ಜಿಟಿ ದೇವೇಗೌಡ ಅವರು, ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಿದರು. ಇದಾದ ಬಳಿಕ ನೇರವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ತಮ್ಮ ನಾಯಕರಿಗೆ ಶಾಕ್ ನೀಡಿದರು.
ಪರಿಷತ್ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಹಿನ್ನೆಲೆ ಜೆಡಿಎಸ್ ಕೂಡ ವಿಪ್ ಜಾರಿ ಮಾಡಿಲ್ಲ. ಈ ಹಿನ್ನೆಲೆ ಬಿಜೆಪಿ ಬಗ್ಗೆ ಮೃದು ಧೋರಣೆ ತಳೆದಿರುವ
ಜಿಟಿ ದೇವೇಗೌಡ ಅವರ ನಡೆ ಅನುಮಾನ ಮೂಡಿಸಿದೆ. ಅಲ್ಲದೇ ಅವರ ಮತ್ತು ಸಿಎಂ ಬಿಎಸ್ ವೈ ನಡುವಿನ ಮಾತುಕತೆ ಕೂಡ ಕುತೂಹಲಕ್ಕೆ ಕಾರಣವಾಗಿದ್ದು, ಅವರು ಅಡ್ಡ ಮತದಾನ ಮಾಡಿದ್ದಾರೆಯೇ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ಮತದಾನದ ಬಳಿಕ ಲಕ್ಷ್ಮಣ ಸವದಿಗೆ ಹಸ್ತ ಲಾಘವ ಮಾಡಿದ ಜಿಟಿ ದೇವೇಗೌಡ ಶುಭ ಹಾರೈಸಿದರು. ಅಲ್ಲದೇ ಜಿಟಿ ದೇವೇಗೌಡ ಅವರನ್ನು ಖುದ್ದು ಸಚಿವ ಸಿಟಿ ರವಿ ಅವರು ಮತಕೇಂದ್ರಕ್ಕೆ ಕರೆದೊಯ್ದರು.
ಇದನ್ನು ಓದಿ: ಇಂದು ವಿಧಾನ ಪರಿಷತ್ ಚುನಾವಣೆ; ಲಕ್ಷ್ಮಣ ಸವದಿ ಅವಿರೋಧ ಆಯ್ಕೆ ಬಹುತೇಕ ಖಚಿತ?
ನಾಲ್ಕು ದಿನದ ಹಿಂದೆ ಪರಿಷತ್ ಚುನಾವಣೆ ಕುರಿತು ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗೆದ್ದೆ ಗೆಲ್ಲುತ್ತಾರೆ. ಚುನಾವಣೆಯಲ್ಲಿ
ಸವದಿ ಸೋಲಿಸುವುದನ್ನು ಜನ ಒಪ್ಪುವುದಿಲ್ಲ. ಈ ಹಿನ್ನೆಲೆ ಅವರು ಗೆಲುವು ಸುಲಭವಾಗಲಿದೆ. ಅಲ್ಲದೇ, ಅವರಿಗೆ ಬಹುಮತ ಕೂಡ ಇದೆ ಎನ್ನುವ ಮೂಲಕ ಪಕ್ಷದ ನಾಯಕರಿಗೆ ಶಾಕ್ ನೀಡಿದ್ದರು.
ಮೈತ್ರಿ ಸರ್ಕಾರ ಪತನವಾದ ಬಳಿಕ ಸದಾ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಳ್ಳುತ್ತಿರುವ ಜಿಟಿ ದೇವೇಗೌಡ, ಅವರ ಪರವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಮೈಸೂರು ದಸರಾ ಕಾರ್ಯಕ್ರಮದಲ್ಲಿಯೂ ಯಡಿಯೂರಪ್ಪ ಜೊತೆ ವೇದಿಕೆ ಹಂಚಿಕೊಂಡ ಅವರು, ಬಿಜೆಪಿ ಸೇರಲಿದ್ದಾರೆ ಎಂಬ ಅನುಮಾನ ಮೂಡಿತ್ತು. ಆದರೆ, ತಾವು ಯಾವುದೇ ಪಕ್ಷ ಸೇರಲ್ಲ. ಜೆಡಿಎಸ್ನಲ್ಲಿಯೇ ಇರುತ್ತೇನೆ ಎಂದಿದ್ದ ಅವರು, ತಮ್ಮ ಪಕ್ಷದ ನಾಯಕರೊಂದಿಗೂ ಅಂತರ ಕಾಯ್ದುಗೊಂಡು ಬರುತ್ತಿದ್ದಾರೆ.
First published:
February 17, 2020, 11:48 AM IST