ಜೆಡಿಎಸ್ ಚಿಂತನ ಸಭೆಗೆ ಜಿಟಿಡಿ ಗೈರು; ನಿಮ್ಮ ಕಣ್ಮುಂದೆಯೇ ಪಕ್ಷ ಕಟ್ಟಿ ಔತಣ ಕೊಡಿಸ್ತೀವಿ ಎಂದು ಹೆಚ್​ಡಿಡಿ ಸವಾಲು

ಜಿಟಿ ದೇವೇಗೌಡರು ಜೆಡಿಎಸ್ ಪಕ್ಷ ತ್ಯಜಿಸುವ ಸುಳಿವನ್ನು ಹಲವು ಬಾರಿ ನೀಡಿದ್ದಾರೆ. ಈಗ ಜೆಡಿಎಸ್ ಚಿಂತನ ಮಂಥನ ಸಭೆಗೆ ಗೈರಾಗುವ ಮೂಲಕ ಆ ಸುದ್ದಿ ಇನ್ನಷ್ಟು ಬಲಗೊಂಡಿದೆ. ಪಕ್ಷ ಕೂಡ ಜಿಟಿಡಿಯನ್ನು ನಿರ್ಲಕ್ಷಿಸತೊಡಗಿರುವುದು ಕುತೂಹಲ ಮೂಡಿಸಿದೆ.

news18-kannada
Updated:September 12, 2019, 11:08 AM IST
ಜೆಡಿಎಸ್ ಚಿಂತನ ಸಭೆಗೆ ಜಿಟಿಡಿ ಗೈರು; ನಿಮ್ಮ ಕಣ್ಮುಂದೆಯೇ ಪಕ್ಷ ಕಟ್ಟಿ ಔತಣ ಕೊಡಿಸ್ತೀವಿ ಎಂದು ಹೆಚ್​ಡಿಡಿ ಸವಾಲು
ಜಿಟಿ ದೇವೇಗೌಡ
  • Share this:
ಮೈಸೂರು/ಬೆಂಗಳೂರು(ಸೆ. 12): ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಪಕ್ಷ ಬಿಡುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿದೆ. ಜಿಟಿಡಿ ಕೂಡ ತಾನು ನಾಮಕಾವಸ್ತೆಯಲ್ಲಿ ಪಕ್ಷದಲ್ಲಿದ್ದೇನೆಂದು ಹಲವು ಬಾರಿ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ. ಈ ಸುದ್ದಿಗೆ ಇಂಬು ಕೊಡುವಂತೆ ಇವತ್ತು ಮೈಸೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ ಚಿಂತನ ಮಂಥನ ಸಭೆಯಲ್ಲಿ ಜಿ.ಟಿ. ದೇವೇಗೌಡರು ಗೈರಾಗಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಈ ಸಭೆಗೆ ಬಂದರೂ ಜಿಟಿಡಿ ಆಗಮಿಸುವ ಆಸಕ್ತಿ ತೋರಿಲ್ಲ.

ಈ ಸಭೆ ನಡೆಯುವ ಬಗ್ಗೆ ತನಗೆ ಮಾಹಿತಿಯೇ ಇಲ್ಲ. ಆಹ್ವಾನವಿಲ್ಲದೇ ಸಭೆಗೆ ಹೋಗೋದು ಹೇಗೆ? ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆಗಿರುವ ಜಿಟಿಡಿ ಪ್ರಶ್ನಿಸಿದ್ದಾರೆ. ಕುತೂಹಲದ ವಿಷಯವೆಂದರೆ ಸಭೆಯ ಬಗ್ಗೆ ಹೊರಡಿಸಲಾಗಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಜಿಟಿಡಿ ಪಾಲ್ಗೊಳ್ಳುತ್ತಾರೆಂದು ತಿಳಿಸಲಾಗಿತ್ತು. ಆದರೆ, ಸ್ಥಳೀಯ ಮುಖಂಡರಾಗಲೀ, ವರಿಷ್ಠರಾಗಲೀ ಜಿಟಿಡಿ ಅವರಿಗೆ ಈ ಸಭೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲವಂತೆ. ಪಕ್ಷ ಬಿಡಲು ಹೊರಟಿರುವ ಜಿಟಿಡಿ ಅವರ ಉಸಾಬರಿಯೇ ಬೇಡ ಎಂದು ಜೆಡಿಎಸ್ ಪಕ್ಷವು ಅವರನ್ನು ನಿರ್ಲಕ್ಷಿಸುತ್ತಿದೆಯಾ ಎಂಬ ದಟ್ಟ ಅನುಮಾನವಂತೂ ಇದೆ.

ಇದನ್ನೂ ಓದಿ: ಆರ್ಥಿಕ ಹಿಂಜರಿತದ ನಡುವೆಯೂ ನಮ್ಮ ರಾಜ್ಯ ಸುಸ್ಥಿತಿಯಲ್ಲಿದೆ; ಇಲಾಖಾವಾರು ತೆರಿಗೆ ಸಂಗ್ರಹ ಮಾಹಿತಿ ಹಂಚಿಕೊಂಡ ಸಿಎಂ

ಜಿಟಿ ದೇವೇಗೌಡರೂ ಕೂಡ ಕುಮಾರಸ್ವಾಮಿ ಬರುವ ಮುನ್ನವೇ ತಮ್ಮದೇ ಪೂರ್ವನಿಗದಿತ ಪ್ರವಾಸಕ್ಕೆ ಹೊರಟಿದ್ದಾರೆ. ಹುಣಸೂರಿನಲ್ಲಿರುವ ಬಿಳಿಕೆರೆಗೆ ಜಿಟಿಡಿ ಬೇಟಿ ನೀಡುತ್ತಿದ್ದಾರೆ. ಅದಾದ ಬಳಿಕ ಅವರು ಬೆಂಗಳೂರಿಗೆ ತೆರಳಲಿದ್ದಾರೆ.

