• Home
  • »
  • News
  • »
  • state
  • »
  • RIP Kanavi: ಕನ್ನಡ ಸಾಹಿತ್ಯ ಸುಧೆಗೆ 'ಸೋನೆ ಮಳೆ' ಸುರಿಸಿದ್ದ ಚೆನ್ನವೀರ ಕಣವಿ ಅಸ್ತಂಗತ

RIP Kanavi: ಕನ್ನಡ ಸಾಹಿತ್ಯ ಸುಧೆಗೆ 'ಸೋನೆ ಮಳೆ' ಸುರಿಸಿದ್ದ ಚೆನ್ನವೀರ ಕಣವಿ ಅಸ್ತಂಗತ

ಕವಿ ಚೆನ್ನವೀರ ಕಣವಿ

ಕವಿ ಚೆನ್ನವೀರ ಕಣವಿ

ಅವರು ಕನ್ನಡ ಸಾಹಿತ್ಯದ ಬಾಂದಳದಲ್ಲಿ 'ಆಕಾಶಬುಟ್ಟಿ'ಯಂತೆ ಬೆಳಗಿದವರು. ಕನ್ನಡ ಸಾಹಿತ್ಯದ ಸುಧೆಯಲ್ಲಿ 'ಒಂದು ಮುಂಜಾವಿನಲಿ ಸೋನೆ ಮಳೆ' ಸುರಿಸಿದವರು. 'ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯಸಂಸ್ಕಾರಿ' ಅಂತ 'ವಿಶ್ವಭಾರತಿಗೆ ಕನ್ನಡದಾರತಿ' ಮಾಡಿ್ದ್ದ ಕಣವಿಯವರು ಇನ್ನು ನೆನಪು ಮಾತ್ರ... ಅಂತಹ ಹಿರಿಯ ಕವಿ, ಸಾಹಿತಿ ಚೆನ್ನವೀರ ಕಣವಿಯವರಿಗೆ, ಬರಹಗಳ ಮೂಲಕ ಬದುಕು ಕಲಿಸಿಕೊಟ್ಟ ಸರಸ್ವತಿ ಪುತ್ರನಿಗೊಂದು ನುಡಿನಮನ...

ಮುಂದೆ ಓದಿ ...
  • Share this:

ಧಾರವಾಡ: ಕನ್ನಡ ಸಾಹಿತ್ಯದ (Kannada literature) ಹಿರಿಯ ಚೇತನ, ಖ್ಯಾತ ಕವಿ (Great Poet), ನಾಡೋಜ ಚೆನ್ನವೀರ ಕಣವಿ (Chennaveera Kanavi) ಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ತಮ್ಮ ಕವನಗಳು, ಸಾಹಿತ್ಯ ಗ್ರಂಥಗಳ (Books) ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ್ದ ಕಣವಿಯವರು ಇಂದು ಧಾರವಾಡದ (Dharwad) ಸತ್ತೂರಿನ‌ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ (Hospital) ಇಹಲೋಕ ತ್ಯಜಿಸಿದ್ದಾರೆ.  ಒಂದು ಮುಂಜಾನೆಯಲಿ ತುಂತುರಿನ ಸೋನೆ ಮಳೆ, ಹೂವು ಅರಳುವವು ಸೂರ್ಯನ ಕಡೆಗೆ ಅಂತ ಹಾಡುತ್ತ 'ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯಸಂಸ್ಕಾರಿ' ಅಂತ 'ವಿಶ್ವಭಾರತಿಗೆ ಕನ್ನಡದಾರತಿ' ಮಾಡಿ್ದ್ದ ಕಣವಿಯವರು ಇನ್ನು ನೆನಪು ಮಾತ್ರ...


ಒಂದು ತಿಂಗಳಿನಿಂದಲೂ ನಡೆಯುತ್ತಿದ್ದ ಚಿಕಿತ್ಸೆ


ಉಸಿರಾಟ ಸಮಸ್ಯೆಯಿಂದ ಸರಿಯಾಗಿ ತಿಂಗಳು ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಜೊತೆಗೆ ಕಣವಿ ಅವರಿಗಿದ್ದ ಎದೆಯ ಸೋಂಕು ಕಡಿಮೆಯಾಗಿರಲಿಲ್ಲ. ಜೊತೆಗೆ ರಕ್ತದೊತ್ತಡವು ಕಡಿಮೆಯಾಗುತ್ತಿದ್ದು ನಿಯಂತ್ರಣಕ್ಕೆ ಬಂದಿರಲಿಲ್ಲ,. ಹೀಗಾಗಿ ಚಿಕಿತ್ಸೆ ಫಲಿಸದೇ ಕಣವಿಯವರು ನಿಧನರಾಗಿದ್ದಾರೆ.


 ಮುದ್ರಣ ಕಾಶಿಯಲ್ಲಿ ಅರಳಿದ ಪ್ರತಿಭೆ ಕಣವಿ


ಚೆನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928, ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿದ ಕಣವಿಯವರು, 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದರು.


1956ರಿಂದ ಪ್ರಸಾರಾಂಗದ ನಿರ್ದೇಶಕರಾಗಿ, 27 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದರು.  ತಮ್ಮ ಆಡಳಿತಾವಧಿಯಲ್ಲಿ ಪ್ರಕಟಣಾ ವಿಭಾಗದಿಂದ ನೂರಾರು ಉತ್ತಮ ಪುಸ್ತಕಗಳನ್ನು ಹೊರತಂದ ಕೀರ್ತಿ ಅವರದ್ದು.


ಇದನ್ನೂ ಓದಿ: Bappi Lahiri: ಮಧುರ ಕಂಠದ ಮ್ಯೂಸಿಕ್ ಮಾಂತ್ರಿಕ ಇನ್ನಿಲ್ಲ, ಗಾನ 'ಲಹಿರಿ' ಇನ್ನು ನೆನಪಷ್ಟೇ


ಬಾಲ್ಯದಿಂದಲೇ ಸಾಹಿತ್ಯದ ಪ್ರಭಾವ


ಚೆನ್ನವೀರ ಕಣವಿಯವರಿಗೆ ಬಾಲ್ಯದಿಂದಲೂ ಸಾಹಿತ್ಯದ ಮೇಲೆ ಅಪಾರ ಒಲವು ಇತ್ತು. ತಂದೆ ಶಿಕ್ಷಕರಾಗಿದ್ದರಿಂದ ಮನೆಯಲ್ಲಿಯೇ ಓದು ಹಾಗೂ ಇತರೇ ಚಟುವಟಿಕೆ ನಡೆಯುತ್ತಿತ್ತು. ಕಾವ್ಯ, ವಚನಗಳಲ್ಲಿ ಅತೀವ ಆಸಕ್ತಿ ಇವರಿಗಿತ್ತು. ‘ತಂದೆ ನಸುಕಿನೊಳೆದ್ದು ಅನುಭವಾಮೃತ ಓದೆ, ಸಕ್ಕರೆಯ ನಿದ್ದೆಯಲ್ಲಿ ಸವಿಯುತ್ತಿದ್ದೆ’ ಎಂದ ಕವಿಯ ಮಾತುಗಳೇ ಅವರ ಕಾವ್ಯಕ್ಕೆ ಮುಂಬೆಳಗಾಗಿದೆ.


 ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಗ್ರಂಥಗಳ ಕೊಡುಗೆ


ಚೆನ್ನವೀರ ಕಣವಿಯವರು ಸುಮಾರು 36ಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 16 ಕವನ ಸಂಕಲನ, 5 ವಿಮರ್ಷಾ ಗ್ರಂಥಗಳು, ಹಕ್ಕಿ ಪುಕ್ಕ ಹಾಗೂ ಚಿಣ್ಣರ ಲೋಕವ ತೆರೆಯೋಣ ಎಂಬ ಎರಡು ಮಕ್ಕಳ ಪುಸ್ತಕ ಸೇರಿದಂತೆ ಅಮೂಲ್ಯ ಗ್ರಂಥಗಳನ್ನು ರಚಿಸಿ, ಕನ್ನಡ ಸಾಹಿತ್ಯ ಪ್ರೇಮಿಗಳು, ಸಾಹಿತ್ಯಾಸಕ್ತರನ್ನು ರಂಚಿಸಿದ್ದಾರೆ.