ಇದೇ ವೇಳೆ, ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಬೆಳಗ್ಗೆ 10 ಗಂಟೆಗೆ ಈ ಜೆಡಿಎಸ್ ಸಭೆ ಪ್ರಾರಂಭವಾಗಿದೆ. ಹುಣಸೂರು ಕ್ಷೇತ್ರ ಸೇರಿದಂತೆ ಮುಂಬರುವ ಕೆಲ ಉಪಚುನಾವಣೆಗಳು, ಪಕ್ಷ ಸಂಘಟನೆ ಇತ್ಯಾದಿಗಳಿಗೆ ಅಣಿಯಾಗುವ ನಿಟ್ಟಿನಲ್ಲಿ ಚರ್ಚೆ ನಡೆಸಲು ಈ ಸಭೆ ಆಯೋಜಿಸಲಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಹಾಗೂ ಇತರ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಈ ಸಭೆಯಲ್ಲಿ ಪಾಲ್ಗೊಂಡಿದ್ಧಾರೆ.

ಇದನ್ನೂ ಓದಿ: ಮೈಸೂರಿನ ದಲಿತ ಕೇರಿಯಲ್ಲಿ ಸಾಮರಸ್ಯದ ಪಾದಯಾತ್ರೆ ಮಾಡಿದ ಪೇಜಾವರ ಶ್ರೀ

ಜಿಟಿಡಿಗೆ ಹೆಚ್​ಡಿಡಿ ಸವಾಲು:ಅತ್ತ, ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಜಿಟಿಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷದ ಬಗ್ಗೆ ಅಸಮಾಧಾನಗೊಂಡು ತೊರೆಯಲು ಸಿದ್ಧವಾಗಿರುವ ಜಿಟಿಡಿ ಅವರ ಕಣ್ಮುಂದೆಯೇ ಪಕ್ಷವನ್ನು ಮತ್ತೆ ಕಟ್ಟಿ ಅಧಿಕಾರಕ್ಕೆ ತರುತ್ತೇನೆ ಎಂದು ಮಾಜಿ ಪ್ರಧಾನಿಗಳು ಸವಾಲು ಹಾಕಿದ್ದಾರೆ.

ಜಿಟಿ ದೇವೇಗೌಡರ ಬಗ್ಗೆ ನಾನು ಮಾತೇ ಆಡಲ್ಲ. ನಮ್ಮ ಪಕ್ಷಕ್ಕೆ ಸ್ವಾಭಿಮಾನ ಇದೆ, ಶಕ್ತಿ ಇದೆ, ದೈವ ಶಕ್ತಿ ಇದೆ. ನೀವು ಇನ್ನೂ ಚಿಕ್ಕವರು. ನನಗೆ ಈಗ 87 ವರ್ಷ. ನಿಮ್ಮ ಕಣ್ಣ ಮುಂದೆಯೇ ಈ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಅಲ್ಲಿಯವರೆಗೂ ನನಗೆ ದೇವರು ಆಯಸ್ಸು ಕೊಡುತ್ತಾನೆ. ಆ ದಿನದಂದು ನಿಮಗೆ ಒಳ್ಳೆಯ ಔತಣ ಊಟ ಮಾಡಿಸುತ್ತೇನೆ ಎಂದು ಹೆಚ್.ಡಿ. ದೇವೇಗೌಡ ಅವರು ಸವಾಲು ಹಾಕಿದ್ದಾರೆ.

ಮೈತ್ರಿ ಸರ್ಕಾರ ಪತನಗೊಂಡ ನಂತರ ಜಿಟಿ ದೇವೇಗೌಡರು ಪಕ್ಷದ ವಿರುದ್ಧವಾಗಿ ಹಲವು ಬಾರಿ ಮಾತನಾಡಿದ್ಧಾರೆ. ಜೆಡಿಎಸ್ ಪಕ್ಷದಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ತಮಗೆ ಮರ್ಯಾದೆ ದೊರಕುತ್ತಿಲ್ಲ ಎಂದು ಜಿ.ಟಿ. ದೇವೇಗೌಡರು ಹೇಳಿಕೊಂಡಿದ್ದಿದೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಬಗ್ಗೆ ಅವರು ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಮೈತ್ರಿ ಸರ್ಕಾರ ಬೀಳುವ ಮುಂಚಿನಿಂದಲೂ ಅವರು ಮೋದಿ ಪರವಾಗಿ ಹೇಳಿಕೆಗಳನ್ನ ಕೊಟ್ಟಿದ್ದುಂಟು. ಈಗ ಅವರು ಜೆಡಿಎಸ್ ಪಕ್ಷ ತ್ಯಜಿಸುವುದು ಬಹುತೇಕ ನಿಶ್ಚಿತವೆನ್ನಲಾಗಿದ್ದು, ಯಾವ ಪಕ್ಷ ಸೇರುತ್ತಾರೆ ಎಂಬುದು ಪ್ರಶ್ನೆ. ಆದರೆ, ತಾನು ಯಾವುದೇ ಪಕ್ಷ ಸೇರುವುದಿಲ್ಲ. ಚುನಾವಣಾ ರಾಜಕಾರಣದಿಂದ ಹಿಂಸರಿಯುತ್ತೇನೆ ಎಂದು ಜಿಟಿಡಿ ಸ್ಪಷ್ಟಪಡಿಸಿಯೂ ಇದ್ಧಾರೆ.

(ವರದಿ: ಪುಟ್ಟಪ್ಪ / ಕೃಷ್ಣ ಜಿ.ವಿ.)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