ಚೆನ್ನವೀರ ಕಣವಿಯವರ ಪ್ರಮುಖ ಕೃತಿಗಳು


‘ಭಾವಜೀವಿ’, ‘ಆಕಾಶಬುಟ್ಟಿ’, ‘ದೀಪಧಾರಿ’, ‘ಜೀವಧ್ವನಿ’, ‘ಮಧುಚಂದ್ರ’, ‘ನೆಲಮುಗಿಲು’, ‘ಎರಡು ದಡ’ ಮೊದಲಾದವು ಪ್ರಮುಖ ಕವನ ಸಂಕಲನಗಳು. ‘ಹೊಂಬೆಳಕು’ ಸಮಗ್ರ ಕಾವ್ಯ ಸಂಪುಟ ಪ್ರಕಟಣೆ, ‘ಮಲ್ಲಿಗೆ ದಂಡೆ’ ಕಣವಿಯವರ ಭಾವಗೀತೆಗಳ ಧ್ವನಿ ಸುರುಳಿ, ‘ಸಾಹಿತ್ಯ ಚಿಂತನೆ’, ‘ಕಾವ್ಯಾನುಸಂಧಾನ’, ‘ಸಮಾಹಿತ’ ಮತ್ತು ‘ಮಧುರ ಚೆನ್ನ’ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವಿಷ್ಟೇ ಅಲ್ಲದೇ ಚೆನ್ನವೀರ ಕಣವಿಯವರು ಸಾನೆಟ್ ಕಾವ್ಯಬಂಧದಲ್ಲಿ ಸುಮಾರು 120ಕ್ಕೂ ಹೆಚ್ಚಿನ ಸಾನೆಟ್ಗಳನ್ನು ರಚಿಸಿದ್ದಾರೆ.


 ಕಣವಿಯವರ ಸಾಹಿತ್ಯ ಸೇವೆಗೆ ಹಲವು ಪುರಸ್ಕಾರ


1967ರಲ್ಲಿ ನಿಡುಮಾಮಿಡಿ ಜಗದ್ಗುರುಗಳಿಂದ ‘ಕವನ ಕಲಾರವಿ’ ಹಾಗೂ ಚಿತ್ರದುರ್ಗದ ಬೃಹನ್ಮಠದಿಂದ 1990 ಹಾಗೂ 1996ರಲ್ಲಿ ಕ್ರಮವಾಗಿ ‘ಕವಿರತ್ನ’ ಮತ್ತು ‘ಸಾಹಿತ್ಯ ಭಾಸ್ಕರ’ ಬಿರುದುಗಳು, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ.


ಇದನ್ನೂ ಓದಿ: Morning Digest: ಖ್ಯಾತ ಗಾಯಕ ಬಪ್ಪಿ ಲಹಿರಿ ನಿಧನ, ಇಂದಿನಿಂದ ಕಾಲೇಜುಗಳು ಆರಂಭ, ಅಪಘಾತದಲ್ಲಿ 4 ವಿದ್ಯಾರ್ಥಿಗಳ ಸಾವು; ಬೆಳಗಿನ ಟಾಪ್ ನ್ಯೂಸ್


ರಾಜ್ಯೋತ್ಸವ ಪ್ರಶಸ್ತಿ ಮತ್ತು ಮುಂಬಯಿ ರಾಜ್ಯ ಪ್ರಶಸ್ತಿಗಳ ಜೊತೆಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಗೌರವಯುತ ಸ್ಥಾನಮಾನಗಳು. ಹೀಗೆ ಕಣವಿಯವರನ್ನು ಅರಸಿ ಬಂದ ಗೌರವ ಪುರಸ್ಕಾರಗಳು ಹತ್ತು ಹಲವಾರು. ಅವರಿಗೆ ನಾಡೋಜ ಗೌರವವನ್ನು ನೀಡಿ ಕನ್ನಡನಾಡು ಧನ್ಯವಾಗಿದೆ.


ಹಿರಿಯ ಕವಿ ನಿಧನಕ್ಕೆ ಗಣ್ಯರ ಸಂತಾಪ


ಕವಿ ಚೆನ್ನವೀರ ಕಣವಿ ನಿಧನಕ್ಕೆ ಇಡೀ ಕನ್ನಡ ನಾಡು ಮರುಗುತ್ತಿದೆ. ಸಾಹಿತ್ಯ ಪ್ರಿಯರು ಹಾಗೂ ಸಾಹಿತ್ಯಾಸಕ್ತರು ಕಂಬನಿ ಮಿಡಿಯುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Published by:Annappa Achari
First published: